ಪ್ರಸಿದ್ಧ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನ ಚರಿತ್ರೆ ಆಧಾರಿತ ಚಿತ್ರವೊಂದು ರೂಪುಗೊಳ್ಳುತ್ತಿದ್ದು, ರಶ್ಮಿಕಾ ಮಂದಣ್ಣ ಅವರನ್ನು ಪ್ರತಿಷ್ಠಿತ ಪಾತ್ರಕ್ಕೆ ಪರಿಗಣಿಸಲಾಗುತ್ತಿದೆ ಎಂದು ವರದಿಯಾಗಿದೆ. ಮುಂದಿನ ತಿಂಗಳು ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.
ನಿರ್ಮಾಪಕರಾದ ಬನ್ನಿ ವಾಸ್, ಅಲ್ಲು ಅರವಿಂದ್ ಮತ್ತು ರಾಕ್‌ಲೈನ್ ವೆಂಕಟೇಶ್ ಅವರು ಖ್ಯಾತ ಗಾಯಕಿಯ ಜೀವನ ಚರಿತ್ರೆಯನ್ನು ಆಧರಿಸಿದ ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸಾಯಿ ಪಲ್ಲವಿ ಅವರನ್ನು ಆರಂಭದಲ್ಲಿ ಈ ಪಾತ್ರಕ್ಕೆ ಪರಿಗಣಿಸಲಾಗಿತ್ತು ಮತ್ತು ಚಿತ್ರದ ಭಾಗವಾಗಲು ಉತ್ಸುಕರಾಗಿದ್ದರು ಎಂದು ವರದಿಯಾಗಿದೆ. ಭಾರತೀಯ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜ ಗಾಯಕಿಯ ಪಾತ್ರವನ್ನು ತೆರೆಯ ಮೇಲೆ ತರಲು ಚಿತ್ರತಂಡ ಬಿರುಸಿನ ತಯಾರಿ ನಡೆಸಿದೆ. ಈ ಬಿಗ್ ಪ್ರಾಜೆಕ್ಟ್ ಕುರಿತು ಸೆಪ್ಟೆಂಬರ್ 16ರಂದು ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜನ್ಮದಿನದಂದು ಅಧಿಕೃತ ಘೋಷಣೆ ಹೊರಬೀಳಲಿದೆ.
ಆರಂಭದಲ್ಲಿ ಈ ಬಯೋಪಿಕ್ ಚಿತ್ರಕ್ಕಾಗಿ ನಟಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ರಾಮಾಯಣ"ದ ಎರಡೂ ಭಾಗಗಳಿಗೆ ಕಮಿಟ್ ಮೆಂಟ್ ಇರುವುದರಿಂದ ಮುಂದಿನ ವರ್ಷದವರೆಗೆ ಅವರ ಚಿತ್ರೀಕರಣದ ವೇಳಾಪಟ್ಟಿಯನ್ನು ಕಾರ್ಯನಿರತವಾಗಿಸಿದೆ.
ಇದರಿಂದಾಗಿ ಅವರಿಗೆ ಬಯೋಪಿಕ್ ಗಾಗಿ ಡೇಟ್ ಹೊಂದಿಸಿಕೊಳ್ಳಲು ಕಷ್ಟವಾಗುತ್ತಿದೆ. ನಿರ್ಮಾಪಕರು ಈಗ ಈ ಪಾತ್ರಕ್ಕಾಗಿ ರಶ್ಮಿಕಾ ಮಂದಣ್ಣ ಅವರನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.
ಎಂ.ಎಸ್. ಸುಬ್ಬುಲಕ್ಷ್ಮಿ ಅವರಂತಹ ಮಹಾನ್ ಗಾಯಕಿಯ ಪಾತ್ರ ಮಾಡುವುದು ರಶ್ಮಿಕಾ ಅವರಿಗೆ ದೊಡ್ಡ ಸವಾಲಾಗಿದೆ. ಕೇವಲ ನಟನೆಯಷ್ಟೇ ಅಲ್ಲದೆ ಅವರ ವ್ಯಕ್ತಿತ್ವ ಮತ್ತು ಗೌರವವನ್ನು ಪರದೆಯ ಮೇಲೆ ತರುವುದು ಅತ್ಯಗತ್ಯ. ಈ ಪಾತ್ರವನ್ನು ರಶ್ಮಿಕಾ ಯಶಸ್ವಿಯಾಗಿ ನಿರ್ವಹಿಸಿದರೆ ಅವರ ಸಿನಿ ಜೀವನಕ್ಕೆ ದೊಡ್ಡ ಮೈಲಿಗಲ್ಲಾಗಲಿದೆ.