ನವದೆಹಲಿ: ತೆಲುಗು ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಅವರ ಹೊಸ ಚಿತ್ರ 'ದೆ ಕಾಲ್ ಹಿಮ್ ಒಜಿ' ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ದಾಖಲೆ ನಿರ್ಮಿಸಿದೆ. ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 70 ಕೋಟಿ ರೂ. ಗಳಿಕೆ ಕಂಡಿದ್ದು, 2025ರ ವರ್ಷದ ಅತಿದೊಡ್ಡ ಓಪನರ್ ಆಗಿ ಹೊರಹೊಮ್ಮಿದೆ. ಜಾಗತಿಕವಾಗಿ, ಮೊದಲ ದಿನವೇ 150 ಕೋಟಿ ರೂ.ಗಳನ್ನು ದಾಟುವ ನಿರೀಕ್ಷೆಯಿದೆ.
ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ದೆ ಕಾಲ್ ಹಿಮ್ ಒಜಿ ತನ್ನ ಮೊದಲ ದಿನದಂದು 70 ಕೋಟಿ ರೂ. ಗಳಿಸಿದೆ. ಬಿಡುಗಡೆಗೂ ಮುನ್ನ ಪೇಯ್ಡ್ ಪ್ರೀಮಿಯರ್ ಸೇರಿದಂತೆ ಈ ಚಿತ್ರವು ತೆಲುಗಿನಲ್ಲಿ 20.25 ಕೋಟಿ ರೂ. ಗಳಿಸಿದೆ. ಒಟ್ಟು ಗಳಿಕೆ 90.25 ಕೋಟಿ ರೂ. ಆಗಿದೆ.
ಈ ಬ್ಲಾಕ್‌ಬಸ್ಟರ್ ಪವನ್ ಕಲ್ಯಾಣ್ ಅವರ ಹಿಂದಿನ ಚಿತ್ರ 'ಹರಿ ಹರ ವೀರ ಮಲ್ಲು' ಗಿಂತ ಉತ್ತಮ ಆರಂಭ ಕಂಡಿದೆ. ಈ ಚಿತ್ರ ಮೊದಲ ದಿನವೇ 34 ಕೋಟಿ ರೂ. ಗಳಿಸಿತ್ತು.
90 ಕೋಟಿ ರೂ. ಗಳಿಸುವ ಮೂಲಕ, ಈ ಚಿತ್ರವು ಈಗಾಗಲೇ ರಜನಿಕಾಂತ್ ಅವರ 'ಕೂಲಿ' (65 ಕೋಟಿ ರೂ.), ವಿಕ್ಕಿ ಕೌಶಲ್ ಅವರ 'ಛಾವಾ' (31 ಕೋಟಿ ರೂ.) ಮತ್ತು ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅವರ 'ಸೈಯಾರಾ' (21.5 ಕೋಟಿ ರೂ.) ಚಿತ್ರಗಳ ಗಳಿಕೆಯನ್ನು ಹಿಂದಿಕ್ಕಿದೆ.
ಸುಜೀತ್ ನಿರ್ದೇಶನದ ಮತ್ತು ಡಿವಿವಿ ದಾನಯ್ಯ ನಿರ್ಮಾಣದ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ನಿವೃತ್ತ ದರೋಡೆಕೋರ OG ಪಾತ್ರದಲ್ಲಿ ನಟಿಸಿದ್ದಾರೆ. ಅವರು ಹತ್ತು ವರ್ಷಗಳ ಕಾಲ ಕಣ್ಮರೆಯಾದ ನಂತರ 1993 ರಲ್ಲಿ ಬಾಂಬೆಗೆ ಹಿಂತಿರುಗಿ ಪ್ರತಿಸ್ಪರ್ಧಿ ಕ್ರೈಮ್ ಲಾರ್ಡ್ ಪ್ರಭು ಓಮಿ ಭೌ (ಇಮ್ರಾನ್ ಹಶ್ಮಿ) ಅವರನ್ನು ಎದುರಿಸುತ್ತಾರೆ. ಪೋಷಕ ಪಾತ್ರವರ್ಗದಲ್ಲಿ ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್, ಶ್ರೀಯಾ ರೆಡ್ಡಿ ಮತ್ತು ಪ್ರಕಾಶ್ ರಾಜ್ ಇದ್ದಾರೆ.
ಈ ಚಿತ್ರವು ಇಮ್ರಾನ್ ಹಶ್ಮಿ ಅವರ ಚೊಚ್ಚಲ ತೆಲುಗು ಚಿತ್ರವಾಗಿದೆ.