ಚೆನ್ನೈ: 90ರ ದಶಕದಲ್ಲಿ ತನ್ನ ಮನಮೋಹಕ ಮೈಮಾಟದಿಂದ ಗಮನ ಸೆಳೆದಿದ್ದ ಖ್ಯಾತ ನಟಿ ಖ್ಯಾತ ನಟಿ ಶಕೀಲಾ ಇತ್ತೀಚೆಗೆ ತೀವ್ರ ಕುತ್ತಿಗೆ ನೋವಿನಿಂದ ಬಳಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ ಅವರಿಗೆ ಕುತ್ತಿಗೆ ನೋವು ಕಾಣಿಸಿಕೊಂಡಿದ್ದು, ಇದು ವಿಪರೀತಕ್ಕೆ ಹೋಗಿ ಸರ್ಜರಿಯ ಹಂತಕ್ಕೂ ಹೋಗಿದೆ ಎಂದು ತಿಳಿದು ಬಂದಿದೆ.
ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ ನಂತರ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ತಮ್ಮ ಆರೋಗ್ಯ ಸ್ಥಿತಿ ಮತ್ತು ಅನುಭವಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಶಕೀಲಾ ತಮ್ಮ ಅನುಭವವನ್ನು ವಿವರಿಸುವಾಗ, ಹಾಸಿಗೆಯಲ್ಲಿ ಒಂದು ಬದಿಗೆ ಮಲಗಿ ಸತತವಾಗಿ ಮೊಬೈಲ್ ಗೇಮ್ ಆಡುತ್ತಿದ್ದುದಾಗಿ ತಿಳಿಸಿದ್ದಾರೆ. ಒಂದು ಬಾರಿ ಸುಮಾರು ನಾಲ್ಕು ಗಂಟೆಗಳ ಕಾಲ ಇದೇ ರೀತಿ ಗೇಮ್ ಆಡುತ್ತಿದ್ದರು. ಚಹಾ ಕುಡಿಯಲು ಮಾತ್ರ ಎದ್ದು, ನಂತರ ಮತ್ತೆ ಮೊಬೈಲ್ ಹಿಡಿದುಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ಗೇಮಿಂಗ್ ಜೊತೆಗೆ ಯೂಟ್ಯೂಬ್ ವಿಡಿಯೋಗಳು ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್ ನೋಡುವುದಕ್ಕೂ ಸಾಕಷ್ಟು ಸಮಯ ಕಳೆಯುತ್ತಿದ್ದರು. ಒಂದೇ ಭಂಗಿಯಲ್ಲಿ ದೀರ್ಘಕಾಲ ಮೊಬೈಲ್ ಬಳಸಿದ ಪರಿಣಾಮ ಕುತ್ತಿಗೆಯ ನರಗಳಿಗೆ ತೊಂದರೆ ಉಂಟಾಗಿ, ಪರಿಸ್ಥಿತಿ ಶಸ್ತ್ರಚಿಕಿತ್ಸೆಯವರೆಗೂ ಹೋಗಿದೆ ಎಂದು ನಟಿ ತಮ್ಮ ವಿಡಿಯೋದಲ್ಲಿ ವಿವರಿಸಿದ್ದಾರೆ.
ತಮ್ಮ ಕುತ್ತಿಗೆಯ ಸಮಸ್ಯೆಗೆ ನಡೆದ ಶಸ್ತ್ರಚಿಕಿತ್ಸೆಗೆ ಸುಮಾರು ಮೂರು ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಶಕೀಲಾ ಹೇಳಿದ್ದಾರೆ. ಇದೀಗ ವೈದ್ಯರ ಸಲಹೆಯಂತೆ ಕುತ್ತಿಗೆಗೆ ನೆಕ್ ಕಾಲರ್ ಧರಿಸುತ್ತಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಬಂದ ಬಳಿಕವೂ ಅವರಿಗೆ ಸಂಪೂರ್ಣ ವಿಶ್ರಾಂತಿ ಅಗತ್ಯವಿದೆ.
ಶಸ್ತ್ರಚಿಕಿತ್ಸೆಯ ನಂತರದ ಪರಿಸ್ಥಿತಿಯನ್ನೂ ಅವರು ಅಭಿಮಾನಿಗಳಿಗೆ ತೋರಿಸಿದ್ದಾರೆ. ಕುತ್ತಿಗೆಗೆ ಬೆಲ್ಟ್ ಧರಿಸಿರುವ ಶಕೀಲಾ ಎದ್ದು ಊಟ ಮಾಡಲು ಕೂಡ ಬೇರೆಯವರ ಸಹಾಯ ಪಡೆಯಬೇಕಾದ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಹಾಗೆಯೇ ಅನಗತ್ಯ ವಿಡಿಯೋಗಳು ಮತ್ತು ರೀಲ್ಸ್‌ಗಳನ್ನು ನೋಡುತ್ತಾ ಸಮಯ ವ್ಯರ್ಥ ಮಾಡಬೇಡಿ ಎಂದು ಶಕೀಲಾ ಸಲಹೆ ನೀಡಿದ್ದಾರೆ. ಮೊಬೈಲ್ ಬಳಸುವಾಗ ಅದರ ಅವಧಿ ಮತ್ತು ದೇಹದ ಭಂಗಿಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.