ಯಶ್ ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಇಂಗ್ಲಿಷ್ ಆವೃತ್ತಿಯು 2026ರ ಸೆಪ್ಟೆಂಬರ್ 4ರಂದು ಬಿಡುಗಡೆಯಾಗಲಿದೆ. ಆಗಸ್ಟ್ 26ರಂದು ಈ ಚಿತ್ರವು ಇತರ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.
ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರವನ್ನು ಮೂಲತಃ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದು ಚಿತ್ರೀಕರಿಸಲಾಗಿತ್ತು. ನಂತರ, ಇತರ ಹಲವು ಭಾರತೀಯ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಆದಾಗ್ಯೂ, ಈಗ ಬಿಡುಗಡೆಯಾಗಲಿರುವ ಇಂಗ್ಲಿಷ್ ಆವೃತ್ತಿಯು ಮೂಲ ಕನ್ನಡ ಆವೃತ್ತಿಗಿಂತ ಕಡಿಮೆ ಅವಧಿಯನ್ನು ಹೊಂದಿರುತ್ತದೆ.
'ಇಂಡಿಯಾ ಟುಡೇ' ವರದಿ ಪ್ರಕಾರ, ಟಾಕ್ಸಿಕ್ ಚಿತ್ರದ ಇಂಗ್ಲಿಷ್ ಆವೃತ್ತಿಯು 2 ಗಂಟೆ 57 ನಿಮಿಷಗಳ ಅವಧಿಯನ್ನು ಹೊಂದಿರುತ್ತದೆ. ಕನ್ನಡದ ಥಿಯೇಟರ್ ಆವೃತ್ತಿಯು 3 ಗಂಟೆ 14 ನಿಮಿಷ 12 ಸೆಕೆಂಡುಗಳ ಅವಧಿಯನ್ನು ಹೊಂದಿದೆ. ಈ ಎರಡು ಆವೃತ್ತಿಗಳ ನಡುವಿನ ವ್ಯತ್ಯಾಸವು ಸುಮಾರು 17 ನಿಮಿಷಗಳಷ್ಟಿದೆ.
ಭಾರತದಾದ್ಯಂತದ ಚಿತ್ರಮಂದಿರಗಳಲ್ಲಿ ಈ ಚಿತ್ರದ ಇಂಗ್ಲಿಷ್ ಆವೃತ್ತಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಖಚಿತಪಡಿಸಿದೆ. ಈ ಹೊಸ ಆವೃತ್ತಿಯು 2026ರ ಸೆಪ್ಟೆಂಬರ್ 4 ರಿಂದ ಪ್ರೇಕ್ಷಕರಿಗೆ ಚಿತ್ರಮಂದಿರಗಳಲ್ಲಿ ಲಭ್ಯವಿರಲಿದೆ. ಸಾಮಾನ್ಯ ಡಬ್ಬಿಂಗ್ ಆವೃತ್ತಿಗಿಂತ ಭಿನ್ನವಾಗಿ, ಈ ಚಿತ್ರದ ರಚನೆ ಮತ್ತು ಚಿತ್ರೀಕರಣದ ಸಂದರ್ಭದಲ್ಲೇ ಇಂಗ್ಲಿಷ್ ಭಾಷೆಯನ್ನು ಕೂಡ ಬಳಸಲಾಗಿತ್ತು.
'Toxic: A Fairy Tale for Grown-Ups'- ಇಂಗ್ಲಿಷ್ ಭಾಷೆಯಲ್ಲಿ (ಚಿತ್ರವನ್ನು ರಚಿಸಲಾದ ಮತ್ತು ಚಿತ್ರೀಕರಿಸಲಾದ ಭಾಷೆಗಳಲ್ಲಿ ಇದೂ ಒಂದು) ಬಿಡುಗಡೆಯಾಗಲಿದೆ. ಇದು ಭಾರತೀಯ ಇತರ ಭಾಷೆಗಳಿಗಿಂತ ಸಂಕ್ಷಿಪ್ತ ರೂಪವಾಗಿರುವ ಆವೃತ್ತಿಯಾಗಿದೆ. ಸೆಪ್ಟೆಂಬರ್ 4, 2026ರಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ' ಎಂದು ಚಿತ್ರತಂಡ ತಿಳಿಸಿದೆ.
ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ವರದಿ ಪ್ರಕಾರ, ಯಶ್ ಅಭಿನಯದ ಈ ಚಿತ್ರವು ಬಿಡುಗಡೆಯಾದ 9ನೇ ದಿನದಂದು ಭಾರತದಲ್ಲಿ 10,863 ಪ್ರದರ್ಶನಗಳಿಂದ ₹4.25 ಕೋಟಿ ನಿವ್ವಳ ಗಳಿಕೆ ಕಂಡಿದೆ. 8ನೇ ದಿನದಂದು ಗಳಿಸಿದ ₹5.45 ಕೋಟಿಗೆ ಹೋಲಿಸಿದರೆ, ಇದು ಶೇ22 ರಷ್ಟು ಕುಸಿತ ಸೂಚಿಸುತ್ತದೆ.
ಈ ಚಿತ್ರವು ತನ್ನ ಎರಡನೇ ವಾರದಲ್ಲಿ ಮತ್ತೊಮ್ಮೆ ಕುಸಿತವನ್ನು ಕಂಡಿದೆ. 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರಕ್ಕೆ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪೋರ್ಚುಗೀಸರ ಆಳ್ವಿಕೆಯ ಕಾಲದಲ್ಲಿ ಗೋವಾದಲ್ಲಿ ಉನ್ನತ ಸ್ಥಾನಕ್ಕೇರುವ 'ರಾಯ' ಎಂಬ ಪಾತ್ರದಲ್ಲಿ ಯಶ್ ನಟಿಸಿದ್ದಾರೆ. ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಸೇರಿದಂತೆ ಹಲವರು ನಟಿಸಿದ್ದಾರೆ.