ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಈಸ್ಟರ್‌ನಂದು ಜನ್ಮತಾಳಿದ ಬಿಜೆಪಿ

Mainashree
Updated On : 4 Apr 2013, 12:10 pm

ಕಳೆದ ರವಿವಾರ, 31 ಮಾರ್ಚ್ 2013ರಂದು 'ಈಸ್ಟರ್ ಸಂಡೆ' ಇತ್ತು. ಇದು ಕ್ರಿಶ್ಚಿಯನ್ನರ ಅತ್ಯಂತ ಮಹತ್ವಪೂರ್ಣ ಹಬ್ಬ. ಜಾರ್ಜಿಯನ್ ಕ್ಯಾಲೆಂಡರ್‌ನ ಪ್ರಕಾರ ಉಳಿದ ಕ್ರಿಶ್ಚಿಯನ್ ಹಬ್ಬಗಳೆಲ್ಲ ಪ್ರತ್ಯೇಕ ವರ್ಷಗಳಲ್ಲಿ ಒಂದು ನಿಶ್ಚಿತ ದಿನದಂದು ಬಂದರೆ, ಈಸ್ಟರ್ ಮಾತ್ರ ಪ್ರತ್ಯೇಕ ವರ್ಷದ ವಿಭಿನ್ನ ತಿಥಿಗಳಲ್ಲಿ ಬರುತ್ತದೆ.
ಉದಾಹರಣೆಗೆ ಮುಂದಿನ ವರ್ಷ ಈಸ್ಟರ್ ಅನ್ನು 20 ಏಪ್ರಿಲ್‌ರಂದು ಆಚರಿಸಲಾಗುವುದು. 1980ರಲ್ಲಿ ಸ್ಥಾಪಿತವಾದ ಭಾರತೀಯ ಜನತಾ ಪಾರ್ಟಿಯಲ್ಲಿನ ನಮಗೆಲ್ಲ ಈ 'ಈಸ್ಟರ್ ಸಂಡೆ' ಅತ್ಯಂತ ಮಹತ್ವ ದಿನ. 1980ರಲ್ಲಿ ಈಸ್ಟರ್ ಸಂಡೆ 6 ಏಪ್ರಿಲ್ ರವಿವಾರದಂದು ಬಂದಿತ್ತು. ಅದೇ ದಿನ ಬಿಜೆಪಿ ಅಸ್ತಿತ್ವಕ್ಕೆ ಬಂದದ್ದು.
ಜೂನ್ 1975ರಲ್ಲಿ ಅಲಾಹಾಬಾದ್ ಉಚ್ಚ ನ್ಯಾಯಾಲಯ ಸಮಾಜವಾದಿ ಪಕ್ಷದ ನಾಯಕ ರಾಜನಾರಾಯಣ್ ಹಾಕಿದ್ದ ಪಿಟೀಷನ್ನಿನ ಮೇಲೆ ನಿರ್ಣಯ ಕೊಡುತ್ತಾ ಇಂದಿರಾಗಾಂಧಿಯವರು ಚುನಾವಣೆಗೆ ಸ್ಪರ್ಧಿಸುವುದನ್ನು ರದ್ದು ಮಾಡಿತ್ತು. ಇಂದಿರಾಗಾಂಧಿ ಚುನಾವಣಾ ಭ್ರಷ್ಟಾಚಾರದ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ ತದನಂತರದ ಆರು ವರ್ಷಗಳವರೆಗೆ ಯಾವುದೇ ರೀತಿಯ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ ಎಂದು ನ್ಯಾಯಾಲಯ ತೀರ್ಪಿತ್ತಿತು.
ಮಾರ್ಚ್ 1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಮತದಾರರು ಸ್ವಾತಂತ್ರ್ಯಾ ನಂತರ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕಿತ್ತೆಸೆದರು. ಆಗ ಮೊರಾರ್ಜಿ ದೇಸಾಯಿಯವರ ನೇತೃತ್ವದಲ್ಲಿ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಿತು.
1952ರ ನಂತರ ನಡೆದ ಎಲ್ಲಾ ಸಂಸದೀಯ ಚುನಾವಣೆಗಳಲ್ಲಿ ನಾನು ಪ್ರಚಾರಕನಾಗಿ ಅಥವಾ ಅಭ್ಯರ್ಥಿಯಾಗಿ  ಭಾಗವಹಿಸಿದ್ದೇನಾದರೂ, 1977ರ ಚುನಾವಣೆ ಮಾತ್ರ ದೇಶದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಮಹತ್ವಪೂರ್ಣವಾಗಿತ್ತು ಎಂದು ನಿಸ್ಸಂಶಯವಾಗಿ ಹೇಳಬಲ್ಲೆ. ಭಾರತೀಯ ಪ್ರಜಾಪ್ರಭುತ್ವ ಬಹುಶಃ ಎಂದಿಗೂ ಚುನಾವಣಾ ಫಲಿತಾಂಶದ ಮೇಲೆ ಆ ಸಮಯದಲ್ಲಿನಂತೆ ಅಧೀನವಾಗಿರಲಿಲ್ಲವೇನೋ? ಅದರಂತೆಯೇ, ಇನ್ನುಳಿದ ಯಾವುದೇ ಚುನಾವಣೆಗಳಲ್ಲೂ ಭಾರತೀಯ ಮತದಾರನಲ್ಲಿನ ಈ ರೀತಿಯ ಲೋಕತಾಂತ್ರಿಕ ವಿವೇಕ ಕಾಣಸಿಗುವುದಿಲ್ಲವೇನೋ? ಮತದಾರರು ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಕಟುವಾಗಿ ಶಿಕ್ಷಿಸಿದರು. ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರದಂತಹ ಅನೇಕ ಪ್ರದೇಶಗಳಲ್ಲಿ ಕಾಂಗ್ರೆಸ್‌ಗೆ ಒಂದು ಸೀಟೂ ಕೂಡ ಸಿಗಲಿಲ್ಲ.
ಇನ್ನು ಮೋರಾರ್ಜಿ ದೇಸಾಯಿಯವರ ಸರ್ಕಾರವೂ ಹೆಚ್ಚು ದಿನ ಉಳಿಯಲಿಲ್ಲ. ಒಳ ತಿಕ್ಕಾಟಗಳಿಂದಾಗಿ ಅದು 1979ರಲ್ಲೇ ಕುಸಿದು ಬಿದ್ದಿತು. ಮುಂದಿನ ಲೋಕಸಭಾ ಚುನಾವಣೆಗಳು 1980ರಲ್ಲಿ ಜರುಗಿದವು. ಈ ಬಾರಿ ಅತ್ಯಂತ ಕೆಟ್ಟದಾಗಿ ಸೋಲಲಿದ್ದೇವೆ ಎಂದು ಜನತಾ ಪಕ್ಷದಲ್ಲಿದ್ದ ನಮಗೆಲ್ಲ ಅನಿಸತೊಡಗಿತ್ತು. ನಿಜ ಹೇಳಬೇಕೆಂದರೆ ಈ ಒಳತಿಕ್ಕಾಟಗಳು ಜನತಾದಳವನ್ನು ಶೋಚನೀಯ ಪರಿಸ್ಥಿತಿಗೆ ತಳ್ಳಿಬಿಟ್ಟಿದ್ದವು. 1977ರಲ್ಲಿ 298 ಸ್ಥಾನಗಳನ್ನು ಗೆದ್ದ ಪಕ್ಷ 1980ರ ವೇಳೆಗೆ ಕೇವಲ 31 ಸ್ಥಾನಕ್ಕೆ ಇಳಿದುಬಿಟ್ಟಿತು! 1977ರಲ್ಲಿ 93ಸ್ಥಾನಗಳನ್ನು ಹೊಂದಿದ್ದ ಜನಸಂಘ ಆ ಬಾರಿ 16 ಸ್ಥಾನಗಳನ್ನಷ್ಟೇ ಗಳಿಸಿತ್ತು.
ಆ ಕೂಡಲೇ ಜನತಾ ಪಕ್ಷದ ಕಾರ್ಯಕಾರಿಣಿ ಸಭೆಯನ್ನು ಕರೆಯಲಾಯಿತು. ಪಕ್ಷದ ಸಂಘಟನಾತ್ಮಕ ವೃದ್ಧಿಯತ್ತ ಹೆಚ್ಚು ಗಮನ ಕೊಡಬೇಕು ಎಂಬ ನಿರ್ಣಯಕ್ಕೆ ಬರಲಾಯಿತು. ಇನ್ನು ಜನತಾ ಪಕ್ಷದ ಸದಸ್ಯತ್ವ ಅಭಿಯಾನವನ್ನು ನಡೆಸಲೂ ನಿರ್ಧರಿಸಲಾಯಿತು. ನನಗನ್ನಿಸುವುದೇನೆಂದರೆ, ಈ ನಿರ್ಣಯದಿಂದಾಗಿಯೇ ಪಕ್ಷದಲ್ಲಿನ ಕೆಲವು ವರ್ಗಗಳು ದ್ವಿಸದಸ್ಯ ವಿರೋಧಿ ಆಂದೋಲನಕ್ಕೆ ಮುನ್ನುಡಿ ಬರೆದವು ಎಂದು. ಜನಸಂಘದ ಪೂರ್ವ ಸದಸ್ಯರಲ್ಲಿ ಬಹುತೇಕರು ಕೇವಲ ಜನತಾ ಪಕ್ಷದ ಸದಸ್ಯರಷ್ಟೇ ಅಲ್ಲದೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರೂ ಆಗಿದ್ದಾರೆ ಎಂಬುದು ಕೆಲವರ ಆರೋಪವಾಗಿತ್ತು. ಆದರೆ ಆರ್‌ಎಸ್‌ಎಸ್ ರಾಜಕೀಯ ದಳವಲ್ಲ ಎಂಬುದು ಎಲ್ಲರಿಗೂ ಗೊತ್ತಿತ್ತು. ಇದು ಹೇಗಿತ್ತೆಂದರೆ, ಆರ್ಯಸಮಾಜಿಯಾಗಿರುವ ಕಾಂಗ್ರೆಸ್ ನಾಯಕನೊಬ್ಬನ ಮೇಲೆ ದ್ವಿಸದಸ್ಯತ್ವದ ಆರೋಪ ಮಾಡಿದಂತೆ! ಜನಸಂಘದ ಸದಸ್ಯರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಸಂಬಂಧವಿಟ್ಟುಕೊಳ್ಳಲು ಬಿಟ್ಟರೆ ಮುಸ್ಲಿಂ ಮತದಾರರು ಮುನಿಸಿಕೊಳ್ಳುತ್ತಾರೆ ಎಂದು ಸಣ್ಣ ವರಾತವೂ ಆರಂಭವಾಯಿತು.
'ದ್ವಿಸದಸ್ಯತ್ವದ' ಕಹಿಘಟನೆಯನ್ನು ಸರಿಯಾಗಿ ಪರಾಮರ್ಶಿಸಿದವರು, ಪ್ರಖ್ಯಾತ ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಸೇನಾನಿ ಅಚ್ಯುತ್ ಪಟವರ್ಧನ್ ಅವರು.  ಜೂನ್ 9, 1979ರಂದು 'ಇಂಡಿಯನ್ ಎಕ್ಸ್‌ಪ್ರೆಸ್‌'ಗೆ ಬರೆದ 'ಜನತೆ, ಆರ್‌ಎಸ್‌ಎಸ್ ಮತ್ತು ರಾಷ್ಟ್ರ' ಎಂಬ ಲೇಖನದಲ್ಲಿ ಅವರು ಹೀಗೆ ಹೇಳುತ್ತಾರೆ-'ತುರ್ತು ಪರಿಸ್ಥಿತಿಯ ವಿರುದ್ಧದ ಜನ ಸಂಘರ್ಷದಲ್ಲಿ ಅತ್ಯುತ್ತಮ ಯೋಗದಾನ ನೀಡಿದ ಕಾರಣಕ್ಕೆ ಭಾರತೀಯ ಜನಸಂಘವನ್ನು ಜನತಾ ಪಕ್ಷದ ಪ್ರಮುಖ ಘಟಕವನ್ನಾಗಿ ಮಾಡಿಕೊಳ್ಳಲಾಯಿತು. ಮಧು ಲಿಮಯೆ, ರಾಜನಾರಾಯಣ್ ಮತ್ತವರ ಸಮರ್ಥಕರು ಜನಸಂಘ ಅಥವಾ ಸಂಘದ ಹೆಸರು ಕೆಡಿಸಲು ದೊಡ್ಡ ಅಭಿಯಾನವನ್ನೇ ನಡೆಸಿದ್ದಾರೆ. ಹಾಗಿದ್ದರೆ ಜನಸಂಘ ಅಥವಾ ಸಂಘ ಮಾಡಿದ ತಪ್ಪಾದರೂ ಏನು?' ವಾಜಪೇಯಿ, ನಾನಾಜಿ ದೇಶಮುಖ್ ಮತ್ತು ನಾನು ಈ ದ್ವಿಸದಸ್ಯ ವಿರೋಧಿ ಅಭಿಯಾನವನ್ನು ಉಗ್ರವಾಗಿ ಖಂಡಿಸಿದೆವು. ಪಕ್ಷದ ಸಭೆಯಲ್ಲಿ ಮಾತನಾಡುತ್ತಾ ನಾನು ಹೇಳಿದೆ, 'ನಾವು ಅಸ್ಪೃಶ್ಯರು ಎನ್ನುವ ರೀತಿಯಲ್ಲಿ ಪಕ್ಷದಲ್ಲಿ ನಮ್ಮೊಂದಿಗೆ ವರ್ತಿಸಲಾಗುತ್ತಿದೆ...
'ಜನತಾ ಪಾರ್ಟಿಯಲ್ಲಿ ಐದು ಘಟಕಗಳಿದ್ದವು- ಕಾಂಗ್ರೆಸ್(ಒ), ಭಾರತೀಯ ಲೋಕದಳ, ಸೋಷಿಯಲಿಸ್ಟ್ ಪಾರ್ಟಿ ಮತ್ತು ಜನಸಂಘ. ರಾಜಕೀಯ ದೃಷ್ಟಿಯಿಂದ ಹೇಳುವುದಾದರೆ, ಇದರಲ್ಲಿನ ಮೊದಲು ನಾಲ್ಕು ಪಕ್ಷಗಳು ದ್ವಿಜರಂತೆ ಇದ್ದವು, ಆದರೆ ಜನಸಂಘದ ಸ್ಥಿತಿ ಮಾತ್ರ ಪರಿವಾರದಲ್ಲಿ ಸೇರ್ಪಡೆಗೊಳಿಸಿಕೊಂಡು ಹರಿಜನರಂತಿತ್ತು. 1977ರಲ್ಲಿ ಇದನ್ನು ಸ್ವೀಕಾರ ಮಾಡುವಾಗ ಬಹಳಷ್ಟು ಹರ್ಷೋಲ್ಲಾಸವಿತ್ತು. ಆದರೆ ಸಮಯದ ಜೊತೆಗೆ ಪರಿವಾರದಲ್ಲಿ ಒಬ್ಬ 'ಹರಿಜನನ' ಉಪಸ್ಥಿತಿ, ಸಮಸ್ಯೆಯನ್ನು ತಂದಿಟ್ಟಿತು! ಈ ರೀತಿ ಯೋಚನೆ ಮಾಡುವವನು ನಾನೊಬ್ಬನೇ ಅಲ್ಲ. ದೇಶದಲ್ಲಿರುವ ಲಕ್ಷಾಂತರ ಕಾರ್ಯಕರ್ತರ ಮತ್ತು ಸಮರ್ಥಕರ ಕೂಗ ನನ್ನ ಧ್ವನಿಯಲ್ಲಿ ಅಡಗಿದೆ. ಫೆ-ಮಾರ್ಚ್ 1980ರಂದು ಸುಂದರ್ ಸಿಂಗ್ ಭಂಡಾರಿ ಅವರು ಮತ್ತು ನಾನು ದೇಶದಾದ್ಯಂತ ಪ್ರವಾಸ ಮಾಡಿ, ಜನತಾ ಪಾರ್ಟಿಯ ಬಗ್ಗೆ ಜನರ ವಿಚಾರವೇನಿದೆ ಎನ್ನುವುದನ್ನು ಅರಿತುಕೊಳ್ಳಲು ಪ್ರಯತ್ನ ಪಟ್ಟೆವು.  ಜನಸಂಘದ ಬಹುತೇಕ ಪೂರ್ವವರ್ತಿ ಕಾರ್ಯಕರ್ತರಲ್ಲಿ ಒಂದೇ ಅಸಮಾಧಾನವಿತ್ತು- 'ಪಕ್ಷದಲ್ಲಿ ನಮ್ಮನ್ನು ದ್ವಿತೀಯ ದರ್ಜೆಯವರಂತೆ ನೋಡಲಾಗುತ್ತಿದೆ"
ದ್ವಿಸದಸ್ಯತ್ವದ ವಿಚಾರವಾಗಿ ಅಂತಿಮ ನಿರ್ಣಯ ಕೈಗೊಳ್ಳುವ ಉದ್ದೇಶದಿಂದ ಪಕ್ಷದ ಕಾರ್ಯಕಾರಿಣಿ ಸಭೆಯನ್ನು ಏಪ್ರಿಲ್ 4 ರಂದು ಕರೆಯಲಾಯಿತು. ಈ ಸಭೆಯ ಫಲಿತಾಂಶವೇನಾಗಬಹುದು ಎನ್ನುವ ಊಹೆಯ ಮೇಲೆ 1980ರ ಏಪ್ರಿಲ್ 5 ಮತ್ತು 6ನೇ ತಾರೀಖಿನಂದು ವಾಜಪೇಯಿ ಮತ್ತು ನಾನಾಜಿಯವರ ನೇತೃತ್ವದಲ್ಲಿ ಸಮ್ಮೇಳನವೊಂದನ್ನು ನಡೆಸಲು ತೀಮಾರ್ನಿಸಲಾಯಿತು.  ಅಂದುಕೊಂಡಂತೆಯೇ ಜನತಾ ಪಾರ್ಟಿಯ ಕಾರ್ಯಕಾರಿಣಿ ಸಭೆಯಲ್ಲಿ ಜನಸಂಘದ ಎಲ್ಲಾ ಸದಸ್ಯರನ್ನು ಪಕ್ಷದಿಂದ ಉಚ್ಛಾಟಿಸುವ ನಿರ್ಣಯ ಹೊರಬಿದ್ದಿತು. ನಾನು ನನ್ನ ಆತ್ಮಕತೆಯಲ್ಲಿ ಈ ಕುರಿತು ಹೀಗೆ ಬರೆದುಕೊಂಡಿದ್ದೇನೆ- 'ಈ ನಿರ್ಣಯದಿಂದಾಗಿ ನಾವೆಲ್ಲರೂ ನಿಟ್ಟುಸಿರುಬಿಟ್ಟೆವು. 5 ಮತ್ತು 6 ನೇ ಏಪ್ರಿಲ್‌ನಂದು ನಡೆದ ಸಮ್ಮೇಳನ ನಮಗೆಲ್ಲರಿಗೂ ಸ್ಫೂರ್ತಿದಾಯಕ ಭಾವನೆ ಮತ್ತು ವಿಶ್ವಾಸವನ್ನು ತುಂಬಿತು. ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ 3,500 ಕ್ಕೂ ಹೆಚ್ಚಿನ ಪ್ರತಿನಿಧಿಗಳು ಉಪಸ್ಥಿತರಿದ್ದರು ಮತ್ತು ಏಪ್ರಿಲ್ 6 ರಂದು 'ಭಾರತೀಯ ಜನತಾ ಪಕ್ಷದ' ಹೆಸರು ಮೊದಲ ಬಾರಿಗೆ ಗಟ್ಟಿಯಾಗಿ ಧ್ವನಿಸಿತು. ಇದರ ಮೊದಲ ಅಧ್ಯಕ್ಷರನ್ನಾಗಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಮತ್ತು  ಸಿಕಂದರ್ ಬಖ್ತ್, ಸೂರಜ್‌ಭಾನ್‌ರ ಜೊತೆಗೆ ನನ್ನನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.' ಈ ಲೇಖನದ ಶುರುವಾತಿನಲ್ಲಿ ನಾನು ಗುಡ್ ಫ್ರೈಡೆಯ ನಂತರದ ಎರಡು ದಿನದಲ್ಲಿ ಬರುವ 'ಈಸ್ಟರ್ ಸಂಡೆ'ಯ ಬಗ್ಗೆ ಹೇಳಿದ್ದೆ. ಗುಡ್ ಫ್ರೈಡೆಯಂದು ಏಸು ಕ್ರಿಸ್ತನನ್ನು ಶಿಲುಬೆಗೇರಿಸಲಾಗಿತ್ತು. ಈಸ್ಟರ್ ಸಂಡೆಯಂದು ಆತ ಪುನರ್ಜೀವಿತನಾಗಿದ್ದ ಎಂದು ಹೇಳಲಾಗುತ್ತದೆ. 1980ರಂದು ಜನತಾ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ನಮ್ಮನ್ನೆಲ್ಲ ಶಿಲುಬೆಗೇರಿಸಲಾಯಿತು. ಅದಾದ ಎರಡು ದಿನದ ನಂತರ, ಅಂದರೆ ಈಸ್ಟರ್ ಸಂಡೆಯಂದು ನಾವೆಲ್ಲ ಮತ್ತೆ ಹುಟ್ಟುಬಂದೆವು!
ಹೀಗೊಂದು ಕತೆ: ಒಬ್ಬ ವ್ಯಕ್ತಿ ಸತ್ತು, ನೇರವಾಗಿ ಸೇಂಟ್ ಪೀಟರ್‌ನ ಬಳಿ ತಲುಪುತ್ತಾನೆ. ಸೇಂಟ್ ಪೀಟರ್ ಹೇಳುತ್ತಾನೆ, 'ಈ ದಿನ ನಿನಗೆ ಎರಡು ಆಯ್ಕೆ ಕೊಡುತ್ತೇನೆ. ಸ್ವರ್ಗ ಮತ್ತು ನರಕದ ಬಾಗಿಲುಗಳೆರಡನ್ನೂ ತೆರೆಯುತ್ತೇನೆ. ಎರಡರಲ್ಲೂ ಒಂದೊಂದು ದಿನ ಇದ್ದು ಬಾ. ಆ ನಂತರ ಎಲ್ಲಿರಬೇಕು ಎಂಬುದನ್ನು ಯೋಚಿಸು' ಆ ವ್ಯಕ್ತಿ ಮೊದಲು ನರಕವನ್ನು ಪ್ರವೇಶಿಸಿ ಕಣ್ಣು ಹಾಯಿಸುತ್ತಾನೆ...ಎಲ್ಲಿ ನೋಡಿದರೂ ಹಸಿರು ಗಿಡಮರಗಳು, ಎದುರಿನಲ್ಲೇ ದೊಡ್ಡದೊಂದು ಗಾಲ್ಫ್ ಮೈದಾನ, ಅದರಲ್ಲಿ ತನ್ನ ಹಳೆಯ ಗೆಳೆಯರು, ಅಲ್ಲೆಲ್ಲಾ ಬಿಯರ್ ಬಾಟಲಿಗಳು! ಆತ ಒಂದು ಸುತ್ತು ಗಾಲ್ಫ್ ಆಡಿ, ಗೆಳೆಯರೊಂದಿಗೆ ಹರಟಿ, ಕಂಠ ಪೂರ್ತಿ ಬಿಯರ್ ಕುಡಿದು ಹೊರಬರುತ್ತಾನೆ.
ಮರುದಿನ ಸ್ವರ್ಗಕ್ಕೆ ಹೋಗುತ್ತಾನೆ. ಅಲ್ಲಿ ಹೆಚ್ಚಿನದ್ದೇನೂ ಕಾಣಿಸಲಿಲ್ಲ. ಒಂದು ಮೋಡದಿಂದ ಇನ್ನೊಂದು ಮೋಡಕ್ಕೆ ಜಿಗಿಯಬಹುದಾಗಿತ್ತಷ್ಟೆ!  ಎರಡು ದಿನ ಕಳೆದ ಮೇಲೆ ಸೇಂಟ್ ಪೀಟರ್ ಈತನೆದುರು ಪ್ರತ್ಯಕ್ಷವಾಗಿ, 'ಯಾವುದು ಹೆಚ್ಚು ಇಷ್ಟವಾಯಿತು?' ಎಂದು ಕೇಳುತ್ತಾನೆ. 'ನಿಸ್ಸಂಶಯವಾಗಿಯೂ, ನರಕವೇ ಅತ್ಯುತ್ತಮವಾಗಿದೆ. ನಾನಲ್ಲೇ ಇರುತ್ತೇನೆ' ಎಂದುತ್ತರಿಸಿದ ಆ ವ್ಯಕ್ತಿ.
ನರಕದ ಬಾಗಿಲು ತೆರೆದುಕೊಂಡಿತು. ಈತ ಒಳಹೊಕ್ಕ. ಆದರೆ ಹಿಂದಿನ ದಿನವಿದ್ದ ಹಸಿರು, ಗಾಲ್ಫ್ ಮೈದಾನ, ಗೆಳೆಯರು, ಬಿಯರ್ ಬಾಟಲ್‌ಗಳ್ಯಾವುವೂ ಇರಲಿಲ್ಲ. ಬದಲಿಗೆ ಎಲ್ಲೆಲ್ಲೂ ಧೂಳು, ಹೊಗೆ, ಜ್ವಾಲೆಯೇ ತುಂಬಿತ್ತು.
ಗಾಬರಿಯಿಂದ 'ಇದೆಲ್ಲ ಹೇಗಾಯ್ತು?' ಎಂದು ಪಕ್ಕದಲ್ಲೇ ಇದ್ದ ರಾಕ್ಷಸನನ್ನು ಆತ ಪ್ರಶ್ನಿಸುತ್ತಾನೆ. ಅದಕ್ಕೆ ಆ ರಾಕ್ಷಸ ಉತ್ತರಿಸುತ್ತಾನೆ- 'ನೆನ್ನೆ ಇಲ್ಲಿ ನಾವು ಪ್ರಚಾರ ಅಭಿಯಾನ ನಡೆಸಿದ್ವಿ...ಇವತ್ತು ನೀವು 'ಮತ' ನೀಡಿದ್ರಿ!'

 ಲಾಲ್‌ಕೃಷ್ಣ ಆಡ್ವಾಣಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement