ನೆಹರು ಕಾಲದಲ್ಲೇ ಶುರುವಾಗಿತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ!
ಪರಿಚ್ಛೇದ 66ಆ ಕುರಿತು ಕಾನೂನು ತಜ್ಞರು ಮತ್ತು ಇನ್ನಿತರ ಪರಿಣತರು ತಲ್ಲಣಗೊಂಡು ಕೈ ಹಿಂಡಿಕೊಳ್ಳುತ್ತಲೇ ಇದ್ದಾರೆ. ಈ ಕಾಯ್ದೆ ವಾಕ್ ಸ್ವಾತಂತ್ರ್ಯವನ್ನು ಕಟ್ಟಿಹಾಕುತ್ತದೆ ಎನ್ನುವುದು ಹಲವು ತಜ್ಞರ ವಾದ. ಈ ಕುರಿತು ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಕಳುಹಿಸಿದೆ.
ಈ ಸಮಸ್ಯೆ ನಾವಂದುಕೊಂಡಿರುವುದಕ್ಕಿಂತಲೂ ಆಳವಾಗಿ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಬೇರುಬಿಟ್ಟಿದೆ. ಈ ಸಮಸ್ಯೆಯ ಬೀಜವನ್ನು ಮೊದಲು ಬಿತ್ತಿದವರು ಪಂಡಿತ್ ಜವಾಹರ್‌ಲಾಲ್ ನೆಹರು. ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಇಂತಹ ತಿದ್ದುಪಡಿಯನ್ನು ಮೊದಲು ಪರಿಚಯಿಸಿದ್ದು ಅವರೇ!
ಮೊದಲ ಸಂವಿಧಾನ ತಿದ್ದುಪಡಿಯ ವೇಳೆ ವಾಕ್ ಸ್ವಾತಂತ್ರ್ಯದ ಮೇಲೆ ಲಗಾಮು ಹೇರುವಂತಹ ನಿಯಮವನ್ನು ಜಾರಿಗೊಳಿಸಲು ನೆಹರು ಪ್ರಯತ್ನಿಸಿದಾಗ ವಿರೋಧ ಪಕ್ಷಗಳ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು.ಇನ್ನು 1949ರಲ್ಲೂ ಕೂಡ ಎರಡು ನ್ಯಾಯಾಲಯಗಳ ತೀರ್ಪು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದ್ದವು. ಈ ತೀರ್ಪನ್ನು ಬಲಪಂಥೀಯರು ಮತ್ತು ಎಡಪಂಥೀಯರೆನ್ನದೆ ಎಲ್ಲರೂ ಸ್ವಾಗತಿಸಿದ್ದರು. ಈ ಘಟನೆ ನೆಹರೂರ ಮೇಲೆ ಗಾಢ ಪರಿಣಾಮವನ್ನು ಬೀರಿತ್ತು. ಆದರೆ ಮುಂದಿನ ದಿನಗಳಲ್ಲಿ ಮದ್ರಾಸ್ ಹೈಕೋರ್ಟ್, ನೆಹರೂ ಸರ್ಕಾರವನ್ನು ತೀವ್ರವಾಗಿ ಟೀಕಿಸುತ್ತಿದ್ದ 'ಕ್ರಾಸ್‌ರೋಡ್ಸ್' ಎನ್ನುವ ಎಡಪಂಥೀಯ ನಿಯತಕಾಲಿಕವನ್ನು ಬ್ಯಾನ್ ಮಾಡಿತು. ಸಾರ್ವಜನಿಕ ಸುರಕ್ಷತೆ ಮತ್ತು ವ್ಯವಸ್ಥೆಗೆ ಈ ನಿಯತಕಾಲಿಕ ಅಪಾಯವೊಡ್ಡಿದೆ ಎನ್ನುವ ಕಾರಣವನ್ನು ಅದು ಕೊಟ್ಟಿತಾದರೂ, ರಾಷ್ಟ್ರದ ಭದ್ರತೆಗೆ ಅಪಾಯವೊಡ್ಡುವಂತಹ ಸಂದರ್ಭಗಳು ಎದುರಾದಾಗ ಮಾತ್ರ ಇಂತಹ ಕ್ರಮಕ್ಕೆ ಮುಂದಾಗಬಹುದು ಎಂದು ಪರಿಚ್ಛೇದ 19(1)ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆ ಆಯಾಮದಲ್ಲಿ ನೋಡುವುದಾದರೆ ಕ್ರಾಸ್‌ರೋಡ್ಸ್ ಅನ್ನು ನಿಷೇಧಿಸಿದ್ದು ನಿಸ್ಸಂಶಯವಾಗಿಯೂ ತಪ್ಪು ನಿರ್ಣಯವಾಗಿತ್ತು.
ಆದರೆ ಮದ್ರಾಸ್ ಹೈಕೋರ್ಟ್‌ನ ನಿರ್ಣಯವನ್ನು ಗಮನದಲ್ಲಿಟ್ಟುಕೊಂಡ ನೆಹರು, ಪರಿಚ್ಛೇದ 19(2)ರಲ್ಲಿ ತಿದ್ದುಪಡಿ ತರಲು ಉತ್ಸುಕರಾದರು. ಈ ತಿದ್ದುಪಡಿಯ ವಿಷಯ ಒತ್ತಟ್ಟಿಗಿರಲಿ, ಲೋಕಸಭೆಯಲ್ಲಿ ಚರ್ಚೆಯ ವೇಳೆ ನೆಹರು ತಮ್ಮ ವಿರೋಧಿಗಳತ್ತ ತೋರಿಸಿದ ಅಸಹನೆಯಂತೂ ಆಶ್ಚರ್ಯ ತರಿಸುವಂತಿತ್ತು. 'ಭಾರತೀಯ ಮಾಧ್ಯಮದ ಒಂದು ಅಂಗ 'ಕೀಳು ಅಭಿರುಚಿಯ, ನಾಚಿಕೆಗೇಡಿನ ಮತ್ತು ಸುಳ್ಳುಕತೆಗಳನ್ನು ಹೆಣೆಯುವುದರಲ್ಲಿ ವ್ಯಸ್ಥವಾಗಿದೆ' ಎಂದವರು ಹೇಳಿದ್ದರು! ಹಾಗಾಗಿ ಅವಕ್ಕೆ ಬುದ್ಧಿ ಕಲಿಸಲು ಭಾರತೀಯ ಸಂವಿಧಾನದಲ್ಲಿ ತಿದ್ದುಪಡಿ ತರಬೇಕು, ಮಾನನಷ್ಟ ಮತ್ತು ಹಕ್ಕು ಚ್ಯುತಿ ಮಾಡುವಂತಹ ಮಾಧ್ಯಮಗಳ ಬಲವನ್ನು ತಗ್ಗಿಸುವಂತಹ ನಿಯಮ ಜಾರಿಯಾಗಬೇಕು ಎಂದು ಅವರು ಒತ್ತಾಯಿಸಿದರು.
ಇದರಿಂದಾಗಿ ಕಮ್ಯುನಿಸ್ಟ್ ಮತ್ತು ತೀವ್ರ ಬಲಪಂಥೀಯ ವಿಚಾರವುಳ್ಳ ಮಾಧ್ಯಮಗಳಿಗೆ ಪಾಠ ಕಲಿಸಿದಂತಾಗುತ್ತದೆ ಎಂದು ನೆಹರು ಹೇಳಿದರಾದರೂ, ಅವರ ಸಿಟ್ಟೆಲ್ಲವೂ ಹೆಚ್ಚಾಗಿ ಮುಂಬೈನಿಂದ ಪ್ರಕಟವಾಗುತ್ತಿದ್ದ ಆಟಂ, ಕರೆಂಟ್, ಸ್ಟ್ರಗಲ್ ಮತ್ತು ಬ್ಲಿಟ್ಜ್ ಎಂಬ ನಾಲ್ಕು ವಾರಪತ್ರಿಕೆಗಳತ್ತಲೇ ಇತ್ತು. ಇವು ಮೊದಲಿನಿಂದಲೂ ನೆಹರೂರ ವಿದೇಶಾಂಗ ನೀತಿಗಳನ್ನು ಖಂಡಿಸುತ್ತಾ ಬಂದಿದ್ದವು ಮತ್ತು ಅಮೆರಿಕದ ಇಬ್ಬಗೆ ನೀತಿಯತ್ತಲೂ ಕೆಂಡಕಾರುತ್ತಿದ್ದವು! ಕೊನೆಗೂ ನೆಹರೂರ ಇಂಗಿತ ಈಡೇರಿತು. ಭಾರತೀಯ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವಂತಹ ತಿದ್ದುಪಡಿಯೊಂದು ಸಂವಿಧಾನದಲ್ಲಿ ಸೇರಿಕೊಂಡಿತು. ಆದರೆ ಈ ತಿದ್ದುಪಡಿಯನ್ನು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ತೀವ್ರವಾಗಿ ವಿರೋಧಿಸಿದರು. 