ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ನಾಲ್ಕನೇ ವಾರಕ್ಕೆ ಕಾಲಿಟ್ಟಿರುವಂತೆಯೇ ದೊಡ್ಮನೆಯಲ್ಲಿ ಏಕ ವಚನ ಪ್ರಯೋಗ ನಡೆದಿದೆ.
ಈಗಾಗಲೇ ಬಿಗ್ ಬಾಸ್ ಮನೆಯಿಂದ ಮೂವರು ಸ್ಪರ್ಧಿಗಳು ಹೊರ ಹೋಗಿದ್ದು, ಈಗ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ನೀಡಿರುವ ಮ್ಯೂಟಂಟ್ ರಘು ಹಾಗೂ ಅಶ್ವಿನಿ ಗೌಡ ನಡುವೆ ಏಯ್.. ಏಯ್... ಅಂತಾ ಕರೆದುಕೊಳ್ಳುವ ಮೂಲಕ ಪರಸ್ಪರ ಏಕ ವಚನದಲ್ಲಿ ಕೂಗಾಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಭಾನುವಾರದ ಸಂಚಿಕೆಯ ಪ್ರೊಮೋದಲ್ಲಿ ಇದು ಕಂಡುಬಂದಿದೆ. ಅದರಲ್ಲಿ ಬೆಳಂ ಬೆಳಗ್ಗೆ ಮೈಕ್ ಜೊತೆಗೆ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವ ಮ್ಯೂಟಂಟ್ ರಘು, 'ಇದು ರೆಸಾರ್ಟ್ ಅಲ್ಲ. ಬಿಗ್ ಬಾಸ್ ಮನೆ' ಎದ್ದೇಳಿ ಎಂದು ಬಡಿದೆಬ್ಬಿಸಿದ್ದಾರೆ.
ತದನಂತರ ಗಾರ್ಡನ್ ಪ್ರದೇಶದಲ್ಲಿ ಸ್ಪರ್ಧಿಗಳ ಮೇಲೆ ನೀರು ಸುರಿದು ಕಾರಣ ನೀಡಿದ್ದಾರೆ. ಅಶ್ವಿನಿ ಗೌಡ ಅವರ ಮೇಲೆ ನೀರು ಸುರಿದ ನಂತರ ಇಬ್ಬರ ನಡುವೆ ಏಕವಚನದ ಪ್ರಯೋಗ ನಡೆದಿದೆ. ಇದರಿಂದ ಆಕ್ರೋಶಗೊಂಡ ಅಶ್ವಿನಿ, ನೀವು ಒಬ್ಬ ಸ್ಪರ್ಧಿ, ಹಾಗೇ ಇರಿ ಎಂದು ರೇಗಾಡಿದ್ದಾರೆ. ಆಗ ಜಾಹ್ನವಿ, ನಮ್ಮ ಹತ್ತಿರ ಬಂದು ಏಕವಚನದಲ್ಲಿ ಮಾತನಾಡಿದರೆ ಇಲ್ಲಿಂದ ಹೋಗಬಹುದು ಎಂದಿದ್ದಾರೆ. ಹೀಗೆ ಅಶ್ವಿನಿ ಗೌಡ ಹಾಗೂ ರಘು ಮಧ್ಯೆ ಗಲಾಟೆ ನಡೆದಿದೆ.
ಈ ಪ್ರೋಮೊ ವೀಕ್ಷಿಸಿದ ಪ್ರೇಕ್ಷಕರು, ಅಶ್ವಿನಿ ಗೌಡಗೆ ಎದಿರೇಟು ನೀಡಲು ರಘು ಸೂಕ್ತ ಸ್ಪರ್ಧಿ ಎಂದು ಹೇಳುತ್ತಿದ್ದಾರೆ. ಈ ಹಿಂದೆ ರಕ್ಷಿತಾ ಶೆಟ್ಟಿ ಅವರಿಗೆ 'S' ಪದ ಬಳಕೆ ಮಾಡುವ ಮೂಲಕ ನಿಂದಿಸಿದ್ದ ಅಶ್ವಿನಿ ಗೌಡ ಹಾಗೂ ಜಾಹ್ನವಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ವೀಕ್ಷಕರು, ಇದೀಗ ವೈಲ್ಡ್ ಕಾರ್ಡ್ ಆಗಿ ಮನೆ ಪ್ರವೇಶಿಸಿರುವ ಆಕ್ರಮಣಕಾರಿ ಸ್ವಭಾವದ ರಘು ಅವರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.