ದೆಹಲಿ ಅತ್ಯಾಚಾರ ಪ್ರಕರಣ: ಜಾಗೃತಿಗಿಂತ ದುಗುಡವೇ ಹೆಚ್ಚಾಯ್ತು!
ದೆಹಲಿ ಅತ್ಯಾಚಾರ ಘಟನೆಯ ನಂತರ ದೇಶದಲ್ಲಿ ಎದ್ದಿದ್ದ ಆಕ್ರೋಶದ ಅಲೆ ಈಗ ಕಡಿಮೆಯಾಗಿದೆ. ಆದರೆ ಆ ಘಟನೆ ದೇಶದಲ್ಲಿನ ಮಹಿಳಾ ರಕ್ಷಣೆಯ ಅಭಾವವನ್ನಂತೂ ಹೊರಗೆಡವಿದೆ. ಈಗ ಜನತೆ ಪೊಲೀಸ್ ತನಿಖೆಗಳನ್ನು ನಂಬುತ್ತಿಲ್ಲ, ಅದರಲ್ಲೂ ಮುಖ್ಯವಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆಯೇ ನಮಗೆ ನಂಬಿಕೆ ಕಳೆದುಹೋಗಿದೆ. ಮುಂದೇನು ಕಾದಿದೆಯೋ? ಮನಿಲೈಫ್ ಫೌಂಡೇಷನ್ ಕಳೆದ ತಿಂಗಳು ನಡೆಸಿದ ಕಾರ್ಯಕ್ರಮವೊಂದರಲ್ಲಿ “The case for delivering better Justice to Women: A view from the Judge's Chair” ಎನ್ನುವ ವಿಷಯವಾಗಿ ಜಸ್ಟಿಸ್ ಸುಜಾತಾ ಮನೋಹರ್ ಅವರು ಅದ್ಭುತವಾಗಿ ಮಾತನಾಡಿದರು.
ದೆಹಲಿ ಅತ್ಯಾಚಾರ ಪ್ರಕರಣದ ನಂತರ ದೇಶದಲ್ಲಿ ಮಹಿಳೆಯರ ರಕ್ಷಣೆಯ ವಿಷಯದಲ್ಲಿ ಏನಾದರೂ ಬದಲಾವಣೆ ಆಗಿವೆಯೇ ಎಂದು ಪ್ರಶ್ನಿಸಿದಾಗ, ಅವರು ಉತ್ತರಿಸಿದ್ದು ಹೀಗೆ-
'ಕಳೆದ ವರ್ಷದ ಡಿಸೆಂಬರ್ನಲ್ಲಿ, ದೆಹಲಿಯಲ್ಲಿ ಯುವತಿಯೊಬ್ಬಳು ಅತ್ಯಾಚಾರಕ್ಕೊಳಗಾದ ನಂತರ ಇಡೀ ಭಾರತವೇ ಆ ಘಟನೆಯ ವಿರುದ್ಧ ರೊಚ್ಚಿಗೆದ್ದು ಪ್ರತಿಭಟನೆಗಿಳಿಯಿತು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರಷ್ಟೇ ಅಲ್ಲದೆ ಪ್ರತಿ ಕುಟುಂಬದ ಪುರುಷರು ಕೂಡ ಮಹಿಳಾ ಪ್ರತಿಭಟನಾಕಾರರ ಜೊತೆ ಕೈ ಜೋಡಿಸಿದರು. ಚಳಿ, ಬೆದರಿಕೆ, ಲಾಠಿ ಚಾರ್ಜ್ ಮತ್ತು ಜಲ ಫಿರಂಗಿಗಳಿಗೂ ಅವರು ನಡುಗದೆ ತಮ್ಮ ಅಸಮಾಧಾನವನ್ನು ಹೊರಗೆಡವಿದರು. ಆದರೆ ಯಾವಾಗ ಪ್ರತಿಭಟನೆಯ ತೀವ್ರತೆ ಕಡಿಮೆಯಾಯಿತೋ, ಆಗಿನಿಂದಲೂ ಮಹಿಳೆಯರ ಬದುಕು ಮೊದಲಿಗಿಂತಲೂ ದುಸ್ತರವಾಗಿಬಿಟ್ಟಿದೆ. ಹದಿಹರೆಯದವರಾಗಿದ್ದಾಗ ನಮಗೆ ಮನೆಯಲ್ಲಿ ತುಂಬಾ ಸ್ವಾತಂತ್ರ್ಯವಿತ್ತು. ಆದರೆ ಈಗಿನವರು ಮೆಲ್ಲಗೆ ಆ ಅದೃಷ್ಟವನ್ನು ಕಳೆದುಕೊಳ್ಳುತ್ತಿದ್ದಾರೆ. ಮತ್ತೆ ನಾವೆಲ್ಲ ಹಿಂದಿನ ಶತಮಾನಕ್ಕೆ ಸಾಗುತ್ತಿದ್ದೇವೆ!
ನನ್ನ ವಯಸ್ಸಿನ ಮಹಿಳೆಯರು ತಮ್ಮ ಹೆಣ್ಣುಮಕ್ಕಳು 100 ಮೀಟರ್ ದೂರದಲ್ಲಿದ್ದರೂ ಅವರ ಮೇಲೆ ನಿಗಾ ಇಡತೊಡಗಿದ್ದಾರೆ. ಮಕ್ಕಳು ಹೊರಹೋದರಂತೂ ಅವರ ದುಗುಡ ಇನ್ನೂ ಹೆಚ್ಚುತ್ತದೆ. ಕೆಲವು ಹೆಣ್ಣು ಮಕ್ಕಳಂತೂ ಗಂಟೆಗೊಂದು ಬಾರಿ ತಾವೆಲ್ಲಿದ್ದೇವೆ, ಹೇಗಿದ್ದೇವೆ ಎಂದು ಪೋಷಕರಿಗೆ ಮೆಸೇಜ್ ಮಾಡಲೇಬೇಕು! ಲೇಡೀಸ್ ಹಾಸ್ಟಲ್ಗಳು ಅತ್ಯಂತ ಕಠಿಣ ನಿಯಮಗಳನ್ನು ಅನುಸರಿಸತೊಡಗಿವೆ. ಪೋಷಕರು ತಮ್ಮ ಮಗಳು ಸುರಕ್ಷಿತವಾಗಿ ಮನೆಗೆ ಹಿಂದಿರುಗುವವರೆಗೂ ಗಡಿಯಾರದತ್ತ ಕಣ್ಣು ಹಾಯಿಸುತ್ತಲೇ ಇರುತ್ತಾರೆ. ಆದರೆ ಮಹಿಳೆಯನ್ನು ರಕ್ಷಿಸಲು ಕೈಲಾಗದ ಸರ್ಕಾರ ಹೊಸ ಹೊಸ ಉಪದೇಶಗಳನ್ನು ಮಾತ್ರ ಪುಷ್ಕಳವಾಗಿ ಕೊಡುತ್ತಿದೆ- 'ಸಂಜೆ 6 ಗಂಟೆಯ ನಂತರ ಹೊರಗೆ ಹೋಗಬಾರದು, ಹೊರಗೆ ಇದ್ದರೂ ಆ ಸಮಯದೊಳಗೆ ಮನೆ ಸೇರಿಕೊಳ್ಳಬೇಕು, ಸಾಂಪ್ರದಾಯಿಕ ಉಡುಗೆಯನ್ನೇ ತೊಡಬೇಕು, ಮೈ ಕಾಣಿಸದಂತೆ ಬಟ್ಟೆ ಹಾಕಿಕೊಳ್ಳಬೇಕು(ಬುರ್ಖಾ ರೀತಿಯ ಉಡುಪು).'
ಒಟ್ಟಿನಲ್ಲಿ 25 ವರ್ಷಗಳಿಂದ ಕಷ್ಟ ಪಟ್ಟು ಪಡೆದ ಸ್ವಾತಂತ್ರ್ಯವೆಲ್ಲ ಈಗ ನಮ್ಮ ಕಣ್ಮುಂದೆಯೇ ಸಣ್ಣಗೆ ಹಾರಿಹೋಗುತ್ತಿದೆ!
