ಕನ್ನಡ ಚಿತ್ರರಂಗದಲ್ಲಿ ವಿಮರ್ಶಕರ ಮೆಚ್ಚುಗೆ ಪಡೆದಿರುವ ನಿರ್ದೇಶಕ ವಿಜಯ ಪ್ರಸಾದ್, ಕಳೆದ ಒಂದು ದಶಕದ ಚಿತ್ರರಂಗದಲ್ಲಿನ ತಮ್ಮ ಪ್ರಯಾಣದಲ್ಲಿ ಗುರುತಿಸಿಕೊಂಡಿದ್ದ ವಿಶಿಷ್ಟ ಕಥಾ ಶೈಲಿಯನ್ನು ಬದಿಗಿಟ್ಟು, ಅನಿರೀಕ್ಷಿತವಾದ ಕಲಾತ್ಮಕ ಬದಲಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಅವರು ನಟಿ ರಚಿತಾ ರಾಮ್ ಅವರೊಂದಿಗೆ ಕೈಜೋಡಿಸುತ್ತಿದ್ದು, ಇದೊಂದು ಮಹಿಳಾ ಪ್ರಧಾನ ಕೌಟುಂಬಿಕ ಪ್ರೇಮಕಥೆಯಾಗಲಿದೆ.
ತಮ್ಮ ಚೊಚ್ಚಲ ಯಶಸ್ವಿ ಚಿತ್ರ 'ಸಿದ್ಲಿಂಗು' (2012) ಮೂಲಕ ತೆರೆಯ ಮೇಲೆ ವಿಚಿತ್ರ ಹಾಗೂ ವಿಶಿಷ್ಟ ಪಾತ್ರಗಳು ಮತ್ತು ಚುರುಕಾದ ಸಂಭಾಷಣೆಗಳ ಮೂಲಕ ವಿಜಯ್ ಪ್ರಸಾದ್ ಗಟ್ಟಿಯಾದ ಛಾಪು ಮೂಡಿಸಿದ್ದರು. ಜಗ್ಗೇಶ್ ನಟನೆಯ 'ನೀರ್ ದೋಸೆ' (2016), 'ಪೆಟ್ರೋಮ್ಯಾಕ್ಸ್' (2022) ಹಾಗೂ ಗ್ರಾಮೀಣ ಹಿನ್ನೆಲೆಯುಳ್ಳ ಎರಡು ಭಾಗಗಳ 'ತೋತಾಪುರಿ' (2022–2023) ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿದವು. ಆದರೆ, ಈ ಚಿತ್ರಗಳಲ್ಲಿನ ದ್ವಂದ್ವಾರ್ಥವಿದ್ದ ಸಂಭಾಷಣೆಗಳು ಮತ್ತು ವಯಸ್ಕರಿಗೆ ಸೀಮಿತವಾದ (adult humour) ಹಾಸ್ಯಗಳು ಚರ್ಚೆಗೆ ಗ್ರಾಸವಾಗಿದ್ದವು. ಇದೀಗ ಲಭ್ಯವಿರುವ ಮಾಹಿತಿ ಪ್ರಕಾರ, ವಿಜಯ ಪ್ರಸಾದ್ ಅವರ ಮುಂದಿನ ಚಿತ್ರವು ಎಲ್ಲರೂ ಒಟ್ಟಾಗಿ ನೋಡಬಹುದಾದ, ಶುದ್ಧ ಕೌಟುಂಬಿಕ ಪ್ರೇಮಕಥೆಯಾಗಿ ರೂಪುಗೊಳ್ಳುತ್ತಿದೆ.
ವಿಜಯ ಪ್ರಸಾದ್ ಅವರೊಂದಿಗೆ ರಚಿತಾ ರಾಮ್ ಕೈಜೋಡಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು, ವೈಯಕ್ತಿಕ ಬಾಂಧವ್ಯಗಳ ಸುತ್ತ ಹೆಣೆಯಲಾದ, ಮನಮುಟ್ಟುವ ಹಾಗೂ ಪ್ರೇಮಕಥೆ ಎಂದು ಬಣ್ಣಿಸಲಾಗಿದೆ.
ರಚಿತಾ ಅವರೊಂದಿಗೆ ಅಚ್ಯುತ್ ಕುಮಾರ್ ಮತ್ತು ರಂಗಾಯಣ ರಘು ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡವು ರಚಿತಾ ಅವರೊಂದಿಗೆ ನಟಿಸಲು ಮತ್ತೊಬ್ಬ ನಟನಿಗಾಗಿ ಹುಡುಕಾಟ ನಡೆಸುತ್ತಿದೆ.
ಈ ಚಿತ್ರವು ನಿರ್ದೇಶಕರ ಎಂದಿನ ಶೈಲಿ ಅಥವಾ 'ಕಂಫರ್ಟ್ ಝೋನ್'ನಿಂದ ಹೊರಬಂದಿದೆ. ವಿಜಯ ಪ್ರಸಾದ್ ಅವರ ಹಿಂದಿನ ಚಿತ್ರಗಳು ಹೆಚ್ಚಾಗಿ ಬೆಂಗಳೂರು ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದವು. ಆದರೆ, ಈ ಪ್ರೇಮಕಥೆಯು ವಿಶಾಲವಾದ ಹೊರಗಿನ ಪರಿಸರವನ್ನು (outdoor canvas) ಒಳಗೊಳ್ಳಲಿದೆ. ಇದಕ್ಕಾಗಿ ಚಿತ್ರತಂಡ ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರದ ಕಣಿವೆಗಳು ಹಾಗೂ ಹಿಮಾಲಯದಾದ್ಯಂತ ಚಿತ್ರೀಕರಣ ನಡೆಸಲು ಯೋಜನೆ ರೂಪಿಸುತ್ತಿದೆ. ಕಥೆಯಲ್ಲಿನ ಜೋಡಿಯ ಪಯಣಕ್ಕೆ ಅತ್ಯಗತ್ಯವಾದ ವಿದೇಶದ ಕೆಲವು ತಾಣಗಳಲ್ಲಿಯೂ ಚಿತ್ರೀಕರಣ ನಡೆಸಲು ಅವರು ಉದ್ದೇಶಿಸಿದ್ದಾರೆ.
ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದ್ದು, ತಮ್ಮ ವೃತ್ತಿಜೀವನದಲ್ಲಿ ಹಲವು ಬೃಹತ್ ಯಶಸ್ವಿ ಚಿತ್ರಗಳನ್ನು ನೀಡಿರುವ ರಚಿತಾ ರಾಮ್, ಈ ಚಿತ್ರದಲ್ಲೂ ವಿಶಿಷ್ಟ ಕಥಾವಸ್ತುವಿನೊಂದಿಗೆ ಪ್ರಯೋಗ ಮುಂದುವರಿಸಿದ್ದಾರೆ. ಸದ್ಯ ಚಿರಂಜೀವಿ ನಟನೆಯ ತೆಲುಗಿನ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿರುವ 'ಕೂಲಿ' ಚಿತ್ರದ ನಟಿ, ಈ ಸಿನಿಮಾದಲ್ಲಿ ಅತ್ಯಂತ ಗಂಭೀರ ಹಾಗೂ ಸಹಜವಾದ, ಹೊಸತನದಿಂದ ಕೂಡಿದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.