ಕೋಟಿಗೊಬ್ಬ 2 ಸಿನೆಮಾ ವಿಮರ್ಶೆ
ಮನರಂಜನೆ-ಚಮತ್ಕಾರದ ಕಮರ್ಶಿಯಲ್ ಚಿತ್ರಗಳಲ್ಲೇ ಹಣವಿರುವುದು ಮತ್ತು ಅವುಗಳೇ ಜನರಿಗೆ ರುಚಿಸುವುದು ಎಂಬ ಧೃಢ ನಂಬಿಕೆಯ ನಿರ್ದೇಶಕ ಕೆ ಎಸ್ ರವಿಕುಮಾರ್ ಕನ್ನಡಕ್ಕೆ ಕೋಟಿಗೊಬ್ಬ2 ಸಿನೆಮಾದ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಸುದೀಪ್ ಮತ್ತು ನಿತ್ಯ ಮೆನನ್ ನಟಿಸಿರುವ ಸಿನೆಮಾ ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ಮನರಂಜಿಸಲು ಸಾಧ್ಯವಾಗಿದೆಯೇ?
ದೊಡ್ಡ ಉದ್ಯಮಿಗಳ ಕೋಟಿಗಟ್ಟಲೆ ಕಪ್ಪುಹಣ ದರೋಡೆ ಮಾಡುವ ಶಿವನಿಗೆ (ಸುದೀಪ್) ನೋಟಿನ ವಾಸನೆ ಎಂದರೆ ವಿಶ್ವದ ಅದ್ಭುತ ಪರ್ಫ್ಯೂಮ್ ಎಂದು ನಂಬಿರುವವನು. ದರೋಡೆಯಾದ ಉದ್ದಿಮೆದಾರನ ಭಂಟ ಪೊಲೀಸ್ ಅಧಿಕಾರಿ ಕಿಶೋರ್ (ರವಿಶಂಕರ್). ಉದ್ದಿಮೆದಾರ ದೂರು ನೀಡದೆ ಇದ್ದರೂ ಸಿಕ್ಕ ವಿಡಿಯೋವೊಂದರ ಆಧಾರದ ಮೇರೆಗೆ ರಿಯಲ್ ಎಸ್ಟೇಟ್ ದಂಧೆ ನಡೆಸುವ ಸತ್ಯನನ್ನ (ಸುದೀಪ್), ಕಿಶೋರ್ ಕರೆತಂದು ಲಾಕಪ್ ನಲ್ಲಿ ಥಳಿಸುತ್ತಾನೆ. ಆದರೆ ತನ್ನ ಅವಳಿ ಸಹೋದರ ಶಿವ ಕಾಣೆಯಾದುದರ ಬಗ್ಗೆ ಸತ್ಯ ಮೊದಲೇ ದೂರು ನೀಡಿರುತ್ತಾನೆ. ಕಿಶೋರ್ ಅವರ ಪೊಲೀಸ್ ಠಾಣೆಯಿಂದಲೇ ಸುರಂಗ ಕೊರೆದು ಮತ್ತೊಬ್ಬ ಉದ್ದಿಮೆದಾರನ ಕಪ್ಪುಹಣದ ದರೋಡೆ ನಡೆಯುತ್ತಾನೆ ಶಿವ. ಸತ್ಯ ಮತ್ತು ಶಿವ ವಿಭಿನ್ನ ವ್ಯಕ್ತಿಗಳೇ ಅಥವಾ ಒಬ್ಬ ವ್ಯಕ್ತಿಯ ವಿಭಿನ್ನ ವ್ಯಕ್ತಿತ್ವಗಳೇ ಎಂಬ ದ್ವಂದ್ವದೊಂದಿಗೆ ಸಿನೆಮಾ ಮುಂದುವರೆದು, ಸತ್ಯನ ಜೊತೆಗೆ ಪ್ರೀತಿಗೆ ಬೀಳುವ ಶುಭ (ನಿತ್ಯಾ ಮೆನನ್) ಅವನ ಸಹೋದರ ಶಿವನ ಚಟುವಟಿಕೆಗಳನ್ನು ದ್ವೇಷಿಸುತ್ತಾಳೆ. ಶಿವ, ಸತ್ಯನ ಮತ್ತೊಂದು ವ್ಯಕ್ತಿತ್ವ ಎಂಬುದು ಶುಭಾಳಿಗೆ ತಿಳಿಯುವುದು ಹೇಗೆ? ಈ ದ್ವಂದ್ವ ವ್ಯಕ್ತಿತ್ವಕ್ಕೆ ಕಾರಣಗಳೇನು?
ಸಿನೆಮಾ ಆರಂಭ-ಕಥೆ-ಸಂಭಾಷಣೆ-ನಿರೂಪಣೆ ಎಲ್ಲವು ಮಸಾಲೆ ಕಮರ್ಶಿಯಲ್ ಜೋಡಣೆಯಲ್ಲಿಯೇ ಇದ್ದು, ಮಾಸಾಲೆಯೇ ಹೆಚ್ಚಾಗಿ ಪ್ರೇಕ್ಷಕನಿಗೆ ನಿರೀಕ್ಷಿತ ಮಟ್ಟಿಗೆ ರುಚಿಕಟ್ಟದೇ ಹೋದರು ಅಲ್ಲಲ್ಲಿ ಸುಧಾರಿಕೊಳ್ಳುವ ಕೆಲವು ಅಂಶಗಳಿವೆ. ದರೋಡೆ-ಹೀರೊ ಪ್ರವೇಶ-ಫೈಟ್-ಹಾಡು ಹೀಗೊಂದು ಮಾಮೂಲಿ ಆರಂಭದ ಸಿನೆಮಾದಲ್ಲಿ ಕಥೆಯ ಗಟ್ಟಿತನದ ಬಗ್ಗೆಯೂ ಹೆಚ್ಚು ನಿರೀಕ್ಷಿಸುವಂತಿಲ್ಲ. ಅತಿವೇಗದ ನಿರೂಪಣೆಯಲ್ಲಿ ತುರಿಕಿರುವ ಹತ್ತು ಹಲವಾರು ಘಟನೆಗಳು ಕೂಡ ಸುದೀಪ್ ಕಟ್ಟಾ ಅಭಿಮಾನಿಗಳಿಕೆ ಚಮತ್ಕಾರ ಮೂಡಿಸಬಲ್ಲವಾದರೂ ಯಾವುವು ಗಟ್ಟಿಯಾಗಿ ಮನಸ್ಸಿನಲ್ಲಿ ಉಳಿಯುವಂತಿಲ್ಲ. ಚಿಕ್ಕಣ್ಣ-ಸಾಧು ಕೋಕಿಲಾ ಅವರ ಎಂದಿನ ವಿಕ್ಷಿಪ್ತ ಸಂಭಾಷಣೆಯ-ಶೈಲಿಯ ಮಾಮೂಲಿ ಹಾಸ್ಯಕ್ಕೆ ನಗುತ್ತಲೇ ಇರಬೇಕೆಂದರೆ ಲಾಫಿಂಗ್ ಗ್ಯಾಸೇ ಬೇಕೇನೋ!
ಸುದೀಪ್ ಅವರ ಹಿರೋಯಿಸಂ ಮೇಲೆಯೇ ಹೆಚ್ಚು ಅವಲಂಬಿತವಾಗಿರುವ ಆಕ್ಷನ್ ಕಥೆಗೆ ಲಾಜಿಕ್-ವಿವೇಚನೆ ಹಿಂಬಡ್ತಿ ಪಡೆಯುತ್ತದೆ. ಅದನ್ನು ಮೀರಿದಾಗ ಉಳಿಯುವುದು ಸತ್ಯ-ಶುಭಾ ನಡುವಿನ ರೊಮ್ಯಾಂಟಿಕ್ ಪ್ರೇಮಕಥೆ ಮತ್ತು ಸತ್ಯನ ತಂದೆಯ ಜೊತೆಗಿನ ಬಾಂಧವ್ಯ ಮತ್ತು ತನ್ನ ಈ ಸ್ಥಿತಿಗೆ ಕಾರಣವಾದ ಪೂರ್ವ ಕಥೆ. ಶುಭಾ ಪಾತ್ರದಲ್ಲಿ ನಟಿಸಿರುವ ನಿತ್ಯಾ ಮೆನನ್, ಮಾಮೂಲಿಯಾದರು ಆ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿರುವುದು ಅವರ ನಟನೆ ಮತ್ತು ಅವರ ಸುಂದರ ಧ್ವನಿಯಲ್ಲೇ ಮೂಡಿಬಂದಿರುವ ಕನ್ನಡ ಮಾತುಗಳು. ಸತ್ಯನ ದ್ವಂದ್ವ ವ್ಯಕ್ತಿತ್ವ ತಿಳಿದಾಗ ನಡೆಯುವ ಸಂಘರ್ಷದ ದೃಶ್ಯ ಇಡೀ ಸಿನೆಮಾದಲ್ಲಿ ಹೆಚ್ಚು ಆಪ್ತವಾಗುವ ಭಾಗ. ತಂದೆ (ಪ್ರಕಾಶ್ ರಾಜ್) ಮತ್ತು ಮಗನ ಪೂರ್ವ ಕಥೆ ಕೂಡ ಎಲ್ಲೆಯಿಲ್ಲದೆ ಎಳೆದಾಡಿರುವುದರಿಂದ ಅದು ಅಷ್ಟೇನೂ ರುಚಿಸುವುದಿಲ್ಲ. ಸುದೀಪ್ ಎಂದಿನಂತೆ ಅವರ ವಿಭಿನ್ನ ಶೈಲಿಯ ನಟನೆಯಿಂದ ಅವರ ಅಭಿಮಾನಿಗಳಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ. ರವಿಶಂಕರ್ ಎಂದಿನ ಆರ್ಭಟದ ನಟನೆ ಮುಂದುವರೆದಿದೆ.
ಸಿನೆಮಾದ ತಾಂತ್ರಿಕ ಗುಣಮಟ್ಟದಲ್ಲೂ ವಿಶೇಷ ಎನ್ನುವಂತಾದ್ದು ಯಾವುದೂ ಗೋಚರವಾಗುವುದಿಲ್ಲ. ದೃಶ್ಯಗಳ ಸಂಯೋಜನೆ ಮತ್ತು ಸಿನೆಮ್ಯಾಟೋಗ್ರಾಫಿಯಲ್ಲಿ ಹೆಚ್ಚುಗಾರಿಕೆಯೇನಿಲ್ಲ. ಆ ನಿಟ್ಟಿನಲ್ಲಿ ಕಲಾ ನಿರ್ದೇಶನ ಸಂಪೂರ್ಣ ವಿಫಲ. ಆಕ್ಷನ್ ದೃಶ್ಯಗಳಲ್ಲಿ ಉಪಯೋಗಿರಿಸರುವ ಅನಗತ್ಯ-ಅತೀವ ಗ್ರಾಫಿಕ್ಸ್ ಕಿರಿಕಿರಿ ಉಂಟುಮಾಡುತ್ತದೆ. ಇದ್ದುದರಲ್ಲಿ ಡಿ ಇಮ್ಮಾಮ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಒಂದೆರಡು ಹಾಡುಗಳು ಮುದ ನೀಡುತ್ತವೆ. ಅದರಲ್ಲಿ 'ಸಾಲುತ್ತಿಲ್ಲವೇ' ಹಾಡು ಮನಸ್ಸಿನಲ್ಲಿ ಉಳಿಯುವಂತಿದೆ.
ಸುದೀಪ್ ಅವರ ಹಿರೋಯಿಸಂ ಮೇಲೆಯೇ ಸಂಪೂರ್ಣ ಭಾರ ಹಾಕಿ, ಸಾಮಾನ್ಯ ಕಥೆಯೊಂದನ್ನು ಅತಿ ವೇಗವಾಗಿ ನಿರೂಪಿಸಿ, ಘಟನೆಗಳ ವಿವರಗಳಿಗೆ- ದೃಶ್ಯಗಳ ಸಂಯೋಜನೆಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಅಗತ್ಯ-ಅನಗತ್ಯ ಮಸಾಲೆಯನ್ನು ಬೆರೆಸಿ-ತುರುಕಿ ಕೆ ಎಸ್ ರವಿಕುಮಾರ್ ಲಕ್ಷ್ಮಿ ಹಬ್ಬದಂದು ಉಣಬಡಿಸಿರುವ ಈ ಅಡುಗೆ ಸಾಧಾರಣವಾದದ್ದು.