ಬೆಂಗಳೂರು: ನಟ ಧನಂಜಯ್ ಕೋಟಿ ಚಿತ್ರದಲ್ಲಿ ಒಬ್ಬ ಸಾಮಾನ್ಯ ಚಾಲಕನಾಗಿ ಕೋಟಿ ರೂಪಾಯಿ ಸಂಪಾದಿಸುವ ಅಸಾಧಾರಣ ಕನಸನ್ನು ಹೊಂದಿ ಪ್ರಯಾಣಿಸುತ್ತಾನೆ. ಕೋಟಿ ಸಂಪಾದಿಸಿ ತನ್ನ ಕುಟುಂಬವನ್ನು ಪೋಷಿಸಬೇಕು ಎಂಬುದು ನಾಯಕನ ದೊಡ್ಡ ಕನಸ್ಸಾಗಿದೆ.
ಕೋಟಿ ಚಿತ್ರದಲ್ಲಿ ನಟಿ ತಾರಾ ಅವರು ತಾಯಿಯ ಪಾತ್ರದಲ್ಲಿ ನಟಿಸಿದ್ದರೆ, ಪೃಥ್ವಿ ಶಾಮನೂರು ಮತ್ತು ತನುಜಾ ವೆಂಕಟೇಶ್ ಅವರು ಸಹೋದರ ಸಹೋದರಿಯಾಗಿ ನಟಿಸುತ್ತಿದ್ದು ಮುಂಬರುವ ಎರಡು ಪ್ರತಿಭೆಗಳ ಸೇರ್ಪಡೆಯು ಚಿತ್ರಕ್ಕೆ ಹೊಸ ಚೈತನ್ಯ ನೀಡಿದೆ.
ಹರಿಪ್ರಸಾದ್ ಜಯಣ್ಣ ನಿರ್ದೇಶನದ ಪದವಿ ಪೂರ್ವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪೃಥ್ವಿ ಶಾಮನೂರು ನಾಚ್ಚಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಭೂಮಿ ಹಿನ್ನೆಲೆಯುಳ್ಳ ತನುಜಾ ವೆಂಕಟೇಶ್ ಅವರು ಮಹತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಕುರಿತು ಮಾತನಾಡಿದ ಪೃಥ್ವಿ, ನಾಚ್ಚಿ ಪಾತ್ರ ಒಂದು ಉಲ್ಲಾಸಕರ ಪ್ರಯಾಣವಾಗಿದೆ. ಅಂತಹ ಮಹತ್ವದ ಯೋಜನೆಯಲ್ಲಿ ನನಗೆ ಅವಕಾಶ ಸಿಕ್ಕಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದರು. ಮಹತಿ ಪಾತ್ರಕ್ಕೆ ಜೀವ ತುಂಬಿರುವ ತನುಜಾ ಅವರು ಧನಂಜಯ್, ತಾರಾ ಮತ್ತು ಪೃಥ್ವಿ ಅವರೊಂದಿಗೆ ಕೆಲಸ ಮಾಡಿದ್ದು ನಿಜವಾಗಿ ಇದೊಂದು ಕುಟುಂಬ ಭಾವನೆ ಮೂಡಿತ್ತು ಎಂದು ಹೇಳಿದ್ದಾರೆ.
ನಿರ್ದೇಶಕ ಪರಮ್ ಹೊಸಬರನ್ನು ಶ್ಲಾಘಿಸಿದ್ದಾರೆ. ಪೃಥ್ವಿ ಶಾಮನೂರು ನಾಚ್ಚಿ ಪಾತ್ರಕ್ಕೆ ಆಳುವಾದ ಜೀವವನ್ನು ತುಂಬಿದರೆ ತನುಜಾ ವೆಂಕಟೇಶ್ ಅವರ ಚೊಚ್ಚಲ ಅಭಿನಯವು ಅವರ ಪಾತ್ರಕ್ಕೆ ಚೈತನ್ಯವನ್ನು ತುಂಬುತ್ತದೆ ಎಂದರು. ಕೋಟಿಯ ಪಾತ್ರವರ್ಗದಲ್ಲಿ ಮೋಕ್ಷ ಕುಶಾಲ್ ಅವರು ನಾಯಕಿಯಾಗಿದ್ದು ರಮೇಶ್ ಇಂದಿರಾ ಅವರು ವಿಲನ್ ಆಗಿದ್ದಾರೆ. ಅನುಭವಿ ನಟ ರಂಗಾಯಣ ರಘು ಅಭಿನಯಿಸಿದ್ದಾರೆ.
ವಾಸುಕಿ ವೈಭವ್ ಸಂಗೀತವಿರುವ ಈ ಚಿತ್ರಕ್ಕೆ ನೋಬಿನ್ ಪಾಲ್ ಹಿನ್ನೆಲೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ತಾಂತ್ರಿಕ ತಂಡದಲ್ಲಿ ಸಂಕಲನಕಾರ ಪ್ರತೀಕ್ ಶೆಟ್ಟಿ ಮತ್ತು ಛಾಯಾಗ್ರಾಹಕ ಅರುಣ್ಬ್ರಮ ಕೂಡ ಇದ್ದಾರೆ. ಜಿಯೋ ಸ್ಟುಡಿಯೋಸ್ ನಿರ್ಮಿಸಿರುವ ಕೋಟಿ ಜೂನ್ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.