'ನಿಮಗೆ ಇಲ್ಲಿ 240 ಸದಸ್ಯರ ಬೆಂಬಲವಿರಬಹುದು. ಆದರೆ ದೇಶದಲ್ಲಿ ನಿಮ್ಮ ನಿಲವನ್ನು ವಿರೋಧಿಸುವ ಲಕ್ಷಾಂತರ ಜನರಿದ್ದಾರೆ' ಎಂದು ಅವರು ನೆಹರೂರನ್ನು ಜಾಡಿಸಿದ್ದರು. ಇದಕ್ಕೆ ಪ್ರತಿಯಾಗಿ ಅಸಡ್ಡೆಯಿಂದ ಕೈಯಾಡಿಸಿದ ನೆಹರು: 'ನಿಮ್ಮ ಹೇಳಿಕೆ ಕೇವಲ ಅಪನಿಂದೆ ಹಬ್ಬಿಸುವಂಥದ್ದು' ಎಂದರು.
ಮುಂದೆ ಇದೇ ರೀತಿ ಕೈಯಾಡಿಸಿ ಮಾಧ್ಯಮಗಳಿಗೆ ಕಡಿವಾಣ ಹೇರಿದವರು, ಇಂದಿರಾಗಾಂಧಿ. ದುರದೃಷ್ಟವೆಂದರೆ, ಇಂದಿರಾ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣಹಾಕಿ ಅವುಗಳನ್ನು ತಗ್ಗಿಬಗ್ಗಿ ನಡೆಯುವಂತೆ ಮಾಡಲು ಹೊರಟರೆ, ನಮ್ಮ ಮಾಧ್ಯಮಗಳು ತೆವಳುತ್ತಾ ಸಾಗಿದ್ದವು!
ಆ ಸಮಯದಲ್ಲಿ ಇಂಡಿಯನ್ ಎಕ್ಸಪ್ರೆಸ್‌ನಂತಹ ಕೆಲವು ಪತ್ರಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪತ್ರಿಕೆಗಳು ಸೆನ್ಸಾರ್‌ಶಿಪ್‌ಗೆ ತಲೆಬಾಗಿದವು. ಏಕೆಂದರೆ ಸೆನ್ಸಾರ್‌ಶಿಪ್ ಆಜ್ಞೆಯನ್ನು ಪ್ರಶ್ನಿಸುವಂತಹ ಗಟ್ಟಿಯೆದೆ ಉಳಿದ ಪತ್ರಿಕೆಗಳಿಗಿರಲಿಲ್ಲ.
ವ್ಯಂಗ್ಯವೆಂದರೆ ಆಗ ವಿನೋದ್ ಮೆಹತಾರ ಸಂಪಾದಕತ್ವದ ಬಾಂಬೆ(ಡೆಬೋನೇರ್) ಎನ್ನುವ ಮ್ಯಾಗಜೀನ್ ಕೂಡ ಸೆನ್ಸಾರ್ ಮಂಡಳಿಯ ಮೇಜಿನ ಮೇಲೆ ಹೋಗಿ ಕುಳಿತಿತು. ಅದನ್ನು ತೆಗೆದುನೋಡಿದಾಗ, ಬರೀ ಅರೆಬೆತ್ತಲೆ ಯುವತಿಯರ ಫೋಟೋಗಳೇ ತುಂಬಿದ್ದವು. 'ಪೋರ್ನ್ ಬೇಕಾದರೆ ನಡೆಯುತ್ತದೆ, ಪಾಲಿಟಿಕ್ಸ್ ಮಾತ್ರ ಬೇಡ' ಎಂದಂದ ಸೆನ್ಸಾರ್‌ನವರು ಆ ನಿಯತಕಾಲಿಕ ಸುಸೂತ್ರವಾಗಿ ಪ್ರಕಟವಾಗುವುದಕ್ಕೆ ನಗುನಗುತ್ತಾ ಅನುವುಮಾಡಿಕೊಟ್ಟರು!
