ಕರಾವಳಿ ಸಿನಿಮಾ ಪೋಸ್ಟರ್ 
ಸಿನಿಮಾ ವಿಮರ್ಶೆ

Karavali Movie Review: ಸಿದ್ಧ ಸೂತ್ರಕ್ಕೆ ಜೋತು ಬಿದ್ದ ನಿರ್ದೇಶಕ; ವಿವಾದದ ಸುಳಿ- ಅಬ್ಬರ ಕಳೆದುಕೊಂಡ 'ಕರಾವಳಿ'; ಸೇಡು-ಸಂಘರ್ಷ ರಕ್ತದೋಕುಳಿ!

Shilpa D

ಕರಾವಳಿ ಚಿತ್ರದಲ್ಲಿ ಕಂಬಳ ಸಂಸ್ಕೃತಿಯ ನೈಜ ಚಿತ್ರಣ, ಎಮ್ಮೆ–ಮಾನವ ಸಂಬಂಧದ ಭಾವನಾತ್ಮಕ ಅಂಶ, ದ್ವೇಷ–ಸೇಡು–ಶ್ರೀಮಂತ–ಬಡವ ಸಂಘರ್ಷಗಳ ರಕ್ತಸಿಕ್ತ ಕಥೆಯನ್ನು ರಿವರ್ಸ್ ಸ್ಕ್ರೀನ್‌ಪ್ಲೇ ಮೂಲಕ ತೋರಿಸಲಾಗಿದೆ. ಗಟ್ಟಿಯಾದ ಚಿತ್ರಕಥೆಯ ಕೊರತೆ ಚಿತ್ರಕ್ಕೆ ಮೈನಸ್ ಆಗಿದೆ.

ಗುರುದತ್ತ ಗಣಿಗ ನಿರ್ದೇಶನದ ಪ್ರಜ್ವಲ್ ದೇವರಾಜ್ ನಟಿಸಿರುವ ಕರಾವಳಿ ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ. ಕರಾವಳಿ ಸಿನಿಮಾ ಹೆಸರೇ ಸೂಚಿಸುವಂತೆ ಕರಾವಳಿ ಸಂಸ್ಕೃತಿಯ ಮಹತ್ವದ ಕಂಬಳ ಕುರಿತಾದ ಚಿತ್ರವಾಗಿದೆ. ಈ ಹಿಂದೆ ಕಂಬಳ ಕುರಿತು ಹಲವು ಸಿನಿಮಾಗಳು ಬಂದು ಹೋಗಿವೆ, ಆದರೆ ನಿರ್ದೇಶಕರು ವಿಭಿನ್ನ ರೀತಿಯಲ್ಲಿ ಕರಾವಳಿ ಸಿನಿಮಾದಲ್ಲಿ ಕಂಬಳ ತೋರಿಸಲು ಪ್ರಯತ್ನಿಸಿದ್ದಾರೆ.

ಕೆಲವರಿಗೆ ಕಂಬಳವು ಪೂಜೆಯಾಗಿದ್ದರೆ, ಇನ್ನು ಕೆಲವರಿಗೆ, ಬಿಡಲು ಸಾಧ್ಯವಿಲ್ಲದ ಕುಟುಂಬ ಸಂಪ್ರದಾಯವಾಗಿದೆ. ಕೆಲವರಿಗೆ ಕಳೆದುಹೋದ ಸ್ನೇಹಿತನೊಂದಿಗಿನ ಕೊನೆಯ ಸಂಪರ್ಕವಾಗಿರುತ್ತದೆ. ಸಂಪ್ರದಾಯಗಳು ಹಳೆಯದಾಗಿರುವುದರಿಂದ ಉಳಿಯುವುದಿಲ್ಲ, ಬದಲಾಗಿ ಪ್ರತಿ ಪೀಳಿಗೆಯು ಹೋರಾಡುವುದರಿಂದ ಬದುಕುಳಿಯುತ್ತದೆ ಎಂಬುದನ್ನು ಕರಾವಳಿ ತೋರಿಸುತ್ತದೆ.

ಕರಾವಳಿಯಿಂದ ಬಂದ ಮತ್ತೊಂದು ಕಂಬಳದ ಕಥೆ, ಆದರೆ ಹೆಚ್ಚಾಗಿ ದ್ವೇಷ–ಸೇಡಿನ ಅಲೆಗಳನ್ನೇ ತೆರೆದಿಟ್ಟಿದೆ, ಕಥೆ ರಿವರ್ಸ್‌ ಸ್ಕ್ರೀನ್‌ಪ್ಲೇಯಲ್ಲಿ ತೆರೆದುಕೊಳ್ಳುತ್ತೆ. ರಕ್ತಸಿಕ್ತ ಅಧ್ಯಾಯ ಆರಂಭವಾಗಿ ಕಥೆ ವರ್ತಮಾನಕ್ಕೆ ಹೊರಳುತ್ತದೆ. ಮುಖ್ಯವಾಗಿ ಇಲ್ಲಿ ಸೇಡು, ಶ್ರೀಮಂತ, ಬಡವ ಎಂಬ ಅಂಶದ ಮೂಲಕ ಸಿನಿಮಾದ ಕಥೆ ಸಾಗುತ್ತದೆ.

ಕಲ್ಕುಂದ ಎಂಬ ಊರಿನಲ್ಲಿರುವ ಕಥಾನಾಯಕ ಧನಂಜಯ (ಪ್ರಜ್ವಲ್‌ ದೇವರಾಜ್‌) ಮನೆಯ ಹಸುವೊಂದನ್ನು ಹುಡುಕಿ ಕರಾವಳಿಯತ್ತ ಹೊರಡುತ್ತಾನೆ. ಆತ ಮಹಾಬಲನ (ಮಿತ್ರ) ಮೂಲಕ ಕಂಬಳ ಪ್ರಪಂಚಕ್ಕೂ ಹೆಜ್ಜೆ ಇಡುತ್ತಾನೆ. ಇಲ್ಲಿ 'ದೊಡ್ಡವರು ಎಂದೇ ಗುರುತಿಸಿಕೊಂಡ ಆದಿಶೇಷ (ರಮೇಶ್‌ ಇಂದಿರಾ) ಮೈಸೂರು ಮಹಾರಾಜರು ಕುಳಿತು ಕಂಬಳ ವೀಕ್ಷಿಸಿದ ಕುರ್ಚಿಯ ಯಜಮಾನ. ಅದು ಆತನ ಪ್ರತಿಷ್ಠೆ. ಸ್ಪರ್ಧೆಯಲ್ಲಿ ಸೋತು ಆ ಕುರ್ಚಿ ಕೈತಪ್ಪಿ ಹೋಗಬಾರದು ಎಂದು ಹಾತೊರೆಯುವ ವ್ಯಕ್ತಿ. ಸಿನಿಮಾದ ಮೊದಲಾರ್ಧ ಇದರಲ್ಲೆ ಕಳೆದುಹೋಗುತ್ತದೆ.

ಆನಂತರ ಮಹಾವೀರನ ಜೀವನ ತೆರೆದುಕೊಂಡಾಗ ಕಥೆ ಮುಂದುವರಿಯುತ್ತದೆ. ಮಹಾವೀರನಿಗೆ ಎಮ್ಮೆಗಳ ಮೇಲೆ ಅತಿಯಾದ ಪ್ರೀತಿ. ಎಲ್ಲಾ ಪ್ರಾಣಿಗಳಂತೆ ಎಮ್ಮೆಗಳು ಸಹ ಈ ವಿಶ್ವದಲ್ಲಿ ಅತ್ಯಂತ ಸರಳ ಆತ್ಮಗಳು. ಅವು ಸ್ಥಾನಮಾನವನ್ನು ಗುರುತಿಸುವುದಿಲ್ಲ. ಅವು ಹೆಂಚಿನ ಛಾವಣಿಯ ಕೆಳಗೆ ಮಲಗುತ್ತವೆಯೋ ಅಥವಾ ವಿಶಾಲವಾದ ಜಾಗದಲ್ಲಿ ಒಳಗೆ ಮಲಗುತ್ತವೆಯೋ ಅವಕ್ಕೆ ತಿಳಿದಿಲ್ಲ. ಅವು ಸಂಪತ್ತು ಅಥವಾ ಶಕ್ತಿಯನ್ನು ಅಳೆಯುವುದಿಲ್ಲ. ಅವು ಒಂದೇ ಒಂದು ವಿಷಯವನ್ನು ಗುರುತಿಸುತ್ತವೆ, ಅವುಗಳನ್ನು ಬೆಳೆಸುವ ಕೈಗಳು, ಹೀಗಾಗಿ ಅವುಗಳ ನಿಷ್ಠೆ ಎಂದಿಗೂ ಬದಲಾಗುವುದಿಲ್ಲ, ಆದರೆ ಮಾನವ ನಿಷ್ಠೆ ಸಮಯಕ್ಕೆ ತಕ್ಕಂತೆ ಬದಲಾಗುತ್ತದೆ, ಕೋಟಿ ರೂಪಾಯಿ ಕೊಟ್ಟು ಕೋಣ ತಗೊಂಡು, ಅದನ್ನು ಎಸಿ ರೂಂನಲ್ಲಿಟ್ಟು ಅದ್ಧೂರಿಯಾಗಿ ರೆಡಿ ಮಾಡಿ, ಕಂಬಳ ಗೆಲ್ಲಬೇಕೆಂದು ಹಂಬಲಿಸುವವರ ಮುಂದೆ ಒಬ್ಬ ಸಾಮಾನ್ಯನ ಕೋಣ ಗೆದ್ದರೆ ಏನಾಗಬಹುದು, ಆತನ ಅಹಂ ಹೇಗೆ ಕೆಲಸ ಮಾಡುತ್ತದೆ, ಮುಂದೆ ಅದು ಯಾವ್ಯಾವ ರೂಪ ಪಡೆಯುತ್ತದೆ ಎಂಬ ಅಂಶವೂ ಸಿನಿಮಾದಲ್ಲಿದೆ. ಇಡೀ ಸಿನಿಮಾ ನಿಂತಿರುವುದು ಇದೇ ಅಂಶದ ಮೇಲೆ.

ಕರಾವಳಿ ಕಂಟೆಂಟ್‌ ಸಿನಿಮಾವೋ, ಅದೇ ರೀತಿ ಮೇಕಿಂಗ್‌ ಸಿನಿಮಾ. ಆ ಮಟ್ಟಿಗೆ ನಿರ್ದೇಶಕ ಗುರುದತ್‌ ಅವರ ಶ್ರಮ ತೆರೆಮೇಲೆ ಎದ್ದು ಕಾಣುತ್ತದೆ. ಆದರೆ ಬಿಡುಗಡೆ ಮಾಡಿದ ಪೋಸ್ಟರ್‌ಗಳಿಗೂ ಕಥೆಯ ದೃಶ್ಯಗಳಿಗೂ ಸಂಬಂಧವೇ ಇಲ್ಲ ಎನಿಸುತ್ತದೆ. ಹಲವು ದೃಶ್ಯಗಳು ಕಥೆಯ ಬಗ್ಗೆ ಪ್ರಶ್ನೆ ಹುಟ್ಟಿಸುವಂತೆ ಮಾಡುತ್ತವೆ. ಎಡಿಟಿಂಗ್ ಸಂದರ್ಭದಲ್ಲಿ ಹಲವು ಬದಲಾವಣೆಗಳಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಕೊನೆ ಕೊನೆಯಲ್ಲಿ ಕಲ್ಕುಂದ–ಕರಾವಳಿಗೂ ಸಂಬಂಧವೇ ಇಲ್ಲ ಎನ್ನಿಸುತ್ತದೆ. ಕರಾವಳಿ ಕಥೆ ಚೆನ್ನಾಗಿದೆ, ಆದರೆ ಚಿತ್ರಕಥೆ ಗಟ್ಟಿಯಿಲ್ಲ ಎಂಬುದು ಎದ್ದು ಕಾಣುತ್ತದೆ.

ಕರಾವಳಿಯಲ್ಲಿ ಕಂಬಳ, ಆ ಪರಿಸರವನ್ನು ನೈಜವಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಇಡೀ ಸಿನಿಮಾದಲ್ಲಿ ಮಾತು ಕಡಿಮೆ. ಸನ್ನಿವೇಶಗಳಿಗೆ ಭಾವ ತುಂಬಿದ್ದಾರೆ ಗುರುದತ್‌. ಇದು ರೆಗ್ಯುಲರ್‌ ಶೈಲಿಯ ಸಿನಿಮಾ ಆಗಿರದ ಕಾರಣ ಇಲ್ಲಿ ಯಾವುದೇ ಒಂದು ಪಾತ್ರ ಗಮನ ಸೆಳೆಯುವುದಿಲ್ಲ. ಮಹಾವೀರನಾಗಿ ರಾಜ್‌ ಬಿ.ಶೆಟ್ಟಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಜ್ವಲ್ ದೇವರಾಜ್ ಉತ್ತಮವಾಗಿ ಅಭಿನಯಿಸಿದ್ದಾರೆ, ಆದರೆ ಅವರು ತಮ್ಮ ಸಿನಿಮಾ ಪಾತ್ರಕ್ಕೆ ಧ್ವನಿ ನೀಡಿಲ್ಲ. ಅಭಿಮನ್ಯು ಸದಾನಂದನ್‌ ಛಾಯಾಚಿತ್ರಗ್ರಹಣ ಹಾಗೂ ಸಚಿನ್‌ ಬಸ್ರೂರು ಸಂಗೀತ. ಬಿ.ಜಯಶ್ರೀ ಅವರ ದನಿಯಲ್ಲಿ ಮೂಡಿದ ಹಾಡು ಚೆನ್ನಾಗಿದೆ. ಕರಾವಳಿ ಒಮ್ಮೆ ನೋಡಬಹುದಾದ ಸಿನಿಮಾವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದರ್ಶನ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್: 59ನೇ ಸಿಹೆಚ್ ಹೆಚ್ ಕೋರ್ಟ್ ಆದೇಶ ರದ್ದು!

ಯುಕ್ರೇನ್ ವಿರುದ್ಧದ ಯುದ್ಧ: ಭಾರತದ ಶಾಂತಿ ಪ್ರಯತ್ನಗಳನ್ನು ಸ್ವಾಗತಿಸುತ್ತೇವೆ- ರಷ್ಯಾ; ಆ.11 ರಂದು ಮೋದಿ-ಪುಟಿನ್ ದ್ವಿಪಕ್ಷೀಯ ಮಾತುಕತೆ

ಬಡ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ ಸಂಜು ಸ್ಯಾಮ್ಸನ್; 1 ಸಾವಿರ UPSC ಆಕಾಂಕ್ಷಿಗಳಿಗೆ ಸ್ಕಾಲರ್‌ಶಿಪ್!

ಕಾಂಗ್ರೆಸ್ 10 ವರ್ಷದಲ್ಲಿ 50 ಸಾವಿರ ಶೌಚಾಲಯ ಕಟ್ಟಲಿಲ್ಲ, ನಾವು 50 ಸಾವಿರ ರೈಲು ಕೋಚ್ ನಿರ್ಮಿಸಿದೆವು: ಪ್ರಧಾನಿ ಮೋದಿ

'ತಂದೆಯ ಮುಖವನ್ನೇ ನೋಡಿಲ್ಲ': ʻಬಿಗ್‌ ಬಾಸ್‌ʼ ವೇದಿಕೆಯಲ್ಲಿ ಅಪ್ಪ-ಅಮ್ಮನ ಡಿವೋರ್ಸ್‌ ನೋವು ಹಂಚಿಕೊಂಡ ʻಪ್ರೇಮಕಾವ್ಯʼ ನಟಿ ವೈಷ್ಣವಿ!