ಹೈದರಾಬಾದ್: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದ್ದು, ನಟಿ ಪೂನಂಕೌರ್, ನಟಿ ಚಿನ್ಮಯ್ ಬೆನ್ನಲ್ಲೇ ಇದೀಗ ತೆಲುಗು ನಟಿ ಮತ್ತು ನಿರೂಪಕಿ ರಶ್ಮಿ ಗೌತಮ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ನಟಿ ರಶ್ಮಿ ಗೌತಮ್, ಖ್ಯಾತ ಬ್ರಿಟನ್ ಲೇಖಕಿ ರಾಷೆಲ್ ಮೊರಾನ್ ಅವರ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸೆಕ್ಸ್ ಹಗರಣದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಸ್ಟ್ ನಲ್ಲಿ “ಮಹಿಳೆ ಹಸಿದಾಗ ಬಾಯಿಗೆ ಅನ್ನ ಕೊಡಿ, ಅದನ್ನಲ್ಲ” ಎಂದು ಖ್ಯಾತ ಬ್ರಿಟನ್ ಲೇಖಕಿ ರಾಷೆಲ್ ಮೊರಾನ್ ಅವರ ಸಂದೇಶವನ್ನು ರಶ್ಮಿ ಗೌತಮ್ ಹಂಚಿಕೊಂಡಿದ್ದಾರೆ.
ನಿನ್ನೆಯಷ್ಟೇ ನಟಿ ಪೂನಂಕೌರ್ ಇದೇ ವಿಚಾರವಾಗಿ ಲೈವ್ ನಲ್ಲಿ ಮಾತನಾಡಿ, ಅಧಿಕಾರಲ್ಲಿರುವ ಜನರ ಮಕ್ಕಳು; ಹಣ ಮತ್ತು ಅಧಿಕಾರದ ಮದದಲ್ಲಿ ಮಹಿಳೆಯರ ಶೋಷಣೆ ಮಾಡುತ್ತಾರೆ ಮತ್ತು ಸಲೀಸಾಗಿ ಬಚಾವಾಗುತ್ತಾರೆ. ಅಂಕಿತಾ ಭಂಡಾರಿ ಹೆಸರಿನ ಯುವತಿಯನ್ನು ಮಿನಿಸ್ಟರೊಬ್ಬನ ಮಗ ಬೆಟ್ಟದ ಮೇಲಿಂದ ತಳ್ಳಿ ಹತ್ಯೆ ಮಾಡುತ್ತಾನೆ, ಮತ್ತೊಬ್ಬ ಮಿನಿಸ್ಟರ್ ಮಗ ಬ್ಲ್ಯಾಕ್ ಮೇಲ್ ಮಾಡುತ್ತಾನೆ ಎಂದು ತಮ್ಮ ಮಾತು ಆರಂಭಿಸುವ ಪೂನಂ, ಪ್ರಜ್ವಲ್ ರೇವಣ್ಣನ (Prajwal Revanna) ಬಗ್ಗೆ ಹೇಳುತ್ತಾರೆ.
ಪ್ರಜ್ವಲ್ ನನ್ನು ಒಬ್ಬ ಮಿನಿಸ್ಟರ್ ಮಗ ಎಂದು ಹೇಳುವ ಪೂನಂ (ಅವರಿಗೆ ಪ್ರಜ್ವಲ್ ರೇವಣ್ಣ ಒಬ್ಬ ಸಂಸದ ಮತ್ತು ಮಾಜಿ ಪ್ರಧಾನಿಯೊಬ್ಬರ ಮೊಮ್ಮಗ ಅನ್ನೋದು ಗೊತ್ತಿಲ್ಲ ಅನಿಸುತ್ತೆ) ಅವನೊಬ್ಬ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ, 2,800 ಕ್ಕೂ ಹೆಚ್ಚು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.