ಸಂತು ಸ್ಟ್ರೈಟ್ ಫಾರ್ವರ್ಡ್ ಸಿನೆಮಾ ವಿಮರ್ಶೆ
'ಸ್ಟ್ರೈಟ್ ಫಾರ್ವರ್ಡ್' ಎಂಬ ಇಂಗ್ಲಿಷ್ ಪದಗುಚ್ಛಕ್ಕೆ ಗಾಂಧಿನಗರ ಹೊಸ ಅರ್ಥ ಕಲ್ಪಿಸಿದೆ. 'ತನಗೆ ತಿಳಿದದ್ದನ್ನು ಉದ್ದುದ್ದ ಸಾಲಿನ ಮಾತುಗಳ ಮೂಲಕ, ಒಂದು ವಿಭಿನ್ನ ಶೈಲಿಯಲ್ಲಿ, ಏರು ಧ್ವನಿಯಲ್ಲಿ, ಎದೆಯುಬ್ಬಿಸಿ ಅಡೆತಡೆಯಿಲ್ಲದೆ ಉಲಿಯುವುದು'. ಇದನ್ನು ಈಗಾಗಲೇ ಹಲವು ಕನ್ನಡ ಚಿತ್ರಗಳಲ್ಲಿ ನಾವು ಕಂಡಿದ್ದರು, 'ಸಂತು ಸ್ಟ್ರೈಟ್ ಫಾರ್ವರ್ಡ್' ಅದಕ್ಕೆ ಅಧಿಕೃತ ಮುದ್ರೆ ಒತ್ತಿದೆ ಅಷ್ಟೇ! ಈ ಪಂಚಿಂಗ್ ಡೈಲಾಗ್ ಗಳ ಹೊರತಾಗಿ ಪ್ರೇಕ್ಷಕನಿಗೆ ಮತ್ತೇನಾದರೂ ಸಿಗುತ್ತದೆಯೇ?
ಸರ್ವಶಕ್ತ ಸಂತು (ಯಶ್) ತಂದೆ-ತಾಯಿಗೆ ಅಚ್ಚುಮೆಚ್ಚಿನ ಮಗ. ತಂಗಿಯ ಜೊತೆಗೆ ತುಂಟ. ಸುಂದರ ಮಧ್ಯಮವರ್ಗದ ಆದರ್ಶಪ್ರಾಯ ಕುಟುಂಬ. ಟ್ರಾಫಿಕ್ ನಲ್ಲಿ ತಂದೆಯನ್ನು ಕೆಣಕಿದ ಕೆಡುಕುಗಳ ಮೈಮೂಳೆ ಪುಡಿಗುಟ್ಟುತ್ತಾನೆ. ಹಿರಿಯರನ್ನು ಗೌರವಿಸುವ ಬಗ್ಗೆ ಭಾಷಣ ಬಿಗಿಯುತ್ತಾನೆ. ತಂಗಿಯನ್ನು ರೇಗಿಸಿದವರು ಬೆದರಿ ನಡುಗುವಷ್ಟು ಚಚ್ಚಿ ನೀರಿಳಿಸುತ್ತಾನೆ. ಯುವತಿ ಅನನ್ಯಳನ್ನು (ರಾಧಿಕಾ ಪಂಡಿತ್) ಕಂಡಾಕ್ಷಣ ಪ್ರೀತಿಗೆ ಬೀಳುತ್ತಾನೆ. ಇವರಿಬ್ಬರ ನಡುವೆ ಪರಸ್ಪರ ಒಂದಷ್ಟು ಗೊಂದಲ ಮೂಡಿ ಅದು ಬಗೆಹರಿಯುವ ಹೊತ್ತಿಗೆ, ಅನನ್ಯ ಅಗಲಿರುವ ತನ್ನ ಪೋಷಕರ ಕೊನೆಯ ಆಸೆ ಪೂರೈಸಲು ಮಾವ ದೇವನನ್ನು(ಶಾಮ್) ಇಷ್ಟವಿಲ್ಲದಿದ್ದರು ಮದುವೆಯಾಗುವ ಮಾತು ನೀಡಿರುತ್ತಾಳೆ. ದೇವ್ ದೊಡ್ಡ ಡಾನ್. ಯಾರ ಮದುವೆ ಯಾರ ಜೊತೆಗಾಗುತ್ತದೆ?
