ಭಾರತವು ಜಪಾನ್ಗೆ ಹತ್ತಿರವಾಗುವುದರಿಂದ ಲಾಭವೇನಿದೆ ಗೊತ್ತೇ?
ಭಾರತದ ರಾಜಕಾರಣ ಅಷ್ಟೇನೂ ಆಶಾದಾಯಕ ಪರಿಸ್ಥಿತಿಯಲ್ಲಿ ಇಲ್ಲದಿದ್ದರೂ, ಯುಪಿಎ ಸರ್ಕಾರದ ಆರೋಗ್ಯ ಹದಗೆಟ್ಟ ಸ್ಥಿತಿಯಲ್ಲೇ ಇದ್ದರೂ...
ಭಾರತದ ರಾಜಕಾರಣ ಅಷ್ಟೇನೂ ಆಶಾದಾಯಕ ಪರಿಸ್ಥಿತಿಯಲ್ಲಿ ಇಲ್ಲದಿದ್ದರೂ, ಯುಪಿಎ ಸರ್ಕಾರದ ಆರೋಗ್ಯ ಹದಗೆಟ್ಟ ಸ್ಥಿತಿಯಲ್ಲೇ ಇದ್ದರೂ ಭಾರತದ ರಾಜತಾಂತ್ರಿಕ ವಲಯಕ್ಕೆ ಮಾತ್ರ ಮುಂಬರುವ ತಿಂಗಳುಗಳು ನಿರ್ಣಾಯಕವಾಗಿರಲಿವೆ.
ಜಗತ್ತಿನ ಪ್ರಮುಖ ಶಕ್ತಿಶಾಲಿ ರಾಷ್ಟ್ರಗಳಾದ ಜರ್ಮನಿ, ಜಪಾನ್ ಹಾಗೂ ಚೀನಾಗಳೊಂದಿಗೆ ಭಾರತವು ತನ್ನ ದ್ವಿಪಕ್ಷೀಯ ವ್ಯವಹಾರವನ್ನು ತೀವ್ರಗೊಳಿಸಿಕೊಳ್ಳಲಿದೆ. ಅದರಲ್ಲೂ ಜಪಾನ್ ಜತೆಗೆ ಈ ಬಾಂಧವ್ಯ ತುರುಸುಗೊಳ್ಳಲಿದೆ. ಚೀನಾ ವ್ಯವಹಾರದಲ್ಲಿ ಆಗಬಹುದಾದ ವ್ಯತ್ಯಯಗಳನ್ನು ಸುಧಾರಿಸಿಕೊಳ್ಳುವುದಕ್ಕೆ ಮುಖ್ಯ ರಾಷ್ಟ್ರ ಜಪಾನ್ ಆಗಿದ್ದು, ಮೇ ತಿಂಗಳಾಂತ್ಯದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರು ಜಪಾನ್ಗೆ ಭೇಟಿ ಕೊಡಲಿದ್ದಾರೆ.
ಜಪಾನ್ ಭೇಟಿಯ ಬೆನ್ನಲ್ಲೇ ಪ್ರಧಾನಿಯವರು ದ್ವಿಪಕ್ಷೀಯ ಮಾತುಕತೆ ಸಂಬಂಧ ಚೀನಾಕ್ಕೂ ಭೇಟಿ ನೀಡಲಿದ್ದಾರೆ. ಗಮನಿಸಬೇಕಾದ ವಿಷಯ ಎಂದರೆ ಇವೆರಡೂ ಭೇಟಿಗಳು ಒಂದರ ಹಿಂದೆ ಇನ್ನೊಂದರಂತೆ ನಿಗದಿಯಾಗಿದ್ದರೂ ಅವನ್ನು ಒಟ್ಟಾಗಿ ಬೆಸೆಯುವ ಕೆಲಸ ಮಾಡಲಾಗಿಲ್ಲ. ಈ ನಡೆ ಸರಿಯಾಗಿಯೇ ಇದೆ. ಏಕೆಂದರೆ, ರಾಜತಾಂತ್ರಿಕವಾಗಿ ಅದೊಂದು ತಪ್ಪು ನಡೆಯಾಗಿ ಆ ಎರಡೂ ರಾಷ್ಟ್ರಗಳಿಗೆ ತಪ್ಪು ಸಂದೇಶವನ್ನು ನೀಡುವ ಸಂಭವ ಇತ್ತು.
ಜೂನ್ನಲ್ಲಿ ಭಾರತವು ಐಬಿಎಸ್ಎ (ಇಂಡಿಯಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ) ಸಭೆಯ ಆತಿಥ್ಯ ನೀಡಲಿದೆ. 'ಬ್ರಿಕ್ಸ್' ರಾಷ್ಟ್ರಗಳ ಸಭೆ ಶುರುವಾದ ನಂತರ ಐಬಿಎಸ್ಎ ಅನ್ನು ಕೊನೆಗೊಳಿಸಬೇಕು ಎಂಬುದು ಚೀನಾ ಒತ್ತಾಸೆಯಾಗಿತ್ತು. ಆದರೆ ಐಬಿಎಸ್ಎ ಜತೆ ಮುಂದುವರಿಯುವ ದೃಢತೆಯನ್ನು ಭಾರತ ತೋರಿಸಿತು. ಚೀನಾದ ಅನುಪಸ್ಥಿತಿಯೇ ಐಬಿಎಸ್ಎ ಸಭೆಗೆ ಮಹತ್ವ ತಂದುಕೊಟ್ಟಿದೆ!
ಏಪ್ರಿಲ್ 10-11ಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅವರು ದ್ವಿಪಕ್ಷೀಯ ಮಾತುಕತೆಗೆ ಜರ್ಮನಿಯಲ್ಲಿ ಇರಲಿದ್ದಾರೆ. ಜರ್ಮನಿಯ ಮಹತ್ವವನ್ನೂ ತಳ್ಳಿಹಾಕುವಂತಿಲ್ಲ. ಯುರೋಪಿನಲ್ಲೇ ಅತ್ಯಂತ ದೊಡ್ಡ ಅರ್ಥವ್ಯವಸ್ಥೆ ಹೊಂದಿರುವ ದೇಶ ಜರ್ಮನಿ. ಜನಸಂಖ್ಯೆಯ ವಿಷಯದಲ್ಲೂ ಅದು ಬೃಹತ್ ಆಗಿದೆ. ಐರೋಪ್ಯ ಒಕ್ಕೂಟದ ಬಜೆಟ್ಗೆ ಜರ್ಮನಿಯ ಕೊಡುಗೆ ಶೇ. 23ರಷ್ಟು. ಯುರೋಪ್ ರಾಷ್ಟ್ರಗಳ ಪೈಕಿ ಭಾರತದೊಂದಿಗೆ ಅತಿ ಹೆಚ್ಚಿನ ವಹಿವಾಟು ನಡೆಸುವ ದೇಶವೂ ಜರ್ಮನಿಯೇ ಆಗಿದೆ. ಜಾಗತಿಕ ಮಟ್ಟದಲ್ಲಿ ಲೆಕ್ಕ ಹಾಕಿದರೆ ಭಾರತದೊಂದಿಗೆ ವ್ಯಾಪಕವಾಗಿ ವ್ಯವಹರಿಸುತ್ತಿರುವ ಐದನೇ ರಾಷ್ಟ್ರ ಜರ್ಮನಿ. ಭಾರತದೊಂದಿಗಿನ ತಂತ್ರಜ್ಞಾನ ಸಹಯೋಗದಲ್ಲಿ ಎರಡನೇ ದೊಡ್ಡ ರಾಷ್ಟ್ರವೂ ಇದೆ.
2001ರಿಂದಲೂ ಭಾರತ ಮತ್ತು ಜರ್ಮನಿಗಳು ಕಾರ್ಯತಂತ್ರದ ಸಹಭಾಗಿತ್ವವನ್ನು ಹೊಂದಿವೆ. ಮೇ 2011ರಲ್ಲಿ ಸರ್ಕಾರಗಳ ನಡುವಿನ ಸಲಹಾಸಭೆ ಈ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಿದೆ. ಜರ್ಮನಿಯೊಂದಿಗೆ ಈ ಬಗೆಯದೊಂದು ಸಲಹಾಸಭೆ ವ್ಯವಸ್ಥೆ ಇಟ್ಟುಕೊಂಡಿರುವ ರಾಷ್ಟ್ರಗಳ ಪೈಕಿ ಭಾರತವು ಏಷ್ಯದಲ್ಲೇ ಮೊದಲ ರಾಷ್ಟ್ರ. ಭಾರತ ಮತ್ತು ಜರ್ಮನಿಗಳ ನಡುವೆ ಅನೇಕ ಸಾಂಸ್ಥಿಕ ವ್ಯವಸ್ಥೆಗಳೂ ಇವೆ. ಕಾರ್ಯತಂತ್ರ ಸಂವಾದ, ವಿದೇಶಿ ವ್ಯವಹಾರದ ಸಮಾಲೋಚನೆ ಘಟಕ, ಕೈಗಾರಿಕೆ ಮತ್ತು ಆರ್ಥಿಕ ಸಹಕಾರಗಳಿಗೆ ಜಂಟಿ ಸಮಿತಿ, ರಕ್ಷಣಾ ಸಂವಾದ ಸಮಿತಿ, ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಜಂಟಿ ಕಾರ್ಯಸಮೂಹ, ದ್ವಿಪಕ್ಷೀಯ ಹಾಗೂ ಜಾಗತಿಕ ವಿದ್ಯಮಾನಗಳಿಗೆ ಸಂಬಂಧಿಸಿದ ಬಹುವಿಧದ ಆಯಾಮಗಳನ್ನು ಚರ್ಚಿಸುವ ವೇದಿಕೆ....ಹೀಗೆ.
ಇಂಡೋ ಜರ್ಮನ್ ಬಾಂಧವ್ಯ ಹಾಗೂ ಜರ್ಮನಿ ಬಗ್ಗೆ ಈ ಎಲ್ಲ ವಿವರಗಳನ್ನು ಹಿನ್ನೆಲೆಯಲ್ಲಿ ಇರಿಸಿಕೊಂಡಾಗ ಅಲ್ಲಿಗೆ ನಮ್ಮ ಪ್ರಧಾನಿ ಭೇಟಿಯ ಕಾರ್ಯಸೂಚಿ ಏನಿದ್ದಿರಬಹುದು ಎಂಬುದು ಗ್ರಹಿಕೆಗೆ ನಿಲುಕುತ್ತದೆ.
ಇವೇನೇ ಇದ್ದರೂ ಭಾರತವು ರಾಜತಾಂತ್ರಿಕವಾಗಿ ಹೆಚ್ಚಿನ ಗಮನವನ್ನು ನೀಡುವುದು ಜಪಾನ್ನೊಂದಿಗಿನ ಬಾಂಧವ್ಯಕ್ಕೇ ಆಗಿದೆ. ಚೀನಾದೊಂದಿಗೆ ಸಮತೋಲನ ಕಾಪಾಡಿಕೊಳ್ಳುವುದಕ್ಕೆ ಒದಗಿ ಬರುವ ರಾಷ್ಟ್ರ ಜಪಾನ್. ಏಕೆಂದರೆ ಭಾರತ ಮತ್ತು ಜಪಾನ್ ಎರಡೂ ದೇಶಗಳು ಚೀನಾ ಮೇಲೇಳುತ್ತಿರುವುದರ ಬಗ್ಗೆ ಆತಂಕಿತವಾಗಿವೆ ಹಾಗೂ ಅದು 'ಶಾಂತಿಯುತ'ವಾಗಿ ಪ್ರಗತಿ ಹೊಂದುತ್ತಿದೆ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಎರಡೂ ರಾಷ್ಟ್ರಗಳೂ ತಯಾರಿಲ್ಲ. ಚೀನಾವನ್ನು ಎದುರಿಸುವುದಕ್ಕೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಮತ್ತು ಜಪಾನ್ಗಳು ಉತ್ತಮ ಸಹವರ್ತಿಗಳಾಗಬಲ್ಲವು.
2006ರ ಈಚೆಗೆ ಭಾರತ ಮತ್ತು ಜಪಾನ್ಗಳು ವಾರ್ಷಿಕ ಸಭೆಯ ರಾಜತಾಂತ್ರಿಕ ಪ್ರಕ್ರಿಯೆ ಕೈಗೊಂಡಾಗಿನಿಂದ ಈ ನಿಟ್ಟಿನಲ್ಲಿ ಕೆಲಸಗಳು ತ್ವರಿತಗೊಂಡಿವೆ. ಹೀಗೆ ವಾರ್ಷಿಕ ಸಭೆಗಳ ರಾಜತಾಂತ್ರಿಕ ಪ್ರಕ್ರಿಯೆಯನ್ನು ಭಾರತ ಹೊಂದಿರುವುದು ಜಪಾನ್ ಮತ್ತು ರಷ್ಯಾಗಳ ಜತೆ ಮಾತ್ರ. ಅಮೆರಿಕ, ಜರ್ಮನಿ, ಫ್ರಾನ್ಸ್, ಯುಕೆ ಅಲ್ಲದೇ ಐರೋಪ್ಯ ಒಕ್ಕೂಟದ ಬಲಿಷ್ಠ ರಾಷ್ಟ್ರಗಳಿಗೂ ಇಂಥದೊಂದು ಪ್ರಕ್ರಿಯೆ ಸಾಧ್ಯವಾಗಿಲ್ಲ!
ಏಷ್ಯದ ಎರಡನೇ ಮತ್ತು ಮೂರನೇ ಅತಿದೊಡ್ಡ ಅರ್ಥವ್ಯವಸ್ಥೆಗಳಾಗಿರುವ ಜಪಾನ್ ಮತ್ತು ಭಾರತಗಳು ಪ್ರಜ್ವಲಿತ ಪ್ರಜಾಪ್ರಭುತ್ವವನ್ನೂ ಹೊಂದಿವೆ. ಹೀಗಾಗಿ ಇವು ಸ್ವಾಭಾವಿಕ ಸಹಭಾಗಿತ್ವಕ್ಕೆ ಒಳಪಡುತ್ತವೆ. ಜಪಾನ್ನೊಂದಿಗೆ ಭಾರತದ ಬಾಂಧವ್ಯ ಯಾವುದೇ ವಿವಾದಗಳಿಂದ ಹೊರತಾಗಿದೆ. ಸೈದ್ಧಾಂತಿಕ, ಸಾಂಸ್ಕೃತಿಕ ಹಾಗೂ ಪ್ರದೇಶವಾರು ಯಾವುದೇ ವಿವಾದಗಳು ಉಭಯ ರಾಷ್ಟ್ರಗಳ ನಡುವೆ ಇಲ್ಲ. ಭಾರತದ ನೆರೆಹೊರೆಯಾಗಿ ಗುರುತಿಸಿಕೊಂಡಿರುವ ಹೆಚ್ಚಿನ ರಾಷ್ಟ್ರಗಳಿಗೆ ಹೀಗೆ ವಿವಾದಾತೀತವಾಗಿ ಉಳಿದುಕೊಳ್ಳುವುದು ಸಾಧ್ಯವಾಗಿಲ್ಲ. ಭಾರತ ಮತ್ತು ಜಪಾನ್ಗಳ ನಡುವೆ 1500 ವರ್ಷಗಳ ಚಾರಿತ್ರ್ಯಿಕ ಬಾಂಧವ್ಯವಿದೆ.
ಏಷ್ಯದ ಈ ಎರಡು ಪ್ರಮುಖ ಬಲಗಳು 2006ರಿಂದ ಕಾರ್ಯತಂತ್ರ ಹಾಗೂ ಜಾಗತಿಕ ಸಹಭಾಗಿತ್ವವನ್ನು ಹೊಂದಿವೆ. ಪ್ರಧಾನಿಯವರ ಮುಂಬರುವ ಚೀನಾ ಭೇಟಿ ಈ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲಿದೆ. ಚೀನಾದವರಂತೂ ಈ ಭೇಟಿಯನ್ನು ಅಸೂಯೆ ಮತ್ತು ಬೆರಗುಗಣ್ಣುಗಳಿಂದ ಗಮನಿಸಲಿದ್ದಾರೆ.
ಹಳೆಯ ಉಕ್ತಿಯೊಂದು ಹೇಳುವಂತೆ ವೈರಿಗಳ ವೈರಿ ಸ್ನೇಹಿತನಾಗಿರುತ್ತಾನೆ. ಭಾರತವನ್ನು ಈ ನುಡಿಗಟ್ಟಿನ ಹಿನ್ನೆಲೆಯಲ್ಲೇ ಮನಸ್ಸಿನಲ್ಲಿ ಇಟ್ಟುಕೊಂಡು ಚೀನಾವು ಪಾಕಿಸ್ತಾನದೊಂದಿಗೆ ಸ್ನೇಹ ಮಾಡಿದೆ. ಜಪಾನ್ ಬಾಂಧವ್ಯಲ್ಲಿ ಇದಕ್ಕೆ ಪ್ರತ್ಯುತ್ತರವನ್ನು ನೀಡುವ ಸಾಧ್ಯತೆ ಭಾರತಕ್ಕೆ ಇದೆ. ಉಭಯ ದೇಶಗಳ ನಡುವಿನ ವ್ಯವಹಾರದಲ್ಲಿ ಭಾರತ ಮತ್ತು ಜಪಾನ್ಗಳು ತಮ್ಮ ರಾಜಕೀಯ ಸನಿಹವನ್ನು ಬಿಂಬಿಸುತ್ತಿಲ್ಲ ಎಂಬ ಅಂಶ ನಿಜವೇ ಆಗಿದೆ. ಇತ್ತೀಚಿನ ಅಂಕಿಅಂಶದಂತೆ ಉಭಯ ದೇಶಗಳ ನಡುವಿನ ವ್ಯವಹಾರದ ಮೊತ್ತ 20 ಬಿಲಿಯನ್ ಡಾಲರ್ಗಳಾಗಿವೆ. ಆದರೆ ಭಾರತ-ಚೀನಾ ನಡುವಿನ ವ್ಯಾಪಾರ ಹಾಗೂ ಚೀನಾ-ಜಪಾನ್ ನಡುವಿನ ವ್ಯಾಪಾರಗಣನೆಗೆ ತೆಗೆದುಕೊಂಡಾಗ ಇದು ಯಕಶ್ಚಿತ್ ಎಂದೇ ಅನ್ನಿಸುವುದರಲ್ಲಿ ಸಂದೇಹವಿಲ್ಲ. ಭಾರತ ಮತ್ತು ಚೀನಾಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟು 80 ಬಿಲಿಯನ್ ಡಾಲರ್ಗಳಾಗಿದ್ದರೆ, ರಾಜಕೀಯವಾಗಿ ಸಂಘರ್ಷಗಳನ್ನು ಹೊಂದಿದ್ದಾಗಿಯೂ ಜಪಾನ್ ಮತ್ತು ಚೀನಾಗಳ ನಡುವಿನ ವ್ಯಾಪಾರ ಪ್ರಮಾಣ ಬರೋಬ್ಬರಿ 300 ಬಿಲಿಯನ್ ಡಾಲರ್ಗಳಷ್ಟು.
ಆದರೆ ರಾಜಕೀಯ ಸಂಬಂಧ ಹದಗೆಟ್ಟಾಗ ವ್ಯಾಪಾರವೊಂದೇ ಯಾವುದೇ ಭರವಸೆಗಳನ್ನು ಮುಂದುವರಿಸುವುದಿಲ್ಲ. ಈ ನಿಟ್ಟಿನಲ್ಲಿ ಜಪಾನ್ ಮತ್ತು ಚೀನಾ ಬಾಂಧವ್ಯ ಹಾಗೂ ಭಾರತ-ಚೀನಾ ಬಾಂಧವ್ಯವೂ ಭವಿಷ್ಯದಲ್ಲಿ ಆತಂಕಕ್ಕೆ ಈಡಾಗಬಹುದು. ಅದೃಷ್ಟವಷಾತ್, ಭಾರತವು ಚೀನಾ ವಿರುದ್ಧದ ತನ್ನ ಕಾರ್ಯತಂತ್ರ ದೃಷ್ಟಿಯಿಂದಲೇ ಜಪಾನ್ ಬಾಂಧವ್ಯವನ್ನು ವೃದ್ಧಿಸಿಕೊಂಡಿದೆ. ಕೆಲವರ್ಷಗಳ ಹಿಂದೆ ಟೋಕ್ಯೊದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ತುಂಬ ನೇರ ಪ್ರಶ್ನೆಯನ್ನು ಯಾರೋ ಕೇಳಿದ್ದರು. 'ನೀವು ಚೀನಾವನ್ನು ಹೇಗೆ ನಿಭಾಯಿಸುವಿರಿ' ಎಂದು. ಅದಕ್ಕೆ ಪ್ರಧಾನಿಯವರ ಉತ್ತರ ಈ ಧಾಟಿಯಲ್ಲಿತ್ತು: ಪ್ರತಿ ವಿಷಯದಲ್ಲೂ ಚೀನಾದ ಜತೆ ಸಂವಾದ ಜಾರಿಯಲ್ಲಿರಿಸುವುದು ಹಾಗೂ ವಿವಾದಾತ್ಮಕವಾದ ದ್ವಿಪಕ್ಷೀಯ ಸಂಗತಿಗಳನ್ನು ನೇಪಥ್ಯದಲ್ಲಿ ಇರಿಸುವುದು.
ಚೀನಾದ ಜತೆ ವ್ಯವಹರಿಸುವಾಗ ಭಾರತ ಮತ್ತು ಜಪಾನ್ಗಳೆರಡೂ ಇದೇ ನೀತಿಯನ್ನೇ ಈಗ ಅನುಸರಿಸಿಕೊಂಡಿವೆ. ಪ್ರಧಾನಿಯವರ ಮುಂದಿನ ಜಪಾನ್ ಭೇಟಿಯೂ ಚೀನಾದ ಜತೆ ವ್ಯವಹರಿಸುವುದಕ್ಕೆ ಏಷ್ಯದ ಈ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳನ್ನು ಸಜ್ಜುಗೊಳಿಸಲಿದೆ. ಭಾರತವು ಜಪಾನ್ಗೆ ಇನ್ನಷ್ಟು ಹತ್ತಿರವಾಗುವ ಮೂಲಕ ಚೀನಾಕ್ಕೆ ಟಾಂಗ್ ನೀಡಬೇಕು.
- ರಾಜೀವ್ ಶರ್ಮ
anisikeprabha@gmail.com