'ತಮಿಳುನಾಡಿನ ಜನರಂತೆ ನಾವು (ಕನ್ನಡಿಗರು) ಕೂಡ ನಮ್ಮ ಮಾತೃಭಾಷೆಯನ್ನು ಪ್ರೀತಿಸುತ್ತೇವೆ. ನಮ್ಮ ಮಾತೃಭಾಷೆಯ ವಿಷಯಕ್ಕೆ ಬಂದಾಗ, ಜನರು ಖಂಡಿತವಾಗಿಯೂ ಪ್ರತಿಕ್ರಿಯಿಸುತ್ತಾರೆ' ಎಂದು ನಟ ಧ್ರುವ ಸರ್ಜಾ ಹೇಳಿದರು.
ತಮ್ಮ ಮುಂಬರುವ ಚಿತ್ರ 'ಕೆಡಿ- ದಿ ಡೆವಿಲ್'ನ ಟೀಸರ್ ಬಿಡುಗಡೆ ಸಮಾರಂಭದಲ್ಲಿ, ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಚಿತ್ರವನ್ನು ಕರ್ನಾಟಕದಲ್ಲಿ ನಿಷೇಧಿಸಿದ್ದಕ್ಕೆ ಕನ್ನಡ ಚಲನಚಿತ್ರೋದ್ಯಮದಿಂದ ವಿರೋಧ ವ್ಯಕ್ತವಾಗದಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಧ್ರುವ ಸರ್ಜಾ ಉತ್ತರಿಸಿದರು.
ನೆರೆಯ ರಾಜ್ಯದಲ್ಲಿ ತಯಾರಾಗುವ ಚಿತ್ರಗಳನ್ನು ತಮಿಳು ಚಿತ್ರೋದ್ಯಮ ಬೆಂಬಲಿಸುವಂತೆಯೇ ಕನ್ನಡ ಚಿತ್ರರಂಗವೂ ತಮಿಳು ಚಿತ್ರಗಳನ್ನು ಏಕೆ ಬೆಂಬಲಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಥಗ್ ಲೈಫ್ ಹೊರತುಪಡಿಸಿ ಕರ್ನಾಟಕದಲ್ಲಿ ಬಿಡುಗಡೆಯಾಗಿರುವ ಪ್ರತಿಯೊಂದು ತಮಿಳು ಚಿತ್ರಗಳನ್ನೂ ಕನ್ನಡ ಪ್ರೇಕ್ಷಕರು ಪ್ರೋತ್ಸಾಹಿಸುತ್ತಾರೆ. ಕಮಲ್ ಅವರ ಹೇಳಿಕೆ ಕನ್ನಡಿಗರ ಸ್ವಾಭಿಮಾನಕ್ಕೆ ನೋವುಂಟು ಮಾಡಿರುವುದರಿಂದ ಥಗ್ ಲೈಫ್ ಚಿತ್ರಕ್ಕೆ ವಿರೋಧ ಹುಟ್ಟಿಕೊಂಡಿತು ಎಂದರು.
ಇತ್ತೀಚೆಗೆ ನಡೆದ ಥಗ್ ಲೈಫ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಮಲ್ ಹಾಸನ್ ಕನ್ನಡ ತಮಿಳಿನಿಂದ ಹುಟ್ಟಿದೆ ಎಂದು ಹೇಳಿದ ಬಳಿಕ ವಿವಾದ ಭುಗಿಲೆದ್ದಿತು. ಆ ಕಾರ್ಯಕ್ರಮದಲ್ಲಿದ್ದ ನಟ ಶಿವರಾಜ್‌ಕುಮಾರ್ ಮತ್ತು ಕನ್ನಡಿಗರ ಮೇಲಿನ ಅಪಾರ ಪ್ರೀತಿಯಿಂದಾಗಿ ಆ ಹೇಳಿಕೆ ನೀಡಿದ್ದೇನೆ ಎಂದು ಕಮಲ್ ಸ್ಪಷ್ಟಪಡಿಸಿದರೂ, ಕನ್ನಡ ಪರ ಸಂಘಟನೆಗಳು ತಣ್ಣಗಾಗಲಿಲ್ಲ. ಇದರ ಪರಿಣಾಮವಾಗಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ರಾಜ್ಯದಲ್ಲಿ ಥಗ್ ಲೈಫ್ ಚಿತ್ರ ಬಿಡುಗಡೆಯಾಗದಂತೆ ತಡೆಹಿಡಿಯಿತು. ನಂತರ ಸುಪ್ರೀಂ ಕೋರ್ಟ್ ಚಿತ್ರದ ಮೇಲಿನ ನಿಷೇಧವನ್ನು ತೆಗೆದುಹಾಕಿತು. ಆದರೆ, ಆ ಹೊತ್ತಿಗಾಗಲೇ ಸ್ಥಳೀಯ ವಿತರಕರು ಚಿತ್ರದ ಮೇಲೆ ಕ್ರಮ ಕೈಗೊಳ್ಳಲು ತುಂಬಾ ತಡವಾಗಿತ್ತು.
ಮತ್ತೊಂದೆಡೆ, ನಿರ್ದೇಶಕ ಪ್ರೇಮ್ ಅವರ ಕೆಡಿ- ದಿ ಡೆವಿಲ್ ಜುಲೈ 10 ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್ ಮತ್ತು ನೋರಾ ಫತೇಹಿ ಇತರರು ನಟಿಸಿದ್ದಾರೆ.