ಉಪೇಂದ್ರ ಅವರ ನಿರ್ದೇಶನಕ್ಕೆ ಫಿದಾ ಆಗದವರೇ ಇಲ್ಲ. ಅಂತಹ ಸಿನಿಮಾಗಳನ್ನು ಅವರು ತಮ್ಮ ವೃತ್ತಿ ಜೀವನದಲ್ಲಿ ನೀಡಿದ್ದಾರೆ. ಅವರ ಸ್ಟೈಲ್ ಅನೇಕ ನಿರ್ದೇಶಕರಿಗೆ ಸ್ಫೂರ್ತಿ ಎಂದರೂ ತಪ್ಪಾಗಲಾರದು.
ನಿರ್ದೇಶಕ ಲೋಕೇಶ್ ಕನಗರಾಜ್ ಸೇರಿದಂತೆ ಅನೇಕ ನಿರ್ದೇಶಕರು ತಮ್ಮ ಸಿನಿಮಾ ಮೇಕಿಂಗ್ನಲ್ಲಿ ಉಪೇಂದ್ರ ಪ್ರಭಾವ ಇದೆ ಎಂದು ಒಪ್ಪಿಕೊಂಡಿದ್ದು ಇದೆ. ಈಗ ತಮಿಳಿನ ಸೂಪರ್ಸ್ಟಾರ್ ರಜನಿಕಾಂತ್ ಅವರು ಉಪೇಂದ್ರ ಅವರನ್ನು ಹಾಡಿ ಹೊಗಳಿದ್ದಾರೆ.
ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಸಿನಿಮಾದಲ್ಲಿ 'ಸೂಪರ್ ಸ್ಟಾರ್' ರಜನಿಕಾಂತ್ ಜೊತೆಗೆ ಉಪೇಂದ್ರ ನಟಿಸುತ್ತಿದ್ದಾರೆ. ಈ ಸಿನಿಮಾದ ಆಡಿಯೋ ಈಚೆಗೆ ಚೆನ್ನೈನಲ್ಲಿ ನಡೆದಿತ್ತು. ಈ ವೇಳೆ ರಜನಿಕಾಂತ್ ಅವರು ಉಪೇಂದ್ರ ಅವರನ್ನ ಮನಸಾರೆ ಹೊಗಳಿದ್ದಾರೆ. ಜೊತೆಗೆ 'ಓಂ' ಚಿತ್ರವನ್ನು ಕೂಡ ನೆನಪು ಮಾಡಿಕೊಂಡಿದ್ದಾರೆ.
ಕೂಲಿ' ಚಿತ್ರದಲ್ಲಿ ಉಪೇಂದ್ರ ಅವರು ಕಲೀಶ ಎಂಬ ಪಾತ್ರವನ್ನು ಮಾಡಿದ್ದಾರೆ. ಆ ಬಗ್ಗೆ ಮಾತನಾಡುತ್ತಾ ರಜನಿಕಾಂತ್, "ನಮ್ಮ ಸಿನಿಮಾದಲ್ಲಿ ಉಪೇಂದ್ರ ಅವರು ಒಂದು ಪಾತ್ರ ಮಾಡಿದ್ದಾರೆ. ಭಾರತದ ಅತ್ಯಂತ ಬುದ್ಧಿವಂತ ನಿರ್ದೇಶಕರಿಗೆಲ್ಲಾ ಉಪೇಂದ್ರ ಅವರೇ ದೊಡ್ಡ ಸ್ಪೂರ್ತಿ. ಮಲಯಾಳಂ, ಹಿಂದಿ, ತೆಲುಗು, ತಮಿಳು ಎಲ್ಲಾ ಭಾಷೆಯವರಿಗೂ ಉಪೇಂದ್ರ ಸ್ಪೂರ್ತಿ. ಅಂತಹ ದೊಡ್ಡ ಡೈರೆಕ್ಟರ್. ಅವರಿಗೆ ನಟನಾಗಬೇಕು ಎಂದು ಇಷ್ಟವಿರಲಿಲ್ಲ. ಅವರು ಮೂಲತಃ ನಿರ್ದೇಶಕರು" ಎಂದು ಹೇಳಿದ್ದಾರೆ.
ಅವರು 'ಓಂ' ಎಂಬ ಒಂದು ಸಿನಿಮಾವನ್ನು ಶಿವರಾಜ್‌ಕುಮಾರ್‌ಗೆ ಮಾಡಿದ್ದಾರೆ. ನನಗೆ ಇಲ್ಲಿ 'ಬಾಷಾ' ಸಿನಿಮಾ ಹೇಗೋ, ಅಲ್ಲಿ (ಕರ್ನಾಟಕದಲ್ಲಿ) ಅದಕ್ಕಿಂತಲೂ 10 ಪಟ್ಟು ದೊಡ್ಡ ಸಿನಿಮಾ 'ಓಂ'. ಆದಾದ ಮೇಲೆ ಅವರು ಮಾಡಿರುವ ಒಂದೊಂದು ಪಾತ್ರಗಳು ಡಿಫರೆಂಟ್. ಈಗ ಲೋಕೇಶ್ ಕನಕರಾಜ್ ನಾನ್ ಲೀನಿಯರ್ ಅಂತೇನೋ ಟೆಕ್ನಿಕ್ ಬಳಸುತ್ತಾರಲ್ವಾ? ಅದನ್ನು ಉಪೇಂದ್ರ ಅಂದೇ ಮಾಡಿದ್ದಾರೆ" ಎಂದು ರಜನಿಕಾಂತ್ ಹೇಳಿದ್ದಾರೆ.
ರಜನಿಕಾಂತ್ ಅವರ ಬಗ್ಗೆ ಖುಷಿಯಿಂದ ಮಾತನಾಡಿರುವ ಉಪೇಂದ್ರ, "ನಾನು ಈಗ ಹೇಳುವುದು ಅತಿಶಯೋಕ್ತಿ ಎನಿಸಬಹುದು. ಆದರೆ ನಾನು ನಿಜವಾಗಿಯೂ ಹೇಳುತ್ತಿದ್ದೇನೆ, ನಾನು 25 ವರ್ಷದ ಹಿಂದೆ ತಲೈವಾ ಅವರನ್ನು ಭೇಟಿಯಾದೆ. ಅದು ನನಗೆ ಯಾವತ್ತೂ ಮರೆಯದಂತಹ ಕ್ಷಣ. ಅಂದಿನಿಂದ ದ್ರೋಣಾಚಾರ್ಯರನ್ನು ಏಕಲವ್ಯ ಹೇಗೆ ಫಾಲೋ ಮಾಡುತ್ತಾನೋ, ಹಾಗೇ ನಾನು ಫಾಲೋ ಮಾಡಿದ್ದೇನೆ" ಎಂದು ಹೇಳಿದ್ದಾರೆ.
ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ‘ಕೂಲಿ’ ಸಿನಿಮಾ ಆಗಸ್ಟ್ 14ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ರಜನಿಕಾಂತ್ ಹೀರೋ. ಉಪೇಂದ್ರ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಆಮಿರ್ ಖಾನ್, ಅಕ್ಕಿನೇನಿ ನಾಗಾರ್ಜುನ ಸೇರಿದಂತೆ ಅನೇಕರು ಸಿನಿಮಾದಲ್ಲಿ ಇದ್ದಾರೆ.