ಶಫಾಕ್ ನಾಜ್ ಕರ್ವಾ ಚೌತ್ 
ಸಿನಿಮಾ ಸುದ್ದಿ

ಸಿಂಧೂರ ಧರಿಸಿದರೆ ನಾನು ಮುಸ್ಲಿಂ ಅಲ್ಲ ಎಂದರ್ಥವೇ?': ನಿಮ್ಮ ಧರ್ಮವು ಅಷ್ಟು ದುರ್ಬಲವೇ? ಕರ್ವಾ ಚೌತ್ ಟೀಕೆಗೆ ನಟಿ ಶಫಾಕ್ ನಾಜ್ ತಿರುಗೇಟು!

ನಾನು ದಿನಕ್ಕೆ ಎಷ್ಟು ಬಾರಿ ನಮಾಜ್ ಮಾಡುತ್ತೇನೆ, ಎಷ್ಟು ಉಪವಾಸ ಮಾಡುತ್ತೇನೆ ಅಥವಾ ಬೇರೆ ಏನೆಲ್ಲಾ ಮಾಡುತ್ತೇನೆ ಎಂಬುದನ್ನು ಪ್ರತಿ ಬಾರಿಯೂ ಇಲ್ಲಿ ಕುಳಿತು ನಿಮಗೆ ಹೇಳಬೇಕಿಲ್ಲ. ಧರ್ಮ ಎಂಬುದು ಅತ್ಯಂತ ವೈಯಕ್ತಿಕ ವಿಷಯ.

ನಟಿ ಶಫಾಕ್ ನಾಜ್ ಅವರು ತಮ್ಮ 'ಕರ್ವಾ ಚೌತ್' ಆಚರಣೆಯ ಚಿತ್ರಗಳನ್ನು ಹಂಚಿಕೊಂಡ ನಂತರ, ತಮ್ಮ ಧಾರ್ಮಿಕ ಗುರುತಿನ ಬಗ್ಗೆ ಪ್ರಶ್ನಿಸಿದ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ತಿರುಗೇಟು ನೀಡಿದ್ದಾರೆ.

ತಾವು ಎದುರಿಸಿದ ನಿಂದನೆ ಮತ್ತು ಟ್ರೋಲಿಂಗ್‌ಗೆ (ಅಣಕಕ್ಕೆ) ಆಕ್ಷೇಪ ವ್ಯಕ್ತಪಡಿಸಿರುವ ನಟಿ, ಹಿಂದೂ ಹಬ್ಬವನ್ನು ಆಚರಿಸುವುದರಿಂದ ಅಥವಾ ಹಣೆಗೆ ಸಿಂಧೂರ (ಕುಂಕುಮ) ಇಟ್ಟುಕೊಳ್ಳುವುದರಿಂದ ತನ್ನ ಧರ್ಮ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವೀಡಿಯೊ ಸಂದೇಶವೊಂದರಲ್ಲಿ, ತಮ್ಮ ಹಬ್ಬದ ಚಿತ್ರಗಳ ಕುರಿತು ಬಂದ ನಕಾರಾತ್ಮಕ ಕಾಮೆಂಟ್‌ಗಳ ಬಗ್ಗೆ ಮಾತನಾಡಿದ ಶಫಾಕ್, ಜನರು ತಮ್ಮ ನಂಬಿಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಪತಿ ಜೀಶಾನ್ ಮುಸ್ಲಿಂ ಎಂದು ಬಹಿರಂಗಪಡಿಸಿದ ಅವರು, ಧರ್ಮ ಎಂಬುದು ವೈಯಕ್ತಿಕ ವಿಷಯವಾಗಿದ್ದು, ಅದನ್ನು ಇತರರು ನಿರ್ಣಯಿಸಬಾರದು ಎಂದು ಹೇಳಿದ್ದಾರೆ.

