ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ʻದಿ ಡೆವಿಲ್ʼ ಸಿನಿಮಾ ಡಿಸೆಂಬರ್ 11ರಂದು ಬಿಡುಗಡೆಯಾಗುತ್ತಿದೆ. ದರ್ಶನ್ ಅವರ ಅನುಪಸ್ಥಿತಿಯಲ್ಲಿ ಚಿತ್ರತಂಡ ಈಗಾಗಲೇ ವಿಜಯಲಕ್ಷ್ಮಿ ದರ್ಶನ್ ಅವರನ್ನು ಮುಂದಿಟ್ಟುಕೊಂಡು ಪ್ರಮೋಷನ್‌ನಲ್ಲಿ ತೊಡಗಿದೆ. ಈ ಸಂದರ್ಭದಲ್ಲಿ, ಸುಮಲತಾ ಅಂಬರೀಶ್ ಅವರು ʻದಿ ಡೆವಿಲ್ʼ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದಾರೆ.
ದರ್ಶನ್ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದೇನು?
ದರ್ಶನ್ ಮತ್ತು ಅಂಬರೀಷ್ ಕುಟುಂಬ ಅತ್ಯಾಪ್ತರು, 2019ರ ಲೋಕಸಭೆ ಚುನಾವಣೆಯಲ್ಲಿ ದರ್ಶನ್ ಸುಮಲತಾ ಪರ ಮಂಡ್ಯದಲ್ಲಿ ಪ್ರಚಾರ ಮಾಡಿದ್ದು ಸುಮಲತಾ ಗೆಲುವಿಗೆ ಕಾರಣವಾಗಿತ್ತು. ನಂತರವೂ ಅವರ ಬಾಂಧವ್ಯ ಮುಂದುವರಿದಿತ್ತು. ಸುಮಲತಾ ಅವರನ್ನು ದರ್ಶನ್ ಮದರ್ ಇಂಡಿಯಾ ಎಂದು ಕರೆಯುತ್ತಿದ್ದರು. ಕಳೆದ ವರ್ಷ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಜೈಲು ಸೇರಿದ ನಂತರ ಇಬ್ಬರ ನಡುವೆ ಮೊದಲಿದ್ದಂತಹ ಬಾಂಧವ್ಯ ಇಲ್ಲ ಎಂಬ ವದಂತಿ ಕೇಳಿಬಂತು.
ನಿನ್ನೆ ಹಿರಿಯ ನಟ ಅಂಬರೀಷ್ ಅವರ 7ನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳು ಡೆವಿಲ್ ಚಿತ್ರ ಹಾಗೂ ದರ್ಶನ್ ಬಗ್ಗೆ ಸುಮಲತಾ ಅವರನ್ನು ಕೇಳಿದರು. ಅದಕ್ಕೆ ಸುಮಲತಾ “ಖಂಡಿತ ದರ್ಶನ್‌ಗೆ ಒಳ್ಳೆಯದಾಗಬೇಕು ಅಂತಲೇ ನಾವೆಲ್ಲರೂ ಹಾರೈಸುತ್ತೇವೆ. ಈಗ ಅವರು ಚಾಲೆಂಜಿಂಗ್ ಪರಿಸ್ಥಿತಿಯಲ್ಲಿದ್ದಾರೆ. ಖಂಡಿತವಾಗಿಯೂ ಸತ್ಯ ಏನು ಅನ್ನೋದನ್ನು ಯಾರೂ ಶಾಶ್ವತವಾಗಿ ಮುಚ್ಚಿಡಲು ಸಾಧ್ಯವಿಲ್ಲ. ದೇವರಿದ್ದಾನೆ, ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಇದೆ” ಎಂದರು.
“ಅವರ ಅಭಿಮಾನಿಗಳು ʻದಿ ಡೆವಿಲ್ʼ ಸಿನಿಮಾ ರಿಲೀಸ್‌ಗಾಗಿ ಕಾತರದಿಂದ ಕಾಯ್ತಿದ್ದಾರೆ. ನಾವು ಕೂಡ ಸಿನಿಮಾ ನೋಡಲು ಕಾಯ್ತಿದ್ದೇವೆ. ಖಂಡಿತವಾಗಿಯೂ ಸಿನಿಮಾ ಚೆನ್ನಾಗಿ ಯಶಸ್ವಿಯಾಗುತ್ತೆ ಅನ್ನೋ ನಂಬಿಕೆ ಇದೆ” ಎಂದರು.
ʻಅಂಬರೀಶ್ ಅವರು ಇದ್ದಿದ್ರೆ, ಈ ರೀತಿ ಘಟನೆಗಳು ಆಗ್ತಾ ಇರ್ಲಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿವೆ ಎಂದಾಗ, “ಇದೆಲ್ಲಾ ಆಗಬಾರದಿತ್ತು, ಆಗಿ ಹೋಗಿದೆ. ಆಗಿ ಹೋಗಿರುವುದರ ಬಗ್ಗೆ ಮಾತನಾಡಿ ಈಗ ಯಾರಿಗೂ ಏನೂ ಪ್ರಯೋಜನವಿಲ್ಲ. ಮುಂದೆ ಒಳ್ಳೆಯದಾಗಲಿ ಅಂತ ನಾವೆಲ್ಲರೂ ಶುಭ ಹಾರೈಸೋಣ” ಎಂದಷ್ಟೇ ಹೇಳಿದರು.
ʻದಿ ಡೆವಿಲ್ʼ ಸಿನಿಮಾ ಪ್ರಚಾರದಲ್ಲಿ ತಾವು ಭಾಗವಹಿಸುತ್ತೀರಾ ಎಂಬ ಪ್ರಶ್ನೆಗೆ, “ಇಲ್ಲ.. ಪ್ರಚಾರವನ್ನ ಸರಿಯಾಗಿಯೇ ಮಾಡ್ತಾ ಇದ್ದಾರೆ ಅಂತೆನಿಸುತ್ತೆ. ಸಿನಿಮಾ ಪ್ರಚಾರಕ್ಕಾಗಿ ನಾನು ಯಾವತ್ತೂ ಡೈರೆಕ್ಟ್ ಆಗಿ ಇನ್ವಾಲ್ವ್ ಆಗಿಲ್ಲ. ನಾನು ಅವರ ವೆಲ್ ವಿಶರ್. ಖಂಡಿತವಾಗಿಯೂ ಅವರ ಸಿನಿಮಾ ಚೆನ್ನಾಗಿ ಸಕ್ಸಸ್‌ಫುಲ್ ಆಗಬೇಕು ಅನ್ನೋದು ನಮ್ಮ ಆಶಯ” ಎಂದರು ಸುಮಲತಾ ಅಂಬರೀಶ್.