ನಟ ಉಪೇಂದ್ರ ಅವರು ನಟಿಸಿ ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ ಯುಐ ಚಿತ್ರ ಡಿಸೆಂಬರ್ 20ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದ್ದು, ಈ ನಡುವಲ್ಲೇ ಚಿತ್ರತಂಡ ಯೂಟ್ಯೂಬ್‌ನಲ್ಲಿ ಚಿತ್ರದ ವಾರ್ನರ್ (ಟ್ರೇಲರ್) ಬಿಡುಗಡೆ ಮಾಡಿದೆ.
'ಟೀಸರ್ ಅಥವಾ ಟ್ರೇಲರ್ ಅಲ್ಲ. ವಾರ್ನರ್ (ಎಚ್ಚರಿಕೆ ನೀಡುವವ)' ಎಂದು ಈ ಮೊದಲೇ ಚಿತ್ರತಂಡ ಹೇಳಿತ್ತು. ಅದರಂತೆ ಸೋಮವಾರ ವಾರ್ನರ್ (ಟ್ರೇಲರ್) ಬಿಡುಗಡೆಯಾಗಿದೆ.
ವಿಶ್ವದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಸಮಸ್ಯೆಗಳ ಪೈಕಿ ಕೆಲವು ಪ್ರಮುಖ ವಿಚಾರಗಳನ್ನು ‘ಯುಐ’ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಪೈಕಿ, ಜಾಗತಿಕ ತಾಪಮಾನ ಏರಿಕೆ, ಕೊವಿಡ್- 19, ಹಣದುಬ್ಬರ, ಎಐ, ನಿರುದ್ಯೋಗ ಹಾಗೂ ಯುದ್ಧಗಳ ಬಗ್ಗೆ ಸಿನಿಮಾದಲ್ಲಿ ಹೇಳುವ ಕೆಲಸ ಆಗಲಿದೆ. ಪ್ರಸ್ತುತ ರಿಲೀಸ್ ಆಗಿರುವ ವಿಡಿಯೋದಲ್ಲಿ ಈ ಸಿನಿಮಾದ ಕಥೆ 2040ರಲ್ಲಿ ಆರಂಭ ಆಗುವ ರೀತಿಯಲ್ಲಿ ತೋರಿಸಲಾಗಿದೆ.
ಒಂದು ಬಾಳೆ ಹಣ್ಣಿಗಾಗಿ ಕಿತ್ತಾಟ ನಡೆಯುತ್ತದೆ. ‘ನಂಗೆ ಬಾಳೆ ಹಣ್ಣು’ ಎಂದು ಸಾಕಷ್ಟು ಜನ ಕಿತ್ತಾಟ ನಡೆಸುತ್ತಾ ಇರುತ್ತಾರೆ. ಸುತ್ತಲೂ ನೋಡಿದರೆ ಇಡೀ ಜಗತ್ತು ನಾಶ ಆಗುವ ಹಂತಕ್ಕೆ ಬಂದಿರುತ್ತದೆ. ಜಾತಿ ವಿಚಾರ ಎಂಬುದು ಯಾವ ಹಂತಕ್ಕೆ ಹೋಗಿರುತ್ತದೆ ಎಂಬುದನ್ನು ತೋರಿಸಲಾಗಿದೆ. ‘ಜಾತಿ ಮುದ್ರೆ ಕಡ್ಡಾಯ’ ಎಂಬುದು ವಾರ್ತೆಯಲ್ಲಿ ಬರುತ್ತಿರುತ್ತದೆ. ಹೀಗಿರುವಾಗಲೇ ಉಪೇಂದ್ರ ಅವರ ಎಂಟ್ರಿ ಆಗುತ್ತದೆ. ದೊಡ್ಡದಾದ ಕಾರ್ನಲ್ಲಿ ಉಪೇಂದ್ರ ಆಗಮಿಸುತ್ತಾರೆ. ಆದರೆ, ಉಪೇಂದ್ರ ವಿರುದ್ಧ ಅನೇಕರು ಘೋಷಣೆ ಕೂಗುತ್ತಾರೆ. ಈ ವೇಳೆ ‘ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ’ ಎಂದು ಹೇಳುವ ಉಪೇಂದ್ರ ಅವರು, ಅವರ ಮೇಲೆ ಗುಂಡಿನ ದಾಳಿ ನಡೆಸುತ್ತಾರೆ.
'ಯುಐ' ಸಿನಿಮಾವನ್ನು ವೀನಸ್ ಎಂಟರ್‌ಟೈನ್‌ಮೆಂಟ್ ಮತ್ತು ಲಹರಿ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ನಟ ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಚಿತ್ರ ಇದಾಗಿದೆ. ನಟ ಸಾಧು ಕೋಕಿಲಾ ಅವರೂ ಪ್ರಮುಖ ಪಾತ್ರದಲ್ಲಿದ್ದಾರೆ. ಬಿ.ಅ ಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕಿದೆ. ಚಿತ್ರಕ್ಕೆ ನು ಜಿ.ಮನೋಹರನ್, ಕೆಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ.