ಬಾಂಗ್ಲಾ ಶಿಕ್ಷೆಗೆ ಪಶ್ಚಿಮ ಬಂಗಾಳದಲ್ಲೇಕೆ ಪ್ರತಿಭಟನೆ?
ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಕಾರ್ಯಕರ್ತರನ್ನು ಮತ್ತು ಗೆರಿಲ್ಲಾಗಳನ್ನು ಹುಡುಕಿಕೊಂಡು ಪರೇರ್ಹಟ್ ಬಂದರ್ನ ಪೂರ್ವ ಭಾಗಕ್ಕೆ ಬಂದ ಪಾಕಿಸ್ತಾನಿ ಪಡೆಗಳ ಕ್ರೌರ್ಯಕ್ಕೆ ಮೊದಲು ಆಹುತಿಯಾದದ್ದು ನೂರುಲ್ ಇಸ್ಲಾಂನ ಮನೆ. ನಂತರ ಅದು ಮಾಣಿಕ್ ಪೊಸಾರಿ ಮತ್ತು ಆತನ ಸೇವಕ ಇಬ್ರಾಹಿಂ ಶೇಖ್ಗೆ ಚಿತ್ರಹಿಂಸೆ ಕೊಟ್ಟು ಬಾಯಿಬಿಡಿಸಲು ಪ್ರಯತ್ನಿಸಿತು. ಆದರೂ ಅದಕ್ಕೆ ತಾನು ಹುಡುಕಿಕೊಂಡು ಬಂದದ್ದರ ಸುಳಿವು ಸಿಗಲಿಲ್ಲ. ಕೊನೆಗೆ ಅದು ಶೇಖ್ನ ಮೇಲೆ ಅತಿ ಹತ್ತಿರದಿಂದ ಗುಂಡು ಹಾರಿಸಿ ಆತನ ದೇಹವನ್ನು ಸನಿಹದ ನದಿಗೆ ಎಸೆಯಿತು. ಮಾಣಿಕ್ ಪೊಸಾರಿ ಮಾತ್ರ ಆ ರಾತ್ರಿ ಅದ್ಹೇಗೋ ಪಾಕಿಸ್ತಾನಿ ಸೇನಾ ತುಕಡಿಯಿಂದ ತಪ್ಪಿಸಿಕೊಂಡು ಬಿಟ್ಟ. ತನ್ನನ್ನು ಈ ಸ್ಥಿತಿಗೆ ತಳ್ಳಿದ್ದು ಸ್ಥಳೀಯ ಕಿರಾಣಿ ಅಂಗಡಿಯ ಮಾಲೀಕ ಎನ್ನುವುದು ಮಾತ್ರ ಆತನಿಗೆ ಸ್ಪಷ್ಟವಾಗಿ ತಿಳಿದುಹೋಗಿತ್ತು.
ಪರೇರ್ಹಟ್ ಬಾಜಾರಿನಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ಮಸಾಲೆ ಸಾಮಾನು ಮಾರುತ್ತಿದ್ದ 'ದೆಲವಾರ್ ಹೊಸೇನ್ ಸಯೀದೀ' ಕೇವಲ ನಲವತ್ತು ವರ್ಷಗಳಲ್ಲಿ ಬಾಂಗ್ಲಾದೇಶದ ಅತಿ ದೊಡ್ಡ ರಾಜಕೀಯ ಪಕ್ಷಗಳಲ್ಲೊಂದಾದ ಜಮಾತೆ ಇಸ್ಲಾಮಿಯ ಮುಖ್ಯಸ್ಥನಾಗಿ ಬದಲಾದದ್ದನ್ನು ಮಾಣಿಕ್ ಪೊಸಾರಿ ನೋಡುತ್ತಲೇ ಬಂದಿದ್ದಾನೆ. ಪರೇರ್ಹಟ್ ಜನತೆಯ ಮನೆಗಳಿಂದ ದೋಚಿದ ಚಿನ್ನದಿಂದ ತನ್ನ ಜೈತ್ರಯಾತ್ರೆ ಆರಂಭಿಸಿದ ಸಯೀದೀ ಈಗ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾನೆ.
ತನಗೆ ಚಿತ್ರಹಿಂಸೆ ನೀಡಿದ, ತನ್ನ ಹಳ್ಳಿಯನ್ನು ಹಳ್ಳಹಿಡಿಸಿದ ವ್ಯಕ್ತಿಗೆ ಯಾವಾಗ ಶಿಕ್ಷೆಯಾಗುವುದೋ ಎಂದು ಪೊಸಾರಿ ಕಾಯುತ್ತಲೇ ಇದ್ದಾನೆ. ಆದರೆ ಕೋಲ್ಕತಾದಲ್ಲಿನ ಇಸ್ಲಾಮಿಕ್ ಸಂಘಟನೆಗಳು ಮಾತ್ರ ಪೊಸಾರಿಯ ಕನಸಿಗೆ ಕಲ್ಲೆಸೆಯುತ್ತಿವೆ. ಯುದ್ಧಾಪರಾಧ ಕಾಯ್ದೆಯಡಿಯಲ್ಲಿ ಸಯೀದೀಗೆ ಮರಣದಂಡನೆ ಶಿಕ್ಷೆ ನೀಡಿರುವುದನ್ನು ವಿರೋಧಿಸಿದ ಇಸ್ಲಾಮಿಕ್ ಸಂಘಟನೆಗಳು ಮಾರ್ಚ್ 30 ರಂದು ಕೋಲ್ಕತಾದ ಶಹೀದ್ ಮಿನಾರ್ನ ಬಳಿ ಬೃಹತ್ ಪ್ರತಿಭಟನೆ ನಡೆಸಿದವು. 'ಸಯೀದೀ ಅಮಾಯಕರು. ಅವರನ್ನು ಅವರ ರಾಜಕೀಯ ನಂಬಿಕೆಗಳ ಕಾರಣದಿಂದ ಶಿಕ್ಷಿಸಲಾಗುತ್ತಿದೆ' ಎಂದು ಆಲ್ ಬೆಂಗಾಲ್ ಮುಸ್ಲಿಂ ಯೂತ್ ಫೆಡರೇಷನ್, ಸುನ್ನತ್-ಉಲ್-ಜಮಾತ್, ಮದ್ರಾಸಾ ಸ್ಟುಡೆಂಟ್ ಯೂನಿಯನ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸೇರಿದಂತೆ ಹಲವಾರು ಭಾರತೀಯ ಇಸ್ಲಾಮಿಕ್ ಸಂಘಟನೆಗಳು ಅರಚುತ್ತಿವೆ.
ಸಯೀದೀಯನ್ನು ಬಿಟ್ಟು ಬಿಡಬೇಕು ಎಂದು ಎದ್ದಿರುವ ಆಂದೋಲನಕ್ಕೆ ಅತಿ ಹೆಚ್ಚು ಬೆಂಬಲ ನೀಡುತ್ತಿರುವುದು ಭಾರತದ 'ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ'. ಇದರ ಮುಖ್ಯಸ್ಥರಾಗಿರುವ ಸೈಯದ್ ಜಲಾಲುದ್ದೀನ್ ಉಮರಿ ಬಾಂಗ್ಲಾದೇಶದಲ್ಲಿನ ತನ್ನ ಸಹೋದರ ಸಂಸ್ಥೆಯನ್ನು 'ಬಾಂಗ್ಲಾ ದೇಶದ ಬಗ್ಗೆ ಅತ್ಯಂತ ಕಾಳಜಿ ಮತ್ತು ಪ್ರೀತಿ ಹೊಂದಿರುವ ಪಕ್ಷ' ಎಂದು ಕರೆಯುತ್ತಾರೆ. ಬಾಂಗ್ಲಾದೇಶ ಯುದ್ಧ ಸಮಯದಲ್ಲಿ ಯಾವ ಯುದ್ಧಾಪರಾಧವೂ ನಡೆದಿಲ್ಲ ಎಂದೂ ಅವರು ಇತ್ತೀಚೆಗೆ ಹೇಳಿದ್ದರು. ಎಂಥಾ ಹಸೀ ಸುಳ್ಳು!
1971ರ ಪ್ರತ್ಯಕ್ಷ ದರ್ಶಿಗಳು ವಾರ್ ಕ್ರೈಂ ಟ್ರಿಬ್ಯೂನಲ್ಗೆ ಹೇಳಿದ ಪ್ರಕಾರ, ಸಯೀದ್ನ ರಜಾಕರ್ ಸೇನೆ ಗೌರಾಂಗೋ ಸಾಹಾರ ಸಹೋದರಿಯರಾದ ಮೋಹೋಮಾಯಾ, ಅನ್ನೋ ಮತ್ತು ಕೋಮೋಲ್ಳನ್ನು ಅಪಹರಿಸಿ ಅವರನ್ನು ಪಾಕಿಸ್ತಾನಿ ಸೇನೆಗೆ ಕೊಟ್ಟುಬಿಟ್ಟಿತು. ಪಾಕಿಸ್ತಾನಿ ಸೈನಿಕರು ನಿರಂತರವಾಗಿ ಮೂರು ದಿನಗಳ ಕಾಲ ಆ ಮೂವರ ಮೇಲೆ ಅತ್ಯಾಚಾರವೆಸಗಿದರು. ಅಲ್ಲದೆ ರಜಾಕರರು ಉಮೇಧ್ಪುರ್ ಗ್ರಾಮದಲ್ಲಿನ ಹತ್ತಾರು ಮನೆಗಳನ್ನು ಸುಟ್ಟುಹಾಕಿದ್ದಲ್ಲದೆ, ಬಿಸ್ಬಾಲಿ ಎನ್ನುವ ಸ್ಥಳೀಯನನ್ನು ಅಮಾನುಷವಾಗಿ ಕೊಂದುಹಾಕಿದ್ದರು.
ಹಿಂದೆ ಮುಸ್ಲಿಂ ಪ್ರತಿಗಾಮಿಗಳು ಮಾವೋವಾದಿ ಪರ ಶಕ್ತಿಗಳೊಂದಿಗೆ ಸೇರಿ, ಸಿಂಗೂರ್ ಕ್ಷೋಭೆಗೆ ಕಾರಣವಾದವು ಈ ಕಾರಣದಿಂದಾಗಿ ಮಮತಾ ಬ್ಯಾನರ್ಜಿಯವರಿಗೆ ಅಧಿಕಾರ ಲಭಿಸುವಂತಾಯಿತು. ಇದೀಗ ಪಶ್ಚಿಮ ಬಂಗಾಳದ ಎಡ ಪಕ್ಷಗಳಿಗೆ ಮತ್ತೆ ಮುಸಲ್ಮಾನರ ಬೆಂಬಲ ಬೇಕಾಗಿದೆ. ಆ ಕಾರಣಕ್ಕಾಗಿಯೇ ಅವು ಕೋಲ್ಕತಾದಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆಗಳ ವಿರುದ್ಧ ತುಟಿಬಿಚ್ಚುತ್ತಿಲ್ಲ.
ಆದರೆ ಒಂದು ವಿಷಯದತ್ತ ನಾವು ಮುಖ್ಯವಾಗಿ ದೃಷ್ಟಿ ಹರಿಸಬೇಕು. ಕೋಲ್ಕತಾದ ಮುಸಲ್ಮಾನರು ಯಾರನ್ನು ಉಳಿಸಬೇಕೆಂದು ಪ್ರತಿಭಟಿಸುತ್ತಿದ್ದಾರೋ, ಆ ವ್ಯಕ್ತಿ ಭಾರತೀಯ ಸೈನಿಕರನ್ನು ಕೊಂದಾತ. ಇಸ್ಲಾಮಿ ಛತ್ರ ಶಿಬಿರ್, ಜಮಾತ್ ಯೂತ್ ವಿಂಗ್, ಅಲ್ಬದರ್ ಮತ್ತು ಅಲ್ ಶಮ್ಸ್ನ ಸುಮಾರು 50 ಸಾವಿರ ಕಾರ್ಯಕರ್ತರು ಒಟ್ಟುಗೂಡಿ ಪಾಕಿಸ್ತಾನದ ಪರವಾಗಿ ಯುದ್ಧ ಮಾಡಿದ್ದರು. ಪಾಕಿಸ್ತಾನಿ ಸೇನೆ, ಢಾಕಾ ಮತ್ತು ಖುಲ್ನಾದಲ್ಲಿ ಇವರಿಗೆಲ್ಲ ಯುದ್ಧ ತರಬೇತಿ ನೀಡಿತ್ತು. ಸಯೀದೀ ಕೂಡ ಅಲ್ಲಿ ತರಬೇತಿ ಪಡೆದವರಲ್ಲಿ ಒಬ್ಬ. 1971ರ ಯುದ್ಧದುದ್ದಕ್ಕೂ ರಜಾಕರರು ಭಾರತೀಯ ಸೇನೆಯ ವಿರುದ್ಧ ಯುದ್ಧ ಮಾಡಿದ್ದರು.
ಎರಡನೆಯದಾಗಿ, ಕೋಲ್ಕತಾದ ಪ್ರತಿಭಟನಾಕಾರರು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಕ್ರೂರ ನರಮೇಧವೆಸಗಿದ ವ್ಯಕ್ತಿಗಳ ಪರ ವಹಿಸುತ್ತಿದ್ದಾರೆ!
'ಅಲ್ ಬದರ್ ಮತ್ತು ಅಲ್ ಶಮ್ಸ್ನ ಸದಸ್ಯರು ಬೆಂಗಾಲಿಗಳಾದ ಕಾರಣ, ಯಾರಿಗೂ ಅನುಮಾನ ಬರದಂತೆ ಸ್ಥಳೀಯರೊಂದಿಗೆ ಬೆರೆತುಬಿಡುತ್ತಿದ್ದರು' ಎಂದು ಹೇಳುತ್ತದೆ ಭಾರತ ಯುದ್ಧೇತಿಹಾಸದ ವರದಿ- 'ಈ ಸದಸ್ಯರ ಮಾಹಿತಿಯನ್ನಾಧರಿಸಿ ಅನುಮಾನಾಸ್ಪದ ವ್ಯಕ್ತಿಗಳನ್ನು ಸುತ್ತುಗಟ್ಟುತ್ತಿದ್ದ ಪಾಕಿಸ್ತಾನಿ ಸೇನೆ, ಅವರನ್ನೆಲ್ಲ ಟಾರ್ಚರ್ ಛೇಂಬರ್ಸ್ಗಳಿಗೆ ಒಯ್ದು ಕೊಂದು ಹಾಕುತ್ತಿತ್ತು. ನೂರಾರು ಡಾಕ್ಟರ್ಗಳು, ಇಂಜಿನಿಯರ್ಗಳು, ಚಿಂತಕರುಗಳ ದೇಹಗಳನ್ನೆಲ್ಲ ಸಮೂಹ ಸಮಾಧಿ ಮಾಡಲಾಯಿತು'
ಮಾರ್ಚ್ 21, 1971ರಲ್ಲಿ ಆರ್ಚರ್ ಬ್ಲಡ್ ಎನ್ನುವ ಬಾಂಗ್ಲಾದಲ್ಲಿನ ಅಮೆರಿಕದ ರಾಯಭಾರಿ ತನ್ನ ದೇಶಕ್ಕೆ ಬರೆದ ರಹಸ್ಯ ಸಂದೇಶದಲ್ಲಿ ಹೀಗೆ ಹೇಳಿದ್ದಾನೆ- 'ನಾನು ಈ ಜನಾಂಗೀಯ ಹತ್ಯೆಗೆ ಮೂಕಸಾಕ್ಷಿಯಾಗಿದ್ದೇನೆ. ಪಾಕಿಸ್ತಾನಿ ಮಿಲಿಟರಿ ಸಹಾಯದಿಂದ ಬಂಗಾಳೇತರ ಮುಸಲ್ಮಾನರು ಹಿಂದುಗಳನ್ನು ವ್ಯವಸ್ಥಿತವಾಗಿ ಮುಗಿಸಿಹಾಕುತ್ತಿದ್ದಾರೆ. ಇನ್ನು ಈ ಮಾರಣಹೋಮದಲ್ಲಿ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಮತ್ತು ವಿಶ್ವವಿದ್ಯಾಲಯಗಳ ಪ್ರೊಫೆಸರ್ಗಳೂ ಒಂದಲ್ಲ ಒಂದು ರೀತಿ ಭಾಗಿಯಾಗಿದ್ದಾರೆ'.
ಇನ್ನು ರಾಜತಾಂತ್ರಿಕ ಇತಿಹಾಸದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿರುವ ಟೆಲಿಗ್ರಾಮೊಂದರಲ್ಲಿ ಅಂದಿನ ಸರ್ಕಾರ: 'ಪ್ರಜಾಪ್ರಭುತ್ವವನ್ನು ಹೊಸಕಿಹಾಕಲು ಯತ್ನಿಸುತ್ತಿರುವ ಶಕ್ತಿಗಳನ್ನು ತಡೆಯುವಲ್ಲಿ ನಮ್ಮ ಸರ್ಕಾರ ವಿಫಲವಾಗಿದೆ. ದುಷ್ಕೃತ್ಯಗಳನ್ನು ತಡೆಯುವ ಮುಂದಾಲೋಚನೆ ನಮಗಿರಲಿಲ್ಲ. ದೇಶದಲ್ಲಾಗಿರುವ ನೈತಿಕ ದಿವಾಳಿತನಕ್ಕೆ ನಮ್ಮ ಸರ್ಕಾರ ಸಾಕ್ಷಿಯಾಗಿದೆ' ಎಂದು ಹೇಳಿತ್ತು!
ಒಟ್ಟಿನಲ್ಲಿ 1971ರಲ್ಲಿ ಹಿಂದುಗಳು ತೋರಿಸಿದ ಗಟ್ಟಿತನದ ಅರ್ಧಭಾಗವನ್ನು ಪ್ರದರ್ಶಿಸುವಲ್ಲೂ ಪಶ್ಚಿಮ ಬಂಗಾಳದ ರಾಜಕೀಯ ಪಕ್ಷಗಳು ಸೋತಿವೆ.
ಇತ್ತೀಚೆಗೆ ನಡೆದ ಪ್ರತಿಭಟನೆಗಳ ವಿರುದ್ಧ ಅವು ಬಾಯಿಬಿಗಿದುಕೊಂಡು ಕುಳಿತಿರುವುದು ನೈತಿಕ ದಿವಾಳಿತನವಲ್ಲದೇ ಮತ್ತೇನು? ಬಾಂಗ್ಲಾದೇಶದ ಯುದ್ಧಾಪರಾಧ ಪ್ರಕರಣದ ತನಿಖೆಯ ಪಾರದರ್ಶಕತೆಯ ಬಗ್ಗೆ ಟೀಕೆಗಳು ವ್ಯಕ್ತವಾಗಿರುವುದು ಸತ್ಯ, ಆದರೆ ಯುದ್ಧಾಪರಾಧ ನ್ಯಾಯಾಧಿಕರಣ ಹರವಿಟ್ಟಿರುವ ದಾಖಲೆಗಳು ನಂಬಲರ್ಹ ಎನ್ನುವುದೂ ಅಷ್ಟೇ ಸತ್ಯ. ಇನ್ನು ಹಿಂಸಾಚಾರ ಎರಡೂ ಕಡೆ ನಡೆದಿದೆ ಎಂದು ವ್ಯಾಖ್ಯಾನಕಾರ ಮೊಹೈಮೀನ್ ಹೇಳುವುದರಲ್ಲೂ ಸತ್ಯವಿದೆ. ಯುದ್ಧ ಇತಿಹಾಸವನ್ನು ನೋಡಿದಾಗ ಯಾವ ಯುದ್ಧದಲ್ಲೂ ತಪ್ಪು ಒಬ್ಬರದ್ದೇ ಎಂದು ಬೆರಳು ಮಾಡಿ ತೋರಿಸುವುದಕ್ಕೆ ಸಾಧ್ಯವಿಲ್ಲ. ಯಾರೊಬ್ಬರೂ ಅಪವಾದದಿಂದ ಮುಕ್ತರಲ್ಲ. ಆದರೆ ನೈತಿಕ ಹುಚ್ಚಾಟಕ್ಕೆ ಇಳಿದ ವ್ಯಕ್ತಿ ಮಾತ್ರ, 'ಇಂಗ್ಲೆಂಡ್ ಮತ್ತು ಸೋವಿಯತ್ ಒಕ್ಕೂಟಗಳು ಸೇರಿ ಜರ್ಮನ್ನರನ್ನು ಕೊಂದು ತಪ್ಪನ್ನೆಲ್ಲ ನಾಜಿಗಳ ಮೇಲೆ ಹಾಕಿದರು' ಎಂದು ಹೇಳಬಲ್ಲ. ಬಾಂಗ್ಲಾದೇಶದಲ್ಲಿ ನಡೆದದ್ದಿಷ್ಟೆ: ಒಂದು ಭಾಗ ಜನಾಂಗೀಯ ಹತ್ಯೆಯಲ್ಲಿ ತೊಡಗಿದರೆ, ಇನ್ನೊಂದು ಭಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೊಡೆದಾಡಿತು. ಇದರಲ್ಲಿ ಇಬ್ಬರ ಮೇಲೂ ತಪ್ಪು ಹೊರಿಸುವುದು ಸಾಧುವೇ?
ತಾವು ಯಾರ ಪರವಿದ್ದೇವೆ ಎನ್ನುವುದು ಕೋಲ್ಕತಾದ ಪ್ರತಿಭಟನಾಕಾರರಿಗೆ ತಿಳಿದಿದೆ. ಹಾಗೆ ನೋಡಿದರೆ ಭಾರತದ ಜಮಾತೆ ಇಸ್ಲಾಮಿಗೂ ಮತ್ತು ಬಾಂಗ್ಲಾದೇಶದ ಜಮಾತೆ ಇಸ್ಲಾಮಿಗೂ ಯಾವುದೇ ಸಂಬಂಧವಿಲ್ಲ. ಆದರೆ ಎರಡೂ ಸಂಘಟನೆಗಳು ಹೈದ್ರಾಬಾದ್ ಮೂಲದ ಆಧುನಿಕ ಇಸ್ಲಾಂ ರಾಜಕೀಯದ ಅಧಿಪತಿ, ಅಬ್ದುಲ್
ಅಲಾ ಮೌದೂದಿಗೆ ಋಣಿಯಾಗಿರಲಿವೆ. 'ವಿಶ್ವದ ಸಂಪೂರ್ಣ ಸಾಮಾಜಿಕ ಕ್ರಮವನ್ನು ಬದಲಿಸಿ ಮತ್ತು ಅದರ ಮೇಲೆ ತಮ್ಮ ನಂಬಿಕೆಯನ್ನು, ತತ್ವಗಳನ್ನು ಸ್ಥಾಪಿಸಬೇಕು' ಎಂಬ ಕ್ರಾಂತಿಕಾರಿ ಸಿದ್ಧಾಂತವನ್ನು ಪ್ರತಿಪಾದಿಸಿದ ವ್ಯಕ್ತಿ ಮೌದೂದಿ. 'ಒಂದು ವೇಳೆ ಮುಸ್ಲಿಂ ರಾಜಕೀಯ ಪಕ್ಷಗಳಿಗೆ ಸಾಕಷ್ಟು ಸಂಪನ್ಮೂಲಗಳು ದೊರೆತವೆಂದರೆ, ಅವು ಇಸ್ಲಾಮೇತರ ಸರ್ಕಾರಗಳನ್ನು ಕಿತ್ತೆಸೆದು, ಆ ಜಾಗದಲ್ಲಿ ಇಸ್ಲಾಮಿ ಆಡಳಿತವನ್ನು ಸ್ಥಾಪಿಸಬಲ್ಲವು' ಎಂದವರು ಭರವಸೆ ನೀಡುತ್ತಿದ್ದರು!
ಇದೇ ಮನಸ್ಥಿತಿ 1971ರ ಯುದ್ಧದ ಸಮಯದಲ್ಲಿ ವ್ಯಾಪಕವಾಗಿತ್ತು. ಪಾಕಿಸ್ತಾನಿ ಸೇನೆ ಮತ್ತು ರಜಾಕರರು ಆ ಉದ್ದೇಶವನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಬಳಸಲಾದ ಶಸ್ತ್ರಗಳಾಗಿದ್ದವು.
'1973ರಲ್ಲಿ ನಾನು ಸುಮಾರು ಆರು ತಿಂಗಳ ಕಾಲ ಹುಚ್ಚಾಸ್ಪತ್ರೆಯಲ್ಲಿದ್ದೆ' ಎಂದು ತನ್ನ ಆತ್ಮಕತೆಯಲ್ಲಿ ಪಾಕಿಸ್ತಾನದ ಮಾಜಿ ಸೈನಿಕ 'ನದೀರ್ ಅಲಿ' ಬರೆದುಕೊಳ್ಳುತ್ತಾನೆ. 'ತನ್ನನ್ನು ಹುಚ್ಚನನ್ನಾಗಿ ಮಾಡಿದ್ದು ಏನು?' ಎಂದು ಪ್ರಶ್ನಿಸಿಕೊಳ್ಳುವ ನದೀರ್, 'ನಮ್ಮ ಸೇನೆ ಎಸಗಿದ ಘೋರ ಕೃತ್ಯದ ಪಾಪಪ್ರಜ್ಞೆಯೇ ನನ್ನ ಈ ಪರಿಸ್ಥಿತಿಗೆ ಕಾರಣ' ಎಂದು ಮುಂದಿನ ಸಾಲುಗಳಲ್ಲಿ ಉತ್ತರಿಸುತ್ತಾನೆ.
ವಿಪರ್ಯಾಸವೆಂದರೆ ಇಂತಹ ಪ್ರಜ್ಞೆ ಕೋಲ್ಕತಾದ ಪ್ರತಿಭಟನಾಕಾರರಲ್ಲಿ ಅಥವಾ ಅಲ್ಲಿನ ರಾಜಕೀಯ ಪಕ್ಷಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬುದು!
- ಪ್ರವೀಣ್ ಸ್ವಾಮಿ
ಖ್ಯಾತ ಪತ್ರಕರ್ತ