ಉಡುಪಿ: ತೆಲುಗಿನ ಖ್ಯಾತ ನಟ ಜೂನಿಯರ್ ಎನ್ ಟಿಆರ್ ಇಂದು ಕುಟುಂಬ ಸಮೇತರಾಗಿ ಉಡುಪಿ ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ್ದು, ಅವರಿಗೆ ಖ್ಯಾತ ನಟ ರಿಷಬ್ ಶೆಟ್ಟಿ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಸಾಥ್ ನೀಡಿದ್ದರು.
ಇಂದು (ಆಗಸ್ಟ್ 31) ಕುಟುಂಬ ಸಮೇತರಾಗಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ನಿರ್ದೇಶಕ ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ (Rishab Shetty) ಮತ್ತು ಜ್ಯೂ. ಎನ್‌ಟಿಆರ್ (Jr. NTR) ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.
ಶ್ರಾವಣ ಮಾಸದ ಶನಿವಾರದಂದು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದ ಸ್ಟಾರ್ ನಟರು ದೇವರ ದರ್ಶನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 'ಸೆ.2ರಂದು ನನ್ನ ತಾಯಿ ಹುಟ್ಟುಹಬ್ಬ ಇದೆ. ಅವರ ತವರು ಕುಂದಾಪುರಕ್ಕೆ ಬರಬೇಕೆಂಬ ಮಹಾದಾಸೆ ಇತ್ತು.
ಮಗನಾಗಿ ಅವರ ಸಣ್ಣ ಆಸೆಯನ್ನು ಈಡೇರಿಸುವುದೇ ನನ್ನ ಭಾಗ್ಯ. ಅವರ ಹುಟ್ಟುಹಬ್ಬಕ್ಕೆ ಇದೇ ದೊಡ್ಡ ಗಿಫ್ಟ್. ಅಮ್ಮನನ್ನು ಕರೆದುಕೊಂಡು ಬಂದಿದ್ದು ಖುಷಿ ಆಯಿತು. ಜತೆಗೆ ಆಸೆ ಈಡೇರಿಸಿ ಎಂಬ ನೆಮ್ಮದಿ ಇದೆ ಎಂದು ಟಾಲಿವುಡ್ ನಟ ಜ್ಯೂ.ಎನ್‌ಟಿಆರ್ ತಿಳಿಸಿದರು.
ಇದೇ ವೇಳೆ ಜೂ. ಎನ್.ಟಿ.ಆರ್ ತಮ್ಮ ಕುಟುಂಬವನ್ನು ಪ್ರೀತಿಯಿಂದ ಸ್ವಾಗತಿಸಿ, ದೇಗುಲ ಭೇಟಿಗೆ ಅನುವು ಮಾಡಿಕೊಟ್ಟ ನಟ ರಿಷಬ್ ಶೆಟ್ಟಿ ಮತ್ತು ಪ್ರಶಾಂತ್ ನೀಲ್ ಧನ್ಯವಾದ ಹೇಳಿದರು.
ವಿಮಾನ ನಿಲ್ದಾಣದಲ್ಲೇ ಸ್ವಾಗತಿಸಿದ್ದ ರಿಷಬ್ ಶೆಟ್ಟಿ
ಇನ್ನು ಇದಕ್ಕೂ ಮೊದಲು ರಿಷಬ್ ಶೆಟ್ಟಿ ಅವರು ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಂದಿಳಿದ ಜೂ. ಎನ್.ಟಿ.ಆರ್ ಕುಟುಂಬವನ್ನು ಸ್ವಾಗತಿಸಿದರು.