ನೇಪಾಳದಲ್ಲಿ ಪ್ರವಾಹದ ರೌದ್ರಾವತಾರ: ಮತ್ತೊಂದು ಜಲಪ್ರಳಯದ ಭೀತಿ; ರಕ್ಷಣಾ ಕಾರ್ಯಾಚರಣೆ ಸ್ಥಗಿತಕ್ಕೆ ಆದೇಶ, ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೈನಿಕರಿಗೆ ಸೂಚನೆ..!

ಹಿಮಾಲಯದಲ್ಲಿ ಚಾರಣಕ್ಕೆ ತೆರಳಿದ್ದವರು ಹಾಗೂ ಟಿಬೆಟ್‌ನ ಪವಿತ್ರ ಕೈಲಾಸ ಪರ್ವತಕ್ಕೆ ತೆರಳಿದ್ದ ಹಿಂದೂ ಯಾತ್ರಿಕರು ಸೇರಿದಂತೆ 1,400ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
Police personnel rescue stranded residents from houses lying deluged in sludge after flash floods at Trishuli in Nepal's Nuwakot district on August 27, 2026.
ನೇಪಾಳ ಪ್ರವಾಹ
Updated on

ಕಠ್ಮಂಡು: ನೇಪಾಳ-ಚೀನಾ ಗಡಿಯಲ್ಲಿ ಸಂಭವಿಸಿದ ಹಿಮ ಕುಸಿತದ ಬೆನ್ನಲ್ಲೇ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ನೇಪಾಳ ಸರ್ಕಾರವು ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಲು ಆದೇಶಿಸಿದೆ.

ಟಿಬೆಟ್‌ನಲ್ಲಿ ನೀರಿನ ತಡೆಗೋಡೆ ಒಡೆದುಹೋಗಿರುವ ಮಾಹಿತಿ ಲಭ್ಯವಾಗಿದ್ದು, ಮತ್ತಷ್ಟು ಭೀಕರ ಪ್ರವಾಹದ ಅಲೆಗಳು ಅಪ್ಪಳಿಸುವ ಅಪಾಯ ಎದುರಾಗಿದೆ. ಹೀಗಾಗಿ ಎಲ್ಲಾ ರಕ್ಷಣಾ ಸಿಬ್ಬಂದಿ ಹಾಗೂ ಭದ್ರತಾ ಪಡೆಗಳನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಹಿಂತಿರುಗುವಂತೆ ತುರ್ತು ಸೂಚನೆ ನೀಡಲಾಗಿದೆ.

ಬುಧವಾರ ನೇಪಾಳ ಮತ್ತು ಟಿಬೆಟ್‌ನಲ್ಲಿ ಮನೆಗಳನ್ನು ಕೊಚ್ಚಿಕೊಂಡು ಹೋಗಿ, ಸೇತುವೆಗಳನ್ನು ಧ್ವಂಸಗೊಳಿಸಿ, ವಾಹನಗಳನ್ನು ನೀರಿನಲ್ಲಿ ಎಳೆದುಕೊಂಡು ಹೋದ ಸುನಾಮಿಯಂತಹ ನೀರು ಮತ್ತು ಕೆಸರಿನ ಪ್ರವಾಹಕ್ಕೆ ಈವರೆಗೆ 472 ಮೃತದೇಹಗಳನ್ನು ರಕ್ಷಣಾ ತಂಡಗಳು ಹೊರತೆಗೆದಿವೆ.

ಹಿಮಾಲಯದಲ್ಲಿ ಚಾರಣಕ್ಕೆ ತೆರಳಿದ್ದವರು ಹಾಗೂ ಟಿಬೆಟ್‌ನ ಪವಿತ್ರ ಕೈಲಾಸ ಪರ್ವತಕ್ಕೆ ತೆರಳಿದ್ದ ಹಿಂದೂ ಯಾತ್ರಿಕರು ಸೇರಿದಂತೆ 1,400ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಹಿಮನದಿ ಕುಸಿತದಿಂದ ಭಾರಿ ಪ್ರಮಾಣದ ಹಿಮ ಮತ್ತು ಅವಶೇಷಗಳು ಏಕಾಏಕಿ ಹರಿದುಬಂದಿದ್ದು, ಇದರಿಂದಾಗಿ ಈ ದುರಂತ ಸಂಭವಿಸಿದೆ. 2015ರ ಭೂಕಂಪದ ಬಳಿಕ ನೇಪಾಳ ಕಂಡ ಅತ್ಯಂತ ಭೀಕರ ದುರಂತ ಇದಾಗಿದೆ ಎಂದು ಹೇಳಲಾಗಿದೆ.

ಹಿಮ ಮತ್ತು ಕೆಸರಿನ ಪ್ರವಾಹದಿಂದ ಹಲವೆಡೆ ಭಾರಿ ಪ್ರಮಾಣದ ನೀರು ಸಂಗ್ರಹವಾಗಿತ್ತು. ಈ ಪೈಕಿ ಟಿಬೆಟ್‌ನಲ್ಲಿದ್ದ ಒಂದು ನೀರಿನ ಸಂಗ್ರಹ ಶುಕ್ರವಾರ ಒಡೆದುಹೋಗಿದ್ದು, ಬದುಕುಳಿದವರಿಗಾಗಿ ಶೋಧ ನಡೆಸುತ್ತಿದ್ದ ರಕ್ಷಣಾ ಸಿಬ್ಬಂದಿಗೂ ಹೊಸ ಅಪಾಯ ಎದುರಾಗಿದೆ.

‘ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿ’

ಟಿಬೆಟ್‌ ಭಾಗದಲ್ಲಿ ಮತ್ತೊಂದು ನೀರಿನ ತಡೆಗೋಡೆ ಒಡೆದಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಎಲ್ಲಾ ರಕ್ಷಣಾ ಸಿಬ್ಬಂದಿ ‘ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಬೇಕು’ ಎಂದು ನೇಪಾಳ ಪೊಲೀಸರು ಸೂಚಿಸಿದ್ದಾರೆ.

ಇದೇ ವೇಳೆ, ಟಿಬೆಟ್‌ನ ಗೈರಾಂಗ್‌ನಲ್ಲಿ ಪ್ರವಾಹದ ಅಪಾಯ ಹೆಚ್ಚಿದ ಹಿನ್ನೆಲೆಯಲ್ಲಿ ಚೀನಾ ಶುಕ್ರವಾರ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

Police personnel rescue stranded residents from houses lying deluged in sludge after flash floods at Trishuli in Nepal's Nuwakot district on August 27, 2026.
ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 472ಕ್ಕೆ ಏರಿಕೆ; 1,400ಕ್ಕೂ ಹೆಚ್ಚು ಜನ ನಾಪತ್ತೆ, ಮತ್ತೊಂದು ಪ್ರವಾಹದ ಭೀತಿ..!

ಅಪಾರ ಪ್ರಮಾಣದ ಅವಶೇಷಗಳಿಂದ ರೂಪುಗೊಂಡಿದ್ದ ಸರೋವರವೊಂದರ ನೀರು ತುಂಬಿ ಹರಿದು, ರಕ್ಷಣಾ ತಂಡಗಳು ತೆರಳಬೇಕಿದ್ದ ಪ್ರದೇಶದತ್ತ ಹರಿಯಲು ಆರಂಭಿಸಿದೆ ಎಂದು ಚೀನಾದ ಸರ್ಕಾರಿ ಪ್ರಸಾರ ಸಂಸ್ಥೆ ಸಿಸಿಟಿವಿ ವರದಿ ಮಾಡಿದೆ.

ಹೀಗಾಗಿ ಎಲ್ಲ ರಕ್ಷಣಾ ತಂಡಗಳು ಮುಂದಿನ ಸೂಚನೆ ಬರುವವರೆಗೆ ಸ್ಥಳದಲ್ಲೇ ಕಾಯಬೇಕು ಎಂದು ಸೂಚಿಸಲಾಗಿದ್ದು, ಈಗಾಗಲೇ ಪ್ರದೇಶ ಪ್ರವೇಶಿಸಿದ್ದ ತುರ್ತು ಕಾರ್ಯಾಚರಣೆ ತಂಡಗಳನ್ನು ಒಂದು ಕಿಲೋಮೀಟರ್ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ.

ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ, ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಮನದಿಗಳು, ಹಿಮ ಸರೋವರಗಳು ಹಾಗೂ ಭೂವೈಜ್ಞಾನಿಕ ದುರಂತಗಳಿಗೆ ಸಂಬಂಧಿಸಿದ ‘ಅನೇಕ ಅಪಾಯಗಳಿವೆ’ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ಅತ್ಯಂತ ಕಷ್ಟಕರವಾಗಿವೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.

ಸುರಂಗದಲ್ಲಿ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬದುಕುಳಿದವರಿಗಾಗಿ ರಕ್ಷಣಾ ತಂಡಗಳು ತೀವ್ರ ಶೋಧ ನಡೆಸುತ್ತಿವೆ. ವ್ಯಾಪಕ ಹಾನಿಯಿಂದಾಗಿ ಹಲವು ಪ್ರದೇಶಗಳಲ್ಲಿ ಆಹಾರ ಮತ್ತು ಕುಡಿಯುವ ನೀರಿನ ಕೊರತೆ ಎದುರಾಗಿದೆ.

ಇದೇ ವೇಳೆ, ತ್ರಿಶೂಲಿ-3ಎ ಜಲವಿದ್ಯುತ್‌ ಯೋಜನೆಯ ಸುರಂಗದಲ್ಲಿ ಕೆಲವರು ಸಿಲುಕಿರುವುದನ್ನು ನೇಪಾಳ ಸೇನೆ ಪತ್ತೆಹಚ್ಚಿದೆ. ಅವರನ್ನು ಹೊರತೆಗೆಯಲು ಸುರಂಗದೊಳಗೆ ಪ್ರವೇಶಿಸುವ ಮಾರ್ಗವನ್ನು ಹುಡುಕಲಾಗುತ್ತಿದೆ.

‘ಎರಡು ಹೆಲಿಕಾಪ್ಟರ್‌ಗಳನ್ನು ಕಳುಹಿಸಲಾಗಿದೆ. ಆದರೆ, ಸುರಂಗದ ಪ್ರವೇಶ ದ್ವಾರಗಳನ್ನು ಪತ್ತೆಹಚ್ಚುವುದೇ ಕಷ್ಟವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ಸವಾಲಾಗಿದೆ’ ಎಂದು ಸೇನಾ ವಕ್ತಾರ ರಾಜಾ ರಾಮ್ ಬಸ್ನೆಟ್‌ ತಿಳಿಸಿದ್ದಾರೆ.

ಸ್ಥಳದಿಂದ ಸುಮಾರು 350 ಕಾರ್ಮಿಕರು ಹಾಗೂ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಅದೇ ಪ್ರದೇಶದಲ್ಲಿ ಇನ್ನೂ 100ಕ್ಕೂ ಹೆಚ್ಚು ಮಂದಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ತ್ರಿಶೂಲಿ ಕಣಿವೆಯ ಇತರ ಅಣೆಕಟ್ಟು ಯೋಜನೆಗಳಿಂದ ರಕ್ಷಿಸಲ್ಪಟ್ಟ ಕಾರ್ಮಿಕರು ಪ್ರವಾಹ ಎಷ್ಟು ವೇಗವಾಗಿ ಅಪ್ಪಳಿಸಿತು ಎಂಬ ಭೀಕರ ಅನುಭವವನ್ನು ಹಂಚಿಕೊಂಡಿದ್ದಾರೆ.

ಅಣೆಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಬುದ್ಧ ತಮಾಂಗ್‌ ಅವರು ಪ್ರವಾಹ ಬಂದಾಗ ಸುರಂಗದೊಳಗಿದ್ದ ಕಾರಣ ಬದುಕುಳಿದಿದ್ದಾರೆ. 24 ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಅವರನ್ನು ಗುರುವಾರ ಹೆಲಿಕಾಪ್ಟರ್‌ ಮೂಲಕ ರಕ್ಷಿಸಲಾಗಿದೆ.

‘ನಾನು ಸುರಂಗದೊಳಗಿದ್ದ ಕಾರಣ ಬದುಕುಳಿದೆ. ಆದರೆ ಇನ್ನೊಂದು ಬದಿಯಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಅಧಿಕಾರಿಗಳೆಲ್ಲರೂ ಪ್ರವಾಹದಲ್ಲಿ ಕೊಚ್ಚಿಹೋದರು’ ಎಂದು ತಮಾಂಗ್‌ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com