ಹೈದರಾಬಾದ್: ನಟ ಶಿವರಾಜ್ ಕುಮಾರ್ ಅಭಿನಯದ 'ಓಂ' ಚಿತ್ರದಂತೆಯೇ ತೆಲುಗಿನ ಮೊದಲ ಕಲ್ಟ್ ಕ್ಲಾಸಿಕ್ ಚಿತ್ರ ಎಂದು ಕರೆಯಲಾಗುವ ನಟ ನಾಗಾರ್ಜುನ ಅಭಿನಯದ ಶಿವ (Siva) ಚಿತ್ರ ಹೊಸ ಅವತರಣಿಕೆಯಲ್ಲಿ ರಿರಿಲೀಸ್ ಆಗುತ್ತಿದೆ.
ಹೌದು.. ಅಂದಿನ ಕಾಲಕ್ಕೆ ತೆಲುಗು ಚಿತ್ರರಂಗದ ಸಾರ್ವಕಾಲಿಕ ಗಳಿಕೆ ಕಂಡಿದ್ದ ನಟ ಅಕ್ಕಿನೇನಿ ನಾಗಾರ್ಜುನ ಅಭಿನಯದ ಕಲ್ಟ್ ಕ್ಲಾಸಿಕ್ ಚಿತ್ರ ಶಿವ (Siva) ಇದೀಗ ಮತ್ತೆ ಥಿಯೇಟರ್ ಗಳಿಗೆ ಅಪ್ಪಳಿಸುತ್ತಿದೆ. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಸ್ಟಾರ್ ನಿರ್ದೇಶಕ ಎಂಬ ಪಟ್ಟ ತಂದುಕೊಟ್ಟ ಈ ಶಿವ ಚಿತ್ರ ಹೊಸ ಅವತರಣಿಕೆಯಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ.
ಅಂದಹಾಗೆ ಈ ಚಿತ್ರವನ್ನು ಅಕ್ಕಿನೇನಿ ನಾಗಾರ್ಜುನ ಅವರ ತಂದೆ ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಅನ್ನಪೂರ್ಣ ಸ್ಟುಡಿಯೋಸ್ ನಿರ್ಮಿಸಿದ್ದು ಈ ಸ್ಟುಡಿಯೋದ 50ನೇ ವಾರ್ಷಿಕೋತ್ಸವ ನಿಮಿತ್ತ ಈ ಶಿವ ಚಿತ್ರವನ್ನು ಮತ್ತೆ ಬಿಡುಗಡೆ ಮಾಡಲಾಗುತ್ತಿದೆ.
ಈ ಕುರಿತು ಸ್ವತಃ ಮಾಹಿತಿ ನೀಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, 'ನಾವು ಅತ್ಯಂತ ಪ್ರತಿಷ್ಠಿತ ಚಿತ್ರ 'ಶಿವಾ'ವನ್ನು ಮತ್ತೆ ತೆರೆ ಮೇಲೆ ತರುತ್ತಿದ್ದೇವೆ. ಮೊದಲ ಬಾರಿಗೆ 4K ಡಾಲ್ಬಿ ಅಟ್ಮಾಸ್ ಧ್ವನಿಯಲ್ಲಿ ಶಿವನ ಆರ್ಭಟ ವೀಕ್ಷಿಸಿ ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ಈ ಬಾರಿ ಶಿವ ಪಂಚ್ ಮತ್ತಷ್ಟು ಗಟ್ಟಿಯಾಗಿ ಕೇಳುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಅಭಿಮಾನಿಗಳ ಬಹು ವರ್ಷಗಳ ಬೇಡಿಕೆ
ಈ ಚಿತ್ರವನ್ನು 4K ಆವೃತ್ತಿಯಲ್ಲಿ ತರಲು ಯೋಜನೆಗಳು ಜಾರಿಯಲ್ಲಿವೆ. ಈ ಚಿತ್ರವನ್ನು ಮರು ಬಿಡುಗಡೆ ಮಾಡಬೇಕೆಂದು ನಾಗಾರ್ಜುನ ಅಭಿಮಾನಿಗಳು ಬಹಳ ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಅಂತಿಮವಾಗಿ, ಆ ಆಸೆಯನ್ನು ಪೂರೈಸಲು ಅನ್ನಪೂರ್ಣ ಸ್ಟುಡಿಯೋಸ್ ಸಿದ್ಧವಾಗಿದೆ. 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಇದನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಅಂದಹಾಗೆ 'ವಿಕ್ರಮ್' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಾಗಾರ್ಜುನಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ 'ಶಿವ' ಚಿತ್ರ ನಿರ್ದೇಶಿಸಿದ್ದರು. 1989ರಲ್ಲಿ ಬಿಡುಗಡೆಯಾದ ಈ ಚಿತ್ರ ಅತ್ತ ನಟ ನಾಗಾರ್ಜುನಗೆ ಮತ್ತು ಇತ್ತ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಸ್ಟಾರ್ ಪಟ್ಟ ತಂದುಕೊಟ್ಟಿತು.
ಶಿವ ಚಿತ್ರ ಕೇವಲ ನಾಗಾರ್ಜುನ ಮಾತ್ರವಲ್ಲದೇ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಚೊಚ್ಚಲ ನಿರ್ದೇಶದನ ಚಿತ್ರ ಕೂಡ ಆಗಿತ್ತು. ಕಾಲೇಜು ವಿದ್ಯಾರ್ಥಿಗಳ ಗಲಭೆ ಮತ್ತು ಲೋಕಲ್ ರೌಡಿಸಂ ಹಿನ್ನೆಲೆಯಲ್ಲಿ ನಿರ್ಮಿಸಲಾದ ಈ ಚಿತ್ರವು ಆ ಸಮಯದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದಲ್ಲದೆ, ಟ್ರೆಂಡ್ ಸೆಟ್ಟರ್ ಚಿತ್ರ ಕೂಡ ಆಗಿತ್ತು.
ಯಾವಾಗ ಬಿಡುಗಡೆ
ಇನ್ನು ಶಿವ ಚಿತ್ರವನ್ನು ಶೀಘ್ರದಲ್ಲೇ ತೆರೆಗೆ ತರಲಾಗುತ್ತಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆಯಾದರೂ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿಲ್ಲ. ಥಿಯೇಟರ್ ಗಳ ಹೊಂದಾಣಿಕೆ ಬಳಿಕ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ.