ಅಂಕಣಗಳು

ಮತ ಸಮರ ಮೋಜಿನ ಮಟ್ಟಕ್ಕಿಳಿಯಿತೇ?

ದೃಶ್ಯ 1. ಅವಿಭಜಿತ ಕುಟುಂಬವೊಂದರ ಹಿರಿಯ ಅಜ್ಜ ತನ್ನ ಸಂಪೂರ್ಣ ಚರ-ಸ್ಥಿರಾಸ್ಥಿಗಳನ್ನು ತನ್ನ ಕುಟುಂಬದ ಸದಸ್ಯರಿಗೆ ಹಂಚಲು ಕೂರುತ್ತಾನೆ. ಎಲ್ಲರೂ ಅಜ್ಜನ ಮುಂದೆ ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಬಂದು ಕೂರುತ್ತಾರೆ. ಇವರಿಗೆಲ್ಲ ಒಂದೇ ತುಡಿತ, ಒಂದೇ ಆಶಯ. ಅದು ಸಾಧ್ಯವಾದಷ್ಟು ಒಬ್ಬೊಬ್ಬರ ಮೇಲೂ ಪೈಪೋಟಿ ನಡೆಸಿ, ಏನಾದರೂ ಸರಿ ಅಜ್ಜನ ಆಸ್ಥಿಯನ್ನು ತಮಗೆ, ತಮ್ಮ ಮಕ್ಕಳಿಗೆ, ಅಳಿಯಂದರಿಗೆ, ಸೊಸೆಯಂದಿರಿಗೆ, ಮೊಮ್ಮಕ್ಕಳಿಗೆ ದಕ್ಕಿಸಿಕೊಂಡುಬಿಡಬೇಕೆಂಬ ರಣದಾಹ.
ದೃಶ್ಯ 2. ಮೋಜು ಮಸ್ತಿಮಾಡುವ, ಹಣದ ಬೆಲೆ, ಸಮಾಜದ ಬೆಲೆ ಅರಿಯದ ಸುಂದರಿಯರನ್ನು ವಿದೇಶದ ಒಂದು ಅಮ್ಯೂಸ್ಮೆಂಟ್ ಪಾರ್ಕ್ ಒಂದಕ್ಕೆ ಕರೆದೊಯ್ದು ಅಲ್ಲಿ ತಮಗೆ ಇಚ್ಛೆ ಬಂದಂತೆ ಮಜಾ ಉಡಾಯಿಸಿ ಎಂದು ಬಿಡಲಾಗುತ್ತದೆ. ಅಲ್ಲಿ ಜಾರುವ ಬಂಡಿ, ಗಿರುಗಿಟ್ಟಲೆ, ಮ್ಯೂಸಿಕಲ್ ಛೇರು, ರೈಲು ಹೀಗೆ ತರಹೇವಾರಿ ಆಟಗಳು. ಸುಂದರಿಯರಿಗೆ ಕಾರಿನಿಂದ ಇಳಿದ ಕೂಡಲೆ ಅಲ್ಲಿರುವ ಒಂದೊಂದು ಆಟವನ್ನೂ ಒಮ್ಮೊಮ್ಮೆ ಆಡಿ ಮಜನೋಡುವ ತವಕ. ಕುತೂಹಲದಿಂದ ಒಬ್ಬರಿಗಿಂತ ಒಬ್ಬರು ಪೈಪೋಟಿಯಲ್ಲಿ ಆಟಗಳನ್ನು ಆಡುತ್ತಾ ಮೋಜು ಮಾಡುತ್ತಾರೆ.
ದೃಶ್ಯ 3. ಜೀವನದಲ್ಲಿ ಯಾವುದನ್ನೂ ಸರಿಯಾಗಿ ತೂಗಿಸದೆ, ಸಮಾಜದಲ್ಲಿ ಕಳಂಕಿತಗೊಂಡು ವಿಕೃತಗೊಂಡ ಆರೇಳು ಯುವಕರ ಗುಂಪಿಗೆ ಆ ಒಂದು ದಿನ ನಡುರಾತ್ರಿ ನಿರ್ಜನ ಪ್ರದೇಶದಲ್ಲಿ ಒಂಟಿ ಮಹಿಳೆ ಸಿಕ್ಕಿಬಿಡುತ್ತಾಳೆ. ಈ ದುಷ್ಟಯುವಕರಿಗೆ ಬಲಿಯಾದ ಆಕೆಯನ್ನು ಒಂದು ಪೊದೆಯ ಬಳಿ ಹೊತ್ತೊಯ್ದು ನಿರ್ದಯವಾಗಿ ಒಬ್ಬೊಬ್ಬರೇ ಸರದಿಯಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಸುಖ ಪಡೆಯುತ್ತಾರೆ ಆಕೆ ಯಾರು,  ತಾವು ಮಾಡುತ್ತಿರುವುದಾದರೂ ಏನು ಎಂಬ ವಿವೇಕವೂ ಇರದ ಪೈಶಾಚಿಕ ಮನ್ನಸ್ಸಿನ ಆ ಪಾಪಿಗಳು.
ಮೇಲಿನ ಮೂರೂ ದಶ್ಯಗಳು ಈಗ ಘೋಷಿತವಾಗಿರುವ ಕರ್ನಾಟಕದ ಪ್ರಜಾಪ್ರಭುತ್ವದ ಅಸ್ತಿತ್ವವನ್ನು ಸದೃಢಗೊಳಿಸುವ ನಿರ್ಣಾಯಕ ಚುನಾವಣೆಯಲ್ಲಿ ಸ್ಪರ್ಧಿಸುವ ಗರಿಷ್ಠ ಆಕಾಂಕ್ಷಿತರ ಮನಸ್ಥಿತಿಯ ಪ್ರತಿಬಿಂಬವಾಗಿದೆ. ಕೆಲವರಿಗೆ ಚುನಾವಣೆ ಎಂದರೆ ತಮ್ಮ ಪೂರ್ವಜರ ಆಸ್ತಿ, ಅದು ನಮಗೆ, ನಮ್ಮ ವಂಶಸ್ಥರಿಗೇ ಬರೆದ ಉಯಿಲು ಎಂಬ ಹಪಾಹಪಿ. ಇವರಿಗೆ ರಾಜಕಾರಣ, ಅಧಿಕಾರ ಎಂಬುದು ತಮ್ಮ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಲು ಸುಗಮ ದಾರಿ, ಇದರ ಚೌಕಟ್ಟಿನಲ್ಲಿ ಏನು ಬೇಕಾದರೂ ಮಾಡಿ ಮುಗಿಸಬಹುದು ಎಂಬ ನಂಬಿಕೆ.
ಇನ್ನು ಚುನಾವಣೆಯಲ್ಲಿ ಒಂದು ಆಟ ಆಡಿ ನೋಡಿಬಿಡುವ ಅಪ್ರಬುದ್ಧ ಬಯಕೆ ಈ ನಟನಟಿಯರಿಗೆ. ಈ ನಟಿಯರು ತಮ್ಮ ನಿರ್ಮಾಪಕರು ಹಣ ನೀಡದೇ ಹೋದರೆ ಕೂಡಲೇ ಆತನ ಮರ್ಯಾದೆಯನ್ನು ಹರಾಜು ಹಾಕುತ್ತಾರೆ. ಅದೇ ನಿರ್ಮಾಪಕರು ಹೆಚ್ಚು ಹಣ ನೀಡಿದರೆ ಮೈಚಳಿ ಬಿಟ್ಟು ಎಂತಹ ಸನ್ನಿವೇಷಕ್ಕೂ ಸೈ ಎನ್ನುತ್ತಾರೆ. ಎಳೆಯ ಬಿಸಿಲಿಗೂ ಮುಖವೊಡ್ಡದೆ ಛತ್ರಿ ಹಿಡಿಯುವವನನ್ನು ಕರೆಯುವ ಇವರು ಎಂದಾದರೂ ಬಿಸ್ಲರಿ ನೀರು ಬಿಟ್ಟು ಜನಸಾಮಾನ್ಯರು ಕುಡಿವ ನೀರನ್ನು ಕುಡಿದಿದ್ದಾರೆಯೇ? ಇವರಿಗೆ ಚುನಾವಣೆ ಎಂದರೆ ಮೋಜು ಮಾಡುವ 'ವಂಡರ್ಲಾ ಪಾರ್ಕೇ?' ಅಥವಾ ಬಾಲಿವುಡ್‌ನಲ್ಲಿ ಖಾನ್‌ಗಳ ಜತೆ ನಟಿಸುವಷ್ಟು ರೋಮಾಂಚನವೇ?
ಯಾವುದೇ ಸಾಮಾಜಿಕ ಚಿಂತನೆಗಳಿಲ್ಲದ ಇಂಥವರಿಗೆಲ್ಲಾ ನಮ್ಮ ಪವಿತ್ರವಾದ ಮತವನ್ನು  ನೀಡಿದರೆ ಸಮಾಜವೇ 'ಗೂಬೆಗಳು ಸಾರ್ ಗೂಬೆಗಳು' ಹೆಸರಿನ ಬಫೂನ್ ಚಿತ್ರದಂತೆ ಆಗುತ್ತದೆ.
ಇನ್ನು ಕೆಲ ಭ್ರಷ್ಟಾಚಾರಿಗಳಿಗೆ, ಸ್ವೇಚ್ಛಾಚಾರಿಗಳಿಗೆ ತಮ್ಮ ಅಯೋಗ್ಯತೆಯನ್ನು ಮುಚ್ಚಿಕೊಳ್ಳಲು ರಾಜಕಾರಣವೆಂಬುದು ಮುಖವಾಡವಾಗಿದೆ. ಇಂಥವರಿಗೆಲ್ಲಾ ರಾಜಕೀಯ ಪಕ್ಷಗಳೆಂದರೆ ಅಕ್ಕಪಕ್ಕದಲ್ಲಿರುವ ಹೊಟೇಲುಗಳಂತೆ. ಹಸಿದಾಗ ಒಂದು ಹೊಟೇಲ್‌ಗೆ ನುಗ್ಗುವುದು, ರುಚಿಗೆಟ್ಟರೆ ಪಕ್ಕದ ಹೊಟೇಲ್‌ಗೆ ನುಗ್ಗಿ ತಟ್ಟೆ ಚಾಚುವುದು. ಒಟ್ಟಾರೆಯಾಗಿ ಇವರಿಗೆಲ್ಲಾ ಚುನಾವಣೆ ನಂತರ ನಿರಂತರ ಐದು ವರ್ಷಗಳಷ್ಟು ಕಾಲ ಹಗಲುರಾತ್ರಿ ಎನ್ನದೆ ಕೋಟ್ಯಂತರ ಪ್ರಜೆಗಳ ಹಿತವನ್ನು ಕಾಪಾಡುವುದು ತಮ್ಮ ಪರಮ ಕರ್ತವ್ಯವೆಂಬ ಕಲ್ಪನೆಯೇ ಇಲ್ಲದಾಗಿದೆ. ಚುನಾವಣೆಗೆ ಟಿಕೇಟನ್ನು ಪಡೆಯುವ ಮೊದಲು ತಮ್ಮನ್ನು ಪ್ರಜ್ಞಾವಂತ ಮತದಾರ ಮುಕ್ತಮನಸ್ಸಿನಿಂದ ಬೂತಿಗೆ ಧಾವಿಸಿ ಮತ ಚಲಾಯಿಸುತ್ತಾನಾ ಎಂಬ ಆತ್ಮವಿಮರ್ಶೆಯೂ ಇಲ್ಲ. ಏಕೆಂದರೆ ಇವರು ಹಂಚುವ ಹಣ, ಹೆಂಡ, ಮೊಬೈಲು, ವಾಚು, ಮಿಕ್ಸಿ, ಸೀರೆ ಇಷ್ಟಿದ್ದರೆ ಸಾಕೆಂಬ ನಂಬಿಕೆಯಾದರೆ, ಮತ್ತೊಬ್ಬರಿಗೆ ತಮ್ಮ ಜಾತಿ ನೋಡಿ ಮೂರನ್ನೂ (ಕಣ್ಣು, ಕಿವಿ, ಬುದ್ದಿ) ಮುಚ್ಚಿಕೊಂಡು ಓಟನ್ನು ಒತ್ತಿ ಗೆಲ್ಲಿಸಿಬಿಡುತ್ತಾರೆ ಎಂಬ ಜಾತಿದೈರ್ಯ.
ಈ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಡೀ ಜಗತ್ತನ್ನೇ ಸೆಳೆಯುವ ಅಗಾಧ ಶಕ್ತಿ ಇದೆ. ಸನಾತನ ಇತಿಹಾಸ, ಅನೇಕ ಭಾಷೆಗಳು, ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ, ವಿಶಿಷ್ಟ ಆಚರಣೆಗಳು, ಅಪಾರವಾದ ನೈಸರ್ಗಿಕ ಸಂಪತ್ತುಗಳು, ವಿಶ್ವಸ್ಮಾರಕಗಳು, ವಿಶ್ವಮಾನವರು, ವಿಶ್ವಸಾಧಕರು, ವೇದ ವಿಜ್ಞಾನಿಗಳು, ತ್ಯಾಗಮಹಿಮರು, ವೀರಪುರಷರು ಇವೆಲ್ಲದರ ಒಟ್ಟಾರೆ ದೃಶ್ಯವೇ ನಮ್ಮ ದೇಶ. ವಿಶ್ವ ಭೂಪಟದಲ್ಲಿ ವಿದೇಶಿಗರಿಗೆ ಭಾರತ ಎಂದೊಡನೆ ಈ ಹೂರಣವುಳ್ಳ ದೃಶ್ಯ ಶ್ರೀಮಂತಿಕೆ ಕಣ್ಣೆದುರಾಗುತ್ತದೆ. ಇದಕ್ಕೆ ಪೂರಕವಾಗಿ ನಮ್ಮ ದೇಶವನ್ನು ಮುಂದಿನ ಯುವ ಪೀಳಿಗೆಗೆ ಅರ್ಪಿಸಿ ನೈಜ ಭಾರತೀಯತೆಯನ್ನು ಕೊಂಡೊಯ್ಯಬೇಕಿದೆ. ದುರಂತವೆಂದರೆ ಕೇವಲ ತಮ್ಮ ವೈಯಕ್ತಿಕ ಪದವಿಗಾಗಿ, ದುರುದ್ದೇಶಗಳಿಗಾಗಿ ಜಾತಿಗಳ ದ್ವೀಪಗಳನ್ನು ಬೆಳಗಿಸಿ ಸಮಾಜವನ್ನೇ ಒಡೆದು ಭಾರತೀಯ ಸಾರ್ವಭೌಮತ್ವಕ್ಕೆ ಕಂಟಕ ತರುವ ಕಾರ್ಯ ನಡೆಸುತ್ತಿದ್ದಾರೆ.ಸ್ವಾಮಿ ವಿವೇಕಾನಂದರ ರಾಷ್ಟ್ರೀಯತೆ, ಲಾಲ್ ಬಹದ್ದೂರ್ ಶಾಸ್ತ್ರೀಜಿಯ ಪ್ರಾಮಾಣಿಕತೆ, ನೇತಾಜಿಯ ಸೈದ್ಧಾಂತಿಕತೆ, ಗಾಂಧೀಜಿಯ ಸಾತ್ವಿಕತೆ, ಭಗತ್, ಆಜಾದ್, ರಾಜಗುರು, ಸುಖದೇವ್‌ರ ತ್ಯಾಗಗಳ ಫಲಿತಾಂಶವೇ ಇಂದಿನ ಪ್ರಜಾಪ್ರಭುತ್ವ. ರಾಜಾಡಳಿತದಲ್ಲಿ  ಛಿದ್ರಗೊಂಡಿದ್ದ ಸಮಸ್ತ ಭಾರತವನ್ನು ಆಂಗ್ಲರ ಗುಲಾಮಗಿರಿಯಿಂದ ಬಿಡುಗಡೆಗೊಳಿಸಿ ಸಾಂವಿಧಾನಿಕ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ತರಲು ಎಂತೆಂಥ ವೀರರ, ತ್ಯಾಗಿಗಳ ಬಲಿದಾನಗಳು ನಡೆದುಹೋಗಿರುವುದು ನಮ್ಮ ದೇಶದ ಒಂದು ಪ್ರಮುಖ ಇತಿಹಾಸ. ಒಂದೆಡೆ ಗಾಂಧೀಜಿ ಕುಳಿತು ಆಂಗ್ಲರನ್ನು ಬೇಡಿದರೆ, ಇನ್ನೊಂದೆಡೆ ನೇತಾಜಿ ದೇಶದೇಶಗಳನ್ನು ಸುತ್ತಿ ಆಂಗ್ಲರನ್ನು ಕಾಡಿದರು. ಅಂದು ಗಾಂಧೀಜಿಯನ್ನು ವಿನಾಯಕ ನಾತುರಾಮ ಗೋಡ್ಸೆ ಗುಂಡಿಟ್ಟು ಕೊಂದಿದ್ದರೆ ಅದು ದೇಶಾಭಿಮಾನದ ಕಾರಣದಿಂದಾಗಿಯೇ. ಅಂದು ಪ್ರತಿಯೊಬ್ಬರಲ್ಲೂ ನಮ್ಮ ದೇಶ, ನಮ್ಮ ನಾಡು ಎಂಬ ಏಕಮಂತ್ರವಿತ್ತು. ಆದರೆ ಇಂದು ನಮ್ಮೆಲ್ಲರದೂ ಮೂಕಮಂತ್ರವಾಗಿ ಹೋಗಿದೆ.
ಸಮಾಧಾನದ ಸಂಗತಿ ಎಂದರೆ ಸಾಮಾನ್ಯ ಬಡಪಾಯಿ ಪ್ರಜೆಯಿಂದ ಪಂಚತಾರ ಹೋಟೆಲ್‌ನ ಫುಡಾರಿಗಳವರೆಗೂ ಎಲ್ಲರ ಜೀವನ ಶೈಲಿಯನ್ನೂ ಒಳಹೊಕ್ಕು ಪರಿಶೀಲಿಸಿ ಅನುಭವವಿರುವ ಶಂಕರ ಬಿದರಿ, ಅಶೋಕ್ ಕುಮಾರ್‌ರಂತಹ ಅಧಿಕಾರಿಗಳು, ಕೆಲ ಸಂಭಾವಿತ ಐ.ಎ.ಎಸ್ ಅಧಿಕಾರಿಗಳ ಹೆಸರು ಚುನಾವಣಾ ಕಣದಲ್ಲಿ ಕೇಳಿಬರುತ್ತಿದೆ. ಇಂತಹ ವ್ಯಕ್ತಿಗಳಿಗೆ ಎಲ್ಲಾ ಪಕ್ಷಗಳೂ ಅವಕಾಶ ನೀಡಿದರೆ ಆ ಪಕ್ಷಗಳ ಮರ್ಯಾದೆಯೂ ಹೆಚ್ಚುತ್ತದೆ, ಅವರಿಗೆ ಮತನೀಡುವ ಮೂಲಕ ನಮಗೂ ಮರ್ಯಾದೆ ಹೆಚ್ಚುತ್ತದೆ. ಇದು ಸಮಾಜದ ಹಿತದೃಷ್ಟಿಯಿಂದ ಅತ್ಯಗತ್ಯವಾಗಿದೆ.
ಇವುಗಳೆಲ್ಲಕ್ಕಿಂತ ಮಿಗಿಲಾಗಿ ಚುನಾವಣೆಯಲ್ಲಿ ಗೆದ್ದ ಶಾಸಕರಾಗಲಿ, ಪಾಲಿಕೆ ಸದಸ್ಯನಾಗಲಿ ನಮ್ಮ ಮನೆಯ ಮುಂದಿನ ಮೋರಿ, ರಸ್ತೆ, ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ನಿರ್ವಹಿಸಲು ಒಂದು ಸಂವಿಧಾನ, ಕಾನೂನು ನಿಯಮಗಳಿವೆ. ಅವುಗಳು ಯಾವುದೇ ಪಕ್ಷದ ಅಭ್ಯರ್ಥಿಗಳು ಗೆದ್ದು ಬಂದರೂ ತಪ್ಪದೇ ಮಾಡಲೇಬೇಕಾದ ಕರ್ತವ್ಯವಾಗಿರುತ್ತವೆ. ಆದರೆ ಈ ಮಣ್ಣಿಗೆ ತನ್ನದೇ ಆದ ಸಂಸ್ಕೃತಿ ಇದೆ, ಸಂಸ್ಕಾರವಿದೆ.  ಇದನ್ನೂ ರಾಜಕೀಯ ವ್ಯಕ್ತಿಗಳೇ ರಕ್ಷಿಸಬೇಕು ಎಂಬ ನಿರ್ಲಕ್ಷ್ಯ ತಾಳದೇ ನಾವಾಗೇ ಅದನ್ನು ಉಳಿಸಿಕೊಳ್ಳಲು ಮುಂದಾಗಬೇಕಿದೆ.


- ದೇ.ಮಹೇಶ್ವರ ಹಂಪಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!