ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿದ್ದ ನಟ ಶಿವರಾಜ್ ಕುಮಾರ್ ಅವರ ಆರೋಗ್ಯದ ಬಗ್ಗೆ ಅವರ ವೈದ್ಯರೇ ಮಾಹಿತಿ ನೀಡುವ ಮೂಲಕ ಅವರ ಅಭಿಮಾನಿಗಳಲ್ಲಿ ಇದ್ದ ಆತಂಕ ದೂರವಾಗಿದೆ. ಶಿವರಾಜ್ ಕುಮಾರ್ ಸರ್ಜರಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಅವರ ವೈದ್ಯರಾದ ಡಾ ಮನೋಹರ್ ಅವರು ತಿಳಿಸಿದ್ದಾರೆ.
ನಿನ್ನೆ ಸಂಜೆ 6 ಗಂಟೆಗೆ ಆಪರೇಷನ್ ಆರಂಭವಾಗಿ 4-5 ಗಂಟೆಗಳ ಕಾಲ ಆಪರೇಷನ್ ನಡೆದಿದ್ದು ಅದು ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಶಿವರಾಜ್ಕುಮಾರ್ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿದ್ದಾರೆ. ಅವರನ್ನು ಐಸಿಯು ವಾರ್ಡ್ ಗೆ ಶಿಫ್ಟ್ ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದ್ದು ಸುಧಾರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ತಮಗೆ ಗಂಭೀರ ಕಾಯಿಲೆ ಎಂದು ಗೊತ್ತಾದಲ್ಲಿಂದಲೂ ಶಿವರಾಜ್ ಕುಮಾರ್ ಅದನ್ನು ಧೈರ್ಯವಾಗಿ, ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾ ಬಂದಿದ್ದರು. ಅದೇ ರೀತಿ ಸರ್ಜರಿಯನ್ನು ಕೂಡ ಪಾಸಿಟಿವ್ ಆಗಿ ತೆಗೆದುಕೊಂಡರು. ಅಮೆರಿಕದಲ್ಲಿ ಶಸ್ತಚಿಕಿತ್ಸೆ ಪೂರ್ಣಗೊಳಿಸಿಕೊಂಡಿದ್ದಾರೆ.
ಶಿವರಾಜ್ಕುಮಾರ್ ಅವರಿಗೆ ಅಮೆರಿಕದ ಫ್ಲೋರಿಡಾದ್ಲಿರುವ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಸರ್ಜರಿ ಮಾಡಲಾಗಿದೆ. ಆರು ಗಂಟೆಗಳ ಕಾಲ ಆಪರೇಷನ್ ನಡೆದಿದೆ. ಡಾ. ಮುರುಗೇಶ್ ನೇತೃತ್ವದಲ್ಲಿ ಈ ಆಪರೇಷನ್ ನಡೆದಿದೆ. 4 ಗಂಟೆಗಳ ಕಾಲ ಆಪರೇಷನ್ ನಡೆದಿದೆ. ಅವರ ಮೂತ್ರಕೋಶದಲ್ಲಿದ್ದ ಕ್ಯಾನ್ಸರ್ ಕೋಶವನ್ನು ತೆಗೆದುಹಾಕಿದ್ದಾರೆ ಎಂದು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ಕರುಳನ್ನು ಬಳಸಿ ಕೃತಕ ಮೂತ್ರಕೋಶವನ್ನು ರಚಿಸಲಾಗಿದೆ ಎಂದು ಡಾ.ಮುರುಗೇಶ್ ಮನೋಹರನ್ ಹೇಳಿದ್ದಾರೆ.
ಅವರ ಶಸ್ತ್ರಚಿಕಿತ್ಸೆ ಬಗ್ಗೆ ವೈದ್ಯರು ಮತ್ತು ಅವರ ಪತ್ನಿ ಗೀತಾ, ಬಾಮೈದ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ಹೋಮ-ಹವನ
ಶಿವರಾಜ್ಕುಮಾರ್ ಅವರು ಬೇಗ ಚೇತರಿಕೆ ಕಾಣಲಿ ಎಂದು ಕರ್ನಾಟಕದ ಹಲವು ಕಡೆಗಳಲ್ಲಿ ಅವರ ಅಭಿಮಾನಿಗಳು ಹೋಮ-ಹವನಗಳನ್ನು ನಡೆಸಿದ್ದರು. ಸಾಕಷ್ಟು ಕಡೆಗಳಲ್ಲಿ ಪೂಜೆ ಪುನಸ್ಕಾರ ಮಾಡಲಾಗಿತ್ತು. ಶಿವಣ್ಣನ ಅಭಿಮಾನಿಗಳು ದೇವರ ಮೊರೆ ಹೋದರು. ಈ ಎಲ್ಲ ಪೂಜೆ-ಪುನಸ್ಕಾರ, ಹೋಮ-ಹವನ ಹಾಗೂ ಅಭಿಮಾನಿಗಳ ಪ್ರಾರ್ಥನೆ ಫಲ ಕೊಟ್ಟಿದೆ.
ಶಿವರಾಜಕುಮಾರ್ ಕನ್ನಡದ ವರನಟ ಡಾ. ರಾಜಕುಮಾರ್ ಅವರ ಹಿರಿಯ ಮಗ. 125ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 1974 ರಲ್ಲಿ ಶ್ರೀನಿವಾಸನ ಕಲ್ಯಾಣ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಅವರು, ಜನುಮದ ಜೋಡಿ, ಜೋಗಿ, ಆನಂದ್, ರಥ ಸಪ್ತಮಿ, ನಮ್ಮೂರ ಮಂದಾರ ಹೂವೆ, ಓಂ ಮತ್ತು ಚಿಗುರಿದ ಕನಸು ಮುಂತಾದ ಚಿತ್ರಗಳ ಮೂಲಕ ಛಾಪು ಮೂಡಿಸಿದರು.