ತುರ್ತು ಪರಿಸ್ಥಿತಿಯ ನಂತರ, ಮಾಧ್ಯಮಗಳ ಸ್ವಾತಂತ್ರ್ಯವನ್ನು ಕಾಪಾಡುವುದಕ್ಕಾಗಿ ಮತ್ತು ಪತ್ರಿಕೆಗಳ ಹಾಗೂ ನ್ಯೂಸ್ ಏಜೆನ್ಸಿಗಳ ಗುಣಮಟ್ಟವನ್ನು ಹೆಚ್ಚಿಸುವುದಕ್ಕಾಗಿ 'ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ'ವನ್ನು ಸ್ಥಾಪಿಸಲಾಯಿತು.
ಇಂದಿರಾ ಗಾಂಧಿಯವರ ಯುಗದ ನಂತರ, ಮಾಧ್ಯಮಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಿದವರು ಅವರ ಮಗ ರಾಜೀವ್ ಗಾಂಧಿ! ಕುಖ್ಯಾತ ಡಿಫೇಮೇಷನ್ ಬಿಲ್ ಅನ್ನು ಜಾರಿಗೊಳಿಸಲು ಲೋಕಸಭೆಯಲ್ಲಿ ಅವರು ಪ್ರಯತ್ನಿಸಿದರಾದರೂ ಪ್ರಜೆಗಳ ತೀವ್ರವಿರೋಧದಿಂದಾಗಿ ಕಡೆಗೆ ಸುಮ್ಮನಾಗಲೇಬೇಕಾಯಿತು. ಅಷ್ಟೇ ಅಲ್ಲದೆ ಅವರು 'ಪೋಸ್ಟಲ್ ಬಿಲ್' ಅನ್ನೂ ಕಾನೂನಾಗಿಸುವಂತಹ ವ್ಯರ್ಥ ಪ್ರಯತ್ನವನ್ನೂ ಮಾಡಿದ್ದರು. ಆ ನಿಯಮವೇನಾದರೂ ಜಾರಿಯಾಗಿದ್ದರೆ, ದೇಶದಾದ್ಯಂತ ಹರಿದಾಡುವ ಪತ್ರಗಳನ್ನೆಲ್ಲ ಓದಲು ಪ್ರತೀ ನಗರಗಳಲ್ಲೂ ದೊಡ್ಡ ದೊಡ್ಡ ಡಿರ್ಪಾಟ್‌ಮೆಂಟ್‌ಗಳು ಅಸ್ತಿತ್ವದಲ್ಲಿರುತ್ತಿದ್ದವು. ಆಗ ಯಾರಾದರೂ ತಮ್ಮ ಪತ್ರದಲ್ಲಿ ಸರ್ಕಾರವನ್ನೇನಾದರೂ ಟೀಕಿಸಿದ್ದರೆ ಅವರನ್ನು ನೇರವಾಗಿ ಜೈಲಿಗೇ ಕಳುಹಿಸಲಾಗುತ್ತಿತ್ತು! ಅದೃಷ್ಟವಶಾತ್ ಅಂದಿನ ರಾಷ್ಟ್ರಪತಿಗಳು ಇಂತಹ ಕ್ಷುದ್ರ ಮಸೂದೆಗೆ ಸಹಿ ಹಾಕಲಿಲ್ಲ.
ಇನ್ನು ಸಲ್ಮಾನ್ ರಶ್ದಿಯವರ 'ಸಟಾನಿಕ್ ವರ್ಸಸ್' ಪುಸ್ತಕವನ್ನೂ ಮೊದಲು ನಿಷೇಧಿಸಿದ್ದು ರಾಜೀವ್ ಗಾಂಧಿ ಸರ್ಕಾರವೇ. ಹೀಗೆ ಮಾಡುವ ಮೂಲಕ, ಭಾರತ 'ಅಭಿವ್ಯಕ್ತಿ ಸ್ವಾತಂತ್ರ್ಯ'ವನ್ನು ಎಷ್ಟು ನಿಕೃಷ್ಟವಾಗಿ ಕಾಣುತ್ತದೆ ಎಂಬುದನ್ನು ಜಗಜ್ಜಾಹೀರು ಮಾಡಿದರು. ಈಗ ಸೋನಿಯಾ-ರಾಹುಲ್ ಗಾಂಧಿಯ ಸಮಯ! ಸೆಕ್ಷನ್ 66ಆ ಎನ್ನುವ ಅಂಥದ್ದೇ ವಿಲಕ್ಷಣ ತಿದ್ದುಪಡಿಯನ್ನು ಸಂವಿಧಾನದಲ್ಲಿ ಸೇರಿಸಲು ಅವರೀಗ ಪ್ರಯತ್ನಿಸುತ್ತಿದ್ದಾರೆ. ಇದೇನಾದರೂ ಕಾನೂನಾಯಿತೆಂದರೆ ಮಾಧ್ಯಮಗಳಿಗೆ ಕಡಿವಾಣ ಬೀಳುವುಂದಂತೂ ಖಚಿತ. 'ಇನ್ನೊಬ್ಬರಿಗೆ ಹಾನಿ ಮಾಡುವಂತಹ, ಅವಮಾನ ಮಾಡುವಂತಹ ಅಥವಾ ದ್ವೇಷ ಬಿತ್ತುವಂತಹ ಮಾಹಿತಿ ನೀಡುವ ಮಾಧ್ಯಮಗಳಿಗೆ ಶಿಕ್ಷೆ ವಿಧಿಸಬೇಕು' ಎಂದು ಸೆಕ್ಷನ್ 66ಆ ಹೇಳುತ್ತದೆ. ಅಲ್ಲದೆ ಈಮೇಲ್‌ಗಳ ಮೂಲಕ ಒಬ್ಬರಿಗೆ ಮುಜುಗರವುಂಟು ಮಾಡುವಂತಹ ತಪ್ಪು ಸಂದೇಶ ಕಳುಹಿಸುವ ವ್ಯಕ್ತಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ನೀಡಬೇಕು ಎಂದೂ ಅದು ಆಗ್ರಹಿಸುತ್ತದೆ!'
ಒಟ್ಟಿನಲ್ಲಿ ಈ ತಿದ್ದುಪಡಿಯಲ್ಲಿ ಸಾಮಾಜಿಕ ಮಾಧ್ಯಮಗಳನ್ನೇ ಹೆಚ್ಚಾಗಿ ದೃಷ್ಟಿಯಲ್ಲಿಟ್ಟುಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮಗಳು ಹೆಚ್ಚು ಬಲಪಂಥೀಯ ಧೋರಣೆಯನ್ನು ಹೊಂದಿದ್ದರೆ, ಮುಖ್ಯವಾಹಿನಿಯ ಮಾಧ್ಯಮಗಳು ಎಡಪಂಥೀಯ ಪಥದಲ್ಲಿ ಸಾಗುತ್ತಿವೆ. ಒಟ್ಟಿನಲ್ಲಿ ನೆಹರು ಹಾಕಿಕೊಟ್ಟ ಮಾರ್ಗದಲ್ಲೇ ಅವರ ಮರಿಮೊಮ್ಮಗ ಮತ್ತು ಆತನ ಅಮ್ಮ ನಡೆಯುತ್ತಿದ್ದಾರೆ. ಇದೇನೇ ಇದ್ದರೂ, ಸೆಕ್ಷನ್ 66ಆರಂತಹ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಕ್ಷುದ್ರ, ವಿಕ್ಷಿಪ್ತ ನೀತಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಲಿ ಎಂದು ಆಶಿಸೋಣ.
ಆರ್.ವೈದ್ಯನಾಥನ್
ಪ್ರೊಫೆಸರ್, ಐಐಎಂಬಿ
vaidya@iimb.ernet.in