ಕಾಟ್ರು ವೇಳಿಯಿದೈ ಸಿನಿಮಾ ವಿಮರ್ಶೆ
ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಸಿನೆಮಾಗಳ ಬಗ್ಗೆ ದಕ್ಷಿಣ ಭಾರತದಲ್ಲಷ್ಟೇ ಅಲ್ಲ ಇಡೀ ಭಾರತದಾದ್ಯಂತ ಸಿನಿಮಾಪ್ರಿಯರ ನಡುವೆ ಸಹಜ ಕುತೂಹಲ ಇರುತ್ತದೆ. ಭಿನ್ನ ವಿಷಯಗಳನ್ನು ಮುಖ್ಯವಾಹಿನಿಯ ಸಿನೆಮಾ ಚೌಕಟ್ಟಿನಲ್ಲಿ ನಿಭಾಯಿಸುವ ಮಣಿರತ್ನಂ ಈಗ ಕಾರ್ಗಿಲ್ ಯುದ್ಧದ ಹಿನ್ನಲೆಯಲ್ಲಿ ಪ್ರೇಮಕಥೆಯೊಂದನ್ನು ಹೇಳಿರುವ 'ಕಾಟ್ರ ವೇಳಿಯಿದೈ' (ತಂಗಾಳಿ ಬೀಸುತಿದೆ) ಇಂದು ಬಿಡುಗಡೆಯಾಗಿದೆ.
ಏರ್ ಫೋರ್ಸ್ ನಲ್ಲಿ ಫೈಟರ್ ಜೆಟ್ ಪೈಲಟ್-ಯೋಧ ವರುಣ್ (ಕಾರ್ತಿ), ತನ್ನ ಗೆಳತಿ ಗಿರಿಜಾಳೊಂದಿಗೆ (ಶ್ರದ್ಧಾ ಶ್ರೀನಾಥ್) ಜಾಲಿ ಪ್ರವಾಸದಲ್ಲಿರುವಾಗ ಅಪಘಾತಕ್ಕೆ ತುತ್ತಾಗುತ್ತಾನೆ. ಶ್ರೀನಗರದ ಆಸ್ಪತ್ರೆಯಲ್ಲೇ ಅಂದೇ ಕೆಲಸಕ್ಕೆ ಸೇರಲು ಬಂದಿರುವ ಲೀಲಾ ಅಬ್ರಹಾಂ (ಅದಿತಿ ರಾವ್ ಹೈದರಿ) ಆರೈಕೆಯಲ್ಲಿ ವರುಣ್ ಚೇತರಿಸಿಕೊಳ್ಳುತ್ತಾನೆ. ವರುಣ್ ಮತ್ತು ಲೀಲಾ ನಡುವೆ ಪ್ರೇಮ ಅರಳುತ್ತದೆ. ನಂತರ ಅವರ ಸಂಬಂಧದಲ್ಲಿ ಏರುಪೇರುಗಳಾಗುತ್ತವೆ. ಈ ಏರುಪೇರುಗಳ ನಡುವೆಯೂ ಪ್ರೀತಿ ಉಳಿದುಕೊಳ್ಳುವುದು ಹೇಗೆ?
ಮುಖ್ಯವಾಹಿನಿ ಚೌಕಟ್ಟಿನಿಂದ ಹೊರಬರಲು ಹೆದರುವ ಅಥವಾ ಹಲವು ಲೆಕ್ಕಾಚಾರಗಳಿಂದ ಅದರಲ್ಲೇ ಉಳಿಯಲಿಚ್ಛಿಸುವ ನಿರ್ದೇಶಕರು ಎದುರಿಸುವ ತೊಂದರೆಗಳು, ಮಣಿರತ್ನಂ ಅವರ ಈ ಸಿನೆಮಾದಲ್ಲಿ ಧಾರಾಳವಾಗಿ ಕಾಣಸಿಗುತ್ತವೆ. ಸುಂದರ ಪರಿಸರದಲ್ಲಿ ಜರುಗುವ ಸರಳ ಪ್ರೇಮಕಥೆಗೆ, ಹಿನ್ನಲೆಯಲ್ಲಿ ಆಯ್ಕೆ ಮಾಡಿಕೊಂಡಿರುವ ಕಾರ್ಗಿಲ್ ಯುದ್ಧದ ವಿಷಯದ ಬಗ್ಗೆ ನಿರ್ದೇಶಕನಿಗೆ ಕಾಳಜಿಯೇ ಇಲ್ಲ. ಅದು ಹೆಸರಿಗೆ ಮಾತ್ರ. ಯುದ್ಧದಲ್ಲಿ ಹೆಲಿಕ್ಯಾಪ್ಟರ್ ಪತನವಾಗಿ ಉಳಿದುಕೊಂಡು ಬಂಧಿತನಾಗುವ ವರುಣ್ ತನ್ನ ಹಿಂದಿನ ಕಥೆಯನ್ನು ನೆನಪಿಸಿಕೊಳ್ಳುತ್ತಿದ್ದಾನೆ. ವರುಣ್ ಸಿಕ್ಕಿಹಾಕಿಕೊಂಡು ಯುದ್ಧ ಖೈದಿಯಾಗುವುದು, ಜೈಲಿನಿಂದ ಸುರಂಗ ಕೊರೆದು ತಪ್ಪಿಸಿಕೊಳ್ಳುವುದು, ಆಫ್ಘಾನಿಸ್ಥಾನಕ್ಕೆ ಪ್ರಯಾಣ ಬೆಳೆಸುವುದು (ಸಿನೆಮಾದ ದ್ವಿತೀಯ ಭಾಗದಲ್ಲಿ) ಈ ದೃಶ್ಯಗಳನ್ನು ಬಹಳ ಜಾಳು ಜಾಳಾಗಿ, ವಿವರಗಳೇ ಇಲ್ಲದೆ, ಅವಸರವಾಗಿ ಕಟ್ಟಿಕೊಡುವುದು ಪ್ರೇಕ್ಷಕರಿಗೆ ನಿರಾಶೆ ಮೂಡಿಸುತ್ತದೆ.
ಇನ್ನು ಮುನ್ನಲೆಯಲ್ಲಿ ಹೇಳ ಹೊರಟಿರುವ ಕಥೆ ಕೂಡ ವಿಭಿನ್ನವಾದ್ದು ಅಥವಾ ಅದರಲ್ಲಿನ ಸಂಘರ್ಷ ಹೊಸದು, ತಾಜಾತನದಿಂದ ಕೂಡಿದೆ ಎಂತಲೂ ಇಲ್ಲ. ಹಿರಿಯ ಅಧಿಕಾರಿಯಾಗಿರುವ ವರುಣ್, ಲೀಲಾಳನ್ನು ತೀವ್ರವಾಗಿ ಪ್ರೀತಿಸಿದರೂ, ಪುರುಷ ಅಹಂಕಾರ ಮಾತ್ರ ಇವನನ್ನು ಬಿಡಲೊಲ್ಲದು. ಇದರಿಂದ ಲೀಲಾಳಿಗೆ ದೈಹಿಕವಾಗಿ ಹಾಗು ಮಾನಸಿಕವಾಗಿ ಹಿಂಸೆ ನೀಡುವುದು, ಅವಮಾನಿಸುವುದು ನಡೆಯುತ್ತಲೇ ಇರುತ್ತದೆ. ಇಬ್ಬರು ಆಗಾಗ ದೂರವಾಗಿ ಮತ್ತೆ ಒಂದಾಗುತ್ತಿರುತ್ತಾರೆ. ಪ್ರೇಮ ಎಂಬುದು ತರ್ಕಕ್ಕೆ ಸಿಲುಕದ ಉದಾತ್ತ ಭಾವನೆ ಎಂಬುದನ್ನು ಹಿಡಿಯಲು ನಿರ್ದೇಶಕ ಇಲ್ಲಿ ಬಯಸಿದ್ದರೂ, ವರುಣ್ ಪಾತ್ರಪೋಷಣೆ ಅಥವಾ ಅವನ ಸುತ್ತ ಕಟ್ಟಿಕೊಡುವ ಘಟನೆಗಳು ಅವನನ್ನು ನ್ಯುರಾಟಿಕ್ (ಮನೋರೋಗಿ) ರೀತಿಯಲ್ಲಿ ಕಾಣಿಸುವಂತೆ ಮಾಡುತ್ತಾರೆ. ಅವನು ಬೆಳೆದು ಬಂದ ಕುಟುಂಬದ ದರ್ಶನವನ್ನು ಕೆಲವು ನಿಮಿಷಗಳವರೆಗೆ ಒಂದು ಅಸಹಜ ಹಾಡಿನ ಮೂಲಕ ಕಟ್ಟಿಕೊಡುತ್ತಾರೆ. ಬೆಳೆದು ಬಂದ ವಾತಾವರಣ, ಅಥವಾ ನಾಯಕ ನಟ ವಾಸಿಸುತ್ತಿರುವ ಯುದ್ಧದ ವಾತಾವರಣ ಅವನ ಈ ಮಾನಸಿಕ ಸ್ಥಿತಿಗೆ ಕಾರಣವಿರಬಹುದೇ ಎಂಬ ಪ್ರಶೆಗಳನ್ನು ಕೇಳಿಕೊಳ್ಳುವಂತೆ ಪ್ರೇಕ್ಷಕನಿಗೆ ಉತ್ತೇಜಿಸಿದರು, ಕಥೆಗಾರ-ನಿರ್ದೇಶಕ ನಾಯಕನಟನ ಅಂತಹ ವರ್ತನೆಗೆ ವಿರೋಧವಾಗಿ ಅಭಿಪ್ರಾಯಗಳನ್ನು, ಸನ್ನಿವೇಶಗಳನ್ನು ಗಟ್ಟಿಯಾಗಿ ಕಟ್ಟಿಕೊಡದೆ, ಅಥವಾ ಯುದ್ಧದ ಹಿನ್ನಲೆಯಲ್ಲಿ ವರುಣ್ ನನ್ನು ಹಿರೋಯಿಕ್ ಆಗಿ ತೋರಿಸುವದರಿಂದಲೋ ಏನೋ, ಪಾತ್ರಕ್ಕೆ ಖಚಿತವಾದ ಆಯಾಮವನ್ನು ಒದಗಿಸಲು ಸಾಧ್ಯವಾಗಿಲ್ಲ. ಯಾವುದೇ ವ್ಯಕ್ತಿ ಅಷ್ಟು ಸುಲಭಕ್ಕೆ ಬಿಡಿಸಲಾಗದ ವಿಭಿನ್ನ ಮನಸ್ಥಿತಿಗಳ ಆಗರವಾದರೂ ಕಥೆಗಾರನಾಗಿ ಇನ್ನಷ್ಟು ಸಂಕೀರ್ಣವಾಗಿ-ಗಹನವಾಗಿ ಪಾತ್ರಗಳನ್ನೂ ಕಡೆದು ನಿಲ್ಲಿಸಬಹುದಾಗಿದ್ದ ಸಾಧ್ಯತೆಯನ್ನು ನಿರ್ದೇಶಕ ಕೈಚೆಲ್ಲುತ್ತಾರೆ.
ಎಲ್ಲದ್ದಕ್ಕೂ ಮುಖ್ಯವಾಗಿ ಅಂತ್ಯದಲ್ಲಿ ತನ್ನೆಲ್ಲಾ ಕೋಪ, ಅಹಂಕಾರವನ್ನು ಕಳೆದುಕೊಂಡೆ ಎಂದು ಹೇಳಿಕೊಳ್ಳುವ ವರುಣ್ ಅವರ ಈ ಬದಲಾವಣೆಯನ್ನು ಕಥೆಯಲ್ಲಾಗಲಿ, ದೃಶ್ಯಗಳಲ್ಲಾಗಲಿ, ಭಾವನೆಗಳಲ್ಲಾಗಲಿ ಕಟ್ಟಿಕೊಡದೆ ಬರೀ ಸಂಭಾಷಣೆಯಲ್ಲಿ ಮಾತ್ರ ಮುಗಿಸಿಬಿಡುತ್ತಾರೆ ನಿರ್ದೇಶಕ. ಹಾಗು ನಾಯಕನಟನ ಈ ದುರ್ಗಣಗಳಿಗೆ ಎಲ್ಲಯೂ ಮಣ್ಣುಮುಕ್ಕಿಸದೆ/ಸೋಲಿಸದೆ ಬಹಳ ಅನ್-ಕನ್ವಿನ್ಸಿಂಗ್ ಎನ್ನುವಂತೆ ಇಡೀ ಸಿನೆಮಾ ಪ್ರೇಕ್ಷಕನಿಗೆ ದಕ್ಕುತ್ತದೆ.
ಎರಡು ವರೆ ಘಂಟೆಗಳಿಗೂ ಹೆಚ್ಚು ಅವಧಿಯ ಈ ಸಿನೆಮಾದಲ್ಲಿ, ಹೆಣೆದಿರುವ ವಿವಿಧ ಘಟನೆಗಳು ಕೂಡ ಎಲ್ಲೂ ಅಪ್ಯಾಯಮಾನವಾಗಿ ಮೂಡಿಲ್ಲ. ಏರ್ ಫೋರ್ಸ್ ಅಧಿಕಾರಿಗಳ ಪಾರ್ಟಿಗಳನ್ನಷ್ಟೇ ಕಟ್ಟಿಕೊಡುವ ನಿರ್ದೇಶಕ ಅವರ ಜೀವನದ ಇತರ ಭೀಕರ ಆಯಾಮಗಳ ಕಡೆಗೆ ಗಮನ ಹರಿಸುವುದೇ ಇಲ್ಲ. ನಾಯಕನ ಮೂರ್ತ ಸ್ವರೂಪಕ್ಕೆ ಇವುಗಳ ಅವಶ್ಯಕತೆ ಹೆಚ್ಚಿತ್ತೇನೋ! ಶ್ರೀನಗರದ ಸುಂದರ ಪರಿಸರ, ಹಿಮ ತುಂಬಿದ ಬೆಟ್ಟಗಳ ನಡುವೆ ಅಲ್ಲಿ ನೆಲೆಸಿರುವ ಕ್ಷೋಭೆಯ ಲವಶೇಷವು ನಮಗೆ ಕಾಣಸಿಗುವುದಿಲ್ಲ. ಹೀಗೆ ಒಂದು ಅಸಂಗತ ಮಾದರಿಯಲ್ಲೇ ಕಟ್ಟಿಕೊಟ್ಟಿರುವ ಸಿನೆಮಾ ಹಲವು ಘಟ್ಟಗಳಲ್ಲಿ ಜಗ್ಗಿದಂತೆ ಭಾಸವಾಗಿ ಬೀಸುತ್ತಿರುವ ತಂಗಾಳಿ ಕೊರೆಯುವ ಅನುಭವ ನೀಡುತ್ತದೆ.
ನಟನೆಯಲ್ಲಿ ಅದಿತಿ ರಾವ್ ಹೈದರಿ ಗಮನಸೆಳೆದರೂ, ಹೀರೋನ ವೈಪರೀತ್ಯ ಗುಣಗಳಿಗೆ ಎದುರಾಗಿ ಇನ್ನು ಗಟ್ಟಿಯಾಗಿ ಈ ಪಾತ್ರವನ್ನು ಕಟ್ಟಿಕೊಡಬಹುದಿತ್ತು ಎನ್ನುವ ಭಾವನೆ ಉಳಿದುಕೊಳ್ಳುತ್ತದೆ. ಅದಕ್ಕೆ ತದ್ವಿರುದ್ಧವಾಗಿ, ಕಾರ್ತಿ ನಟನೆಯಲ್ಲಿ ಬೇಕಿದ್ದ ಭಾವನೆಗಳು ಕಾಣೆಯಾಗುತ್ತವೆ. ಕಾಶ್ಮೀರದ ಸುಂದರ ಪರಿಸರವನ್ನು ಸೆರೆ ಹಿಡಿಯುವಲ್ಲಿ ರವಿ ವರ್ಮನ್ ಕ್ಯಾಮಾರ ಕೆಲಸ ಮಾಡಿದೆ. ಸಿನೆಮಾ ಮುಗಿಯುತ್ತಲೇ ಇಲ್ಲವೆಲ್ಲ ಎಂಬ ಭಾವನೆಗೆ ಎ ಆರ್ ರಹಮಾನ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಮತ್ತು ಅಲ್ಲಲ್ಲಿ ದುತ್ತೆಂದು ಎದುರರಾಗುವ ನೃತ್ಯಗಳು ತಮ್ಮ ಕೊಡುಗೆಯನ್ನು ನೀಡಿ, ಅಷ್ಟೇನೂ ಮೋಡಿ ಮಾಡದೆ ನಿರಾಶೆಯನ್ನು ಹೆಚ್ಚಿಸುತ್ತವೆ.
ಪ್ರೀತಿ ಎಂಬುದು ತರ್ಕಕ್ಕೆ ಸಿಗದ ಮಧುರ-ಉದಾತ್ತ-ಆಪ್ತ ಭಾವನೆ ಎಂಬುದನ್ನು ಕಟ್ಟಿಕೊಡಲು ಸರಳ ಕಥೆಯೊಂದನ್ನು ಹೆಣೆದು, ಅದಕ್ಕೆ ಅದಕ್ಕೂ ಮಿಗಿಲಾದ ಸರಳವಾದ ಸಂಘರ್ಷವನ್ನು ಮೂಡಿಸಿ, ಹಿನ್ನಲೆಯಲ್ಲಿ ಯುದ್ಧದ ಸನ್ನಿವೇಶವನ್ನು ಅಳವಡಿಸಿಕೊಂಡು ಆದರೆ ಅದಕ್ಕೆ ಯಾವುದೇ ನ್ಯಾಯ ಒದಗಿಸದೆ ಬಹಳ ಅವಸರದಲ್ಲಿ ಮಾಡಿಮುಗಿಸರುವಂತೆ ಕಾಣುವ ಮಣಿರತ್ನಂ ಅವರ ಈ ಸಿನೆಮಾದಲ್ಲಿ, ಶ್ರೀನಗರ ಹಿಮಕವಿದ ಪರಿಸರವನ್ನು ಹೊರತುಪಡಿಸಿದರೆ ಪ್ರೇಕ್ಷಕರನ್ನು ಕಾಡುವಂತಹ ಮತ್ಯಾವುದೇ ಗಟ್ಟಿ ಸಂಗತಿಗಳು ಇಲ್ಲ.