ಗೊಂದಲ ಹುಟ್ಟಿಸಿ ದಿಕ್ಕು ತಪ್ಪಿಸುವುದು ರಾಜಕೀಯದಲ್ಲಿನ ಒಂದು ಅಸ್ತ್ರ. ಏನು ಮಾಡಬೇಕೆಂದು ತೋಚದೆ ನೀವು ಗೊಂದಲಕ್ಕೊಳಗಾದಾಗ, ಇತರರನ್ನು ಇನ್ನಷ್ಟು ಗೊಂದಲಕ್ಕೀಡುಮಾಡಲು ಏನನ್ನೋ ಮಾಡುತ್ತೀರಿ. ಭಾವೋದ್ರೇಕದ ಹಾಗೂ ವಿರೋಧಾಭಾಸದ ಮಾತುಗಳನ್ನು ಆಡುತ್ತೀರಿ. ನಿಮ್ಮ ಮಾತಿನ ಅರ್ಥವನ್ನು ಕಂಡುಕೊಳ್ಳಲು ನಿಮ್ಮ ವಿರೋಧಿಗಳು ಹೆಣಗಾಡುತ್ತಾರೆ. ಆ ಹಂತಕ್ಕೆ ತಲುಪಿದಿರೆಂದರೆ, ಸಮರದಲ್ಲಿ ಅರ್ಧ ಜಯ ಸಾಧಿಸಿದಂತೆಯೇ.
ಇಂಥ ಆಟದಲ್ಲಿ ಕಾಂಗ್ರೆಸ್ ಅನುಭವಿ ಪಕ್ಷ. ಆದರೆ, ಈ ಬಾರಿ ನಾವು ಅದರ ಬಗ್ಗೆ ಒಂದಷ್ಟು ಅನುಕಂಪ ತೋರಲೇಬೇಕು! ಅನೇಕ ಮಾರುಕಟ್ಟೆಗಳು ಈಗಾಗಲೇ ತಿರಸ್ಕರಿಸಿದ ಉತ್ಪನ್ನವೊಂದನ್ನು ಮಾರಾಟ ಮಾಡುವ ಹೊಣೆಯೊಂದು ಅದರ ಹೆಗಲ ಮೇಲೆ ಬಿದ್ದಿದೆ. ಆದರೆ, 'ತಾಯಿ ವಾತ್ಸಲ್ಯ' ಎಂಬುದು ಒಂದು ಅದ್ಭುತವಾದ ಶಕ್ತಿ. ಹಾಗಾಗಿ, ಇಲ್ಲಿ ಪ್ರಶ್ನೆಯೆಂದರೆ- ರಾಹುಲ್ ಗಾಂಧಿ ನೇತೃತ್ವದ ಅಕ್ಷೌಹಿಣಿಯೊಂದಿಗೆ ಸಮರಾಂಗಣಕ್ಕೆ ಇಳಿದು ಅನಿವಾರ್ಯ ಹಿನ್ನಡೆಯನ್ನು ಅನುಭವಿಸಬೇಕೇ ಅಥವಾ ವಾಸ್ತವತೆಯೊಂದಿಗೆ ರಾಜಿ ಮಾಡಿಕೊಳ್ಳಲು ಮಾರ್ಗೋಪಾಯ ಕಂಡುಕೊಳ್ಳಬೇಕೇ ಎಂಬುದು.
ರಾಹುಲ್ ಗಾಂಧಿ ಮೂಲತಃ ಒಬ್ಬ ಒಳ್ಳೆಯ ವ್ಯಕ್ತಿ ಆಗಿರಬಹುದು. ಆಗೊಮ್ಮೆ ಈಗೊಮ್ಮೆ ಒಂದೆರಡು ಯುಕ್ತವಾದ ಮಾತುಗಳನ್ನೂ ಅವರು ಹೇಳುತ್ತಿರುತ್ತಾರೆ. ಕಂಪನಿ ಪ್ರಮುಖರ ಮುಂದೆ ನಿರರ್ಗಳ ಶೈಲಿಯಲ್ಲಿ ಮಾತನಾಡಿ ಅವರ ಮೆಚ್ಚುಗೆಯನ್ನೂ ಗಳಿಸಿಕೊಂಡಿದ್ದಾರೆ. ಆದರೆ, ಅದೇ ಕಂಪನಿ ಪ್ರಮುಖರು ನರೇಂದ್ರ ಮೋದಿಯನ್ನು ಇನ್ನಷ್ಟು ಧಾರಾಳವಾಗಿ ಶ್ಲಾಘಿಸಿದ್ದಾರೆ. ಒಂದು ಹಂತದಲ್ಲಿ ಮಮತಾ ಬ್ಯಾನರ್ಜಿ ಬಗ್ಗೆಯೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದೆಲ್ಲ ಒಂದು ಉದ್ದೇಶಸಾಧನೆಯ ದೃಷ್ಟಿಯಿಂದ ಮಾಡಿದ ಹೊಗಳಿಕೆ. ರಾಹುಲ್ ಹೇಳಿದ್ದಾದರೂ ಏನು? 'ಭಾರತ ಒಂದು ಆನೆಯಲ್ಲ, ಅದೊಂದು ಜೇನುಗೂಡು... ನಾನು ಒಂದು ಡಿಎನ್ಎ ಹೊಂದಿರುವೆ...' ಅವರ ಮಾತುಗಳಲ್ಲಿ ಹೊಸ ಐಡಿಯಾಗಳೇ ಇರಲಿಲ್ಲ, ಕಾರ್ಯಯೋಜನೆಯೂ ಇರಲಿಲ್ಲ. ತನ್ನ ತಂದೆಯ ಅವಧಿಯಲ್ಲಿ ಮತ್ತು ಆನಂತರ ತನ್ನ ತಾಯಿಯ ಕಣ್ಣೆದುರಲ್ಲೇ ನಡೆದ ಇತಿಹಾಸದ ದೊಡ್ಡದೊಡ್ಡ ಹಗರಣಗಳು ಭಾರತವನ್ನು ಚಿಂದಿಚಿಂದಿ ಮಾಡಿದ ಬಗ್ಗೆ ಪ್ರಸ್ತಾಪವೇ ಇರಲಿಲ್ಲ. ಇಂಥವನ್ನೆಲ್ಲ ದಿಟ್ಟತನದಿಂದ ಎದುರಿಸದೇ ಇದ್ದಲ್ಲಿ ಭವಿಷ್ಯದ ಬಗ್ಗೆ ಅವರಾಡುವ ಮಾತುಗಳೆಲ್ಲ, ಅವರ ಕನಸುಗಳೆಲ್ಲ ಬರೀ ಕನಸುಗಳಾಗಿಯೇ ಉಳಿಯುತ್ತವೆ ಅಷ್ಟೆ.
ರಾಜಕೀಯದ ವಾಸ್ತವತೆ ಕಠೋರವಾದುದು. ಸೋನಿಯಾ ಗಾಂಧಿ- ಮನಮೋಹನ್ ಸಿಂಗ್ ನಾಯಕತ್ವದ ಬಗ್ಗೆ ದಿಗ್ವಿಜಯ್ ಸಿಂಗ್ ನೀಡಿದ ಹೇಳಿಕೆಯನ್ನೊಮ್ಮೆ ನೆನಪಿಸಿಕೊಳ್ಳಿ. ಮೊದಲಿಗೆ ಇದೊಂದು ಗಂಭೀರ ಹೇಳಿಕೆಯೆಂಬಂತೆ ಕಂಡುಬಂತು. ಎರಡು ಅಧಿಕಾರ ಕೇಂದ್ರವಾಗಿ ಇವರಿಬ್ಬರ ಕಾರ್ಯನಿರ್ವಹಣೆ ವಿಫಲವಾಗಿದೆ ಎಂದರು ದಿಗ್ವಿಜಯ್. ಹಾಗಾಗಿ ಪ್ರಧಾನಿಯಾಗಿ ಏಕೈಕ ಅಧಿಕಾರ ಕೇಂದ್ರವಾಗಲು ರಾಹುಲ್ ಗಾಂಧಿಗೆ ಇದು ಸೂಕ್ತ ಸಮಯ ಎಂದು ಬಣ್ಣಿಸಲಾಯಿತು.
ಸೋನಿಯಾ- ಮನಮೋಹನ್ ಜೋಡಿ ವ್ಯವಸ್ಥೆ ಇನ್ನೊಂದು ರೂಪದಲ್ಲಿ, ಉದಾಹರಣೆಗೆ ರಾಹುಲ್- ಚಿದಂಬರಂ ಜೋಡಿ ರೂಪದಲ್ಲಿ ಪುನರಾವರ್ತನೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ, ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಇತರ ಆಕಾಂಕ್ಷಿಗಳನ್ನು ದೂರವಿರಿಸಲು ರಾಹುಲ್ ಹಿತೈಷಿಯೆನ್ನಲಾದ ದಿಗ್ವಿಜಯ್ ಸಿಂಗ್ ಪ್ರಯತ್ನಿಸಿದರೇ? ಇದನ್ನು ಅರ್ಥ ಮಾಡಿಕೊಳ್ಳುವ ಮೊದಲೇ ಇನ್ನೊಬ್ಬ ಕಾಂಗ್ರೆಸ್ಸಿಗ ಇಡೀ ಚಿತ್ರಣವನ್ನೇ ಬದಲಾಯಿಸಿಬಿಟ್ಟರು.
ಪಕ್ಷದ ಅಧಿಕೃತ ಹೇಳಿಕೆಯಲ್ಲದಿದ್ದರೆ, ಒಂದು ಶಬ್ದವನ್ನೂ ಉಚ್ಚರಿಸದ ಜನಾರ್ದನ ದ್ವಿವೇದಿ ಅವರು ಸೋನಿಯಾ- ಮನಮೋಹನ್ ತಂಡವನ್ನು ಪ್ರಶಂಸಿಸಲು ಹಿಂಜರಿಯಲಿಲ್ಲ. ಈ ತಂಡ ವಿಶಿಷ್ಟವಾದುದು, ಭವಿಷ್ಯಕ್ಕೆ ಮಾದರಿಯಾಗಬಲ್ಲಂಥದ್ದು ಎಂದು ಮನಸಾರೆ ಬಣ್ಣಿಸಿದರು. ಅವರ ಅಭಿಪ್ರಾಯಕ್ಕೆ ಪಕ್ಷದ ಇತರ ಕೆಲ ನಾಯಕರೂ ದನಿಗೂಡಿಸಿದರು. ಆದರೆ, ಆಪ್ತ ಸಲಹೆಗಾರ ದಿಗ್ವಿಜಯ್ ತಮ್ಮ ನಿಲುವಿಗೇ ಅಂಟಿಕೊಂಡರು. ತನ್ಮೂಲಕ, ಗೊಂದಲ ರಾಜಕೀಯದ ಇತಿಹಾಸದಲ್ಲಿ ಅವಿಸ್ಮರಣೀಯ ಸನ್ನಿವೇಶ ಸೃಷ್ಟಿಗೆ ಕಾರಣರಾದರು.
ಹಾಗಾದರೆ ಪಕ್ಷದಲ್ಲಿ ಈಗ ಏನು ನಡೆಯುತ್ತಿದೆ? ರಾಹುಲ್ ಗಾಂಧಿ ಪಕ್ಷವನ್ನು ಸೋಲಿನತ್ತ ಒಯ್ಯಬಹುದು ಎಂಬ ಸತ್ಯವನ್ನು ಕಾಂಗ್ರೆಸ್ ಗುರುತಿಸುವ ಸಾಧ್ಯತೆ ಇಲ್ಲ. ಅಂಥ ಕ್ರಮವು ತಾಯಿಯ ನುಡಿಯನ್ನು ತಿರಸ್ಕರಿಸಿದಂತೆ. ಹಾಗಾಗಿ ಅದು ಕಾರ್ಯಸಾಧುವಲ್ಲ. ಆದ್ದರಿಂದ, ಮುಂದಿನ ಚುನಾವಣೆಯಲ್ಲಿ ಕೆಟ್ಟ ಪ್ರದರ್ಶನವನ್ನು ನಿರೀಕ್ಷಿಸುತ್ತಾ ಕಾಂಗ್ರೆಸ್ ಈಗ ತಂತ್ರ ಹೂಡುತ್ತಿದೆಯೇ? ಮನಮೋಹನ್ ಸಿಂಗ್ ಅವರನ್ನು ರಕ್ಷಾಕವಚವನ್ನಾಗಿ ಮುಂದಿಟ್ಟು ರಾಹುಲ್ ಗಾಂಧಿಯ ಮುಖವನ್ನು ಉಳಿಸಲು ಪ್ರಯತ್ನಿಸುತ್ತಿದೆಯೇ? ಅಥವಾ ಸದ್ಯಕ್ಕೆ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸಿ, ಸಾಕಷ್ಟು ಸಂಖ್ಯೆಯ ಸೀಟು ಗೆದ್ದಲ್ಲಿ ಅವರನ್ನು ಹಳ್ಳಕ್ಕೆ ತಳ್ಳಿ ರಾಹುಲ್ ಗಾಂಧಿಯನ್ನು ಗದ್ದುಗೆಯಲ್ಲಿ ಕೂರಿಸುವ ತಂತ್ರ ನಡೆಯುತ್ತಿದೆಯೇ?
ಲೆಕ್ಕಾಚಾರಗಳು ಮತ್ತು ಗೊಂದಲಗಳು ಕಾಂಗ್ರೆಸ್ ಪಾಲಿಗೆ ಮಹತ್ವದ್ದು. ಏಕೆಂದರೆ, ಬಿಜೆಪಿಯ ದೌರ್ಬಲ್ಯದಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಅದಕ್ಕೆ ಲಾಭವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಕರ್ನಾಟಕದಲ್ಲಂತೂ ಅದು ಜಯಭೇರಿ ಬಾರಿಸುವುದು ಖಚಿತ. ಬಿಜೆಪಿ ಸರ್ಕಾರದ ದುರಾಡಳಿತವೇ ಇದಕ್ಕೆ ಕಾರಣ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ನ ಇತ್ತೀಚಿನ ಕೆಲ ನಡೆಗಳು ಅದು ಏನನ್ನೂ ಕಲಿತುಕೊಳ್ಳುತ್ತಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಜನರ ವಿಶ್ವಾಸವನ್ನು ಗೆದ್ದುಕೊಳ್ಳುವ ಸದವಕಾಶವು ಈಗಾಗಲೇ ಕಳೆದುಹೋದಂತೆ ಕಾಣುತ್ತಿದೆ. ಹಿರಿಯ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ಸಿಗರಲ್ಲೇ ಹೆಚ್ಚು ವಿಶ್ವಾಸಾರ್ಹ ಎಂದು ಪರಿಗಣಿಸಲಾಗಿತ್ತು. ಅವರ ನಾಯಕತ್ವದ ಸರ್ಕಾರವೊಂದು ಅಧಿಕಾರಕ್ಕೆ ಬರಬೇಕೆಂದು ರಾಜ್ಯದ ಬಹಳಷ್ಟು ಜನ ಬಯಸಿದ್ದರು. ಆದರೆ, ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ, ಪಕ್ಷವು ತನ್ನ ಕಾರ್ಯತಂತ್ರ ಸಮಿತಿಯ ಮುಖ್ಯಸ್ಥನನ್ನಾಗಿ ಅಷ್ಟೇನೂ ವಿಶ್ವಾಸಾರ್ಹರಲ್ಲದ ಮಾಜಿ ನಾಯಕರೊಬ್ಬರನ್ನು ನೇಮಿಸಿತು. ಇದರಿಂದ, ಕೊನೆಗೆ ಉಳಿದಿದ್ದ ಏಕೈಕ ಕಾಂಗ್ರೆಸ್ ನಾಯಕನ ಕುರಿತಾದ ಭರವಸೆಯೂ ನುಚ್ಚುನೂರಾದಂತಾಯಿತು. ತತ್ವಭ್ರಷ್ಟರು, ಭ್ರಷ್ಟಾಚಾರದ ದೊರೆಗಳು ಮತ್ತು ಪಕ್ಷಾಂತರಿಗಳಿಗೆಲ್ಲ ಟಿಕೆಟ್ ನೀಡುವಲ್ಲಿ ಪಕ್ಷವೀಗ ಬ್ಯುಸಿಯಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಬಣ್ಣವೇನೋ ಬದಲಾಗಬಹುದು, ಆದರೆ ದುರಂತ ಮಾತ್ರ ಹೀಗೆಯೇ ಮುಂದುವರಿಯಬಹುದು!
ಟಿಜೆಎಸ್ ಜಾರ್ಜ್