ಬೆಂಗಳೂರು: ಡಾಲಿ ಧನಂಜಯ್ ನಟಿಸಿ, ನಿರ್ಮಾಣ ಮಾಡಿರುವ ‘ಮದರ್ ಪ್ರಾಮಿಸ್’ ಸಿನಿಮಾ ಕೆಲವೇ ದಿನಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈಗಾಗಲೇ ಸಿನಿಮಾ ನೋಡಿರುವವರು ಇದೊಂದು ಒಳ್ಳೆಯ ಸದಭಿರುಚಿಯ ಹಾಸ್ಯ ಪ್ರಧಾನ ಸಿನಿಮಾ ಎಂದು ಮೆಚ್ಚಿಕೊಳ್ಳುತ್ತಿದ್ದಾರೆ.
ಸಿನಿಮಾದ ಶೋಗಳು ಸಹ ಚೆನ್ನಾಗಿ ಹೌಸ್ ಫುಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಹ ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯಗಳು ಹರಿದಾಡುತ್ತಿವೆ. ಆದರೆ ಇವುಗಳ ಜೊತೆಯಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಸಿನಿಮಾದ ಬಗ್ಗೆ ನೆಗೆಟಿವ್ ಅಭಿಪ್ರಾಯ ಬಿತ್ತುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಥಿಯೇಟರ್ ಖಾಲಿ, ಜನರೇ ಇಲ್ಲ, ಕೆಟ್ಟ ಸಿನಿಮಾ ಎಂದೆಲ್ಲಾ ಕಮೆಂಟ್ ಹಾಕುವವರ ಬಗ್ಗೆ ನಟ ಡಾಲಿ ಧನಂಜಯ ಬೇಸರ ವ್ಯಕ್ತಪಡಿಸಿದ್ದಾರೆ. ಅಂಥಹವರ ಬಗ್ಗೆ ಡಾಲಿ ಧನಂಜಯ್ ಬೇಸರ ಹೊರಹಾಕಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ಮದರ್ ಪ್ರಾಮಿಸ್ ಸಿನಿಮಾ ತುಂಬಾ ಜನಕ್ಕೆ ಇಷ್ಟ ಆಗ್ತಿದೆ, ಚಿತ್ರಮಂದಿರಗಳಲ್ಲಿ ಮಜಾ ಮಾಡ್ತಾ ಇದಾರೆ. ಕೆಲವೊಬ್ರಿಗೆ ಇಷ್ಟ ಆಗದೆ ಕೂಡ ಇರಬಹುದು, ಅದನ್ನ ಹೇಳಿದ್ರೂ ಮೆಚ್ಚಿಕೊಳ್ಳೋಣ. ಟೀಕೆಗಳನ್ನು ಯಾವಾಗಲೂ ಸ್ವಾಗತಿಸುತ್ತೇವೆ.
ಆದ್ರೆ ಬೇಕು ಅಂತ ಚೆನ್ನಾಗಿ ಆಗ್ತಿರೋ ಸಿನಿಮಾನ ಸಾಯಿಸೋಕೆ, ಒಂದು ದ್ವೇಷದ ಅಭಿಯಾನ ಮಾಡೋದು, ಚಿತ್ರರಂಗಕ್ಕೆ ಒಳ್ಳೇದಲ್ಲ. ಇದು ಚೆನ್ನಾಗಿ ಆಗ್ತಿರೋ ಎಲ್ಲ ಸಿನಿಮಾಗಳಿಗೂ ಆಗ್ತಾ ಇದೆ. ಅದಿಕ್ಕೆ ಎಲ್ಲ ನಿರ್ಮಾಪಕರು ಕೋರ್ಟ್‌ನಿಂದ ಆದೇಶ ತಂದು ರೇಟಿಂಗ್ ಕಾಣದಂತೆ ಮಾಡ್ತಾರೆ.
ಅದರಿಂದ ಪ್ರಾಮಾಣಿಕ ವಿಮರ್ಶೆಗಳಿಗೂ ತಡೆಯೊಡ್ಡಿದಂಗೆ ಆಗುತ್ತೆ. ಒಂದು ಆರೋಗ್ಯಕರ ವಾತಾವರಣ ಸೃಷ್ಟಿ ಆಗಬೇಕು. ಈ ಕೆಟ್ಟ ಸಂಪ್ರದಾಯ ಕೊನೆಯಾಗಬೇಕು ಎಂದು ಬರೆದುಕೊಂಡಿದ್ದಾರೆ.
ಜನ ಸಿನಿಮಾ ನೋಡುವ ಮುಂಚೆಯೇ ಆ ಸಿನಿಮಾವನ್ನು ಇಲ್ಲದ ಹಾಗೆ ಮಾಡುವುದೇ ಕೆಲವರ ಗುರಿ ಆಗಿದೆ. ನೀವು ರೇಟಿಂಗ್ಸ್ ಬೇಕಾದರೆ ಬದಲಾವಣೆ ಮಾಡಬಹುದು ಆದರೆ ಜನರ ಭಾವನೆಗಳನ್ನು, ಅವರ ಪ್ರೀತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಜೊತೆಗೆ ಸಿನಿಮಾ ನೋಡಿದ ಜನ ವ್ಯಕ್ತಪಡಿಸಿರುವ ಅಭಿಪ್ರಾಯಗಳ ವಿಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದಾರೆ.