ಬೆಂಗಳೂರು: ಟಾಕ್ಸಿಕ್ ಚಿತ್ರದ ಕುರಿತ ಮಿಶ್ರ ಪ್ರತಿಕ್ರಿಯೆ ವಿಚಾರವಾಗಿ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಮತ್ತೆ ಸುದ್ದಿಯಲ್ಲಿದ್ದು, ಸಂದರ್ಶನ ವೇಳೆ ಅವರು ನೀಡಿರುವ ಹೇಳಿಕೆಯೊಂದು ವ್ಯಾಪಕ ವೈರಲ್ ಆಗಿದೆ.
ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಬಿಡುಗಡೆಯಾಗಿ ವಾರಗಳೇ ಕಳೆದರೂ ಬಾಕ್ಸಾಫೀಸ್ ನಲ್ಲಿ ಕಮಾಲ್ ಮಾಡಲು ವಿಫಲವಾಗಿದೆ. ಚಿತ್ರದ ಇಂಗ್ಲಿಷ್ ಅವತರಣಿಕೆ ಕೂಡ ಬಿಡುಗಡೆಯಾಗಿದ್ದು ಚಿತ್ರದ ಕುರಿತು ನಕಾರಾತ್ಮಕ ಚರ್ಚೆಗಳು ಮುಂದುವರೆದಿದೆ.
ಕೆಲವರು ಸಿನಿಮಾದ ವಿಭಿನ್ನ ನಿರೂಪಣೆಯನ್ನು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾವನ್ನು ಹಾಗೂ ಯಶ್ (Yash) ರನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ನಡುವೆ ಟಾಕ್ಸಿಕ್ ಕುರಿತ ಟೀಕೆಗಳಿಗೆ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ನೀಡಿರುವ ಮತ್ತೊಂದು ಪ್ರತಿಕ್ರಿಯೆ ಇದೀಗ ಗಮನ ಸೆಳೆದಿದೆ.
ಟಾಕ್ಸಿಕ್ ಬಗ್ಗೆ ಉದ್ದೇಶಪೂರ್ವಕ ಟ್ರೋಲ್?
ಟಾಕ್ಸಿಕ್ ಸಿನಿಮಾವನ್ನು ಉದ್ದೇಶಪೂರ್ವಕವಾಗಿ ಟ್ರೋಲ್ ಮಾಡುತ್ತಿರುವವರ ಬಗ್ಗೆ ಮಾತನಾಡಿರುವ ಪುಷ್ಪಾ ಅರುಣ್ ಕುಮಾರ್, ಅಂತಹವರಿಗೆ ವಿಷಯ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಕಾಲೇಜು ದಿನಗಳ ಘಟನೆ ನೆನಪಿಸಿಕೊಂಡ ತಾಯಿ ಪುಷ್ಪಾ
ಇದೀಗ ಅದೇ ವಿಚಾರವಾಗಿ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿರುವ ಪುಷ್ಪಾ ಅವರು, ಯಶ್ ಕಾಲೇಜು ದಿನಗಳ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.
'ಯಶ್ ಗೆ ಶ್ರೀಮಂತರೊಬ್ಬರ ಮಗ ತನ್ನ ಕಾರಿನಿಂದ ಗುದ್ದಿ ಪರಾರಿಯಾಗಿದ್ದ. ಈ ವಿಚಾರ ನನಗೆ ಗೊತ್ತಿರಲಿಲ್ಲ. ಕಾಲೇಜಿನಲ್ಲಿ ಇವನೇ ಏನೋ ಮಾಡಿದ್ದಾನೆ ಎಂದು ಭಾವಿಸಿ ಕಾಲೇಜಿಗೆ ಹೋಗಿ ವಿಚಾರಿಸಿದ್ದೆ. ಆಗ ಯಶ್ ಕಾರು ಗುದ್ದಿದ ಯುವಕನ ತಾಯಿ ಬಗ್ಗೆ ಹೇಳಿದ್ದ. ಆಕೆ ನನ್ನ ಮಗನಿಗೆ ಕಾರು ತೆಗೆದುಕೊಳ್ಳುವ ತಾಕತ್ ಇದೆ. ಮಾಡ್ತಾನೆ.. ನೀನು ಕಾರು ತೆಗೆದುಕೊಂಡು ಬಂದು ಹೇಳು ಎಂದು ಹೇಳಿದ್ದರು ಎಂದು ನನಗೆ ಹೇಳಿದ.
ಆಗ ನಾನು ನಿನಗೆ 5 ಲೀಟರ್ ಪೆಟ್ರೋಲ್ ತೆಗೆದುಕೊಳ್ಳುವ ತಾಕತ್ ಇತ್ತಲ್ಲ.. ಅದನ್ನ ಕಾರಿನ ಮೇಲೆ ಹಾಕಿ ಬೆಂಕಿ ಹಚ್ಚಿ ಬರಬೇಕಿತ್ತು. ನಾನು ನಿನ್ನನ್ನು ಬಿಡಿಸಿಕೊಂಡು ಬರುತ್ತಿದ್ದೆ ಎಂದು ಆ ಟೈಮ್ ನಲ್ಲೇ ಹೇಳಿದ್ದೆ. ಯಶ್ ಗೆ ಧೈರ್ಯ ತುಂಬಿದ್ದೆ. ಆಗಲೇ ಆತರ ಹೇಳಿದ್ದೆ. ಇನ್ನು ಇದಕ್ಕೆ ಹೆದರುತ್ತೇವೆಯೇ ಎಂದು ಟೀಕಾಕಾರರಿಗೆ ಪುಷ್ಪಾ ಅವರು ಖಡಕ್ ಉತ್ತರ ನೀಡಿದ್ದಾರೆ.
ಯಶ್ ನ ಎಲ್ಲರ ರೀತಿಯ ಪರಿಗಣಿಸಬೇಡಿ
ಅಂತೆಯೇ ಯಶ್ ರನ್ನು ಎಲ್ಲರ ರೀತಿ ಪರಿಗಣಿಸಬೇಡಿ ಎಂದು ಹೇಳಿದ ಪುಷ್ಪಾ ಅವರು, ನಾವು ಯಾವುದಕ್ಕೂ ಹೆದರಲ್ಲ. ಯಶ್ ಗೆ ಧೈರ್ಯಕೊಟ್ಟು ಬೆಳೆಸಿದ್ದೇವೆ. ಒಳ್ಳೆ ಕೆಲಸ ಮಾಡಲು ಕಳುಹಿಸಿದ್ದೇವೆ ಎಂದು ಹೇಳಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.