'ಕಾಗೆ ಬಂಗಾರ' ಎಂಬ ಶೀರ್ಷಿಕೆಯು ನಿರ್ದೇಶಕ ಸೂರಿಯ ಕೆಂಡಸಂಪಿಗೆ ಚಿತ್ರದ ದಿನಗಳಿಂದಲೂ ಅಭಿಮಾನಿಗಳಲ್ಲಿ ಉತ್ಸಾಹ ಹುಟ್ಟುಹಾಕಿದೆ. ಇದೀಗ ಬಹುನಿರೀಕ್ಷಿತ ಕಾಗೆ ಬಂಗಾರ ಸಿನಿಮಾ ನಿರ್ದೇಶಿಸಲು ಸೂರಿ ಸಜ್ಜಾಗಿರುವುದರಿಂದ ಅಭಿಮಾನಿಗಳ ನಿರೀಕ್ಷೆಗೆ ಕೊನೆಗೂ ಫಲ ದೊರಕುತ್ತಿದೆ.
ವಿರಾಟ್ ಅಭಿನಯದ ಸಿನಿಮಾಗಾಗಿ ನಿರ್ದೇಶಕರು ನಿರ್ಮಾಪಕ ಜಯಣ್ಣ ಅವರೊಂದಿಗೆ ಕೈಜೋಡಿಸುತ್ತಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು. ಇದೀಗ ಸೂರಿ ಮತ್ತು ನಿರ್ಮಾಪಕರು ಚಿತ್ರದ ಕಂಟೆಂಟ್ ಅನ್ನು ಅಂತಿಮಗೊಳಿಸಿದ್ದಾರೆ. ಅದಕ್ಕೆ ಕಾಗೆ ಬಂಗಾರ ಎಂದು ಶೀರ್ಷಿಕೆ ನೀಡಿದ್ದಾರೆ. ಸದ್ಯ ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದು, ಜೂನ್‌ನಲ್ಲಿ ಚಿತ್ರ ಸೆಟ್ಟೇರಲಿದೆ.
ಕುತೂಹಲಕಾರಿಯಾಗಿ, ಕಾಗೆ ಬಂಗಾರ ಚಿತ್ರದ ಮೂಲಕ ನಟ ದುನಿಯಾ ವಿಜಯ್ ಅವರ ಮಗಳು ರಿಥನ್ಯಾ ವಿಜಯ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ರಿಥನ್ಯಾ ತಮ್ಮ ತಂದೆಯೊಂದಿಗೆ ಜಡೇಶಾ ಕೆ ಹಂಪಿ ನಿರ್ದೇಶನದ ಯೋಜನೆಯಲ್ಲೂ ಬಣ್ಣ ಹಚ್ಚುತ್ತಿದ್ದು, ಕಾಗೆ ಬಂಗಾರದ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.
ನಿರ್ಮಾಪಕ ಜಯಣ್ಣ ಮತ್ತು ನಿರ್ದೇಶಕ ಸೂರಿ ಅವರು ಸಿನಿಮಾ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಕಾಗೆ ಬಂಗಾರ ಕುರಿತು ಮಾತನಾಡಿದ್ದಾರೆ. 'ನಾವು ಬಲಿಷ್ಠವಾದ ಯೋಜನೆಯಲ್ಲಿ ಸಹಕರಿಸಲು ಬಯಸಿದ್ದೇವೆ ಮತ್ತು ಸೂರಿ ಅಂತಿಮವಾಗಿ ಅತ್ಯುತ್ತಮ ಕಥೆಯೊಂದಿಗೆ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ' ಎಂದು ಜಯಣ್ಣ ಹೇಳುತ್ತಾರೆ.
