ತಿನ್ನುವಿಕೆ ಮತ್ತು ಹೂಡಿಕೆ
ನಿಮ್ಮ ಹಣದ ಹೂಡಿಕೆ ಅನ್ನೋದು ತಿನ್ನುವುದರೊಂದಿಗೇನಾದರೂ ಸಾಮ್ಯತೆ ಹೊಂದಿದೆಯೇ? ಪರೀಕ್ಷಿಸೋಣ. ನಲ್ವತ್ತು ಮಂದಿಯ ತಂಡವೊಂದನ್ನು ಕೊಠಡಿಯಲ್ಲಿ ಕೂರಿಸಿ ಕೆಲವು ಪ್ರಶ್ನೆಗಳನ್ನು ಕೇಳಿದೆವು ಎಂದಿಟ್ಟುಕೊಂಡರೆ ಅವುಗಳಿಗೆ ಅವರಿಂದ ಬರಬಹುದಾದ ಉತ್ತರಗಳು ಹೇಗಿರಬಹುದು ಎಂಬುದನ್ನು ಪಟ್ಟಿ ಮಾಡೋಣ.
- ನಾವು ಯಾವ ಬಗೆಯ ಆಹಾರವನ್ನು ಸೇವಿಸಬೇಕು?
ಫ್ರೆಶ್ ಆಗಿರುವಂಥದ್ದು, ತರಕಾರಿಗಳು ಹಸಿರಾಗಿರಬೇಕು, ಉಪ್ಪಿನ ಪ್ರಮಾಣ ಕಡಿಮೆಯಿದ್ದು ಪೌಷ್ಟಿಕವಾಗಿರಬೇಕು. ತೈಲ ಇರಬಾರದು ಅಥವಾ ಕಡಿಮೆ ಪ್ರಮಾಣದಲ್ಲಿರಬೇಕು.
-ಹೇಗೆ ಊಟ ಮಾಡಬೇಕು?
ದಿನಕ್ಕೆ ಮೂರು ಬಾರಿ ಆಹಾರ. ಬ್ರೇಕ್ಫಾಸ್ಟ್ ಬಹಳ ಪ್ರಮುಖವಾದದ್ದು. ಮಧ್ಯಾಹ್ನದ ಊಟವನ್ನೂ ಗಡದ್ದಾಗಿ ತೆಗೆದುಕೊಳ್ಳಬೇಕು. ರಾತ್ರಿ ಲೈಟ್ ಆಗಿ ಆಹಾರ ತೆಗೆದುಕೊಳ್ಳುವುದು.
- ಆಹಾರ ಸೇವನೆ ವಿಧಾನ ಹೇಗಿರಬೇಕು?
ಕುಟುಂಬದ ಜತೆ ಊಟ ಮಾಡಬೇಕು. ಟಿವಿಯನ್ನು ಆಫ್ ಮಾಡಿರಬೇಕು. ಆಹಾರ ಫ್ರೆಶ್ ಆಗಿದ್ದಿರಬೇಕು. ಅದರಲ್ಲಿ ಶೇಕಡ 50ರಷ್ಟು ಹಸಿರು ಸಲಾಡ್ ಹಾಗೂ ಉಳಿದ ಆಹಾರ ತಿನ್ನುವ ಅವಧಿಗಿಂತ ಹೆಚ್ಚೆಂದರೆ ಎರಡು ತಾಸು ಹಿಂದಷ್ಟೇ ಸಿದ್ಧಗೊಳಿಸಿದ್ದಾಗಿರಬೇಕು. ಆಹಾರವನ್ನು ಸರಿಯಾಗಿ ಅಗೆದು ತಿನ್ನಬೇಕು.
ಈಗ ಹಣ ಹೂಡಿಕೆ ಸಂದರ್ಭದಲ್ಲಿ ಯಾವ ವಿಧಾನ ಅನುಕರಣೀಯ ಎಂದು ನೋಡೋಣ.
- ಎಲ್ಲಿ ಹಣ ಹೂಡಬೇಕು?
ನಾವು ಯಾವುದನ್ನು ತಿಳಿದಿದ್ದೇವೋ, ನಮಗೆ ಸರಿಯಾಗಿ ಅರ್ಥವಾಗಿದೆಯೋ ಅಲ್ಲಷ್ಟೇ.
- ಇಕ್ವಿಟಿ ಮಾರುಕಟ್ಟೆ ಹೇಗೆ ಕೆಲಸ ನಿರ್ವಹಿಸುತ್ತೆ ಅನ್ನೋದು ಗೊತ್ತಿದೆಯೇ?
ನಿಜ ಹೇಳಬೇಕೆಂದರೆ, ಸರಿಯಾಗಿ ತಿಳಿಯದು.
- ನೀವು ಎಷ್ಟರಮಟ್ಟಿಗೆ ಮೇಲಿಂದ ಮೇಲೆ ಹೂಡಿಕೆ ಮಾಡಬೇಕು?
ಪದೇ ಪದೆ ಯಾವಾಗಾಗುತ್ತೋ ಅಷ್ಟು ಬಾರಿ, ಎಷ್ಟು ಆಗುತ್ತೋ ಅಷ್ಟು, ಎಷ್ಟು ದೀರ್ಘ ಅವಧಿಗಾಗುವುದೋ ಅಷ್ಟು ಹೂಡಿಕೆ ಮಾಡಬೇಕು.
- ನೀವು ಸೂಕ್ತವಾಗಿ ಅಸೆಟ್ ಹಂಚಿಕೆ ಮಾಡಬೇಕೆ?
ಹೌದು! ನಾವು ಚಿಕ್ಕ ಪ್ರಾಯದವರಿದ್ದಾಗ ಹೆಚ್ಚಿನ ಇಕ್ವಿಟಿಯನ್ನು, 70 ವರ್ಷ ತಲುಪಿದಾಗ ಇಕ್ವಿಟಿಯಲ್ಲಿ ಸಮತೋಲನವನ್ನು ಸಾಧಿಸಬೇಕು.
ಈಗ ನಿಜ ಜೀವನದಲ್ಲಿ ಏನಾಗುತ್ತದೆ ಎಂಬುದನ್ನು ನೋಡೋಣ. ಬ್ಯಾಂಕ್ ಪ್ರತಿನಿಧಿಯಾದ ಮುದ್ದಾದ ಹುಡುಗಿಯೊಬ್ಬಳು ನಿಮಗೆ ಪ್ಲಾನ್ ವಿವರಿಸುತ್ತಿದ್ದಾಳೆ.
ಆಕೆ- ಇದೊಂದು ಅದ್ಭುತ ಇನ್ಸ್ಯುರೆನ್ಸ್ ಪ್ಲಾನ್ ಸರ್...
ಈತ-ಇದು ಯುನಿಟ್ ಲಿಂಕ್ಡ್ ಇನ್ಸ್ಯುರೆನ್ಸ್ ಪ್ಲಾನಾ? ಅದಾದರೆ ಒಳ್ಳೆಯದಲ್ಲ ಅಂತ ಬ್ಲಾಗ್ನಲ್ಲಿ ಓದಿದೇನೆ.
ಆಕೆ-ಇಲ್ಲ ಸರ್, ಇದು ಯುಲಿಪ್ ಅಲ್ಲ. ನಿಗದಿತ ಅವಧಿಯ ಕಟ್ಟುವಿಕೆ ಇರುವ ಅದ್ಭುತ ಪ್ಲಾನ್ ಇದು. ಇಪ್ಪತ್ತು ವರ್ಷದ ಪಾಲಿಸಿಯಲ್ಲಿ 10 ವರ್ಷ ನೀವು ಹಣ ಕಟ್ಟುವುದಕ್ಕೆ ಇರುತ್ತೆ. ನೀವೀಗ 49 ವರ್ಷದವರಾಗಿರುವುದರಿಂದ 59 ವರ್ಷದವರೆಗೆ ಹಣ ತುಂಬಬೇಕಾಗುತ್ತದೆ. ನಿಮಗೆ 70 ವರ್ಷವಾದಾಗ ಪೂರ್ತಿ ಮೊತ್ತ ಸಿಗುತ್ತದೆ.
ಈತ- ಅಂದ್ರೆ, ಇದು ನಿವೃತ್ತಿ ಪ್ಲಾನ್..
ಈಕೆ- ಇಲ್ಲ ಸರ್. ಇದು ಲೈಫ್ ಇನ್ಸುರೆನ್ಸ್ ಪ್ಲಾನ್. ಇದು ತೆರಿಗೆ ಮುಕ್ತ. ನಿಮಗೆ 70 ವರ್ಷವಾದಾಗ, ಹಣಕ್ಕೆ ಅವಶ್ಯವಿರುವ ಸಮಯದಲ್ಲೇ ಇದು ಸಿಗುತ್ತದೆ.
ಈತ-ಎಕ್ಸಲೆಂಟ್!
ನಿಜ ಜೀವನದಲ್ಲಿ ಆಹಾರದ ವಿಷಯ ತೆಗೆದುಕೊಂಡರೆ ಅದು ಇನ್ನಷ್ಟು ಖರಾಬ್. ಸಂಜೆ ನೀವು ಪಾನಿಪೂರಿ ಅಂಗಡಿ ಪಕ್ಕದಲ್ಲಿ ನಿಂತು ಆಹಾರ ಮತ್ತು ಆರೋಗ್ಯ ಪರಿಣತನಿಗೆ ಫೋನ್ ಮಾಡಿ, ನಂಗೆ ಹಸಿವಾಗಿದೆ ಏನ್ ತಿನ್ಲಿ ಅಂದ್ರೆ ಅವನ ಉತ್ತರ- ಐದು ಗಂಟೆಗೆ ಪ್ರತಿದಿನ ತಿನ್ನುವುದನ್ನೇ ತಿನ್ನಿ. ಮೊಳಕೆ ಬರಿಸಿದ ಆಹಾರ, ಇನ್ನೂ ಹಸಿವಾಗಿದ್ದರೆ ಹಣ್ಣು. ಎಸ್ ಸರ್ ಎಂದು ತಲೆಯಾಡಿಸಿ ನೀವು ಪಾನಿಪೂರಿಯನ್ನೇ ತಿನ್ನುತ್ತೀರಿ.
ಕ್ಲಾಸ್ರೂಮಿನಲ್ಲಿ ಹೇಳುವ ಉತ್ತರಕ್ಕೂ ನಿಜ ಜೀವನದಲ್ಲಿ ಅನುಸರಿಸುವ ಮಾರ್ಗಕ್ಕೂ ಎಂಥ ವ್ಯತ್ಯಾಸ! ಜೀವನದ ಒಳ್ಳೆಯ ಅಂಶಗಳ ಬಗ್ಗೆ ಮಾತಷ್ಟೇ ಸಾಲದು. ಅನುಕರಿಸಿದರೆ ಮಾತ್ರ ಅದರ ಲಾಭ. ಇದನ್ನು ತಿಳಿದುಕೊಳ್ಳಲು ಹಣಕಾಸು ವಿಭಾಗದ ಯಾವ ಪಿಎಚ್ಡಿಯೂ ಬೇಕಿಲ್ಲ.
- ಪಿ. ವಿ. ಸುಬ್ರಮಣ್ಯಂ,
ಹಣಕಾಸು ಪರಿಣತ