ಆಪರೇಶನ್ ಅಲಮೇಲ್ಲಮ್ಮ, ಕವಲುದಾರಿ" ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ, ಪ್ರೇಕ್ಷಕರ ಮನೆ ಗೆದ್ದಿರುವ ನಟ ರಿಷಿ ಅಭಿನಯದ ಬಹು ನಿರೀಕ್ಷಿತ "ರುದ್ರ ಗರುಡ ಪುರಾಣ" ಚಿತ್ರ 2025 ರ ಜನವರಿ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಹಿಂದೆ ಡಿಸೆಂಬರ್27 ಈ ಚಿತ್ರವನ್ನು ತೆರೆಗೆ ತರುವುದಾಗಿ ಚಿತ್ರತಂಡ ಹೇಳಿತ್ತು. ಇದೀಗ ಜನವರಿ 24ಕ್ಕೆ ಬಿಡುಗಡೆ ಮಾಡುವುದಾಗಿ ತಿಳಿಸಿವೆ.
ಅಶ್ವಿನಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಕೆಎಸ್ ನಂದೀಶ್ ನಿರ್ದೇಶನದ ಮತ್ತು ಲೋಹಿತ್ ನಿರ್ಮಾಣದ ಈ ಚಿತ್ರವು ಈಗಾಗಲೇ ತನ್ನ ಫಸ್ಟ್ ಲುಕ್, ಟೀಸರ್ ಮತ್ತು ಹಾಡುಗಳಿಂದ ಗಮನ ಸೆಳೆದಿದೆ.
25 ವರ್ಷದ ಹಿಂದೆ ಬಸ್ಸೊಂದು ಅಪಘಾತವಾಗಿ ಅದರಲ್ಲಿದ್ದ ಎಲ್ಲರೂ ಸಾವನ್ನಪ್ಪಿರುತ್ತಾರೆ. ಆದರೆ ಅದೇ ಬಸ್ಸು ಮತ್ತು ಅದರಲ್ಲಿದ್ದ ಜನಗಳು ಮತ್ತೆ ವಾಪಸ್ಸು ಬರುವ ರೋಚಕ ತಿರುವುಗಳನ್ನು ಅನ್ವೇಷಣೆ ಮಾಡುವ ಚಿತ್ರ "ರುದ್ರ ಗರುಡ ಪುರಾಣವಾಗಿದೆ.
ಸಿನಿಮಾದ ಟೀಸರ್ ಬಿಡುಗಡೆಗೊಂಡಾಗ ಕೆಲವರು ಇದು ತಮಿಳಿನ ಡೈರಿ ಸಿನಿಮಾದ ರಿಮೇಕ್ ಎಂದು ಹೇಳಿರುವ ಕುರಿತು ಪ್ರತಿಕ್ರಿಯೆ ನೀಡಿದ ನಿರ್ದೇಶಕ ನಂದೀಶ್ ಅವರು, ಪ್ಯಾನ್ ಆಮ್ ಫ್ಲೈಟ್ 914 ರ ಪ್ರಕರಣದಿಂದ ಸ್ಫೂರ್ತಿ ಪಡೆಯಲಾಗಿದೆ. ಡೌಗ್ಲಾಸ್ DC-4 ವಿಮಾನವು 1955ರಲ್ಲಿ ಕಣ್ಮರೆಯಾಗಿತ್ತು. 30 ವರ್ಷಗಳ ನಂತರ ಪತ್ತೆಯಾಗಿತ್ತು. ಇದರಿಂದ ಸ್ಫೂರ್ತಿ ಪಡೆದು ಸಿನಿಮಾ ಮಾಡಲಾಗಿದೆ. ನಾನು ಆ ಚಿತ್ರ ನೋಡಿಲ್ಲ. ಆದರೆ, ಕುತೂಹಲದಿಂದ ಚೆನ್ನೈನಲ್ಲಿ ಕೆಲಸ ಮಾಡುತ್ತಿರುವ ನಮ್ಮ ಮ್ಯೂಸಿಕ್ ಡೈರೆಕ್ಟರ್'ನ್ನು ಕೇಳಿದಾಗ ಅದಕ್ಕೂ ನಮ್ಮ ಸಿನಿಮಾ ಯಾವುದೇ ಸಾಮ್ಯತೆ ಇರುವುದಿಲ್ಲ ಟೀಸರ್ ನಲ್ಲಿ ನಲ್ಲಿ ಬಸ್ ಅಪಘಾತ ಇರುವುದರಿಂದ ಅದಕ್ಕೆ ಹೋಲಿಸಿಕೊಂಡಿದ್ದಾರೆ ಎಂದು ಹೇಳಿದರು ಆದರೂ ನಮಗೆ ಬರುವ ಯೋಚನೆ ಬೇರೆಯವರಿಗೆ ಬರಬಾರದು ಎಂಬುದು ಇಲ್ಲ. ಆದ್ದರಿಂದ ಚಿತ್ರ ಹುಡುಕಿ ನೋಡಿದಾಗ ತಮಿಳು ಚಿತ್ರಕ್ಕೂ ನಮಗೂ ಯಾವುದೇ ಚಿಕ್ಕ ಸಂಬಂಧವೂ ಇಲ್ಲ ಎಂಬುದು ತಿಳಿಯಿತು. ಇದೊಂದು ಪಕ್ಕಾ ಕನ್ನಡದ ಸ್ವಮೇಕ್ ಚಿತ್ರವಾಗಿದೆ ಎಂದು ಹೇಳಿದರು.
ನಟ ರಿಷಿ ಮಾತನಾಡಿ, ಸಾಕಷ್ಟು ಗಮನ ಹರಿಸಿ ಚಿತ್ರ ಮಾಡಲಾಗಿದೆ. ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.
ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕ ಕುಮಾರ್ ನಟಿಸಿದ್ದಾರೆ. ವಿನೋದ್ ಆಳ್ವ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರಿ, ರಿದ್ವಿ, ಎಸ್ ಶ್ರೀಧರ್, ಅಶ್ವಿನಿ ಗೌಡ, ರಾಮ್ ಪವನ್, ವಂಶಿ, ಆಕರ್ಷ್, ಜೋಸೆಫ್, ಪ್ರಭಾಕರ್, ಗೌತಮ್ ಮೈಸೂರು, ಸ್ನೇಕ್ ಶ್ಯಾಮ್, ರಂಗನಾಥ್ ಭಾರದ್ವಾಜ್, ಕಾಮಿಡಿ ಕಿಲಾಡಿಗಳು ಜಗಪ್ಪ, ಪ್ರಸನ್ನ ಹಂಡ್ರಂಗಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಚಿತ್ರಕ್ಕೆ ಡೈರೆಕ್ಟರ್ ನಂದೀಶ್ ಕಥೆ-ಚಿತ್ರಕಥೆ ಮಾಡಿದ್ದಾರೆ. ರಘು ನಿಡುವಳ್ಳಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಕೃಷ್ಣ ಪ್ರಸಾದ್ ಸಂಗೀತ ಮಾಡಿದ್ದಾರೆ. ಸಂದೀಪ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ.