ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಸ್ಪರ್ಧಿಗಳು ಹದ್ದು ಮೀರಿ ವರ್ತಿಸಿದ್ದಾರೆ. ಅಸಭ್ಯ ಮಾತುಗಳು ಸಭ್ಯ ಪ್ರೇಕ್ಷಕರು ಕೇಳದಂತಾಗಿದೆ. ಈ ವಾರ ಮಾಡರ್ನ್ ಕವಿ ಮಂಜು ಅವರ ಮಾತುಗಳು ಮನೆಯೊಳಗೆ ಹಲವು ಬಾರಿ ಜಗಳಕ್ಕೆ ಕಾರಣವಾಗಿವೆ. ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವ ವೇಳೆ ಮಂಜು ಬಳಸಿದ ಕೆಲವು ಅವಾಚ್ಯ ಪದಗಳಿಗೆ ಇತರ ಸ್ಪರ್ಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಇಂದು ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಬಿಗ್ ಬಾಸ್ ನಿರೂಪಕ ಸುದೀಪ್ ಅವರು, ತಿದ್ದುವ ಸಮಯ ಮುಗಿದಿದೆ. ಇನ್ನೆನ್ನಿದ್ದರೂ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಕನ್ಫೆಷನ್ ರೂಮಿನಲ್ಲಿ ಮಂಜ ಬಿಕ್ಕಿ-ಬಿಕ್ಕಿ ಅತ್ತಿರುವುದನ್ನು ಕಾಣಬಹುದು. ತಾಯಿ ಬೇಸರದಿಂದ ಹೇಳಿದ ಮಾತುಗಳನ್ನು ಕೇಳಿ ಮಂಜು ಭಾವುಕರಾಗಿದ್ದು ಆತನ ಆಟಾಟೋಪಕ್ಕೆ ಒಳ್ಳೆಯ ರೀತಿಯಲ್ಲಿ ಕಡಿವಾಣ ಹಾಕಲು ಬಿಗ್ ಬಾಸ್ ಮುಂದಾಗಿದೆ.
ಸುದೀಪ್ ಮನೆಯ ಪರಿಸ್ಥಿತಿಯನ್ನು ಗಿಡಕ್ಕೆ ಹೋಲಿಕೆ ಮಾಡಿದ್ದಾರೆ. ಮನೆ ಚೆನ್ನಾಗಿ ಕಾಣಲಿ ಎಂದು ಗಿಡ ನೆಟ್ಟರೆ, ಅದು ಅಡ್ಡಾದಿಡ್ಡಿಯಾಗಿ ಬೆಳೆದು ಗೋಡೆಯನ್ನೇ ಒಡೆಯುವ ಹಂತಕ್ಕೆ ಬಂದಾಗ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಮಾತುಗಳ ಮೂಲಕ ಮನೆಯೊಳಗೆ ನಡೆಯುತ್ತಿರುವ ಅತಿರೇಕದ ವರ್ತನೆಗೆ ಕಡಿವಾಣ ಹಾಕುವ ಸೂಚನೆಯನ್ನು ನೀಡಿದ್ದಾರೆ. ಅದು ಯಾವ ರೀತಿ ಕ್ರಮ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯುತ್ತದೆ.