ಹೈದರಾಬಾದ್: ಟಾಲಿವುಡ್ ನ ಖ್ಯಾತ ಹಿರಿಯ ನಟ ಮೋಹನ್ ಬಾಬು ಕುಟುಂಬದ ಸಂಘರ್ಷ ಮತ್ತೆ ತಾರಕಕ್ಕೇರಿದ್ದು, ತಮ್ಮ ಮಗನೇ ತನ್ನ ಮನೆಯನ್ನು ಅತಿಕ್ರಮಿಸಿದ್ದಾನೆ ಎಂದು ನಟ ಮೋಹನ್ ಬಾಬು ಪೊಲೀಸ್ ದೂರು ದಾಖಲಿಸಿದ್ದಾರೆ.
ತಮ್ಮ ಕಿರಿಯ ಮಗ ಎಂ ಮನೋಜ್ ಮತ್ತು ಸೊಸೆ ಹೈದರಾಬಾದ್‌ನ ಜಲ್ಪಲ್ಲಿ ಪ್ರದೇಶದಲ್ಲಿರುವ ತನ್ನ ಮನೆಯನ್ನು ಬಲವಂತವಾಗಿ ಅತಿಕ್ರಮಿಸಿದ್ದು ಸ್ವಾಧೀನ ಪಡಿಸಿಕೊಳ್ಳಲು ಯೋಜನೆ ರೂಪಿಸಿದ್ದಾರೆ ಎಂದು ನಟ ಮೋಹನ್ ಬಾಬು ದೂರಿನಲ್ಲಿ ಆರೋಪಿಸಿದ್ದಾರೆ.
ಇನ್ನು ತಮ್ಮ ತಂದೆಯ ವಿರುದ್ಧ ನಟ ಮನೋಜ್ ಕೂಡ ಪ್ರತಿದೂರು ದಾಖಲಿಸಿದ್ದು, ಭಾನುವಾರ 10 ಮಂದಿ ಅಪರಿಚಿತ ವ್ಯಕ್ತಿಗಳು ತಮ್ಮ ಮನೆಗೆ ನುಗ್ಗಿ ಪರಾರಿಯಾಗಲು ಯತ್ನಿಸಿದ್ದರು. ಅವರನ್ನು ಹಿಡಿಯಲು ಮುಂದಾದಾಗ ಪರಸ್ಪರ ಹೊಡೆದಾಟ ಸಂಭವಿಸಿದೆ.
ನಮ್ಮ ತಂದೆ ಮೋಹನ್ ಬಾಬು ಮತ್ತು ಅವರ ಹಿರಿಯ ಪುತ್ರ ಮಂಚು ಮನೋಜ್ ಕಡೆಯವರು ಮನೆಗೆ ನುಗ್ಗಿ ನನ್ನ ಮೇಲೆ, ನನ್ನ ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆಯತ್ನಿಸಿದ್ದರು. ಹೀಗಾಗಿ ನನ್ನ ಪತ್ನಿ ಮತ್ತು ಮಕ್ಕಳಿಗೆ ರಕ್ಷಣೆ ನೀಡಬೇಕು ಎಂದು ಪಹಾಡಿಶರೀಫ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೋಹನ್ ಬಾಬು ಅವರು ರಾಚಕೊಂಡ ಪೊಲೀಸ್ ಕಮಿಷನರ್ ಅವರಿಗೆ ನೀಡಿದ ದೂರಿನಲ್ಲಿ ಮನೋಜ್ ಮತ್ತು ಅವರು ನೇಮಿಸಿದ ಕೆಲವು ಸಮಾಜ ವಿರೋಧಿ ಶಕ್ತಿಗಳು ಭಾನುವಾರ ತಮ್ಮ ನಿವಾಸದಲ್ಲಿ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 30 ವ್ಯಕ್ತಿಗಳು ನಿವಾಸಕ್ಕೆ ಅತಿಕ್ರಮವಾಗಿ ನುಗ್ಗಿ ಸಿಬ್ಬಂದಿಯನ್ನು ಬೆದರಿಸಿ ಆವರಣದಿಂದ ಹೊರಹಾಕಿದ್ದಾರೆ.
ಈ ವ್ಯಕ್ತಿಗಳು ಮನೋಜ್ ಮತ್ತು ಅವರ ಪತ್ನಿಯ ಸೂಚನೆಯಂತೆ ನಡೆದುಕೊಂಡು ನಮ್ಮ ಮನೆಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆ. ಮನೋಜ್, ಅವರ ಪತ್ನಿ ಹಾಗೂ ಅವರ ಸಹಚರರ ವಿರುದ್ಧ ಕ್ರಮ ಕೈಗೊಂಡು ಮನೆಯಿಂದ ಹೊರಹಾಕುವಂತೆ ಮೋಹನ್ ಬಾಬು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಅಂತೆಯೇ ಕುಟುಂಬಸ್ಥರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭಯವಿಲ್ಲದೆ ಅವರ ಮನೆಗೆ ಪ್ರವೇಶಿಸಲು ಪೊಲೀಸ್ ರಕ್ಷಣೆ ನೀಡಬೇಕು ಎಂದು ಮೋಹನ್ ಬಾಬು ಕೋರಿದ್ದಾರೆ.
ದೂರಿನಲ್ಲಿ ತನಗೆ, ತನ್ನ ಹೆಂಡತಿ ಮತ್ತು ಮಕ್ಕಳಿಗೆ ರಕ್ಷಣೆ ನೀಡಲು ಪೊಲೀಸರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಮನೆಗೆ ಅಕ್ರಮವಾಗಿ ಪ್ರವೇಶಿಸಿದವರ ಗುರುತು ಪತ್ತೆ ಹಚ್ಚಲು ತನಿಖೆ ನಡೆಸಬೇಕು ಎಂದು ಮನೋಜ್ ಮನವಿ ಮಾಡಿದ್ದಾರೆ.
ಇನ್ನು ಪರಸ್ಪರರ ದೂರುಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, 'ದೂರು ಆಧರಿಸಿ ಎರಡು ಪ್ರಕರಣಗಳನ್ನು ದಾಖಲಿಸಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿ ಕೆಲ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.