ಬೆಂಗಳೂರು: ಈಗಾಗಲೇ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸದ್ದು ಮಾಡಿರುವ ‘ಕೆಂಡ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಸಹದೇವ್ ಕೆಲವಡಿ ನಿರ್ದೇಶಿಸಿ, ರೂಪಾ ರಾವ್ ನಿರ್ಮಿಸಿರುವ ಚಿತ್ರ ಜು.26ರಂದು ತೆರೆಗೆ ಬರಲಿದೆ.
ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಯುವಕನೊಬ್ಬ ಪರಿಸ್ಥಿತಿಗಳ ಸೆಳವಿಗೆ ಸಿಕ್ಕು ಭೂಗತ ಲೋಕದ ತೆಕ್ಕೆಗೆ ಬೀಳುವ ಕಥೆ ಇಲ್ಲಿದೆ. ಸಿದ್ಧ ಸೂತ್ರಗಳ ಸುತ್ತ ಗಿರಕಿ ಹೊಡೆಯುವ ಕಥೆಯಲ್ಲ. ಕೈಗೆ, ಮೈ ಮನಸಿಗೆ ಮೆತ್ತಿಕೊಂಡ ರಕ್ತದ ಕಲೆಗಳನ್ನ ಕಲಾತ್ಮಕವಾಗಿ ತೋರಿಸಲು ಯತ್ನಿಸಿದ್ದೇವೆ. ಸುಡುವ ಕ್ರೌರ್ಯವನ್ನು ಸೂಕ್ಷ್ಮ ಸಂವೇದನೆಯ ಒಳಗಣ್ಣಿನಿಂದ ನೋಡಲು ಸಾಧ್ಯವೇ ಎಂಬ ಆಲೋಚನೆ ಚಿತ್ರದಲ್ಲಿ ಕಾಣುತ್ತದೆ’ ಎಂದರು ನಿರ್ದೇಶಕರು.
ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶನ, ಪ್ರದೀಪ್ ನಾಯಕ್ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನವಿರುವ ಈ ಚಿತ್ರದಲ್ಲಿ ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ ಮುಂತಾದವರ ತಾರಾಗಣವಿದೆ. ಕೆಂಡ ಹಲವು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ತನ್ನ ಛಾಪು ಮೂಡಿಸಿದೆ. ಇದು ನ್ಯೂಯಾರ್ಕ್‌ನ ಟಿಶ್ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು ಮತ್ತು ಸ್ವಿಟ್ಜರ್ಲೆಂಡ್‌ನಲ್ಲೂ ಪ್ರದರ್ಶಿಸಲಾಯಿತು.