ಕನ್ನಡ ಬಿಗ್ ಬಾಸ್ ಮನೆ ದಿನ ಕಳೆದಂತೆ ಕಾವೇರುತ್ತಿದೆ. ಸ್ಪರ್ಧಿಗಳ ನಡುವೆ ಮುಸುಕಿನ ಗುದ್ದಾಟದ ಜೊತೆಗೆ ಕಾಲೆಳೆಯುವುದು ಜೋರಾಗಿದೆ. ಮಧ್ಯೆ ಮಧ್ಯೆ ಗಿಲ್ಲಿ ನಟನ ಕಾಮಿಡಿ ಪ್ರೇಕ್ಷಕರಿಗೆ ಮುದು ನೀಡುತ್ತಿದೆ. ಆದರೆ ಗಿಲ್ಲಿ ನಟನ ಟ್ರಂಪ್ ಕಾರ್ಡ್ ಆಗಿರುವ ಕಾಮಿಡಿಯನ್ನು ಪ್ರತಿಸ್ಪರ್ಧಿಗಳು ಟಾರ್ಗೆಟ್ ಮಾಡುತ್ತಿದ್ದಾರೆ. ಈ ವಾರ ಮನೆ ಮಂದಿ ಚೈತ್ರಗೆ ಉತ್ತಮ ಕೊಟ್ಟರೆ ಗಿಲ್ಲಿ ನಟನಿಗೆ ಕಳಪೆ ಕೊಟ್ಟಿದ್ದರು. ಅಲ್ಲದೆ ಪ್ರಮುಖವಾಗಿ ಸ್ಪರ್ಧಿಗಳು ಗಿಲ್ಲಿ ನಟನಿಗೆ ಕಳಪೆ ನೀಡಲು ಆತನಿಗೆ ಸರಿಯಾಗಿ ಕಾಮಿಡಿ ಮಾಡುವುದಕ್ಕೂ ಬರುವುದಿಲ್ಲ. ಮನೆ ಕೆಲಸ ಮಾಡುವುದಿಲ್ಲ. ನಮ್ಮನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ಕಾಮಿಡಿ ಮಾಡುತ್ತಾರೆ ಎಂದು ಕಾರಣ ಕೊಟ್ಟಿದ್ದರು.
ಇನ್ನು ಈ ಬಾರಿ ಪ್ರೇಕ್ಷಕರು ಬಿಬಿಕೆ 12ರ ಲೈವ್ ಅನ್ನು ಹೆಚ್ಚಾಗಿ ನೋಡುತ್ತಿದ್ದಾರೆ. ಲೈವ್ ನಲ್ಲಿ ಬಂದ ಪ್ರಮುಖ ವಿಷಯಗಳನ್ನು ರಾತ್ರಿಯ ಎಪಿಸೋಡ್ ನಲ್ಲಿ ತೋರಿಸುತ್ತಿಲ್ಲ ಎಂದು ಪ್ರೇಕ್ಷಕರು ಗರಂ ಆಗುತ್ತಿದ್ದಾರೆ. ಅಡುಗೆ ಮಾಡುವ ಜವಾಬ್ದಾರಿ ತೆಗೆದುಕೊಂಡಿದ್ದವರು ಊಟಕ್ಕೆ ಚಪಾತಿ ಮಾಡುತ್ತಿದ್ದರು. ಸ್ಪರ್ಧಿ ರಘು ಒಬ್ಬರೇ ಕುಳಿತುಕೊಂಡು ಚಪಾತಿ ತಿನ್ನುತ್ತಿದ್ದರು. ಇದನ್ನು ನೋಡಿದ ಗಿಲ್ಲಿ ನಟ ಹತ್ತಿರಕ್ಕೆ ಬರುತ್ತಾರೆ. ಗಿಲ್ಲಿ ಬರುವುದನ್ನು ನೋಡಿದ ರಘು ನನ್ನ ತಟ್ಟೆಗೆ ಕೈ ಹಾಕಬೇಡ ಎಂದು ಖಾರವಾಗಿ ಹೇಳುತ್ತಾರೆ. ಆದರೆ ಅದನ್ನು ಹಾಸ್ಯವಾಗಿ ತೆಗೆದುಕೊಂಡ ಗಿಲ್ಲಿ ನಟ ಒಂದು ತುತ್ತು ಕೊಡಣ್ಣ ರುಚಿ ಹೇಗಿದೆ ಅಂತ ನೋಡುತ್ತೇನೆ ಎಂದು ಪರಿಪರಿಯಾಗಿ ಕೇಳಿದರೂ ರಘು ನಾನು ಕೊಡಲ್ಲ. ಇಲ್ಲಿಂದ ಹೋಗುವಂತೆ ಗದರುತ್ತಾರೆ. ಈ ದೃಶ್ಯವನ್ನು ನೋಡಿ ಗಿಲ್ಲಿ ಅಭಿಮಾನಿಗಳು ನಿಜಕ್ಕೂ ಬೇಸರ ವ್ಯಕ್ತಪಡಿಸಿದ್ದಾರೆ.
ಎಷ್ಟೇ ಕಟುಕ ಮನುಷ್ಯನಾದರೂ ಊಟ ಅಂತ ಬಂದಾಗ ಯಾರಾದರೂ ಕೇಳಿದರೆ ಕೊಡುತ್ತಾರೆ. ಆದರೆ ಎಷ್ಟೇ ಕೇಳಿದರೂ ರಘು ಹೃದಯ ಮಾತ್ರ ಕರಗಲಿಲ್ಲ. ಕೊನೆಗೆ ಗಿಲ್ಲಿ ನಟ ಅಲ್ಲಿಂದ ಎದ್ದು ಹೋಗುತ್ತಾರೆ. ಅಷ್ಟಕ್ಕೆ ಅದು ಮುಗಿದಿದ್ದರೆ ಹೋಗಲಿ ಬಿಡು ಅನ್ನಬಹುದಾಗಿತ್ತು. ಆದರೆ ಆದಾದ ನಂತರ ಮತ್ತೊಬ್ಬ ಸ್ಪರ್ಧಿ ರಾಶಿಕಾ ಬಂದು ರಘು ಪಕ್ಕ ಕೂತು ತಟ್ಟೆಯಲ್ಲಿ ಕೈ ಹಾಕಿ ಚಪಾತಿಯನ್ನು ತಿನ್ನುತ್ತಾರೆ. ಈ ದೃಶ್ಯ ಪ್ರೇಕ್ಷಕರನ್ನು ಮತ್ತಷ್ಟು ಕೆರಳಿಸಿದೆ. ಒಂದೇ ಮನೆಯಲ್ಲಿದ್ದು ಮೊದ ಮೊದಲಿಗೆ ಗಿಲ್ಲಿ ನಟನ ಜೊತೆಗೆ ಚನ್ನಾಗಿಯೇ ಇದ್ದ ರಘು. ಒಂದೇ ಒಂದು ಘಟನೆಯಿಂದ ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳಬೇಕಿತ್ತ ಎಂದು ಪ್ರೇಕ್ಷಕರು ಪ್ರಶ್ನಿಸುತ್ತಿದ್ದಾರೆ. ಈ ದೃಶ್ಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.