ಸಿನಿಮಾ ಪೋಸ್ಟರ್ 
ಸಿನಿಮಾ ವಿಮರ್ಶೆ

ಪಾಪ್ಯುಲರ್ ಸಿನಿಮಾ ಆಸೆಗೆ ಬಲಿಯಾಯಿತೇ ಗ್ರೇಟ್ ಕಥಾವಸ್ತು: ಜೈಭೀಮ್ ಚಿತ್ರ ವಿಮರ್ಶೆ 

ಶೋಷಿತ ವರ್ಗದ ಮೇಲಾದ ಅನ್ಯಾಯ, ಸಾಮಾಜಿಕ ವ್ಯವಸ್ಥೆಯಲ್ಲಿನ ಲೋಪ ಈ ವಿಚಾರಗಳ ಮೇಲೆ ಜೈ ಭೀಮ್ ಬೆಳಕು ಚೆಲ್ಲುತ್ತದೆ ಎನ್ನುವುದೆಲ್ಲಾ ಸರಿ. ಅದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ತೆರೆ ಮೇಲೆ ತೋರ್ಪಡಿಸಿರುವ ರೀತಿಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ಲೈಫ್ ಈಸ್ ನಾಟ್ ಬ್ಲ್ಯಾಕ್ ಅಂಡ್ ವೈಟ್, it's also grey.

ವಿಮರ್ಶೆ: ಹರ್ಷವರ್ಧನ್ ಸುಳ್ಯ

ಸಿನಿಮಾ ಪ್ರಪಂಚದಲ್ಲಿ ಕೋರ್ಟ್ ರೂಮ್ ಡ್ರಾಮಾ ಸಿನಿಮಾ ಪ್ರಕಾರಗಳಿಗೆ ವಿಶೇಷ ಸ್ಥಾನವಿದೆ. 12 ಆಂಗ್ರಿ ಯಂಗ್ ಮೆನ್, ಟು ಕಿಲ್ ಎ ಮಾಕಿಂಗ್ ಬರ್ಡ್, ಇನ್ಹೆರಿಟ್ ದಿ ವಿಂಡ್, ಪಾಲ್ ನ್ಯೂಮನ್ ನಟಿಸಿದ ದಿ ವರ್ಡಿಕ್ಟ್, ಮೈ ಕಸಿನ್ ವಿನ್ನಿ, ಅ ಫ್ಯು ಗುಡ್ ಮೆನ್ ಮೊದಲ ಸಾಲಿನಲ್ಲಿ ನೆನಪಾಗುವ ಕೋರ್ಟ್ ರೂಮ್ ಡ್ರಾಮಾ ಸಿನಿಮಾಗಳು. ಬಾಲಿವುಡ್ ನಲ್ಲಿ ಈ ಸಿನಿಮಾ ಪ್ರಕಾರ ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಗಳಿಸುತ್ತಿರುವುದನ್ನು ಕಾಣಬಹುದು. ಓ ಮೈ ಗಾಡ್, ಜಾಲಿ ಎಲ್ ಎಲ್ ಬಿ ಸಿನಿಮಾ ಸರಣಿ, ಪಿಂಕ್, ಮುಲ್ಕ್, ಸೆಕ್ಷನ್ 375 ಮತ್ತು ಇತ್ತೀಚಿನ ಚೆಹರೆ ಸಿನಿಮಾ ಕೂಡಾ ಕೋರ್ಟ್ ರೂಮ್ ಡ್ರಾಮಾ ಪ್ರಕಾರಕ್ಕೆ ಸೇರುತ್ತದೆ. ಕನ್ನಡದಲ್ಲಿ ಇತ್ತೀಚಿಗೆ ತೆರೆಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ರವಿಚಂದ್ರನ್ ಅವರ 2012ರ ದಶಮುಖ ಸಿನಿಮಾ, ಅಷ್ಟೇ ಯಾಕೆ ರಾಜ ಕುಮಾರ್ ಅಭಿನಯದ ಧ್ರುವ ತಾರೆ, ವಿಷ್ಣುವರ್ಧನ್ ಅಭಿನಯದ ಲಯನ್ ಜಗಪತಿ ರಾವ್ ಎಲ್ಲವೂ ಕೋರ್ಟ್ ರೂಮ್ ಡ್ರಾಮಾ ಇರುವ ಸಿನಿಮಾಗಳೇ. 

ಇತ್ತೀಚಿನ ವರ್ಷಗಳಲ್ಲಿ ಈ ಪ್ರಕಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ಹಾಗೂ ಸಮರ್ಥವಾಗಿ ತೆರೆ ಮೇಲೆ ತೋರಿಸಿದ ಸಿನಿಮಾ 2014ರ ಮರಾಠಿ ಸಿನಿಮಾ ಚೈತನ್ಯ ತಮ್ಹಾನೆ ನಿರ್ದೇಶನದ 'ಕೋರ್ಟ್'. ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳನ್ನು ಕೋರ್ಟ್ ಸಿನಿಮಾ ಮನಮುಟ್ಟುವಂತೆ ಸೆರೆ ಹಿಡಿದಿತ್ತು. ಹಾಗೆ ನೋಡಿದರೆ ಮೇಲೆ ಹೇಳಲಾದ ಯಾವ ಬಾಲಿವುಡ್ ಸಿನಿಮಾಗಳು ಕೂಡಾ 'ಕೋರ್ಟ್' ಸನಿಹಕ್ಕೆ ಸುಳಿಯದು. ಅಂಥದ್ದೇ ಹೋಲಿಕೆಯನ್ನು ಸೂರ್ಯ ನಟಿಸಿ ನಿರ್ಮಾಣ ಮಾಡಿರುವ, ಟಿ.ಜೆ ಗ್ನಾನವೇಲು ನಿರ್ದೇಶನದ ಜೈ ಭೀಮ್ ಸಿನಿಮಾಗೂ ಮಾಡಬಹುದು. ಜೈ ಭೀಮ್ ಸಿನಿಮಾ ಈ ಮೇಲೆ ವಿವರಿಸಲಾದ ಜನಪ್ರಿಯ(ಪಾಪ್ಯುಲರ್) ಸಿನಿಮಾಗಳ ಸಾಲಿಗೆ ಸೇರುತ್ತದೆಯೇ ಹೊರತು 'ಕೋರ್ಟ್' ಸಿನಿಮಾ ಸಾಲಿಗೆ ಸೇರುವುದಿಲ್ಲ. 

ಆರ್ಟ್ ವರ್ಸಸ್ ಮಾಸ್ ಸಿನಿಮಾ ಎನ್ನುವ ಕಾದಾಟಕ್ಕೆ ಬೀಳದೆ, ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಗ್ರೇಟ್ ಎನ್ನಿಸಿಕೊಳ್ಳಬಹುದಾಗಿದ್ದ ಜೈ ಭೀಮ್ ಸಿನಿಮಾ ಗುಡ್ ಎನ್ನಿಸಿಕೊಂಡಿದೆ ಎಂದು ಹೇಳಬಹುದು. ಹಾಗೆಂದ ಮಾತ್ರಕ್ಕೆ ಈ ಮಾತನ್ನು ನಕಾರಾತ್ಮಕವಾಗಿ ಪರಿಗಣಿಸಬೇಕೆಂದಿಲ್ಲ. ಸಿನಿಮಾ ತಂಡ 'ಗುಡ್'ಗೆ ತೃಪ್ತರಾಗಿರುವುದು ಉದ್ದೇಶಪೂರ್ವಕವೂ ಹೌದು. ಸೂರ್ಯ ಅವರಂಥ ಮುಖ್ಯವಾಹಿನಿಯ ಮಾಸ್ ಹೀರೋಗಳು ಈ ಬಗೆಯ ಸಿನಿಮಾಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡಾಗ ಹಲವು ಕಾಂಪ್ರಮೈಸ್ ಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸಿನಿಮಾದ 'ರೀಚ್', ಅಂದರೆ ಹೆಚ್ಚು ಹೆಚ್ಚು ಜನರನ್ನು ತಲುಪುವ ಉದ್ದೇಶವೂ ಅದರ ಹಿಂದಿರುತ್ತದೆ. ಈ ಕಾಂಪ್ರಮೈಸ್ ಗಳನ್ನು ಮಾಡಿಕೊಂಡಿದ್ದರಿಂದಾಗಿಯೇ ಇಂದು ಈ ಸಿನಿಮಾ ಈ ಪರಿ ಜನಪ್ರಿಯತೆ ಗಳಿಸುತ್ತಿದೆ ಎನ್ನುವುದೂ ಸುಳ್ಳಲ್ಲ. ಜನಪ್ರಿಯತೆ ಮೇಲಿನ ಆಸೆಗಾಗಿ ಕಥಾವಸ್ತುವಿಗೆ ಸಿಗಬೇಕಾದ ನ್ಯಾಯ ಒದಗಿಸದೇ ಇರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಮಾತ್ರ ಮಿಲಿಯನ್ ಡಾಲರ್ ಯಕ್ಷ ಪ್ರಶ್ನೆ.

ಆನ್ ಲೈನ್ ಪ್ರಪಂಚದಲ್ಲಿ ಸದ್ದು ಮಾಡುತ್ತಿರುವ ಜೈ ಭೀಮ್ ಸಿನಿಮಾ ತಮಿಳುನಾಡಿನ ದಮನಿತ ವರ್ಗವಾದ ಇರುಳರನ್ನು ಕುರಿತ ನೈಜ ಘಟನೆಯನ್ನಾಧರಿಸಿದೆ. ಪರಿಶಿಷ್ಟ ಪಂಗಡವಾದ ಇರುಳರು ತಮಿಳುನಾಡು ಮಾತ್ರವಲ್ಲದೆ ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲೂ ನೆಲೆಸಿದ್ದಾರೆ. ಅನಾದಿ ಕಾಲದಿಂದಲೂ ಸಾಮಾಜಿಕ ಶೋಷಣೆಗೆ ಒಳಗಾಗಿರುವ ಇರುಳರ ಜೀವನದ ಮೇಲೆ ಬೆಳಕು ಚೆಲ್ಲುವ ಚಿಕ್ಕ ಪ್ರಯತ್ನವನ್ನು ಜೈ ಭೀಮ್ ಮಾಡಿದೆ ಎನ್ನುವುದು ಸೂರ್ಯ ನಿರ್ಮಾಣದ ಈ ಸಿನಿಮಾದ ಹೆಗ್ಗಳಿಕೆ. 'ಚಿಕ್ಕ ಪ್ರಯತ್ನ' ಎನ್ನುವುದು ಈ ಸಿನಿಮಾಗೆ ಅಂಟಿಕೊಂಡಿರುವ ಅಪವಾದವೂ ಆಗಿದೆ ಎನ್ನುವುದು ವಿಪರ್ಯಾಸ.

ಜೈಭೀಮ್ ಸಿನಿಮಾ 90ರ ದಶಕದಲ್ಲಿ ನಡೆದ ನೈಜಘಟನೆಯನ್ನಾಧರಿಸಿದ್ದು. ರಾಜಾ ಕಣ್ಣು ಎಂಬಾತ ಇರುಳ ಸಮುದಾಯಕ್ಕೆ ಸೇರಿದ ವ್ಯಕ್ತಿ. ಅವನ ಪುಟ್ಟ ಸಂಸಾರ ಮತ್ತು ಜೀವನದ ಸುತ್ತ ಚಿತ್ರದ ಕಥೆ ಸಾಗುತ್ತದೆ. ಅವನು ದಿನಗೂಲಿ ಕೆಲಸದ ಜೊತೆಗೆ ಊರಲ್ಲಿ ಯಾರದಾದರೂ ಮನೆಯೊಳಗೆ ಹಾವು ನುಗ್ಗಿದರೆ ಅದನ್ನು ಹಿಡಿಯುವ ಕೆಲಸವನ್ನು ಉಚಿತವಾಗಿ ಮಾಡುತ್ತಿರುತ್ತಾನೆ. ಹೀಗಿರುವಾಗ ಊರಿನ ಧಣಿಗಳ ಮನೆಯಲ್ಲಿ ಕಳ್ಳತನವಾಗುತ್ತದೆ. ತನಿಖೆ ಸಮಯದಲ್ಲಿ ಮನೆಯ ಯಜಮಾನತಿ ರಾಜಾ ಕಣ್ಣುವಿನ ಮೇಲೆ ಸಂಶಯ ವ್ಯಕ್ತ ಪಡಿಸುತ್ತಾಳೆ. ಅದೇ ಮನೆಯಲ್ಲಿ ರಾಜಾ ಕಣ್ಣು ಹಾವು ಹಿಡಿಯಲೆಂದು ಕೆಲ ದಿನಗಳ ಹಿಂದೆ ಬಂದಿರುತ್ತಾನೆ. ಪೊಲೀಸರಿಗೆ ಅಷ್ಟು ನೆವ ಸಾಕಾಗುತ್ತದೆ ಅವನ ಕುಟುಂಬದ ಹಿಂದೆ ಬೀಳಲು. ಇದೇ ಸಿನಿಮಾ ಚಿತ್ರಕಥೆಯ inciting incident. ಅಂದರೆ ಇಡೀ ಸಿನಿಮಾ ಕಥೆಯಲ್ಲಿ ಪ್ರೇಕ್ಷಕನನ್ನು ಉದ್ದೀಪಿಸಿ ಕುಳ್ಳಿರಿಸುವ ಸಕಾರಣ.

ಆದರೆ ರಾಜಾ ಕಣ್ಣು ಊರಲ್ಲಿರುವುದಿಲ್ಲ. ಇಟ್ಟಿಗೆ ಮನೆ ಕಟ್ಟಿಸುವ ಕನಸನ್ನು ನನಸಾಗಿಸಲು ಪರವೂರಿಗೆ ಗಾರೆ ಕೆಲಸಕ್ಕೆ ಹೋಗಿರುತ್ತಾನೆ. ತನ್ನ ಇರುವಿಕೆ ಬಗೆಗೆ ಯಾರಲ್ಲಿಯೂ ಮಾಹಿತಿ ನೀಡಲೂ ಇಲ್ಲ. ಹೀಗಾಗಿ ಪೊಲೀಸರಿಗೆ ಆತ ಸಿಗುವುದಿಲ್ಲ. ಆದರೇನಂತೆ ಸತ್ತರೂ ಯಾರೂ ಕೇಳದ ಇರುಳ ಸಮುದಾಯದವರಾದ್ದರಿಂದ ಆತನ ಗರ್ಭಿಣಿ ಪತ್ನಿ ಸೇರಿದಂತೆ ಮನೆಯವರನ್ನು ಪೊಲೀಸರು ಲಾಕಪ್ ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಡುತ್ತಾರೆ. ಈ ಹಂತದಲ್ಲಿ ಸಿನಿಮಾ ಪ್ರಖ್ಯಾತ 'ವಿಸಾರಣೈ' ಸಿನಿಮಾವನ್ನು ನೆನಪಿಸುತ್ತದೆ. ಚಿತ್ರಹಿಂಸೆಯನ್ನು ತೆರೆ ಮೇಲೆ ತೋರಿಸುವಲ್ಲಿ ಜೈ ಭೀಮ್ ವಿಸಾರಣೈ ಸಿನಿಮಾವನ್ನು ಮೀರಿಸುತ್ತದೆ. ಸಿನಿಮಾದಲ್ಲಿ ಪ್ರತಿ ಭಾವನೆಗಳನ್ನೂ, ಹಿಂಸಾಪ್ರವೃತ್ತಿಯನ್ನೂ ವೈಭವೀಕರಿಸಿ (over do), ಪ್ರೇಕ್ಷಕರನ್ನು ಪ್ರಚೋದಿಸುವಂತೆ ತೋರಿಸಲಾಗಿದೆ.     

ಮತ್ತೆ ಚಿತ್ರದ ಕಥೆಗೆ ಮರಳುವುದಾದರೆ, ರಾಜಾ ಕಣ್ಣು ಮತ್ತೆ ಊರಿಗೆ ವಾಪಸ್ಸಾಗುತ್ತಾನೆ. ಊರಿನಲ್ಲಿ ನಡೆದ ಯಾವುದೇ ಘಟನೆಗಳ ಸುಳಿವೇ ಇರದೆ ತನ್ನ ಪತ್ನಿಯನ್ನು ಸೇರುವ ಧಾವಂತದಲ್ಲಿದ್ದ ರಾಜಾ ಕಣ್ಣು ಪೊಲಿಸರ ವಶವಾಗುತ್ತಾನೆ. ಅಲ್ಲಿಂದ ಅವನ ಕುಟುಂಬದ ದುರಂತ ಕಥೆಗೆ ಓಘ ದೊರೆಯುತ್ತದೆ. ಅದುವರೆಗೂ ಪತಿ ರಾಜಾ ಕಣ್ಣು ಇರುವಿಕೆ ತಿಳಿಯಲು ಹಿಡಿದಿಟ್ಟುಕೊಂಡಿದ್ದ ಪತ್ನಿಯನ್ನು ಪೊಲೀಸರು ಬಿಟ್ಟುಬಿಡುತ್ತಾರೆ. ಈಗ ಕದ್ದ ಚಿನಾಭರಣ ಎಲ್ಲೆಂದು ರಾಜಾ ಕಣ್ಣು ಸೇರಿದಂತೆ ಆತನ ಇಬ್ಬರು ಬಂಧುಗಳನ್ನು ಪೊಲೀಸರು ವಿಚಾರಣೆ ನೆವದಲ್ಲಿ ಕೊಡಬಾರದ ಕಷ್ಟಗಳನ್ನೆಲ್ಲಾ ಕೊಡುತ್ತಾರೆ. ಇರುಳ ಸಮುದಾಯ ಎದುರಿಸುತ್ತಿರುವ ಶತಮಾನಗಳ ಶೋಷಣೆಯನ್ನು ಪ್ರಸ್ತುತ ರಾಜಾ ಕಣ್ಣು ಕಥೆಯ ಮೂಲಕ ಹೇಳಲು ನಿರ್ದೇಶಕರು ಪ್ರಯತ್ನಿಸಿರುವುದು ಕಾಣುತ್ತದೆ. ನಮ್ಮ ಟಿ.ಎನ್ ಸೀತಾರಾಮ್ ಧಾರಾವಾಹಿಗಳಲ್ಲಿ ಜಗತ್ತಿನ ಹೆಣ್ಣುಮಕ್ಕಳ ಸಮಸ್ಯೆಗಳೆಲ್ಲವೂ ಅವರ ಮಹಿಳಾ ಪಾತ್ರಧಾರಿಗಳಿಗೆ ಬಂದೊದಗುವುದಿಲ್ಲವೆ, ಹಾಗೆ!

ಜೈಲಿನಲ್ಲಿರುವ ಪತಿಯನ್ನು ಬಿಡಿಸಿಕೊಂಡು ಬರುವಲ್ಲಿ ಅವನ ಪತ್ನಿ ಸೆಂಗಿನಿ ಅವರ ಹಾಡಿಯಲ್ಲಿ ಪಾಠ ಹೇಳಲು ಬರುತ್ತಿದ್ದ ಟೀಚರಮ್ಮ ನೆರವಾಗುತ್ತಾಳೆ. ಅವರಿಬ್ಬರೂ ಮಾನವ ಹಕ್ಕುಗಳು ಮತ್ತು ದಮನಿತ ವರ್ಗದ ಪರ ನಿಲ್ಲುವ ವಕೀಲ ಚಂದ್ರು ಬಳಿಗೆ ತೆರಳುತ್ತಾರೆ. ಮುಳುಗುತ್ತಿದ್ದ ರಾಜಾ ಕಣ್ಣು ಕುಟುಂಬಕ್ಕೆ ಹುಲ್ಲುಕಡ್ಡಿಯಂತೆ ಕಥೆಯಲ್ಲಿ ಚಂದ್ರು ಪ್ರವೇಶವಾಗುತ್ತದೆ. ಈ ನಡುವೆ ಅರೋಪಿಗಳಾದ ರಾಜಾ ಕಣ್ಣು ಮತ್ತು ಇತರೆ ಇಬ್ಬರು ಆರೋಪಿಗಳು ಜೈಲಿನಿಂದ ಪರಾರಿಯಾದರೆಂದೂ, ಆತನ ಸುಳಿವು ಸಿಕ್ಕರೆ ತಮಗೆ ತಿಳಿಸಬೇಕೆಂದು ಪೊಲೀಸರು ಹೇಳುತ್ತಾರೆ. ಸೆಂಗಿನಿ ಕಂಗಾಲಾಗುತ್ತಾಳೆ.

ಪೊಲೀಸರ ಹಿಂಸಾ ವಿನೋದಿ ಕೃತ್ಯಗಳಿಂದ ನಿಲ್ಲಲೂ ತ್ರಾಣವಿಲ್ಲದಂತಿದ್ದ ಆರೋಪಿಗಳು ನಿಜಕ್ಕೂ ಪರಾರಿಯಾದರೇ? ರಕ್ಕಸ ಮನೋಭಾವದ ಪೊಲೀಸರು ಸತ್ಯವನ್ನೇ ಹೇಳುತ್ತಿದ್ದಾರೆಯೇ? ಸತ್ಯವನ್ನಲ್ಲದೆ ಬೇರೇನನ್ನೂ ಹೇಳುತ್ತಿಲ್ಲವೇ? ಕೋರ್ಟ್ ರೂಮ್ ಹೈಡ್ರಾಮಾವನ್ನು ಒಳಗೊಂಡ ಸಿನಿಮಾದ ಈ ಕುತೂಹಲ ಘಟ್ಟವನ್ನು ತಿಳಿಯಲು ಸಿನಿಮಾ ನೋಡಿದರೆ ಚೆನ್ನ.

ಸಿನಿಮಾದಲ್ಲಿ ಶೋಷಿತ ರಾಜಾ ಕಣ್ಣು ಪಾತ್ರದಲ್ಲಿ ಮಣಿಕಂಠನ್ ಅಮೋಘ ಅಭಿನಯ ನೀಡಿದ್ದಾರೆ. ಅವರ ಪತ್ನಿ ಪಾತ್ರದಲ್ಲಿ ನಟಿಸಿರುವ ಲಿಜೊಮೋಳ್ ಜೋಸ್, ಟೀಚರಮ್ಮ ರಜಿಶಾ ವಿಜಯನ್, ಎಸ್ಸೈ ಗುರುಮೂರ್ತಿ ಪಾತ್ರದಲ್ಲಿ ನಟ ತಮಿಳ್ ಯಾವತ್ತಿಗೂ ನೆನಪಲ್ಲುಳಿಯುತ್ತಾರೆ. ಐಜಿ ಪಾತ್ರದಲ್ಲಿ ಪ್ರಕಾಶ್ ರಾಜ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಟ್ಟಿನಲ್ಲಿ ಹೇಳಬೇಕೆಂದರೆ ಮಣಿಕಂಠನ್ ನಾಯಕನಾಗಿಯೂ, ಸೂರ್ಯ ಪೋಷಕ ಪಾತ್ರದಲ್ಲಿಯೂ ನಟಿಸಿರುವ ಸಿನಿಮಾ ಜೈ ಭೀಮ್ ಎಂದರೆ ತಪ್ಪಿಲ್ಲ. ನಾಯಕ ನಟ ಸೂರ್ಯ ಅಭಿನಯಿಸಿರುವ ಚಂದ್ರು ಪಾತ್ರದ ಬಗ್ಗೆ ಪ್ರೇಕ್ಷಕರಿಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಲು ನಿರ್ದೇಶಕರು ಪ್ರಯತ್ನಿಸಿಲ್ಲ. ಅಲ್ಲದೆ ನ್ಯಾಯಾಲಯದಲ್ಲಿ ಎದುರಾಳಿ ವಕೀಲರನ್ನು ಬಪೂನ್ ಗಳಂತೆ ತೋರಿಸಲಾಗಿರುವುದು ನಿರ್ದೇಶಕರು ಪಾಪ್ಯುಲಾರಿಟಿಗೆ ಕಟ್ಟುಬಿದ್ದಿರುವುದಕ್ಕೆ ಸಾಕ್ಷ್ಯ ನುಡಿಯುತ್ತದೆ. 

ಶೋಷಿತ ವರ್ಗದ ಮೇಲಾದ ಅನ್ಯಾಯ, ಸಾಮಾಜಿಕ ವ್ಯವಸ್ಥೆಯಲ್ಲಿನ ಲೋಪ ಈ ವಿಚಾರಗಳ ಮೇಲೆ ಜೈ ಭೀಮ್ ಬೆಳಕು ಚೆಲ್ಲುತ್ತದೆ ಎನ್ನುವುದೆಲ್ಲಾ ಸರಿ. ಅದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ತೆರೆ ಮೇಲೆ ತೋರ್ಪಡಿಸಿರುವ ರೀತಿಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ.

ಪೊಲೀಸರು ಕೆಟ್ಟವರು, ಇರುಳರು ಒಳ್ಳೆಯವರು- ಈ ಮಾತನ್ನು ಸಿದ್ಧಾಂತವಾಗಿಟ್ಟುಕೊಂಡು ಚಿತ್ರದ ಪ್ರತಿ ಫ್ರೇಮನ್ನೂ ಹೆಣೆಯಲಾಗಿದೆ. ಇಲ್ಲೆಲ್ಲಿಯೂ ಪೊಲೀಸರಲ್ಲಿ ಒಳ್ಳೆತನ ಕಂಡುಬರುವುದಿಲ್ಲ (ಪ್ರಕಾಶ್ ರಾಜ್ ಮತ್ತು ಒಬ್ಬ ಕಾನ್ ಸ್ಟೇಬಲ್ ಹೊರತುಪಡಿಸಿ), ಅದೇ ರೀತಿ ಸಿನಿಮಾದಲ್ಲಿ ಇರುಳರ ಕುರಿತಾಗಿ ಒಂದೇ ಒಂದು ನಕಾರಾತ್ಮಕ ಅಂಶ ತೋರಿಸಲಾಗಿಲ್ಲ. ಆದರೆ ನಿಜಜೀವನ ಹಾಗಲ್ಲವಲ್ಲ. ಲೈಫ್ ಈಸ್ ನಾಟ್ ಬ್ಲ್ಯಾಕ್ ಅಂಡ್ ವೈಟ್, it's also grey. ಇಲ್ಲಿ ಯಾರೊಬ್ಬರೂ ನೂರಕ್ಕೆ ನೂರು ಪ್ರತಿಶತ ಒಳ್ಳೆಯವರಾಗಿರುವುದಿಲ್ಲ, ಯಾರೊಬ್ಬರೂ ಪೂರ್ತಿ ಕೆಟ್ಟವರೂ ಆಗಿರುವುದಿಲ್ಲ. to err is human ಎನ್ನುವ ಮಾತೇ ಇದೆ. ತಪ್ಪು ಮಾಡಿದರೇ ಮನುಷ್ಯ. ಹೀಗಾಗಿ ಒಳ್ಳೆಯವರ ಕೆಟ್ಟತನವನ್ನೂ, ಕೆಟ್ಟವರ ಒಳ್ಳೆಯತನವನ್ನೂ ತೋರಿಸುವ ಪ್ರಯತ್ನ ಆಗಿದ್ದರೆ ನೈಜ ಘಟನೆಯಾಧಾರಿತ ಈ ಸಿನಿಮಾ ನಿಜಕ್ಕೂ ನೈಜವೆನ್ನಿಸಿಕೊಳ್ಳುತ್ತಿತ್ತು. ಅಲ್ಲದೆ ಹಲವು ವಿಷಯಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಕೊಂಚ ಸೂಕ್ಶ್ಮತೆಯನ್ನೂ, ಸಂವೇದನೆಯನ್ನೂ ತೋರಿದ್ದರೆ ಗ್ರೇಟ್ ಸಿನಿಮಾ ಆಗುತ್ತಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT