ಚೆನ್ನೈ: ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡ ನಂತರ ತಮಿಳು ಸೂಪರ್‌ಸ್ಟಾರ್ ರಜಿನಿಕಾಂತ್ ನಾಯಕನಾಗಿ ನಟಿಸಿರುವ ‘ಜೈಲರ್’ ಇದೀಗ ಜಪಾನ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಹೌದು, ಫೆಬ್ರುವರಿ 21ರಂದು ನಿರ್ದೇಶಕ ನೆಲ್ಸನ್ ಅವರ ಬ್ಲಾಕ್‌ಬಸ್ಟರ್ ಚಿತ್ರ ಬಿಡುಗಡೆಯಾಗುತ್ತಿದೆ.
ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಜಪಾನ್‌ನಲ್ಲಿನ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಈ ಚಿತ್ರವು ಬಿಡುಗಡೆಯಾದ ಬಳಿಕ ವಿಶ್ವದಾದ್ಯಂತ 650 ಕೋಟಿ ರೂ. ಗಳಿಸಿದೆ.
ಚಿತ್ರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರದ ಸಾಗರೋತ್ತರ ವಿತರಕ ಐಂಗಾರನ್ ಇಂಟರ್‌ನ್ಯಾಶನಲ್ ಚಿತ್ರವು ಬಿಡುಗಡೆಯಾದ ಮೊದಲ ದಿನದಲ್ಲಿಯೇ 33 ಕೋಟಿ ಗಳಿಸಿದೆ ಎಂದು ದೃಢಪಡಿಸಿದೆ. ಇದು ಸೂಪರ್‌ಸ್ಟಾರ್ ರಜಿನಿಕಾಂತ್ ಅವರ ವೃತ್ತಿಜೀವನದಲ್ಲಿ ಅತ್ಯಧಿಕ ಗಳಿಕೆಯಾಗಿದೆ!
ರಜಿನಿಕಾಂತ್ ಅವರಲ್ಲದೆ ಜೈಲರ್ ಚಿತ್ರದಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್, ಕನ್ನಡದ ಸೂಪರ್‌ಸ್ಟಾರ್ ಶಿವ ರಾಜ್‌ಕುಮಾರ್, ಬಾಲಿವುಡ್ ನಟ ಜಾಕಿ ಶ್ರಾಫ್, ತೆಲುಗು ನಟ ಸುನೀಲ್, ರಮ್ಯಾ ಕೃಷ್ಣನ್, ವಿನಾಯಕನ್, ಮಿರ್ನಾ ಮೆನನ್, ತಮನ್ನಾ, ವಸಂತ್ ರವಿ, ನಾಗ ಬಾಬು, ಯೋಗಿ ಬಾಬು, ಜಾಫರ್ ಸಾದಿಕ್ ಮತ್ತು ಕಿಶೋರ್ ಸೇರಿದಂತೆ ಇತರರು ಇದ್ದಾರೆ. ಚಿತ್ರಕ್ಕೆ ಅನಿರುದ್ಧ್ ಅವರ ಸಂಗೀತ ಮತ್ತು ವಿಜಯ್ ಕಾರ್ತಿಕ್ ಕಣ್ಣನ್ ಅವರ ಛಾಯಾಗ್ರಹಣವಿದೆ.
ಚಿತ್ರವು ಉತ್ತಮ ಯಶಸ್ಸನ್ನು ಕಂಡಿತು. ಹೀಗಾಗಿ ಚಿತ್ರವನ್ನು ನಿರ್ಮಿಸಿದ್ದ ಸನ್ ಪಿಕ್ಚರ್ಸ್, ಸೂಪರ್‌ಸ್ಟಾರ್ ರಜಿನಿಕಾಂತ್ ಅವರಿಗೆ ಬಹಿರಂಗಪಡಿಸದ ಮೊತ್ತದ ಜೊತೆಗೆ BMW X7 ಕಾರನ್ನು ಉಡುಗೊರೆಯಾಗಿ ನೀಡಿತು. ಅಷ್ಟೇ ಅಲ್ಲದೆ, ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಮತ್ತು ಚಿತ್ರದ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರಿಗೆ ಹೊಸ ಪೋರ್ಷೆ ಕಾರುಗಳು ಮತ್ತು ಬಹಿರಂಗಪಡಿಸದ ಮೊತ್ತದ ಚೆಕ್‌ಗಳನ್ನು ಸಹ ನೀಡಿದರು.
ಪ್ರೊಡಕ್ಷನ್ ಹೌಸ್ ಬ್ಲಾಕ್‌ಬಸ್ಟರ್‌ನ ಸೀಕ್ವೆಲ್ ಅನ್ನು ಘೋಷಿಸಿದೆ. ಭಾಗ 1 ರಂತೆ, ಜೈಲರ್ 2 ಚಿತ್ರಕ್ಕೆ ಅನಿರುದ್ಧ್ ಸಂಗೀತ ಮತ್ತು ನೆಲ್ಸನ್ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ.