ಯೋಗರಾಜ್ ಭಟ್ ಫಿಲ್ಮ್ಸ್ ನಿರ್ಮಿಸಿರುವ ಕ್ರಿಶ್ ಜೋಶಿ ನಿರ್ದೇಶನದ ಪರಪಂಚ ಸಂಕ್ರಾಂತಿಗೆ ತೆರೆ ಕಂಡಿದೆ. ಯೋಗರಾಜ್ ಭಟ್ ಸ್ವತಃ ನಟಿಸಿರುವ, ಮತ್ತು ಅವರ ನೆಚ್ಚಿನ ತಾರಾಗಣವೆಲ್ಲ ಪಾತ್ರ ಪಡೆದಿರುವ ಈ ಸಿನೆಮಾದಲ್ಲಿ ವಾಚಾಳಿತನದ ನಿರೀಕ್ಷೆ ಸಹಜ. ಸಂಕ್ರಾತಿಗೆ ಒಳ್ಳೊಳ್ಳೆ ಮಾತುಗಳಿಗೆ ಬರವಿಲ್ಲಪ್ಪ ಎಂದರೂ ಮಾತಿನಾಚೆಗೆ ಸಿನೆಮಾ ಸಿಹಿಯಾಗಿದೆಯೇ?
ಬೊಗಳೆ ಅಂಗಡಿ ಜೋಕುಮಾರ ಸೀನು (ದಿಗಂತ್) ತನ್ನ ಹುಟ್ಟೂರಿನಿಂದ ಹೆತ್ತವರು ಕೊಡಿಸಿದ ತನ್ನೆಲ್ಲಾ ಬಟ್ಟೆ ಕಳಚಿ ನಗ್ನನಾಗಿ ಪಟ್ಟಣಕ್ಕೆ ಓಡಿ ಬಂದು 'ಕಾಳಿ ಪೀಳಿ'ಯ (ಯೋಗರಜ್ ಭಟ್) ಶಿಷ್ಯತ್ವ ಸ್ವೀಕರಿಸುತ್ತಾನೆ. ಗುರು, ಶಿಷ್ಯನನ್ನು 'ಪರಪಂಚ' ಎಂಬ ಬಾರ್ ನಲ್ಲಿ ಸಪ್ಲಯರ್ ಆಗಿ ಸೇರಿಸುತ್ತಾನೆ. ಬಾರ್ ನಲ್ಲಿ ನೊಂದು ಕುಡಿಯಲು ಬರುವ ಎಲ್ಲರ ನೋವನ್ನು ಪರಿಹರಿಸುವ ಮಹಾ ತತ್ವ ಜ್ನ್ನ್ ನಿಯಾಗಿ ಸೀನು ಖ್ಯಾತನಾಗುತ್ತಾನೆ. ಈ ಉಸಾಬರಿ ಇವನಿಗೇಕೆ ಬಂತು? ಮತ್ತು ಅದೇ ಬಾರಿನಲ್ಲಿ ಸೀನನನ್ನು ಕೊಲ್ಲಲು ಸುಫಾರಿ ಕಿಲ್ಲರ್ 'ತಿಪ್ಪೆ'(ರಂಗಯಣ ರಘು) ಹೊಂಚು ಹಾಕಿ ಕೂತಿರುವುದೇಕೆ? ಮುಂದೇನಾಗುತ್ತದೆ?
'ಪರಪಂಚ' ಎಂಬ ಬಾರ್ ನಲ್ಲೇ ನಡೆಯುವ ಇಡೀ ಸಿನೆಮಾ ಯೋಗರಾಜ್ ಭಟ್ ಅವರ ವಾಚಾಳಿ (ಮಂಬಲ್ಕೋರ್) ಶೈಲಿಯನ್ನು ಮೀರಲು ಯಾವುದೇ ಪ್ರಯತ್ನ ಮಾಡಿಲ್ಲ. ಕನಿಷ್ಠ ಪಕ್ಷ ಯೋಗರಾಜ್ ಭಟ್ ಅವರ ಪ್ರಾರಂಭಿಕ ಸಿನೆಮಾಗಳಲ್ಲಿ ಇರುತ್ತಿದ್ದ ಒಂದಷ್ಟು ಮಜವಾದ ಘಟನೆಗಳು ಕೂಡ ಇಲ್ಲಿ ಕೊರತೆಯನ್ನನುಭವಿಸಿವೆ. ಮೊದಲಾರ್ಧ ಬಾರಿನಲ್ಲಿ ನಡೆಯುವ ಅಸಂಖ್ಯಾತ ನೊಂದ ಪಾತ್ರಗಳ ಪ್ರಲಾಪಗಳು ಪ್ರೇಕ್ಷಕನನ್ನು ಬ್ಯಾಸರಿಕೆಯ ಉತ್ತುಂಗಕ್ಕೆ ತಳ್ಳಿದರೆ, ದ್ವಿತೀಯಾರ್ಧದ ಸಿನೆಮಾದಲ್ಲಿ ಈ ಎಲ್ಲ ನೊಂದ ಜೀವಿಗಳ ಆಶಾಕಿರಣವಾಗಿ ಮಾತುಗಾರ ಮಲ್ಲ, ಮಲ್ಲರ ಮಲ್ಲ ದಿಗಂತ್ 'ಪ್ರೀಚರ್' ಆಗಿ ಬೋರು ಹೊಡೆಸುತ್ತಾರೆ. ಈ ನೊಂದ ಜೀವಿಗಳ ಸರ್ವೇ ಸಾಮಾನ್ಯ ನೋವುಗಳಿಗೆ-ತೊಂದರೆಗಳಿಗೆ ಈ ಮಲ್ಲ ನೀಡುವ ಕ್ಲೀಶೆಯ-ಸುಲಭದ ಪರಿಹಾರಗಳು ಕೆಲವೊಮ್ಮೆ ನೋಡುಗನಿಗೆ ಕೋಪ ತರಿಸಿದರೆ ಮತ್ತೆ ಕೆಲವೊಮ್ಮೆ ಥಿಯೇಟರ್ ನಿಂದ ಹೊರದಬ್ಬುತ್ತವೆ. (ಇಲ್ಲಿ ಅವುಗಳನ್ನು ಉದಾಹರಿಸಬಹುದಾದರೆ: ಕೆಲಸ ಕಳೆದುಕೊಂಡ ದುಃಖತಪ್ತ ಯುವಕನೊಬ್ಬನಿಗೆ, ಶೌಚಾಲಯದ ಕನ್ನಡಿ ಮುಂದೆ ಮಾತಾಡುವಂತೆ ಹೇಳಿ ಕ್ಷಣ ಮಾತ್ರದಲ್ಲಿ ಅವನ ತೊಂದರೆಯನ್ನು ಪರಿಹರಿಸುತ್ತಾನೆ. ದೊಡ್ಡ ಸಂಬಳದ ಆಸೆಗೆ ಊರು, ತಂದೆ ತಾಯಿ ಬಳಗವನ್ನು ತೊರೆದು ಬಂದ ಸಾಫ್ಟ್ ವೇರ್ ಎಂಜಿನಿಯರ್ ಗೆ 'ವಾಪಸ್ಸು ಬಸ್ಸು ಹಿಡಿ' ಎಂದು ಹಾಡುವ ಮೂಲಕ ಸಮಾಧಾನ ಮಾಡುತ್ತಾನೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಹೆಣ್ಣು ಮಗಳಿಗೆ, ತನ್ನ ಮೇಲಧಿಕಾರಿಯ ಕಪಾಳಕ್ಕೆ ಹೊಡೆಸುವ ಮೂಲಕ ನ್ಯಾಯ ನೀಡುತ್ತನೆ. ಕಾಲ್ ಗರ್ಲ್ ಕಸ್ತೂರಿ (ರಾಗಿಣಿ) ಜೊತೆಗೆ ಬಾರ್ ಗೆ ಬಂದಿರುವ ೧೦ ಸಾವಿರ ಕೋಟಿ ಉದ್ಯಮದ ಒಡೆಯ (ಅಶೋಕ್) ತನ್ನ ಮಗನನ್ನು ಅದೇ ಬಾರಿನಲ್ಲಿ ಕಂಡು ಇಬ್ಬರೂ ಪರಸ್ಪರ ಮುಜುಗರ ಪಟ್ಟಾಗ, ಅವರಿಬ್ಬರನ್ನೂ ಪಕ್ಕದಲ್ಲಿ ಕುಳ್ಳರಿಸಿ ಮಾತನಾಡುವಂತೆ ಮಾಡಿ ಸಮಸ್ಯೆ ಪರಿಹರಿಸುತ್ತನೆ). ಈ ಘಟನೆಗಳ-ಪಾತ್ರಗಳ ಸಂಖ್ಯೆಯನ್ನು ಕಡಿತಗೊಳಿಸಿ ಅವುಗಳಿಗೆ ತುಸು ಆಳವನ್ನು ಆರೋಪಿಸಿ, ಸಮಸ್ಯೆಯ ಮೇಲೆ ಇನ್ನೂ ಹೆಚ್ಚಿನ ಬೆಳಕು ಚೆಲ್ಲಲು ಪ್ರಯತ್ನಿಸಿ ಅದಕ್ಕೆ ತುಸು ಹಾಸ್ಯದ ಲೇಪ ನೀಡಿ, ಗಟ್ಟಿಯಾದ ಭಾವನಾತ್ಮಕ ನಟನೆಯನ್ನು ತೆಗೆಯಲು ಸಾಧ್ಯವಗಿದ್ದರೆ ಸಿನೆಮಾ ಸಹ್ಯವಾಗುತ್ತಿತ್ತೇನೋ. ಒಂದು ಬಾರಿನಲ್ಲಿ ನಡೆಯಬಹುದಾದ ಚರ್ಚೆಗಳ ಹಿನ್ನಲೆಯಲ್ಲಿ ಸಿನೆಮಾ ಮಾಡುವುದು ಉದಾತ್ತ ಆಶಯವಾಗಿದ್ದರೂ ಸ್ಕ್ರೀನ್ ಪ್ಲೇ ನಲ್ಲಿ, ಸಂಬಾಷಣೆಯಲ್ಲಿ ಎಡವಿ, ಕಥೆಯನ್ನು-ನಿರೂಪಣೆಯನ್ನು ಸುಲಭವಾಗಿಸುವ ಟ್ರ್ಯಾಪ್ ಗೆ ಬಿದ್ದು ಪ್ರೇಕ್ಷಕನ ತಾಳ್ಮೆಗೆ ಸವಾಲೆಸೆಯುತ್ತಾರೆ ನಿರ್ದೇಶಕ. ಕಾಲ್ ಗರ್ಲ್ ಪಾತ್ರದಲ್ಲಿ ರಾಗಿಣಿ ದ್ವಿವೇದಿ ಲವಲವಿಕೆಯ ಪಾತ್ರ ಮಾಡಿದ್ದರೆ, ರಂಗಾಯಣ ರಘು ತಮ್ಮ ಅತಿರೇಕದ ನಟನೆಯಿಂದ ಇನ್ನಿಲ್ಲದ ಯಾತನೆ ನೀಡುತ್ತಾರೆ. ದಿಗಂತ್ ಎಂದಿನಂತೆ ಪರವಾಗಿಲ್ಲ. ಯೋಗರಾಜ್ ಭಟ ಕೂಡ ನಟನೆಯ ನಿರೀಕ್ಷೆಯನ್ನು ಹುಸಿಗೊಳಿಸಿದರೆ ಅನಂತನಾಗ್ ಅವರ ಪಾತ್ರವನ್ನು ಅತಂತ್ರಗೊಳಿಸಲಾಗಿದೆ. ಹುಚ್ಚ ವೆಂಕಟ್ ಹಾಡಿರುವ ಒಂದು ಹಾಡು ಗೀತ ರಚನೆಗಾಗಿ ಗಮನ ಸೆಳೆದರೆ ಉಳಿದ ಹಾಡುಗಳು ಮನಸ್ಸಿನಲ್ಲುಳಿಯುವುದಿಲ್ಲ. ವಿಪರೀತ ಎನ್ನುವಷ್ಟು ಎಡಿಟಿಂಗ್ ಎಷ್ಟೋ ಘಟನೆಗಳ ಪರಿಪೂರ್ಣತೆಯನ್ನು ಹಾಳುಗೆಡವಿದೆ. ಸಿನೆಮ್ಯಾಟೋಗ್ರಫಿ ಕೂಡ ಎಲ್ಲು ನಮ್ಮನ್ನು ಕಾಡುವುದಿಲ್ಲ. ಕ್ರಿಶ್ ತಮ್ಮ ಚೊಚ್ಚಲ ಪ್ರಯತ್ನದ ಉದಾತ್ತ ಆಶಯವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವುದರಲ್ಲಿ ವಿಫಲರಾಗಿದ್ದಾರೆ.
ಬಾರ್ ಎಂದರೆ ಹಾಗೆಯೇ ಸಾಮಾನ್ಯವಾಗಿ ಜನಜಂಗುಳಿಯಿಂದ ತುಂಬಿ ಸದಾ ಗಿಜಿಗುಡುವ ಮತ್ತು ಎಲ್ಲ ದಿಕ್ಕುಗಳಿಂದ ತೂರಿ ಬರುವ ಮಾತುಗಳಿಂದ ಗೊಂದಲ ಗಜಿಬಿಜಿ ವಾತಾರಣವನ್ನು ಸೃಷ್ಟಿಸುತ್ತದೆ. 'ಬಾರ್' ಕಲ್ಪನೆಯನ್ನು ಅಕ್ಷರಶಃ ಅನುಕರಿಸಲು ಹೋಗಿ ಬಾರ್ ಒಳಗೇ ಹೆಣೆದಿರುವ ಈ ಚಿತ್ರಕ್ಕೆ ಅದೇ ತೊಂದರೆ ಎದುರಾಗಿ, ವಿಪರೀತ ಪಾತ್ರಗಳು ಮತ್ತು ವಿಪರೀತ ಮಾತು ಸಿನೆಮಾವನ್ನು ಹಾಳುಗೆಡವಿದೆ.