ದೆಹಲಿ ಘಟನೆಯ ನಂತರ ತಾಯಂದಿರಲ್ಲಿ ಹೊಸ ಧ್ಯೇಯವಾಕ್ಯವೊಂದು ಜನ್ಮತಳೆದಿದೆ, 'ತಮ್ಮ ಮಗಳನ್ನು ರಕ್ಷಿಸುವುದು, ಕಡೆಗೆ ಮನೆಯಲ್ಲಿ ಬಂಧಿಸಿಟ್ಟರೂ ಪರವಾಗಿಲ್ಲ! ಜನ ಅಶಕ್ತ ಪೊಲೀಸ್ ತನಿಖೆಗಳ ಮೇಲೆ ಭರವಸೆ ಕಳೆದುಕೊಂಡಿರುವುದೇ ಹೀಗಾಗಲು ಕಾರಣ. ಹೆಣ್ಣು ಮಕ್ಕಳು ದೌರ್ಜನ್ಯಕ್ಕೊಳಗಾಗಿ ಜೀವನ ಪರ್ಯಂತ ನೋವನುಭವಿಸುವಂತಾಗಬಾರದೆಂದು ಹೀಗೆ ಎಚ್ಚರಿಕೆ ವಹಿಸಲಾಗುತ್ತಿದೆ. ಅದಕ್ಕಿಂತಲೂ ಮುಖ್ಯವಾಗಿ, ನಮಗೀಗ ನ್ಯಾಯಾಂಗ ವ್ಯವಸ್ಥೆಯ ಮೇಲೆಯೇ ನಂಬಿಕೆಯೇ ಇಲ್ಲ.' ಎನ್ನುತ್ತಾರೆ ಸುಜಾತಾ.
----
ಜಸ್ಟಿಸ್ ಸುಜಾತಾ ಮನೋಹರ್ ಅವರು ಕಾನೂನಿನ ವಿಷಯದಲ್ಲಿ ಅನೇಕ ದಾಖಲೆಗಳನ್ನು ರಚಿಸಿದವರು. ಬಾಂಬೆ ಹೈಕೋರ್ಟ್ನ ಮೊದಲ ಮಹಿಳಾ ಜಡ್ಜ್ ಆಗಿ ನೇಮಕಗೊಂಡ ಅವರು ನಂತರ ಬಾಂಬೆ ಹೈಕೋರ್ಟ್, ಕೇರಳ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ಚೀಫ್ ಜಸ್ಟಿಸ್ ಆಗಿ ನೇಮಕಗೊಂಡರು.
ಅವರು ವಕೀಲರಾಗಿ ತಮ್ಮ ಕೆಲಸವನ್ನು ಆರಂಭಿಸಿದಾಗ ಕುಟುಂಬದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಾನೂನು ನೆರವು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದರು. ಅಲ್ಲದೆ ಹಲವಾರು ಎನ್ಜಿಒಗಳ ಪರವಾಗಿಯೂ ಅವರು ಕೆಲಸ ಮಾಡಿದ್ದಾರೆ. 2000ನೇ ಇಸವಿಯಿಂದ ಇಲ್ಲಿಯವರೆಗೂ ಅವರು ರಾಷ್ಟ್ರೀಯ ಮಾನವ ಹಕ್ಕು ಸಮಿತಿಯ ಸದಸ್ಯರಾಗಿಯೂ ದುಡಿಯುತ್ತಿದ್ದಾರೆ. ಕಳ್ಳ ಸಾಗಣೆ, ಮಹಿಳಾ ಸಮಸ್ಯೆಗಳು ಮತ್ತು ಏಯ್ಡ್ಸ್ನ ಕುರಿತು ಜಾಗೃತಿ ಮೂಡಿಸುವಲ್ಲಿ ಅವರು ಹೆಚ್ಚು ಸಕ್ರಿಯರಾಗಿದ್ದಾರೆ. ಇನ್ನು ಅವರು ಸ್ತ್ರೀವಾದ ಮತ್ತು ಅಂತಾರಾಷ್ಟ್ರೀಯ ಕಾನೂನು ಸಮಿತಿಯ ಮುಖ್ಯಸ್ಥರೂ ಹೌದು.
ಇನ್ನು ಇವರಂತೆಯೇ ಮಹಿಳಾ ಪರ ಹಕ್ಕುಗಳಿಗಾಗಿ ಅನೇಕ ವರ್ಷಗಳಿಂದ ಹೋರಾಡುತ್ತಿರುವವರಿದ್ದಾರೆ. ಅದರಲ್ಲೂ ಮುಖ್ಯವಾಗಿ ಈ ವಿಷಯವಾಗಿ ಸ್ತ್ರೀ ಮುಕ್ತಿ ಸಂಘಟನೆಯ ಜ್ಯೋತಿ ಮ್ಹಾಪ್ಸೇಕರ್ ಮತ್ತು ಸಂಗ್ರಾಮ್ನ ಮೀನು ಶೇಶುರ ಶ್ರಮ ಶ್ಲಾಘನೀಯ. (ಮೂಲತಃ www.moneylife.inನಲ್ಲಿ ಪ್ರಕಟಿತ)
ಸುಚೇತಾ ದಲಾಲ್
ಸಂಪಾದಕರು
'ಮನಿಲೈಫ್' ನಿಯತಕಾಲಿಕ