ಸ್ಯಾಂಡಲ್‌ವುಡ್‌ನ ನಟಿ ರಾಧಿಕಾ ಕುಮಾರಸ್ವಾಮಿ ನಟನೆ ಜೊತೆಗೆ ನಿರ್ಮಾಣದಲ್ಲೂ ಗುರುತಿಸಿಕೊಂಡಿದ್ದಾರೆ. ತಮ್ಮ ಶಮಿಕಾ ಎಂಟರ್ ಪ್ರೈಸಸ್ ಮೂಲಕ ರಾಧಿಕಾ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ಇದೀಗ ಅವರ ಸಹೋದರ ರವಿರಾಜ್ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಟನಾಗಿ ಅಲ್ಲ ನಿರ್ಮಾಪಕನಾಗಿ. ರವಿರಾಜ್ ಅವರಿಗೆ ಸಿನಿಮಾರಂಗ ಹೊಸದೇನಲ್ಲ. ತನ್ನ ಸಹೋದರಿ ರಾಧಿಕಾ ಅವರ ಶಮಿಕಾ ಎಂಟರ್ ಪ್ರೈಸಸ್ ನಲ್ಲಿ ಸಹ ನಿರ್ಮಾಪಕನಾಗಿ ಕೆಲಸ ಮಾಡಿರುವ ಅನುಭವ ಅವರಿಗಿದೆ.
‘ಲಕ್ಕಿ’, ‘ಸ್ವೀಟಿ ನನ್ನ ಜೋಡಿ’, ಭೈರಾದೇವಿ ಸಿನಿಮಾಗಳಲ್ಲಿ ರವಿರಾಜ್ ತಂಗಿ ರಾಧಿಕಾ ಜೊತೆ ಕೆಲಸ ಮಾಡಿದ್ದರು ಜೊತೆಗೆ ಸಿನಿಮಾ ವಿತರಣೆ ವಿಭಾಗದಲ್ಲೂ ಕೆಲಸ ಮಾಡಿದ್ದಾರೆ. ಆದರೀಗ ಸ್ವತಂತ್ರ ನಿರ್ಮಾಪಕರಾಗಿ ಚಂದನವನಕ್ಕೆ ಪದಾರ್ಪಣೆ ಮಾಡತ್ತಿದ್ದಾರೆ.
ತಮ್ಮದೇ ಆದ ಹೊಸ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದು ಈಗಾಗಲೇ ಮೊದಲ ಸಿನಿಮಾದ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ರವಿರಾಜ್ ತಮ್ಮ ನಿರ್ಮಾಣ ಸಂಸ್ಥೆಗೆ ‘ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್’ ಎಂದು ಹೆಸರಿಟ್ಟಿದ್ದಾರೆ. ಅಂದಹಾಗೆ ಇದು ರವಿರಾಜ್ ಅವರ ತಂದೆಯ ಕನಸಿನ ಬ್ಯಾನರ್.
ಅಪ್ಪನ ಕನಸನ್ನು ‘ಶ್ರೀ ದುರ್ಗಾಪರಮೇಶ್ವರಿ’ ಬ್ಯಾನರ್ ಮೂಲಕ ನನಸು ಮಾಡಿದ್ದಾರೆ ರವಿರಾಜ್. ತಮ್ಮ ಬ್ಯಾನರ್‌ನ ಮೊದಲ ಸಿನಿಮಾವಾಗಿ ಹಾರರ್ ಚಿತ್ರ ತಯಾರಾಗಿದ್ದು ರಿಲೀಸ್‌ಗೆ ರೆಡಿಯಾಗಿದೆ. ಇದುವರೆಗೂ ನೋಡಿರದ ಹಾರರ್ ಸಬ್ಜೆಕ್ಟ್ ಮೂಲಕ ಅಭಿಮಾನಿಗಳನ್ನು ಭಯ ಬೀಳಿಸಲು ಸಜ್ಜಾಗಿದ್ದಾರೆ ರವಿರಾಜ್.