ಅಸಂಖ್ಯಾತ ಮಸಾಲೆ ಚಲನಚಿತ್ರಗಳನ್ನು ನೆನಪಿಸುವ ಈ ಕಥೆಗೆ ನಟ ಯಶ್ ಅವರ ಅಂತ್ಯವಿಲ್ಲದ ಮಾತಿನ ವೈಭವದ ಲೇಪನ ಹಾಕಿ ಮತ್ತೊಂದು ಮಹಾ ಮಸಾಲೆ ಚಿತ್ರ ಮೂಡಿಸಲಾಗಿದೆ. ಇಂದಿನ ಗಾಂಧಿನಗರದ ಮಾಮೂಲಿ ಸಿನೆಮಾಗಳ ಶೈಲಿಯಲ್ಲಿಯೇ ಪ್ರಾರಂಭವಾಗುವ ಈ ಚಿತ್ರ ಒಂದು ಫೈಟ್ ನಿಂದ ಹೀರೊ ಪರಿಚಯವಾದರೆ, ಅದರಂತ್ಯಕ್ಕೆ ಒಂದು ಹಾಡು, ನಂತರ ನಾಯಕಿಯ ಪರಿಚಯ ಹೀಗೆ ಸಿದ್ಧ ಸೂತ್ರಗಳನ್ನು ತಲೆ ಮೇಲಿ ಹೊತ್ತು ಮೆರೆಯುತ್ತದೆ. ನಾಯಕನ ವಿಪರೀತ ವೈಭವೀಕರಣಕ್ಕೆ ಪೋಣಿಸಲಾದ ಘಟನೆಗಳಲ್ಲೂ ಯಾವುದೇ ವಿಭಿನ್ನತೆಯಿಲ್ಲ. ತಂಗಿಯನ್ನು ರೇಗಿಸುವುದು, ತಂದೆಯನ್ನು ಕೆಣಕುವುದು, ಪ್ರೇಯಸಿಯನ್ನು ಅವಮಾನಿಸುವುದು ಇವೇ ಕ್ಲೀಷೆಯ ಚಿತಾವಣೆಗಳೇ ನಾಯಕನ ಶೌರ್ಯ ಪ್ರದರ್ಶನಕ್ಕೆ ಕಾರಣವಾಗುವ ಘಟನೆಗಳು. ಇನ್ನು ಸಂತು ಹೊಡೆದಾಟ ಬಹಳ ಸ್ಟೈಲಿಶ್. ಆ ಆಕ್ಷನ್ ದೃಶ್ಯಗಳಲ್ಲಿ ಟೆನ್ಷನ್ ಕಾಣುವುದಿಲ್ಲ ಬದಲಾಗಿ ನಮ್ಮ ನಾಯಕ ನಟ ಸುಮ್ಮನೆ ನಡೆದುಬರುತ್ತಿದ್ದರೆ ಸಾಕು ಅವರ ತಾಕತ್ತಿಗೆ ಎಡತಾಕುವ ಕೆಡುಕು ಜೀವಿಗಳೆಲ್ಲಾ ಹಂಗಂಗೆ ಔಟ್. ಚಿತ್ರದಲ್ಲಿ ಮೂಡುವ ಒಂದು ಸಂಘರ್ಷ ಕೂಡ ಅಂತಹ ಮಹತ್ವದ್ದಾಗಲಿ ಅಥವಾ ಹೊಸತನದಿಂದಾಗಲಿ ಕೂಡಿಲ್ಲ. ಇನ್ನು ಅಂತ್ಯವನ್ನು ಊಹಿಸುವುದು ಕಷ್ಟ ಏನಿಲ್ಲ ಅಲ್ಲವೇ?
ಈ ಮಸಾಲೆ ಘಟನೆಗಳ ನಡುವೆ ಕೆಲವೊಂದು ಒಳ್ಳೆಯ ಆಶಯದ ಘಟನೆಗಳು ಇಲ್ಲವೆಂದಲ್ಲ ಆದರೆ ಅವುಗಳ ನಿರ್ವಹಣೆ ಮಾತ್ರ ಬಹಳ ಪೊಳ್ಳಾಗಿ ಮೂಡಿದೆ. ಯಾವಾಗಲೂ ಕೆಲಸದ ಚಿಂತೆಯಿಂದ ಪತ್ನಿಯ ಜೊತೆಗೆ ಅನುಚಿತವಾಗಿ ವರ್ತಿಸುವ ಸಯ್ಯದ್ ಗೆ ರೊಮ್ಯಾಂಟಿಕ್ ಪ್ರೇಮ ಪಾಠಗಳನ್ನು ಸಂತು ಹೇಳಿಕೊಡುತ್ತಾನೆ. ಆಸ್ಪತ್ರೆಯಿಲ್ಲದ ಊರಿನಲ್ಲಿ ರಾತ್ರಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆ ಹೆರಿಗೆ ನೋವಿನಿಂದ ನರಳುತ್ತಿರುವ ಮಹಿಳೆಗೆ ಧೈರ್ಯ ಹೇಳಿ, ಪತಿ ಅವಳ ಕೈಹಿಡಿಯುವಂತೆ ಮಾಡಿ, ಧೈರ್ಯ ಮೂಡಿಸಿ ವೈದ್ಯರ ಸಹಾಯವೇ ಇಲ್ಲದೆ ನೀರಿನಲ್ಲಿ ಮಗುವಿಗೆ ಜನ್ಮ ನೀಡುವಂತೆ ಮಾಡಲು ಸಹಕರಿಸುತ್ತಾನೆ. ಹೀಗೆ ಒಳ್ಳೆಯ ಆಶಯವಿರುವ ಘಟನೆಗಳು ಅಲ್ಲೊಂದು ಇಲ್ಲೊಂದು ಸೇರಿದ್ದರು, ಅದನ್ನು ನಿರ್ವಹಿಸಿರುವ ರೀತಿ ಬೇಸರ ಮೂಡಿಸುತ್ತದೆ. ಸಯ್ಯದ್ ಗೆ ಪ್ರೇಮ ಪಾಠ ಹೇಳುವಾಗ ಅರ್ಥವಿಲ್ಲದ 'ಗಂಡಸ್ತನ'ದ ಮಾತುಗಳನ್ನಾಡುವ ನಾಯಕನ ಅತಿ ವೈಭವೀಕರಣ ಸಿಲ್ಲಿ ಎಂದೆನಿಸದೆ ಇರದು. ಇಡೀ ಚಿತ್ರದ ಟೋನ್ ಅಲ್ಲಲ್ಲಿ ಹಾಸ್ಯಮಯ ಮತ್ತು ಹೀರೊ ವೈಭವೀಕರಣದಿಂದ ತುಂಬಿ ಹೋಗಿದ್ದು, ಹಾಸ್ಯದ ಭಾಗ ಎಲ್ಲ ಪ್ರೇಕ್ಷಕರಿಗೂ ಕೆಲವೊಮ್ಮೆ ಕಚಗುಳಿಯಿಡಲು ಯಶಸ್ವಿಯಾಗಿದ್ದರು, ಹಿರೋಯಿಸಂ ಭಾಗ ಯಶ್ ಕಟ್ಟಾ ಅಭಿಮಾನಿಗಳ ಶಿಳ್ಳೆಗೆ-ಕಿರುಚಾಟದ ಸಂಭ್ರಮಕ್ಕೆ ಹೇಳಿಮಾಡಿಸಿದಂತಿದೆ.
