ವಿಜಯ್ ಆಂಟನಿ ಜೀವನದ ಕಣ್ಣೀರ ಕಥೆ... ONLINE DESK
ಸಿನಿಮಾ ಸುದ್ದಿ

ಮಗಳ ನೆನಪಿಗಾಗಿ ಚಪ್ಪಲಿ ತೊಡುವುದನ್ನೇ ಬಿಟ್ಟ ಖ್ಯಾತನಟ! ಇಲ್ಲಿದೆ ವಿಜಯ್ ಆಂಟನಿ ಜೀವನದ ಕಣ್ಣೀರ ಕಥೆ

ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟನಿ ಅವರು ತಮ್ಮ ಹಿರಿಯ ಮಗಳು ಮೀರಾಳ ಅಕಾಲಿಕ ಮರಣದ ನಂತರ ಚಪ್ಪಲಿ ಧರಿಸುವುದನ್ನು ತ್ಯಜಿಸಿ ಬರಿಗಾಲಿನಲ್ಲೇ ನಡೆಯುತ್ತಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಚೆನ್ನೈ (ತಮಿಳುನಾಡು): ಬಣ್ಣದ ಲೋಕದ ಬೆಳಕಿನ ಹಿಂದೆ, ತೆರೆಯ ಮೇಲೆ ನಗುವ ಮುಖದ ಮರೆಯಲ್ಲಿ ಕೆಲವೊಮ್ಮೆ ಯಾರೂ ಊಹಿಸಲಾಗದಷ್ಟು ಆಳವಾದ ನೋವು ಅಡಗಿರುತ್ತದೆ. ಹೌದು, ತಮಿಳು ಚಿತ್ರರಂಗದ ಬಹುಮುಖ ಪ್ರತಿಭೆ, ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟನಿ ಅವರ ಬದುಕಿನಲ್ಲೂ ಅಂತಹದ್ದೇ ಒಂದು ಕಣ್ಣೀರ ಕಥೆಯಿದೆ.! ಅದುವೇ, 2023ರಲ್ಲಿ ತಮ್ಮ ಮುದ್ದಿನ ಹಿರಿಯ ಮಗಳು ಮೀರಾಳನ್ನು ಕಳೆದುಕೊಂಡ ಆಘಾತದಿಂದ ಅವರು ಇಂದಿಗೂ ಹೊರಬಂದಿಲ್ಲ. ಅದರಲ್ಲೂ, ಮಗಳು ಬಳಸದೆ ಹಾಗೆಯೇ ಬಿಟ್ಟುಹೋದ ಪಾದರಕ್ಷೆಗಳನ್ನು ನೋಡಿ ಕರಗಿಹೋದ ಈ ತಂದೆ, ಅಂದಿನಿಂದ ಇಂದಿನವರೆಗೂ ಚಪ್ಪಲಿಯನ್ನೇ ಧರಿಸದೆ ಬರಿಗಾಲಲ್ಲೇ ನಡೆಯುತ್ತಿದ್ದಾರೆ. ಹೀಗೆ, ಮಗಳ ನೆನಪನ್ನು ತನ್ನ ಪ್ರತಿ ಹೆಜ್ಜೆಯಲ್ಲೂ ಜೀವಂತವಾಗಿರಿಸಿಕೊಂಡಿರುವ ಈ ನಟನ ಹೃದಯವಿದ್ರಾವಕ ಪ್ರೀತಿಯ ಕಥೆ ಇಲ್ಲಿದೆ...

ಇತ್ತೀಚೆಗೆ ನಡೆದ ಮುಂಬರುವ ಸಿನಿಮಾ ಅಪ್ಪಾ ಕುಟ್ಟಿ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ, ವಿಜಯ್ ಆಂಟನಿ ಅವರ ಪತ್ನಿ ನಿರ್ಮಾಪಕಿ ಫಾತಿಮಾ ವಿಜಯ್ ಆಂಟನಿ ಅವರು, ಭಾವನಾತ್ಮಕ ಕಾರಣವನ್ನು ಮೊದಲ ಬಾರಿಗೆ ಬಹಿರಂಗಪಡಿಸಿ, "2023ರ ಸೆಪ್ಟೆಂಬರ್‌ನಲ್ಲಿ ಮಗಳು ಮೀರಾ ಮೃತಪಟ್ಟಳು. ಆಕೆ ಕಾಲೇಜಿಗೆ ಹೋಗುವ ಕನಸು ಕಂಡಿದ್ದರಿಂದ, ಫಾತಿಮಾ ಅವರು ಅಮೆರಿಕ, ಲಂಡನ್ ಸೇರಿದಂತೆ ವಿವಿಧ ದೇಶಗಳಿಂದ ಮಗಳಿಗಾಗಿ ಸುಮಾರು 50 ರಿಂದ ನೂರಾರು ಜೋಡಿ ಶೂ ಮತ್ತು ಸ್ಯಾಂಡಲ್‌ಗಳನ್ನು ಖರೀದಿಸಿ ತಂದಿದ್ದರು. ಆದರೆ ಅವುಗಳಲ್ಲಿ ಒಂದನ್ನೂ ಧರಿಸದೆ ಮೀರಾ ಅಗಲಿದಳು. ಮನೆಯಲ್ಲಿ ಬಳಸದೆ ಉಳಿದಿರುವ ಮಗಳ ಪಾದರಕ್ಷೆಗಳನ್ನು ನೋಡಿದ ವಿಜಯ್ ಆಂಟನಿ ತೀವ್ರ ಆಘಾತಕ್ಕೊಳಗಾಗಿ, ಜೀವನಪರ್ಯಂತ ಚಪ್ಪಲಿ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು" ಎಂದರು.

ಮಗಳ ವಾಚ್ ಮಾತ್ರ ಬಳಕೆ

ವಿಜಯ್ ಆಂಟನಿ ಅವರ ಬಳಿ ರೋಲೆಕ್ಸ್ ಮತ್ತು ರಾಡೋ ನಂತಹ ದುಬಾರಿ ವಾಚ್‌ಗಳಿದ್ದರೂ, ಅವೆಲ್ಲವನ್ನೂ ಬಿಟ್ಟು ಮೀರಾ ಕೊನೆಯದಾಗಿ ಧರಿಸಿದ್ದ ವಾಚ್ ಅನ್ನು ಮಾತ್ರ ಅವರು ಈಗಲೂ ಕಟ್ಟಿಕೊಳ್ಳುತ್ತಾರೆ.

ಸಂಗೀತ ಕಚೇರಿಗಳಲ್ಲಿ ಮಾತ್ರ ವಿನಾಯಿತಿ

ಏತನ್ಮಧ್ಯೆ, ಸಾರ್ವಜನಿಕ ಕಾರ್ಯಕ್ರಮಗಳು, ಚಿತ್ರೀಕರಣ ಹಾಗೂ ಪ್ರಯಾಣದ ವೇಳೆ ಅವರು ಸಂಪೂರ್ಣವಾಗಿ ಬರಿಗಾಲಿನಲ್ಲೇ ಇರುತ್ತಾರೆ. ಆದರೆ, ಲಂಡನ್, ಪ್ಯಾರಿಸ್, ಸಿಂಗಾಪುರ ಮತ್ತು ಮಲೇಷ್ಯಾದಂತಹ ವಿದೇಶಗಳಲ್ಲಿ ಸಂಗೀತ ಕಚೇರಿಗಳನ್ನು ನಡೆಸುವಾಗ ವೇದಿಕೆಯ ನಿಯಮ ಮತ್ತು ಉಡುಪಿನ ಶಿಷ್ಟಾಚಾರಕ್ಕಾಗಿ ಅನಿವಾರ್ಯವಾಗಿ ಶೂ ಧರಿಸುತ್ತಾರೆ. ಕಾರ್ಯಕ್ರಮ ಮುಗಿದು ವೇದಿಕೆಯಿಂದ ಇಳಿದ ತಕ್ಷಣವೇ ಅವುಗಳನ್ನು ತೆಗೆದಿಡುತ್ತಾರೆ ಎಂದು ಪತ್ನಿ ಫಾತಿಮಾ ವಿವರಿಸಿದ್ದಾರೆ.

ಮಗಳ ನೆನಪಿನಲ್ಲೇ ಬದುಕು...

ಇನ್ನು, ಮಗಳ ಅಗಲಿಕೆಯ ಬಳಿಕ ತಾವು ಅನುಭವಿಸುತ್ತಿರುವ ನೋವಿನ ಬಗ್ಗೆ ಮಾತನಾಡಿದ್ದ ವಿಜಯ್ ಆಂಟನಿ, "ಮಗಳು ಮೀರಾ ನನ್ನಿಂದ ದೂರವಾಗಿದ್ದಾಳೆ ಎಂದು ನಾನು ಭಾವಿಸುವುದಿಲ್ಲ; ಆಕೆಯ ಉಪಸ್ಥಿತಿಯನ್ನು ನಾನು ಪ್ರತಿದಿನ ಅನುಭವಿಸುತ್ತೇನೆ ಮತ್ತು ಆಕೆಯೊಂದಿಗೆ ಮಾತನಾಡುತ್ತೇನೆ" ಎಂದು ತಂದೆಯ ಅಗಾಧ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lateef Bhat ಎನ್‌ಕೌಂಟರ್‌; ಎ ಕೆಟಗರಿ ಉಗ್ರ, ಮರಗೆಲಸ ಮಾಡುತ್ತಿದ್ದವ ಉಗ್ರನಾಗಿದ್ದೇ ರೋಚಕ; LeT ಸೇರಿದ ಒಂದೇ ವರ್ಷಕ್ಕೆ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ!

'ಜಟಾಯು' ಎಫೆಕ್ಟ್: ಕೇರಳಂನಲ್ಲಿ ಕಳೆದ ನಾಲ್ಕೇ ದಿನದಲ್ಲಿ 20 ಕೋಟಿ ಸೇರಿ ಒಟ್ಟಾರೆ ದಾಖಲೆಯ 50 ಕೋಟಿಗೂ ಹೆಚ್ಚು ಕಲೆಕ್ಷನ್!

IPLಗೆ ಧೋನಿ ನಿವೃತ್ತಿ; ರೋಹಿತ್ ಶರ್ಮಾ, ಬುಮ್ರಾ ಭಾವುಕ ವಿದಾಯ; ಅಚ್ಚರಿ ಮೂಡಿಸಿದ ವಿರಾಟ್ ಕೊಹ್ಲಿ ಮೌನ! RCB ಹೇಳಿದ್ದೇನು?

'ಕೆಲವು ಲೆಕ್ಕಾಚಾರಗಳನ್ನು ತಣ್ಣಗೇ ಮುಗಿಸಬೇಕು': ಉಗ್ರ ಲತೀಫ್ ಭಟ್ ಎನ್ಕೌಂಟರ್ ಬೆನ್ನಲ್ಲೇ CRPF ಮುಖ್ಯಸ್ಥರ ಪೋಸ್ಟ್ ವೈರಲ್!

ICC ಏಕದಿನ ರ‍್ಯಾಂಕಿಂಗ್‌: ಭಾರತದ ಅರ್ಷ್ ದೀಪ್ ಸಿಂಗ್‌ಗೆ ಭರ್ಜರಿ ಮುಂಬಡ್ತಿ, ಜಿಂಬಾಬ್ವೆ ಆಟಗಾರರ ಭರ್ಜರಿ ಸಾಧನೆ!