'ಪ್ರೇಕ್ಷಕರು ಕಾಗೆ ಬಂಗಾರ ಶೀರ್ಷಿಕೆಯ ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದರು. ಇದೀಗ ನಾವು ಅಂತಿಮವಾಗಿ ಚಿತ್ರವನ್ನು ಮಾಡುತ್ತಿದ್ದೇವೆ. ನನ್ನನ್ನು ಪ್ರತಿ ಬಾರಿ ಸಂದರ್ಶಿಸಿದಾಗ, ಕಾಗೆ ಬಂಗಾರದ ಬಗ್ಗೆ ನನ್ನನ್ನು ಕೇಳಲಾಗುತ್ತದೆ ಮತ್ತು ನಾನು ಯಾವಾಗಲೂ 'ಚಿನ್ನದಂತಹ ಅಮೂಲ್ಯ ನಿರ್ಮಾಪಕ ಸಿಕ್ಕಾಗ ಮಾತ್ರ' ಅದು ಸಾಧ್ಯ ಎಂದು ಹೇಳುತ್ತಿದ್ದೆ. ಇದೀಗ ಜಯಣ್ಣ ಸಿಕ್ಕಿದ್ದಾರೆ. ವಿರಾಟ್ ನಾಯಕನಾಗಿದ್ದು, ರಿಥನ್ಯಾ ವಿಜಯ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಜಡೇಶಾ ಅವರು ರಿಥನ್ಯಾ ಅವರ ಕೆಲವು ತುಣುಕುಗಳನ್ನು ನನಗೆ ತೋರಿಸಿದರು ಮತ್ತು ಆಕೆ ಈ ಪಾತ್ರಕ್ಕೆ ಪರಿಪೂರ್ಣ ಎಂದು ನಾನು ಭಾವಿಸಿದೆ ಮತ್ತು ಎರಡೂ ಪಾತ್ರಗಳು ಭರವಸೆ ನೀಡುತ್ತವೆ' ಎನ್ನುತ್ತಾರೆ ಸೂರಿ.
ಕಾಗೆ ಬಂಗಾರ ವರ್ತಮಾನದಲ್ಲಿ ಸೆಟ್ಟೇರಲಿದ್ದು, ಅದಕ್ಕೆ ಯಾವುದೇ ಹಿನ್ನಲೆ ಇಲ್ಲ. ಕಾಗೆ ಬಂಗಾರ ಕೆಂಡಸಂಪಿಗೆ ಮತ್ತು ಪಾಪ್‌ಕಾರ್ನ್ ಮಂಕಿ ಟೈಗರ್ ಎರಡರಲ್ಲೂ ತೂಗಾಡುತ್ತಿರುವ ಸಡಿಲವಾದ ತುದಿಗಳನ್ನು ಒಟ್ಟಿಗೆ ತರುತ್ತದೆ. ಈ ಚಿತ್ರವು ವ್ಯಾಪಕ ಸೆಟ್‌ವರ್ಕ್‌ನೊಂದಿಗೆ ಹೆಚ್ಚಿನ ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ ಮತ್ತು ಶ್ರೀಮಂತ ದೃಶ್ಯ ವೈಭವವನ್ನು ನೀಡುತ್ತದೆ. ಹಲವಾರು ಪ್ರಮುಖ ನಟರು ಶೀಘ್ರದಲ್ಲೇ ಯೋಜನೆಗೆ ಸೇರಿಕೊಳ್ಳುತ್ತಾರೆ ಮತ್ತು ನಂತರ ಅವರ ಹೆಸರನ್ನು ಘೋಷಿಸಲಾಗುತ್ತದೆ ಎಂದು ಹೇಳಿದರು.
ಜಯಣ್ಣ ಫಿಲಂಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಪಕರಾದ ಜಯಣ್ಣ ಮತ್ತು ಬೋಗೇಂದ್ರ ಅವರು ಈ ಯೋಜನೆಯನ್ನು ನಿರ್ಮಿಸಲಿದ್ದು, ಚಿತ್ರವನ್ನು ಸೂರಿ ಅವರು ಅಮ್ರಿ ಮತ್ತು ಸುರೇಂದ್ರನಾಥ್ ಅವರೊಂದಿಗೆ ಬರೆಯಲಿದ್ದಾರೆ. ಚಿತ್ರದಲ್ಲಿ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ದುನಿಯಾ ವಿಜಯ್ ಮತ್ತು ವಿರಾಟ್ ಅವರೊಂದಿಗಿನ ಅವರ ಇತರ ಯೋಜನೆಗೆ ಸಂಬಂಧಿಸಿದಂತೆ, ನಿರ್ದೇಶಕ ಮತ್ತು ನಿರ್ಮಾಪಕ ಇಬ್ಬರೂ ಸದ್ಯದ ತಮ್ಮ ಬದ್ಧತೆಗಳನ್ನು ಪೂರೈಸಿದ ನಂತರ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.