ಬಹುತೇಕ ಎಲ್ಲ ಫ್ರೇಮ್ ಗಳಲ್ಲಿ ಕಾಣಿಸಿಕೊಂಡು ಇಡೀ ಸ್ಕ್ರೀನ್ ಸಮಯವನ್ನು ಆವರಿಸಿಕೊಂಡಿರುವ ಯಶ್ ತಮ್ಮ ಶೈಲಿಯ ನಟನೆಯಿಂದ ಅವರ ಅಭಿಮಾನಿಗಳಿಗೆ ಹುಚ್ಚೆಬ್ಬಿಸುವಂತೆ ಕಾಯ್ದುಕೊಂಡಿದ್ದಾರೆ. ನಾಯಕ ನಟಿ ರಾಧಿಕಾ ಪಂಡಿತ್ ಕೂಡ ಚೊಕ್ಕವಾಗಿ ನಟಿಸಿದ್ದಾರೆ, ದೇವರಾಜ್, ಅನಂತನಾಗ್ ಇನ್ನಿತರ ಪೋಷಕ ವರ್ಗ ಸಣ್ಣ ಪಾತ್ರಗಳಲ್ಲಿ ಎಂದಿನ ಚೊಕ್ಕವಾದ ಅಭಿನಯ ನೀಡಿದೆ. ವಿ ಹರಿಕೃಷ್ಣ ಸಂಗೀತದಲ್ಲಿ ಮೂಡಿರುವ ಹಾಡುಗಳು ಹೀರೊ ವೈಭವೀಕರಣಕ್ಕೆ ಇನ್ನಷ್ಟು ಸಾಥ್ ನೀಡಿವೆ. ಒಂದಷ್ಟು ಘಟನೆಗಳನ್ನು ತೆಗೆದುಹಾಕುವ ಜಾಣ್ಮೆ ತೋರಿದ್ದರೆ ಪ್ರೇಕ್ಷಕನಿಗೆ ಇನ್ನಷ್ಟು ನಿರಾಳವಾಗುತ್ತಿತ್ತೇನೋ. ಕೇವಲ ಪಂಚಿಂಗ್ ಸಂಭಾಷಣೆಯಷ್ಟೇ ಅಲ್ಲದೆ ಒಂದಷ್ಟು ಸಾಮಾನ್ಯ-ಅರ್ಥಪೂರ್ಣ ಸಂಭಾಷಣೆಯನ್ನು ಸೇರಿಸಿದ್ದರೆ ಎಲ್ಲರಿಗೂ ಒಂದಷ್ಟು ಆಪ್ತವಾಗುತ್ತಿತ್ತೇನೋ!
ಯಶ್ ಮತ್ತು ಅವರ ಶೈಲಿಯ ಸಂಭಾಷಣೆ ಇದ್ದರೆ ಗಟ್ಟಿ ಕಥೆಯ ಅಥವಾ ಗಟ್ಟಿ ಸಂಘರ್ಷದ ಹಂಗೇಕೆ ಎಂಬ ನಿಲುವು ತಳೆದಂತೆ ಕಾಣುವ ನಿರ್ದೇಶಕ ಮಹೇಶ್ ರಾವ್, ಹೀರೋನ ಅಭಿಮಾನಿಗಳಿಗೆ ಇಷ್ಟವಾಗುವ, ಗಂಭೀರ ಸಿನೆಮಾ ರಸಿಕರಿಗೆ ನಿರಾಸೆ ಮೂಡಿಸುವ ಸಿನೆಮಾವನ್ನು ಸೀದಾಸಾದವಾಗಿ ನಿರೂಪಿಸಿ ಮುಂದಿಟ್ಟಿದ್ದಾರೆ. ಗಾಂಧಿನಗರದ ಸಿನೆಮಾ ಸಂತೆಯಲ್ಲಿ ಮೂಡಿರುವ ಇನ್ನೊಬ್ಬ ಸಂತು ಅಷ್ಟೇ!