2024ರಲ್ಲಿ ತೆರೆಕಂಡ ಅಭಿಷೇಕ್ ಶೆಟ್ಟಿ ನಿರ್ದೇಶನದ ಆರಾಮ್ ಅರವಿಂದ ಸ್ವಾಮಿ ಕಮರ್ಷಿಯಲ್ ಎಂಟರ್ಟೈನರ್ ಯಶಸ್ಸಿನ ನಂತರ, ನಟ ಅನೀಶ್ ಇದೀಗ ನಿರ್ದೇಶಕನ ಕ್ಯಾಪ್ ತೊಡಲು ತಯಾರಿ ನಡೆಸುತ್ತಿದ್ದಾರೆ. ಈ ಮೊದಲು ರಾಮಾರ್ಜುನ ಚಿತ್ರ ನಿರ್ದೇಶಿಸಿದ್ದ ಅನೀಶ್ ಇದೀಗ 'ಲವ್ OTP' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶನ ಮಾತ್ರವಲ್ಲದೆ ಈ ಕಮರ್ಷಿಯಲ್ ಎಂಟರ್‌ಟೈನರ್‌ಗೆ ಕಥೆ ಬರೆದು, ತಾವೇ ನಟಿಸುತ್ತಿದ್ದಾರೆ.
ಭಾವಪ್ರೀತ ಪ್ರೊಡಕ್ಷನ್ಸ್ ಅಡಿಯಲ್ಲಿ ವಿಜಯ್ ಎಂ ರೆಡ್ಡಿ ನಿರ್ಮಿಸಲಿರುವ 'ಲವ್ OTP' ಚಿತ್ರವನ್ನು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ. 'ನಾನು ಈಗ ತೆಲುಗಿಗೆ ಪದಾರ್ಪಣೆ ಮಾಡುತ್ತಿದ್ದೇನೆ ಮತ್ತು ನನ್ನ ಮೂಲ ಕನ್ನಡ ಆಗಿರುವುದರಿಂದ ಚಿತ್ರವನ್ನು ಎರಡೂ ಭಾಷೆಗಳಲ್ಲಿ ಬಿಡುಗಡೆ ಮಾಡಲು ಬಯಸುತ್ತೇನೆ' ಎನ್ನುತ್ತಾರೆ ಅನೀಶ್.
ಸಾಮಾನ್ಯವಾಗಿ OTP ಎಂದರೆ 'ಒನ್ ಟೈಮ್ ಪಾಸ್‌ವರ್ಡ್' ಎಂದು ಹೇಳಲಾಗುತ್ತದೆ. ಮುಂದುವರಿದು 'ಓವರ್ ಟಾರ್ಚರ್ ಪ್ರೆಶರ್' ಎಂದು ಹಾಸ್ಯಮಯವಾಗಿ ಹೇಳಲಾಗುತ್ತದೆ. ಇದೀಗ ಅನೀಶ್ ಚಿತ್ರಕ್ಕೆ ಲವ್ OTP ಎಂದು ಹೆಸರಿಟ್ಟಿರುವುದು ನಿರೀಕ್ಷೆ ಹುಟ್ಟುಹಾಕಿದೆ. ಇದು ಪ್ರೀತಿ ಮತ್ತು ಸಂಬಂಧಗಳ ಏರಿಳಿತಗಳ ಮೇಲೆ ಕೇಂದ್ರೀಕರಿಸುತ್ತದೆ.
ಚಿತ್ರದಲ್ಲಿ ತಂದೆಯ ಪಾತ್ರದಲ್ಲಿ ನಟಿಸಲು ರಾಜು ಕಣಕಾಲರನ್ನು ಕರೆತರಲಾಗಿದೆ ಎಂದು ಅನೀಶ್ ಬಹಿರಂಗಪಡಿಸಿದ್ದಾರೆ.
ಆರಾಮ್ ಅರವಿಂದ ಸ್ವಾಮಿಯಲ್ಲಿನ ತನ್ನ ಪಾತ್ರದ ಕುರಿತು ಮಾತನಾಡುವ ಅನೀಶ್, 'ಜನರು ಫ್ಯಾಮಿಲಿ ಎಂಟರ್‌ಟೈನರ್ ಚಿತ್ರಗಳಲ್ಲಿನ ಪಾತ್ರಗಳಲ್ಲಿ ನನ್ನನ್ನು ನೋಡುವುದನ್ನು ಆನಂದಿಸುತ್ತಾರೆ ಎಂದು ನಾನು ಅರಿತುಕೊಂಡಿದ್ದೇನೆ. ಆರಾಮ್ ಅರವಿಂದ ಸ್ವಾಮಿಯನ್ನು ವೀಕ್ಷಿಸಿದ ಯಾರಾದರೂ ಲವ್ OTP ಅನ್ನು ಖಂಡಿತವಾಗಿಯೂ ವೀಕ್ಷಿಸುತ್ತಾರೆ. ಚಿತ್ರವು ಸಂಬಂಧಗಳ ಸಾರವನ್ನು ಪರಿಶೀಲಿಸುತ್ತದೆ. ಶೀರ್ಷಿಕೆಯು ಕಥೆಯೊಂದಿಗೆ ಆಳವಾಗಿ ಸಂಪರ್ಕ ಸಾಧಿಸುತ್ತದೆ' ಎಂದು ಹೇಳುತ್ತಾರೆ.