ಬೆಂಗಳೂರು: ಸದಾ ಒಂದಿಲ್ಲೊಂದು ಮಾತನಾಡಿ ವಿವಾದ ಮೈಮೇಲೆ ಎಳೆದುಕೊಳ್ಳುವ ಮಾಜಿ ಬಿಗ್ಬಾಸ್ ಸ್ಪರ್ಧಿ, ನಟ ರಕ್ಷಕ್ ಬುಲೆಟ್ ಇದೀಗ ನಾಡದೇವಿ ಚಾಮುಂಡೇಶ್ವರಿ ತಾಯಿ ಭಕ್ತರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದ ರಕ್ಷಕ್ ಬುಲೆಟ್ ಚಾಮುಂಡೇಶ್ವರಿ ತಾಯಿ ಬಗ್ಗೆ ಆಡಿದ್ದ ಮಾತೊಂದು ವಿವಾದಕ್ಕೆ ಕಾರಣವಾಗಿತ್ತು. ನಾಡದೇವಿಯ ಬಗ್ಗೆ ರಕ್ಷಕ್ ಆಡಿದ್ದ ಮಾತು ಇದೀಗ ಚಾಮುಂಡೇಶ್ವರಿ ಭಕ್ತರ ಅಸಮಾಧಾಕ್ಕೆ ಕಾರಣವಾಗಿದ್ದು, ಇದರಿಂದ ಎಚ್ಚತ್ತ ರಕ್ಷಕ್ ಚಾಮುಂಡಿತಾಯಿ ಭಕ್ತರಿಗೆ ಕ್ಷಮೆ ಕೋರಿದ್ದಾರೆ.
ಜೀ ಕನ್ನಡದ 'ಭರ್ಜರಿ ಬ್ಯಾಚುಲರ್ಸ್' ಸೀಸನ್ 2ರ ಸ್ಪರ್ಧಿಯಾಗಿರುವ ರಕ್ಷಕ್, ಯುವತಿಯನ್ನು ಇಂಪ್ರೆಸ್ ಮಾಡುವ ವೇಳೆ ಚಾಮುಂಡಿದೇವಿ ಜೀನ್ಸ್ ಹಾಕಿ ಗೋವಾ ಟ್ರಿಪ್ಗೆ ಹೋದಂತಿದೆ ಎಂದೆಲ್ಲ ಮಾತನಾಡಿದ್ದರು. ರಕ್ಷಕ್ ಈ ಹೇಳಿಕೆ ಹಿಂದೂಪರ ಸಂಘಟನೆಗಳು ಮತ್ತು ಚಾಮುಂಡೇಶ್ವರಿ ತಾಯಿ ಭಕ್ತರನ್ನು ಕೆರಳಿಸಿದ್ದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ತೀವ್ರ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ರಕ್ಷಕ್ ಚಾಮುಂಡೇಶ್ವರಿ ಭಕ್ತರಲ್ಲಿ ಕ್ಷಮೆ ಕೇಳಿದ್ದಾನೆ.
ಈ ಬಗ್ಗೆ ಕ್ಷಮೆಯಾಚಿಸಿರುವ ರಕ್ಷಕ್, ರಿಯಾಲಿಟಿ ಶೋವೊಂದರಲ್ಲಿ ನಾನು ಒಂದು ಚಿತ್ರದ ಡೈಲಾಗ್ ಅನ್ನು ಒಂದು ಸ್ಕಿಟ್ ನಲ್ಲಿ ಹೇಳಿದ್ದೆ, ಅದು ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿದೆ. ನನ್ನ ತಂದೆ ದಿವಂಗತ ಬುಲೆಟ್ ಪ್ರಕಾಶ್ ಅವರು, ನನ್ನ ತಾಯಿ ಹಾಗೂ ಎಲ್ಲಾ ನಮ್ಮ ಕುಟುಂಬದವರು ಪರಮ ದೈವ ಭಕ್ತರು. ನಾವೆಲ್ಲರು ತಾಯಿ ಚಾಮುಂಡೇಶ್ವರಿಗೆ ಪೂಜೆ ಮಾಡುತ್ತಾ ನಡೆದುಕೊಂಡು ಬಂದಿದ್ದೇವೆ. ನಾನು ಉದ್ದೇಶಪೂರ್ವಕವಾಗಿ ತಾಯಿ ಚಾಮುಂಡೇಶ್ವರಿಯ ಕುರಿತು ಹೇಳುವಷ್ಟು ದೊಡ್ಡವನಲ್ಲ. ನನ್ನ ಡೈಲಾಗ್ ಭಕ್ತರ ಮನಸ್ಸಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಮುಂದೆ ಇಂತಹ ಅಚಾತುರ್ಯ ನಡೆಯದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.