ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ತಪ್ಪಾಗಿದೆ ಎಂದಮಾತ್ರಕ್ಕೆ ಕೊಂಕು ಮಾತುಗಳೇಕೆ?

Mainashree
Updated On : 6 Apr 2013, 11:43 am

ಕನ್ನಡಪ್ರಭದ ಕರ್ನಾಟಕ-ಕುರುಕ್ಷೇತ್ರದ ಪುಟಗಳ ವರದಿ, ಮಾಹಿತಿ, ಲೇಖನಗಳು ಸ್ವಾರಸ್ಯಕರವಾಗಿವೆ. ಓದುಗರಲ್ಲಿ, ಮತದಾರರಲ್ಲಿ ಅರಿವು ಮೂಡಿಸಿದೆ. ಕರ್ನಾಟಕದ ಕುರ್ಚಿ ಕುರುಕ್ಷೇತ್ರಕ್ಕೆ ಕನ್ನಡಿ ಹಿಡಿದಿರುವ ಕನ್ನಡಪ್ರಭದ ಈ ಪುಟಗಳ ಬರೆಹ ನಮ್ಮ ರಾಜಕಾರಣಿಗಳ ನಿಜಬಣ್ಣ ಬಯಲು ಮಾಡುತ್ತಿದೆ! 8,200 ವ್ಯಯಿಸಿ ಗೆದ್ದಿದ್ದ ಕೋಣಂದೂರು ಲಿಂಗಪ್ಪ (ಕ.ಪ್ರ. ಮಾ. 28) ಆ ದಿನಗಳಿಗೂ, ಈ ದಿನಗಳಿಗೂ ಎಷ್ಟು ವ್ಯತ್ಯಾಸ?
- ಕಾಡನೂರು ರಾಮಶೇಷ, ಹುಲಿಮಂಗಲ.

ಏಪ್ರಿಲ್ 1ರ ಸಂಚಿಕೆಯಲ್ಲಿ 106ನೇ ವಸಂತಕ್ಕೆ ಪದಾರ್ಪಣೆಗೈಯುತ್ತಿರುವ ಪರಮಪೂಜ್ಯ ಡಾ. ಸಿದ್ಧಗಂಗಾ ಶ್ರೀಗಳವರ ಚಿತ್ರ, ವರದಿ ಜೀವನೋಲ್ಲಾಸಕ್ಕೆ ಸ್ಫೂರ್ತಿದಾಯಕವಾಗಿದೆ. 'ಇದು ಬರೀ ಏಪ್ರಿಲ್‌ಫೂಲ್...' ವ್ಯಂಗ್ಯ ಚಿತ್ರ ಅದ್ಭುತ ವಿಡಂಬನಾತ್ಮಕ ರಾಜಕೀಯ ವ್ಯವಸ್ಥೆಯನ್ನು ಪ್ರತಿಧ್ವನಿಸಿತು.
ಅದೇ ರೀತಿ 'ಬೈಟು ಕಾಫಿ'ಯ ಪುಟ ಮನರಂಜಿಸುವಲ್ಲಿ ಯಶಸ್ವಿಯಾಗಿತ್ತು. ವಿವಿಧ ಪ್ರಶಸ್ತಿ ಪುರಸ್ಕಾರಗಳಂತೂ ಅತ್ಯಂತ ಸೂಕ್ತ- ಪ್ರಸ್ತುತವಲ್ಲವೇ ಎನ್ನಿಸಿ ಸಂಭ್ರಮವಾಯಿತು!
- ಚನ್ನಬಸವ ಪುತ್ತೂರ್ಕರ, ಚಿತ್ರದುರ್ಗ

ಸಾಪ್ತಾಹಿಕ ಪ್ರಭದ 'ಓದೋದ್ರಲ್ಲಿ ಇರೋ ಸುಖ' ಈಗೇಕೋ ಕಾಣೆಯಾದಂತಿದೆ. ಯಾಕೆಂದು ಹುಡುಕಿ ಹೇಳುವುದೂ ಕಷ್ಟ. ಸಾಪ್ತಾಹಿಕ ಪ್ರಭದ ಒಟ್ಟು ಸೊಗಸು ಪ್ರತಿದಿನದ ಬೈಟು ಕಾಫಿಯಲ್ಲಿ ಸೋರಿ ಹೋಗುತ್ತಿರಬಹುದು. ಇತ್ತೀಚೆಗೆ ನದಿ ಹರಿಯುವುದನ್ನು ನಿಲ್ಲಿಸಿದೆ (ಹರಿವ ನದಿ ಕಾಲಂ). ಸಾ.ಪ್ರ.ದಲ್ಲಿ ಹಿಂದಿನ ಜೀವಸೆಲೆ ಮತ್ತೆ ಜಿನುಗುವಂತೆ ಮಾಡಲು ಶ್ರಮಿಸುತ್ತಿರೆಂದು ಆಶಿಸುತ್ತೇನೆ.
- ಆನಂದ ರಾಮತೀರ್ಥ, ಜಮಖಂಡಿ, ಮೊ. 7259 670989

