ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕೊಲೆ ಪ್ರಯತ್ನ ನಡೆದಿದ್ದು, ಕಿರುತೆರೆ ಧಾರಾವಾಹಿ ನಟಿ ಹಾಗೂ ನಿರೂಪಕಿಗೆ ಆಕೆಯ ಗಂಡನೇ ಚಾಕುವಿನಿಂದ ಇರಿದಿರುವ ಭೀಕರ ಘಟನೆ ವರದಿಯಾಗಿದೆ.
ಕಿರುತೆರೆ ಧಾರಾವಾಹಿ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿಗೆ ಮಂಜುಳಾ ಅಲಿಯಾಸ್ ಶ್ರುತಿಗೆ ಚಾಕು ಇರಿಯಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಗಂಡನೇ ಆಕೆಯ ಮೇಲೆ ಪೆಪ್ಪರ್ ಸ್ಪ್ರೇ ಹಾಕಿ ಬಳಿಕ ಆಕೆಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್ ನಲ್ಲಿ ಈ ಘಟನೆ ನಡೆದಿದ್ದು, ಜುಲೈ 4 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತಂತೆ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಶ್ರುತಿ ದೂರು ನೀಡಿದ್ದು, ಪೊಲೀಸರು ಕೇಸ್ ದಾಖಲಿಸಿ ಆರೋಪಿ ಅಮರೇಶ್‌ನನ್ನು ಬಂಧಿಸಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರುತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದಹಾಗೆ ಕನ್ನಡದಲ್ಲಿ ಅಮೃತಧಾರೆ, ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ಶ್ರುತಿ ನಟಿಸಿದ್ದಾರೆ.
ಶೀಲ ಶಂಕಿಸಿ ಕೃತ್ಯ
ಇನ್ನು ಮೂಲಗಳ ಪ್ರಕಾರ ನಟಿ ಶೃತಿಯ ಶೀಲ ಶಂಕಿಸಿ ಆಕೆಯ ಪತಿ ಅಮರೇಶ್ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಮಂಜುಳಾ (ಶೃತಿ) 20 ವರ್ಷದ ಹಿಂದೆ ಅಮರೇಶ್ ಎಚ್‌ಎಸ್ ಎಂಬಾತನ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ ಈ ಜೋಡಿಗೆ ಹನಿ ಮತ್ತು ನಿಧಿ ಎಂಬ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದರು. ಸಂಸಾರ ಸಮೇತ ಹನುಮಂತ ನಗರದಲ್ಲಿ ಲೀಸ್ ಗೆ ಮನೆ ಪಡೆದು ದಂಪತಿ ವಾಸವಿದ್ದರು.
ಗಂಡನಿಂದ ದೂರಾಗಿದ್ದ ಶೃತಿ
ನಟಿ ಶೃತಿ ಧಾರಾವಾಹಿಗಳತ್ತ ಮುಖ ಮಾಡಿದ ಬಳಿಕ ಆಕೆಯ ನಡವಳಿಕೆ ಗಂಡ ಅಮರೇಶ್‌ಗೆ ಇಷ್ಟವಾಗುತ್ತಿರಲಿಲ್ಲ. ಇಬ್ಬರ ನಡುವೆ ಹೊಂದಾಣಿಕೆ ಕೂಡ ಸರಿಯಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಗಂಡನಿಂದ ದೂರಾಗಿ ಶ್ರುತಿ ಅಣ್ಣನ ಮನೆಯಲ್ಲಿ ವಾಸವಿದ್ದರು. ಕಳೆದ ಏಪ್ರಿಲ್‌ನಲ್ಲಿ ಶ್ರುತಿ ಗಂಡನಿಂದ ದೂರವಾಗಿದ್ದರು. ಇಬ್ಬರ ನಡುವೆ ಲೀಸ್ ಹಣಕ್ಕಾಗಿ ಸಹ ಜಗಳ ನಡೆದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಜಿ-ಸಂಧಾನವಾದ ಮಾರನೆಯೇ ದಿನವೇ ಚಾಕು ಇರಿತ
ಇದಾದ ಬಳಿಕ ಕಳೆದ ಗುರುವಾರ ರಾಜಿ ಸಂದಾನ ಮಾಡಿ ಗಂಡ-ಹೆಂಡತಿ ಒಂದಾಗಿದ್ದರು. ಆದರೆ, ಇಬ್ಬರೂ ಒಂದಾದ ಮಾರನೇ ದಿನವೇ ಗಂಡ ಪತ್ನಿಗೆ ಚಾಕು ಇರಿದಿದ್ದಾನೆ. ಕಳೆದ ಶುಕ್ರವಾರ ಮಕ್ಕಳಿಬ್ಬರು ಕಾಲೇಜಿಗೆ ಹೋದ ನಂತರ ಕೆಲಸಕ್ಕೆ ಹೋಗಿದ್ದ ಅಮರೇಶ್ ಮಧ್ಯಾಹ್ನ ಮನೆಗೆ ವಾಪಸ್ ಆಗಿದ್ದಾನೆ. ಮನೆಗೆ ಬಂದ ಕೂಡಲೇ ಪೆಪ್ಪರ್ ಸ್ಪ್ರೇ ಹೊಡೆದು ಹೆಂಡತಿಗೆ ಚಾಕು ಇರಿದು ಕೊಲೆಗೆ ಯತ್ನ ನಡೆಸಿದ್ದಾನೆ. ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಪತಿ ಅಮರೇಶ್ ಕೊಲೆಗೆ ಯತ್ನ ನಡೆಸಿದ್ದಾರೆ. ಅಮರೇಶ್ ಸಿನಿಮಾ ಸ್ಟೈಲ್ ನಲ್ಲಿ ತಲೆ ಕೂದಲು ಹಿಡಿದು ಗೋಡೆ ತಲೆ ಗುದ್ದಿಸಿ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ದೂರಿನಲ್ಲೇನಿದೆ?
