ಜಾನ್ ಅಬ್ರಹಾಂ ಜೊತೆ ನಿರ್ದೇಶಕ ಕಿರಣರಾಜ್
ಜಾನ್ ಅಬ್ರಹಾಂ ಜೊತೆ ನಿರ್ದೇಶಕ ಕಿರಣರಾಜ್ 
ಸಿನಿಮಾ ಸುದ್ದಿ

ಬಾಲಿವುಡ್ ನಟ ಜಾನ್ ಅಬ್ರಹಾಂ ಜೊತೆ 777 ಚಾರ್ಲಿ ನಿರ್ದೇಶಕ ಕಿರಣರಾಜ್ ಹೊಸ ಸಿನಿಮಾ; ಮಹತ್ವದ ಭೇಟಿ

Ramyashree GN

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಚಿತ್ರದ ನಿರ್ದೇಶಕ ಕಿರಣರಾಜ್ ಕೆ ಇತ್ತೀಚೆಗೆ ಬಾಲಿವುಡ್ ದಿಗ್ಗಜ ಜಾನ್ ಅಬ್ರಹಾಂ ಅವರನ್ನು ಭೇಟಿ ಮಾಡಿದ್ದು, ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಪರಂವಃ ಸ್ಟೂಡಿಯೋಸ್‌ ನಿರ್ಮಿಸಿದ್ದ ಚಿತ್ರದ ಬಗ್ಗೆ ಬಹಿರಂಗವಾಗಿಯೇ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದ ನಟ-ನಿರ್ಮಾಪಕ ಇತ್ತೀಚೆಗಷ್ಟೇ ಮುಂಬೈಗೆ ಬರುವಂತೆ ನಿರ್ದೇಶಕ ಕಿರಣರಾಜ್ ಅವರಿಗೆ ಆಹ್ವಾನ ನೀಡಿದ್ದರು. ಈ ಮಾತುಕತೆಯಿಂದ ಆಕರ್ಷಿತವಾಗಿರುವ ಕಿರಣರಾಜ್ ಅವರು ಈಗ ಜಾನ್ ಅಬ್ರಹಾಂ ಕುರಿತು ಮಾತನಾಡಿದ್ದಾರೆ.

'ನಾವು 777 ಚಾರ್ಲಿ ಟ್ರೇಲರ್ ಅನ್ನು ಬಿಡುಗಡೆ ಮಾಡಿದ ಸಮಯದಿಂದಲೂ ಜಾನ್ ಅಬ್ರಹಾಂ ಅವರೊಂದಿಗೆ ನನ್ನ ಸಂಪರ್ಕವಿದೆ. ಅವರು ಸ್ವಯಂಪ್ರೇರಣೆಯಿಂದಲೇ ಚಿತ್ರದ ಟ್ರೇಲರ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದ್ದರು. ನಮ್ಮನ್ನು ಪ್ರಶಂಸಿಸಿದ್ದರು. ಅಂದಿನಿಂದಲೂ, ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ' ಎಂದು ಹೇಳುತ್ತಾರೆ ಕಿರಣ್‌ರಾಜ್.

ಜಾನ್ ಅವರು ಇತ್ತೀಚೆಗಷ್ಟೆ 777 ಚಾರ್ಲಿಯನ್ನು ಮತ್ತೊಮ್ಮೆ ವೀಕ್ಷಿಸಿದ್ದಾರೆ ಮತ್ತು ಚಿತ್ರವನ್ನು ನೋಡುವಾಗ ಮಗುವಿನಂತೆ ಅತ್ತಿದ್ದಾಗಿ ತಿಳಿಸಿದರು. ಚಿತ್ರದ ಬಗೆಗಿನ ಅವರ ಅಭಿಮಾನವು ನನ್ನಲ್ಲಿ ಅವರನ್ನು ಭೇಟಿಯಾಗುವ ಬಯಕೆಯನ್ನು ಹುಟ್ಟುಹಾಕಿತು ಮತ್ತು ನಾವು ಭೇಟಿಯಾದಾಗ, ಅವರು ಸಿನಿಮಾ ಮಾಡುವಾಗಲಿನ ನನ್ನ ಅನುಭವವನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದರು ಎಂದರು.

ಚರ್ಚೆಯ ಸಮಯದಲ್ಲಿ, ಜಾನ್ ಅವರಿಗೆ ಪ್ರಾಣಿಗಳ ಬಗೆಗಿನ ಆಳವಾದ ಪ್ರೀತಿ ವ್ಯಕ್ತವಾಯಿತು. ಪ್ರಾಣಿಗಳು, ವಿಶೇಷವಾಗಿ ನಾಯಿಗಳ ಮೇಲಿನ ಜಾನ್‌ ಅವರ ಪ್ರೀತಿ ನನ್ನ ಗಮನ ಸೆಳೆಯಿತು. ಪ್ರಾಣಿ ಕಲ್ಯಾಣಕ್ಕಾಗಿ ವಿವಿಧ ಎನ್‌ಜಿಒಗಳೊಂದಿಗೆ ಅವರು ತೊಡಗಿಸಿಕೊಂಡಿರುವುದು ನನ್ನ ಮತ್ತು ಸಿನಿಮಾದ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿತು ಎಂದು ಕಿರಣ್‌ರಾಜ್ ಹೇಳುತ್ತಾರೆ.

ಕಿರಣರಾಜ್ ಅವರೊಂದಿಗೆ ಸಂಭಾವ್ಯ ಸಹಯೋಗಗಳನ್ನು ಅನ್ವೇಷಿಸಲು ಜಾನ್ ತೀವ್ರ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಕಿರಣ್ ರಾಜ್ ಅವರ ಬಹುಭಾಷಾ ಪ್ರಾಜೆಕ್ಟ್ ಸ್ಕ್ರಿಪ್ಟಿಂಗ್ ಹಂತದಲ್ಲಿರುವಾಗ, ಜಾನ್ ಅಬ್ರಹಾಂ ಅವರಂತಹ ಬಾಲಿವುಡ್ ನಟನೊಂದಿಗಿನ ಭೇಟಿ ಮಹತ್ವ ಪಡೆದುಕೊಂಡಿದೆ.

'ಸ್ಕ್ರಿಪ್ಟ್ ಈಗ ಅಂತಿಮ ಹಂತದಲ್ಲಿದ್ದು, ಒಮ್ಮೆ ನಾನು ಸ್ಕ್ರಿಪ್ಟ್ ಅನ್ನು ಅಂತಿಮಗೊಳಿಸಬೇಕಿದೆ. ಅದಕ್ಕಾಗಿ ಇನ್ನೂ ಒಂದು ತಿಂಗಳು ಸಮಯ ತೆಗೆದುಕೊಳ್ಳುತ್ತದೆ. ನಂತರವಷ್ಟೇ ನಾನು ಸೃಜನಶೀಲ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಯೋಜಿಸುತ್ತೇನೆ' ಎಂದು ಕಿರಣರಾಜ್ ಹೇಳುತ್ತಾರೆ.

ನಟ ಮತ್ತು ನಿರ್ಮಾಪಕನಾಗಿ ಜಾನ್‌ನ ದ್ವಿಪಾತ್ರವನ್ನು ಪ್ರತಿಬಿಂಬಿಸುತ್ತಾ ಕಿರಣ್‌ರಾಜ್ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. 'ಮದ್ರಾಸ್ ಕೆಫೆಯಲ್ಲಿ ಅವರ ಅಭಿನಯವನ್ನು ನಾನು ಮೆಚ್ಚಿದೆ. ಆದಾಗ್ಯೂ, ನಿರ್ಮಾಪಕರಾಗಿ ಅವರ ಪಾತ್ರ, ವಿಶೇಷವಾಗಿ 'ವಿಕ್ಕಿ ಡೋನರ್‌'ನಂತಹ ಅದ್ಭುತ ಯೋಜನೆಗಳಲ್ಲಿ ಅವರ ವಿವೇಚನಾಶೀಲ ಅಭಿರುಚಿ ಮತ್ತು ದೃಷ್ಟಿಯನ್ನು ಪ್ರದರ್ಶಿಸುತ್ತದೆ' ಎಂದು ನಿರ್ದೇಶಕರು ಹೇಳುತ್ತಾರೆ.

ಕಿರಣರಾಜ್ ಅವರು ತಮ್ಮ ಮುಂದಿನ ಪ್ರಾಜೆಕ್ಟ್ ಅನ್ನು ಪ್ರಾರಂಭಿಸಲು ಸಮಯ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಇದು ಒಂದು ಪ್ರಕಾರದ ಹಾರರ್-ಫ್ಯಾಂಟಸಿ-ಥ್ರಿಲ್ಲರ್ ಆಗಿದ್ದು, ಮತ್ತೊಮ್ಮೆ ನಾಯಿಯು ಮಹತ್ವದ ಪಾತ್ರದಲ್ಲಿರಲಿದೆ. ಜಾನ್ ಅಬ್ರಹಾಂ ಅವರೊಂದಿಗೆ ಕೆಲಸ ಮಾಡುವ ಕುರಿತು ಊಹಾಪೋಹಗಳು ಎದ್ದಿವೆ. ಆದರೆ ಅದರ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಬಯಸದ ಕಿರಣರಾಜ್, ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸುತ್ತಾರೆ.

SCROLL FOR NEXT