20.3.13ರಂದು ಪ್ರಕಟವಾದ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಪತ್ರ ನೋಡಿ ವಿಚಿತ್ರವೆನ್ನಿಸಿತು. ಯಾವುದೋ ಅನಾಮಧೇಯ ಸಂಪಾದಕನೊಂದಿಗೆ ಕನ್ನಡಪ್ರಭದ ಸಂಪಾದಕರನ್ನು ಹೋಲಿಸುವ ಅಗತ್ಯವಿರಲಿಲ್ಲ. ಪ್ರಾಯಶಃ ಫೈಜ್ನಟ್ರಾಜ್ ಅವರಿಗೆ ಬಾಣಭಟ್ಟನ ಹೆಸರಲ್ಲಿ ಸಂಪಾದಕರು ಉತ್ತರಿಸುವ ಪ್ರಶ್ನೆಗಳೂ ಬೋಗಸ್ ಎಂಬ ಭಾವನೆ ಇದೆಯೇ!? ತಪ್ಪುಗಳೇ ಇಲ್ಲದೇ ಪ್ರಕಟವಾಗುವ ಪತ್ರಿಕೆಗಳು ಯಾವುದಾದರೂ ಇದ್ದರೆ ಶ್ರೀಯುತರು ಹೆಸರಿಸಿದ್ದರೆ ಚೆನ್ನಾಗಿತ್ತು. ಅದು ಹಾಗಿರಲಿ, ಫೈಜ್ನಟ್ರಾಜ್ ಉಲ್ಲೇಖಿಸಿರುವಂತೆ 'ಅವಾಗಿ ಅವೇ ತಪ್ಪುಗಳಾಗುವುದೆಂದರೇನು?' ತಪ್ಪುಗಳು ಮನುಷ್ಯರಿಂದಲೇ ಆಗುತ್ತವೆಯೆಂದು ಕೊಂಡಿದ್ದೇನೆ. ವರದಿಗಾರನ ಕಾರಣದಿಂದ, ಬರಹಗಾರನ ಕಾರಣದಿಂದ, ಕರಡು ತಿದ್ದುವವರ ಕಾರಣದಿಂದ, ತಾಂತ್ರಿಕ ಕಾರಣಗಳಿಂದ ತಪ್ಪಾಗುತ್ತವೆಯೇ ವಿನಾ ತಪ್ಪುಗಳು ಅವಾಗಿಯೇ ಬಂದು ಸೇರಿಕೊಳ್ಳುವುದಿಲ್ಲ. ಮಾತ್ರವಲ್ಲ ಶ್ರೀಯುತರು ಸಲೀಸಾಗಿ ಗೂಬೆ ಕೂರಿಸಲು ಹೊರಟ ಅನಾಮಧೇಯ ಸಂಪಾದಕನ ಪತ್ರಿಕೆ ಈಗ ಸುಧಾರಿಸಿದೆಯೋ ಎಂಬುದು "ಗೊತ್ತಿಲ್ಲ" ಎಂದ ಮೇಲೆ "ಈಗಲೂ ಮಾಡುತ್ತಿರಬಹುದು" ಎಂದೇಕೆ ಆಪಾದನೆ ಮಾಡಬೇಕು!?
- ಕೊಕ್ಕಡ ವೆಂಕಟ್ರಮಣಭಟ್, 17 ಪ್ರಣವ, ಕಾವೇರಿನಗರ, ಮಂಡ್ಯ

ಪ್ರತಿ ಶನಿವಾರ ಪ್ರಕಟವಾಗುವ ಪ್ರತಾಪ್ ಸಿಂಹರವರ ಪ್ರತಿಯೊಂದು ಲೇಖನವೂ ತುಂಬಾ ಮಾಹಿತಿದಾಯಕ ಆಗಿರುತ್ತವೆ. ಅವರ ಲೇಖನಗಳು ಓದಲು ಮನೆಮಂದಿಯೆಲ್ಲಾ ಕಾದು ಕುಳಿತಿರುತ್ತೇವೆ. ಹಾಗೇ ಇತ್ತೀಚೆಗೆ ಪ್ರಕಟವಾದ ಕೆ.ಎಸ್. ಜಗನ್ನಾಥ್‌ರ "ಪಕ್ಷವನ್ನು ಬಲಗೊಳಿಸಲು ದೇಶ ದುರ್ಬಲಗೊಳಿಸಿದರೇ?" ಎಂಬ ಶೀರ್ಷಿಕೆಯಡಿ ಮೂಡಿ ಬಂದ ಲೇಖನ ಮೆಚ್ಚುವಂತಹದ್ದಾಗಿತ್ತು ಮತ್ತು 22ನೇ ಶುಕ್ರವಾರದಂದು ಪ್ರಕಟವಾದ ಕಿರಣ್‌ಕುಮಾರ್‌ರವರ 'ಪ್ರಶ್ನಾ ಸಮಯ'ದ ವಿಷಯಗಳೂ ನೂರಕ್ಕೆ ನೂರು ಸತ್ಯವಾಗಿದ್ದವು. ಹಾಗೇ ಭಾನುವಾರದ ಗೋಡೆಬರಹದಲ್ಲಿ ಬೆಳ್ಳಾವೆ ರಮೇಶ್‌ರವರ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ. "ಏನ್ ಬರೆದ್ರೂ ಪ್ರಕಟಿಸ್ತೀವಿ ಅಂತ ಏನೆಲ್ಲಾ ಬರೀಬೇಡಿ" ಎಂದು ಹೇಳಿ ಏನೇ ಬರೆದ್ರೂ ಎಲ್ಲದನ್ನೂ ಪ್ರಕಟಿಸ್ತೀರಲ್ಲಾ?
- ವಿದ್ಯುಲ್ಲತಾ ಕೆ.ಎಸ್. ಕವಿಲುಕೊಡಿಗೆ, ಶೃಂಗೇರಿ, ಮೊ. 977 8900674

ನಿಮ್ಮ ಬೈಟು ಕಾಫಿ ವಿಭಾಗದಲ್ಲಿ 28ರ ಸಂಚಿಕೆಯ 'ಮೂಡು ಹಾಡು' ನಲ್ಲಿ ಬರೆದಂತೆ ಎಫೆಮ್ಮುಗಳಲ್ಲಿ ಡಬ್ಬಾ ಸಾಂಗ್‌ಗಳೇ ತುಂಬಿಕೊಳ್ತಿವೆ, ಮೂಡ್‌ಗೆ ತಕ್ಕ ಹಾಡುಗಳಿಲ್ಲ ಅಂತ ಬರೆಯಲಾಗಿದೆ. ಆದರೆ ತಾವು ವಿವಿಧ ಭಾರತಿ ವಾಣಿಜ್ಯ ಪ್ರಸಾರ ಕೇಂದ್ರ (102.09) ಎಫ್.ಎಂ. ಪ್ರಸರಿಸುವ ಗೀತೆಗಳನ್ನು ಕೇಳಿಲ್ಲ ಅಂತ ಕಾಣ್ಸುತ್ತೆ. 60ರ ದಶಕದ ಸುಮಧುರ ಗೀತೆಗಳಿಂದ ಇತ್ತೀಚಿನ ಸಿನಿಮಾಗಳ ಗೀತ ಭಂಡಾರವೇ ಇಲ್ಲಿ ತುಂಬಿದೆ. ಹಳೆಯ ಗೀತೆಗಳನ್ನು ಕೇಳಿ ಆನಂದಿಸುವ ಶ್ರೋತೃಗಳಿಗೆ ವಿವಿಧ ಭಾರತಿ... ಮೂಡು ಹಾಡು ಬೇಕೆಂದರೆ ಲೇಖನದಲ್ಲಿರುವಂತೆ ಅನುಸರಿಸಬೇಕು.
- ಬಿ.ಎಸ್. ರಮೇಶ್, (ಬೆಳ್ಳಾವೆ) ಬನಶಂಕರಿ. ಬೆಂಗಳೂರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement