ನಿತೇಶ್ ತಿವಾರಿ ನಿರ್ದೇಶನದ ಬಹು ನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ಸೀತಾ ಪಾತ್ರ ಮಾಡುತ್ತಿರುವ ನಟಿ ಸಾಯಿ ಪಲ್ಲವಿ, ಪಾತ್ರಕ್ಕಾಗಿ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ವದಂತಿಗಳ ವಿರುದ್ಧ ಅವರು ಕಿಡಿಕಾರಿದ್ದು, ಅನಗತ್ಯವಾಗಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕಾನೂನು ಮೂಲಕ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತ ಸುದ್ದಿಸಂಸ್ಥೆಯೊಂದರ ವರದಿಯೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡು ಕಿಡಿಕಾರಿದ್ದಾರೆ. ಹಲವು ಬಾರಿ ನನ್ನ ವಿರುದ್ಧ ಹಬ್ಬಿರುವ ವದಂತಿಗಳಿಗೆ ಪ್ರತಿಕ್ರಿಯಿಸದೆ ಮೌನವಾಗಿರುತ್ತೇನೆ. ಆದರೆ, ಈ ಬಾರಿ ಪ್ರತಿಕ್ರಿಯೆ ನೀಡುವ ಸಮಯ ಬಂದಿದೆ. ನನ್ನ ಚಲನಚಿತ್ರ ಬಿಡುಗಡೆ, ಜಾಹೀರಾತುಗಳು, ವೃತ್ತಿಗೆ ಸೇರಿದ ವಿಚಾರದಲ್ಲಿ ಯಾವುದೇ ಆಧಾರ ರಹಿತ ಸುದ್ದಿಗಳನ್ನು ಹಬ್ಬಿಸಿದರೆ, ಜನಪ್ರಿಯ ಮಾಧ್ಯಮ ಕಂಪನಿ ಅಥವಾ ಯಾವುದೇ ವ್ಯಕ್ತಿಯಾದರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
'ರಾಮಾಯಣ' ಚಿತ್ರದಲ್ಲಿನ ಸೀತಾ ಪಾತ್ರಕ್ಕಾಗಿ ಸಾಯಿ ಪಲ್ಲವಿ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಿದ್ದಾರೆ. ಚಿತ್ರೀಕರಣಕ್ಕೆ ತೆರಳುವ ವೇಳೆ ಅಡುಗೆಯವರನ್ನೂ ಕರೆದುಕೊಂಡು ಹೋಗುತ್ತಾರೆ ಎಂದು ತಮಿಳು ಪತ್ರಿಕೆಯೊಂದನ್ನು ವರದಿ ಮಾಡಿತ್ತು. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ ಸಾಯಿ ಪಲ್ಲವಿ, ನಾನು ಎಂದೆಂದಿಗೂ ಸಸ್ಯಾಹಾರಿ ಎಂದು ಹೇಳಿಕೊಂಡಿದ್ದರು. ಅದು ದೊಡ್ಡ ಸುದ್ದಿಯಾಗಿತ್ತು.
ರಾಮಾಯಣದಲ್ಲಿ ರಣಬೀರ್ ಕಪೂರ್, ರವಿ ದುಬೆ, ಸನ್ನಿ ಡಿಯೋಲ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿದ್ದು, ಚಿತ್ರದ ಮೊದಲ ಭಾಗ 2026ರಲ್ಲಿ ತೆರೆಗೆ ಅಪ್ಪಳಿಸಲಿದೆ.