20 ವರ್ಷಗಳ ಹಿಂದೆ ಅಮರೇಶ್ ಎಚ್‌ಎಸ್ ಎನ್ನುವ ವ್ಯಕ್ತಿಯನ್ನು ವಿವಾಹವಾಗಿದ್ದು, ನಮಗೆ ನಿಧಿ ಹಾಗೂ ಹನಿ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮದುವೆಯಾದ ಐದು ವರ್ಷದ ಬಳಿಕ ಆರೋಪಿ ಅಮರೇಶ್ ಸಂಸಾರದ ವಿಚಾರವಾಗಿ ಹಾಗೂ ಹಣಕಾಸಿನ ವಿಚಾರವಾಗಿ ನಮ್ಮನ್ನು ಬೈಯ್ಯುವುದು, ಹೊಡೆಯುವುದು ಮಾಡಿ ಹಿಂಸೆ ನೀಡುತ್ತಿದ್ದರು. ಈ ಬಗ್ಗೆ 2025ರ ಏಪ್ರಿಲ್ 4 ರಂದು ನಾನು ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದೆ. ಆ ಬಳಿಕ ಗಂಡನಿಂದ ದೂರವಾಗಿ ನನ್ನ ಅಣ್ಣ ರವಿ ಅವರ ಮನೆಯಲ್ಲಿ ವಾಸವಿದ್ದೆ. ಈ ವೇಳೆ ಅಮರೇಶ್ ಪದೇ ಪದೇ ಫೋನ್ ಮಾಡಿ ಲೀಸ್ ಹಣ ಹಾಗೂ ಒಡವೆಗಳನ್ನು ನೀಡುವಂತೆ ಪೀಡಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಮುನೇಶ್ವರ ಬ್ಲಾಕ್ ಎದುರು ಕೊಲೆ ಮಾಡುತ್ತೇನೆ ಎಂದೂ ಅಮರೇಶ್ ಬೆದರಿಸಿದ್ದ. ಮೂರು ದಿನಗಳ ಹಿಂದೆ ನನ್ನ ಅಣ್ಣನಿಗೆ ಕರೆ ಮಾಡಿ ರಾಜಿ ಸಂಧಾನ ಮಾಡಿಕೊಂಡಿದ್ದ. ಇದರಿಂದಾಗಿ ನಾನು ಮನೆಗೆ ಬಂದಿದ್ದೆ.
ಹೀಗಿರುವಾಗ ಜುಲೈ 4 ರಂದು ಬೆಳಗ್ಗೆ 7 ಗಂಟೆಗೆ ಮಕ್ಕಳು ಕಾಲೇಜಿಗೆ ಹೋಗಿದ್ದ ಸಂದರ್ಭದಲ್ಲಿ ಆರೋಪಿ ಕೂಡ ಮನೆಯಿಂದ ಹೊರಟಿದ್ದ. ಮಧ್ಯಾಹ್ನ ಸುಮಾರು 12 ಗಂಟೆಗೆ ಮನೆಗೆ ವಾಪಾಸ್ ಆಗಿ ಕದ ತಟ್ಟಿದ್ದ. ಮನೆಯ ಡೋರ್ ತೆಗೆದ ಕೂಡಲೇ ಪೆಪ್ಪರ್ ಸ್ಪ್ರೇಯನ್ನು ಮುಖಕ್ಕೆ ಹೊಡೆದಿದ್ದ. ಉರಿಯಿಂದಾಗಿ ಕಣ್ಣು ತೆಗೆಯಲು ಹಾಗೂ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಹಂತದಲ್ಲಿ ಚಾಕುವಿನಿಂದ ಚುಚ್ಚಲು ಪ್ರಯತ್ನ ಮಾಡಿದ್ದ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದೆ ಪಕ್ಕೆಲುಬು, ಎಡಭಾಗದ ತೊಡೆಗೆ, ಕುತ್ತಿಗೆಗೆ ಚಾಕುವಿನಿಂದ ಚುಚ್ಚಿದ್ದಾನೆ. ಹಿಟ್ಟಿನ ಕೋಲಿನಿಂದ ಹೊಡೆದು, ಜುಟ್ಟು ಹಿಡಿದು ಎಳೆದಾಡಿ, ತಲೆಯನ್ನು ಗೋಡೆಗೆ ಬಡಿದಿದ್ದಾನೆ. ನಾನು ಕೂಡಗಾಡುವ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಬಂದು ಆತನನ್ನು ತಡೆದಿದ್ದಾರೆ ಎಂದು ಶೃತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.