ಇತ್ತೀಚೆಗೆ ನಾನು ಕರ್ವಾ ಚೌತ್ ಆಚರಿಸುತ್ತಿರುವ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದೆ. ನಾನು ಕೆಂಪು ಸೀರೆ ಧರಿಸಿದ್ದೆ ಮತ್ತು ಹಣೆಗೆ ಸಿಂಧೂರ ಇಟ್ಟುಕೊಂಡಿದ್ದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವು ಯೋಗ್ಯವಾದ ಚಿತ್ರಗಳಾಗಿದ್ದವು. ಆದರೆ ಇದ್ದಕ್ಕಿದ್ದಂತೆ, ನನ್ನ ಕಾಮೆಂಟ್ ವಿಭಾಗದಲ್ಲಿ ಜನರು ನನ್ನನ್ನು ನಿಂದಿಸುತ್ತಿರುವುದನ್ನು, ಟ್ರೋಲ್ ಮಾಡುತ್ತಿರುವುದನ್ನು ಮತ್ತು ಅಗೌರವ ತೋರುತ್ತಿರುವುದನ್ನು ನೋಡುತ್ತಿದ್ದೇನೆ. ಬಹುಶಃ, ಸಿಂಧೂರ ಇಟ್ಟುಕೊಂಡರೆ ಧರ್ಮವೇ ಬದಲಾಗಿಬಿಡುತ್ತದೆಯೇನೋ! ಎನ್ನುವ ಹಾಗೆ ಕಾಮೆಂಟ್ಸ್ ಬರುತ್ತಿತ್ತು.

ಮೊದಲನೆಯದಾಗಿ, ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ವಿಷಯ ತಿಳಿಯದವರಿಗಾಗಿ ಹೇಳುತ್ತಿದ್ದೇನೆ, ನನ್ನ ಪತಿಯ ಹೆಸರು ಜೀಶಾನ್. ಅವರು ಮುಸ್ಲಿಂ. ಎರಡನೆಯದಾಗಿ, ನಾನು ಸಿಂಧೂರ ಇಟ್ಟುಕೊಂಡ ಮಾತ್ರಕ್ಕೆ ನಾನು ಮುಸ್ಲಿಂ ಆಗಿ ಉಳಿಯುವುದಿಲ್ಲವೇ? ನನ್ನ ಧರ್ಮ ಅಷ್ಟೊಂದು ದುರ್ಬಲವೇ " ಎಂದು ಪ್ರಶ್ನಿಸಿದ್ದಾರೆ.

ಭಾರತದ ಸೌಂದರ್ಯವೇ ಇದರಲ್ಲಿರುವುದು. ಇಲ್ಲಿ ಅನೇಕ ಸಂಸ್ಕೃತಿಗಳಿವೆ. ಯಾವುದಾದರೂ ಹಬ್ಬವನ್ನು ಆಚರಿಸುವುದರಲ್ಲಿ ತಪ್ಪೇನಿದೆ? ಏಕೆ ಆಚರಿಸಬಾರದು? ನಾನು ಅದನ್ನು ಆಚರಿಸುತ್ತಲೇ ಬಂದಿದ್ದೇನೆ," ಎಂದು ಅವರು ಹಂಚಿಕೊಂಡಿದ್ದಾರೆ.

ವಿವಿಧ ಧರ್ಮಗಳು ಮತ್ತು ಸಂಸ್ಕೃತಿಗಳನ್ನು ಗೌರವಿಸುವುದರ ಮಹತ್ವದ ಬಗ್ಗೆಯೂ ನಟಿ ಮಾತನಾಡಿದ್ದಾರೆ. ತಮ್ಮ ನಂಬಿಕೆಯ ವಿಷಯಗಳನ್ನು ಆಚರಿಸಿದ್ದಕ್ಕಾಗಿ ಅಥವಾ ಪಾಲಿಸಿದ್ದಕ್ಕಾಗಿ ಯಾರೂ ನಿಂದನೆಗೆ ಒಳಗಾಗಬಾರದು ಎಂದು ಅವರು ಹೇಳಿದರು.

"ಸಿಂಧೂರ ಧರಿಸುವುದರಿಂದ ನಿಮ್ಮ ಧರ್ಮ ಹೇಗೆ ಬದಲಾಗುತ್ತದೆ? ನಿಮ್ಮ ಧರ್ಮವು ಎಷ್ಟು ದುರ್ಬಲವಾಗಿದೆಯೆಂದರೆ, ಬೇರೆ ಸಂಸ್ಕೃತಿಯನ್ನು ಅಥವಾ ಅದರ ಹಬ್ಬವನ್ನು ಆಚರಿಸುವುದರಿಂದ ನಿಮ್ಮ ನಂಬಿಕೆಯೇ ಸಂಪೂರ್ಣವಾಗಿ ಅಲುಗಾಡುತ್ತದೆಯೇ? ಇದೇನು ತರ್ಕ?" ಎಂದು ಅವರು ಪ್ರಶ್ನಿಸಿದರು.

"ನಾನು ದಿನಕ್ಕೆ ಎಷ್ಟು ಬಾರಿ ನಮಾಜ್ ಮಾಡುತ್ತೇನೆ, ಎಷ್ಟು ಉಪವಾಸ ಮಾಡುತ್ತೇನೆ ಅಥವಾ ಬೇರೆ ಏನೆಲ್ಲಾ ಮಾಡುತ್ತೇನೆ ಎಂಬುದನ್ನು ಪ್ರತಿ ಬಾರಿಯೂ ಇಲ್ಲಿ ಕುಳಿತು ನಿಮಗೆ ಹೇಳಬೇಕಿಲ್ಲ. ಧರ್ಮ ಎಂಬುದು ಅತ್ಯಂತ ವೈಯಕ್ತಿಕ ವಿಷಯ; ಅದು ಒಂದು ನಂಬಿಕೆ. ನನ್ನ ಸಾಮರ್ಥ್ಯದೊಳಗೆ, ನನಗೆ ಇಷ್ಟವಾದದ್ದನ್ನು ನಾನು ಮಾಡುತ್ತೇನೆ. ನೀವು ಯಾರ ಮೇಲೂ ಒತ್ತಾಯ ಹೇರಬಾರದು ಅಥವಾ ಯಾರನ್ನೂ ಟೀಕಿಸಬಾರದು," ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹೆಸರಿಗೆ ಮಾತ್ರ ನಿರ್ಬಂಧ, ಅಂಗಡಿಗಳಲ್ಲಿ ಎಲ್ಲ ರೀತಿಯ ಪಟಾಕಿಗಳೂ ಸಿಗುತ್ತಿವೆ’: ಸುಪ್ರೀಂ ಕೋರ್ಟ್ ಕಳವಳ, ಕೇಂದ್ರಕ್ಕೆ ಖಡಕ್ ಸೂಚನೆ

ಕಾಂಗ್ರೆಸ್ ಆಕ್ರೋಶಕ್ಕೆ ಮಣಿದ ವಿಜಯೇಂದ್ರ: ಪೋಸ್ಟರ್ ಸಮರ ಬೆನ್ನಲ್ಲೇ 'ಈ ನನ್ನ ಮಕ್ಕಳು' ಹೇಳಿಕೆಗೆ ಕ್ಷಮೆಯಾಚಿಸಿದ ಬಿಜೆಪಿ ರಾಜ್ಯಾಧ್ಯಕ್ಷ

ಮಹಿಳೆಗೆ ಚಾಕು ತೋರಿಸಿ, ಒತ್ತೆಯಾಳಾಗಿಸಿಕೊಂಡು ದರೋಡೆಗೆ ಯತ್ನ; ಮಂಗಳಸೂತ್ರ ಕಿತ್ತುಕೊಂಡ ದುಷ್ಕರ್ಮಿಗೆ 'ಧರ್ಮದೇಟು'! Video

RTGS ಚೋರ್ ಬಿವೈ ವಿಜಯೇಂದ್ರ: ಈ ನನ್ ಮಕ್ಕಳು ಎಂದಿದ್ದಕ್ಕೆ BYV ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪೋಸ್ಟರ್ ಸಮರ

ಆಂಧ್ರ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ ‘ಮುರಸು’; ಧರೆಗುರುಳಿದ ಸಾವಿರಾರು ಮರಗಳು, ಮೀನುಗಾರಿಕೆ ದೋಣಿಗಳಿಗೆ ಹಾನಿ – ಭಾರಿ ಅನಾಹುತ; Video