ಇದು ಶಿಕ್ಷಣ ಕ್ಷೇತ್ರಕ್ಕೆ ಕೊಡುತ್ತಿರುವ ಶಿಕ್ಷೆಯೇ?
'ಮಕ್ಕಳ ದೈಹಿಕ ಶಿಕ್ಷೆಗೆ ಹೊಣೆ ಯಾರು?' (ಕ.ಪ್ರ. 7/4) ವರದಿ ಓದಿ ಗಾಬರಿಯ ಜತೆ ಖೇದವೂ ಆಯಿತು. ವಿಷಯ ಎಲ್ಲಿಯವರೆಗೆ ತಲುಪುತ್ತಿದೆಯೆಂದರೆ ಮಕ್ಕಳಿಗೆ ಶಿಕ್ಷಕರಿಂದ ಶಿಕ್ಷೆ ವಿಧಿಸಲ್ಪಟ್ಟರೆ ಪೋಷಕರು ಪೊಲೀಸ್ ಠಾಣೆಯನ್ನೂ ತಲುಪಬಹುದು ಎಂಬ ಶಿಕ್ಷಣ ಇಲಾಖೆಯ ಸಲಹೆ!?
ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆ ಒಂದೊಮ್ಮೆ ಹಿಂಸೆಯಾದರೆ ಅದನ್ನು ಪೊಲೀಸರ ಗಮನಕ್ಕೂ ತರಬಹುದು. ಆದರೆ ಶಾಲೆಗಳಲ್ಲಿ ಅದರಲ್ಲೂ ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತಗಳಲ್ಲಿ ಶಿಕ್ಷಕರು ನೀಡಬಹುದಾದ ಶಿಕ್ಷೆ ಎಷ್ಟೊಂದು ಮೃದು ಹಾಗೂ ಆತ್ಮೀಯವಾಗಿರುತ್ತದೆಂದರೆ ಅದು ಆ ವಿದ್ಯಾರ್ಥಿಯನ್ನು ಸರಿಯಾದ ದಿಸೆಯಲ್ಲಿ ನಡೆಸಿ ಅವನ ನಡವಳಿಕೆಯನ್ನು ಸುಧಾರಿಸುವ ಅಥವಾ ಕಲಿಯುವ ಆಸಕ್ತಿಯನ್ನು ಹೆಚ್ಚಿಸುವುದಕ್ಕೇ ಹೊರತು ಯಾವೊಬ್ಬ ವಿದ್ಯಾರ್ಥಿಯನ್ನೂ ಥಳಿಸುವ ಅಥವಾ ಮನೋಸ್ಥೈರ್ಯವನ್ನು ಕುಗ್ಗಿಸುವ ಅಥವಾ ಅವನ ಪ್ರಗತಿಯನ್ನು ಕುಂದಿಸುವ ಕಾರಣಕ್ಕಾಗಿರುವುದಿಲ್ಲ. 'ಶಿಕ್ಷಕ' ಪದವೇ ಎಷ್ಟೊಂದು ಗೌರವಯುತವಾದದ್ದು. ಆ ಸ್ಥಾನವೇ ಶಿಷ್ಯರ ಅಭ್ಯುದಯ, ಉನ್ನತಿ, ಶ್ರೇಯಸ್ಸನ್ನು ಬಯಸುವಂತಹುದು. ಮುಂದೊಂದು ದಿನ ತನ್ನ ಶಿಷ್ಯ ಒಬ್ಬ ಉತ್ತಮ ನಾಗರಿಕನಾಗಿ ಬಾಳಲಿ ಎಂಬ ಮಹದಾಸೆ ಪ್ರತಿಯೊಬ್ಬ ಶಿಕ್ಷಕನಲ್ಲೂ ಹಾಸು ಹೊಕ್ಕಾಗಿಸುತ್ತದೆ. ಈ ಮನದಾಸೆಯನ್ನು ಸಾಕಾರಗೊಳಿಸಲು ಕೆಲವು ಶಿಷ್ಯರಿಗೆ ಶಿಕ್ಷೆಯ ಅವಶ್ಯಕತೆಯೂ ಇರುತ್ತದೆ. ಒಂದು ಮಾತಂತೂ ಒಪ್ಪಲೇಬೇಕಾದದ್ದು. ಚಿಕ್ಕ ವಯಸ್ಸಿನಲ್ಲಿ ಒಳಿತು-ಕೆಡಕುಗಳ ಗ್ರಾಹ್ಯ ಅಷ್ಟೊಂದು ಪಕ್ವವಾಗಿರದ ಕಾರಣ, ತಪ್ಪುಗಳಿದ್ದಲ್ಲಿ, ಸಮಯ-ಸಮಯಕ್ಕೆ ತಿದ್ದಿ ಸರಿಯಾದ ಮಾರ್ಗದೆಡೆಗೆ ಮಕ್ಕಳನ್ನು ಮುನ್ನಡೆಸಿಕೊಂಡು ಹೋಗುವುದು ಶಿಕ್ಷಕರ ಜವಾಬ್ದಾರಿಯೇ. ಆ ರೀತಿಯ ತಪ್ಪನ್ನು ತಿದ್ದುವಾಗ ಕೆಲವರಿಗೆ ಮಾತಿನ ಪೆಟ್ಟು ಸಾಕಾದರೆ, ಇನ್ನು ಕೆಲವರಿಗೆ ಛಡಿಯ ಪೆಟ್ಟಿನ ಅವಶ್ಯಕತೆ ಇರುತ್ತದೆ. ಇವಾವುದೂ ಹಿಂಸೆ ಅಂತ ಪರಿಗಣಿಸಲಾಗದು. ಒಬ್ಬನ ಕೈ ಬರಹ ಮುದ್ದಾಗಿಲ್ಲ ಅಂತಾದರೆ, ಹೆಚ್ಚು-ಹೆಚ್ಚು ಬರೆಯಲು ಪ್ರೇರೇಪಿಸಿ, ದುಂಡಾದ ಅಕ್ಷರಗಳು ಹೆಚ್ಚು ಆಕರ್ಷಿತವಾಗಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ಸಾಧ್ಯ. ಅಷ್ಟೇ ಅಲ್ಲ ಒಬ್ಬನ ಅಕ್ಷರ ಅವನ ನಿಜವಾದ ಆಸಕ್ತಿಯನ್ನು ಬಿಂಬಿಸುತ್ತದೆ ಅಂತೆಲ್ಲ ಹೇಳಿ ವಿದ್ಯಾರ್ಥಿಯ ಅಕ್ಷರಗಳನ್ನು ಸುಧಾರಿಸಬಹುದಲ್ಲ. ಅದಕ್ಕೆ ಬದಲು, ಪುಸ್ತಕವನ್ನೇ ಹರಿದು, ಬೈಯ್ದು, ಹೀಯಾಳಿಸಿ, ಹೊಡೆದು ಬಡಿದರೆ ಅದು ಆಕ್ಷೇಪಾರ್ಹ. ಸಾಮಾನ್ಯವಾಗಿ ಇಂತಹ ಸನ್ನಿವೇಶಗಳು ಅತಿ ಅಪರೂಪ. ಇನ್ನು ಮಕ್ಕಳನ್ನು ದಂಡಿಸದೆ ಶಿಕ್ಷಣ ನೀಡಬೇಕೆನ್ನುವುದು ನೂರಕ್ಕೆ ನೂರರಷ್ಟು ಸಮಂಜಸವಲ್ಲ. ಆದರೆ ಇಂದು ನಾವು ಕಾಣುವ ಸನ್ನಿವೇಶಗಳು ತೀರ ಜ್ಢಡ್ಠಿಜಟಜ ತರಹದ್ದು. ಯಾವುದೇ ಶಿಕ್ಷಕ ಏನೇ ಸಣ್ಣ ಶಿಕ್ಷೆ ಕೊಟ್ಟರೂ ಮೊದಲು ಅದನ್ನು ಪೊಲೀಸ್ ಠಾಣೆಗೆ ದೂರು ದಾಖಲಿಸಬೇಕಂತೆ. ಇದೆಂತಹ ಸಂಕಷ್ಟದ ಸನ್ನಿವೇಶ! ಒಂದು ಮಾಮೂಲಿ ಸಂದರ್ಭವನ್ನೂ ಅನಾವಶ್ಯಕವಾಗಿ ದೊಡ್ಡದು ಮಾಡುವುದೆಂದರೆ ಇದೇನೆ. ಇಲ್ಲಿ ಪೋಷಕರ/ಪಾಲಕರ ಜವಾಬ್ದಾರಿ ಬಹುಮುಖ್ಯ. ತಮ್ಮ ಮಕ್ಕಳನ್ನು ಅತಿ ಮುದ್ದಿನಿಂದ ಸಾಕುತ್ತಿರುವ ಇಂದಿನ ಪಾಲಕರಿಗೆ, ಶಿಕ್ಷಕರ ಒಂದು ಗಡಸು ಮಾತು ಹಿಂಸೆಯಾಗಿ ಕಾಣುತ್ತದೆ. ಶಿಕ್ಷಕರ ಮೇಲೆ ಅನಾಯಾಸ ದೂರು ಕೊಡಲು ಮುಂದಾಗುತ್ತಾರೆ.
ನಾವು ಚಿಕ್ಕವರಿರುವಾಗಿನ ಶಾಲೆಯ ವಾತಾವರಣವನ್ನು ನೆನೆಸಿಕೊಂಡರೆ, ನಮಗೇನೂ ಶಿಕ್ಷೆ ಕಡಿಮೆ ಸಿಗುತ್ತಿರಲಿಲ್ಲ. ಹಾಗಂತ ನಮ್ಮ ಗುರುಗಳ ಮೇಲಿನ ಗೌರವ ನಮಗೆ ಕಡಿಮೆಯಾಗಿದ್ದೇ ಇಲ್ಲ. ನಮ್ಮ ಪಾಲಕರೂ ಶಿಕ್ಷಕರನ್ನು ವಿರೋಧಿಸುತ್ತಿರಲಿಲ್ಲ. ಬದಲಿಗೆ, ಉತ್ತಮ ಕಲಿಕೆಯ ದೃಷ್ಟಿಯಿಂದ ಅಥವಾ ಉತ್ತಮ ನಡತೆಯ ದೃಷ್ಟಿಯಿಂದ ಶಿಕ್ಷಕರು ಕೊಟ್ಟ ಶಿಕ್ಷೆಯನ್ನು ಎತ್ತಿ ಹಿಡಿಯುತ್ತಿದ್ದರು. ಒಬ್ಬ ವಿದ್ಯಾರ್ಥಿ ಒಂದು ಪದ್ಯವನ್ನು ಕಂಠಪಾಠ ಮಾಡಿಕೊಂಡು ಬರಲಿಲ್ಲವೆಂದಾದಾಗ ಶಿಕ್ಷಕರು ಎರಡು ಪೆಟ್ಟು ಕೊಟ್ಟಿದ್ದು ಪಾಲಕರಿಗೆ ತಿಳಿದಾಗ, ಅಭ್ಯಾಸ ಮಾಡಿಕೊಂಡು ಬರದಿದ್ದರೆ ಇನ್ನೆರಡು ಪೆಟ್ಟು ಹೆಚ್ಚು ಕೊಡಿ ಮಾಸ್ತರರೇ ಅಂತ ಹೇಳುತ್ತಿದ್ದರೆ ಹೊರತು ತಮ್ಮ ಮಕ್ಕಳ ಪುಕಾರನ್ನು ಎಂದಿಗೂ ಪ್ರೋತ್ಸಾಹಿಸುತ್ತಿರಲಿಲ್ಲ. ತಮ್ಮ ಮಕ್ಕಳ ಒಳಿತಿಗಾಗಿಯೇ ಬಿದ್ದ ಪೆಟ್ಟು ಎಂಬ ಸ್ಪಷ್ಟ ಕಲ್ಪನೆ ಇರುತ್ತಿತ್ತು. ಆದರೆ ಇಂದಿನ ಪಾಲಕರ ಮನೋಭಾವವೇ ಭಿನ್ನ. ಇಂದು, ಶಿಕ್ಷಕರೆಂದರೆ ಅವರೊಬ್ಬ 'ಪೇಡ್ ಎಂಪ್ಲಾಯಿ.' ತಮ್ಮ ಮಕ್ಕಳ ಮೇಲೆ ಅವರಿಗೆ ಯಾವುದೇ ರೀತಿಯ ಅಧಿಕಾರ ಚಲಾಯಿಸುವ ಅಥವಾ ಶಿಕ್ಷಿಸುವ ಹಕ್ಕಿರುವುದಿಲ್ಲ. ನಮ್ಮ ಮಕ್ಕಳನ್ನು ಹೇಗೆ ನಡೆಸಿಕೊಳ್ಳಬೇಕೆಂಬುದು ನಮಗೆ ಚೆನ್ನಾಗಿ ಗೊತ್ತು. ಲಕ್ಷಗಟ್ಟಲೆ ಫೀಸ್ ಕೊಟ್ಟು 'ಉತ್ತಮ' ಶಿಕ್ಷಣ ದೊರಕಿಸಿಕೊಡಬೇಕೆಂಬುದೇ ನಮ್ಮ ಧ್ಯೇಯ ಇತ್ಯಾದಿ, ಇತ್ಯಾದಿ. ಒಂದಂತೂ ಅದು ಹಿಂಸೆ ಅಥವಾ ದಬ್ಬಾಳಿಕೆ ಅನ್ನುವ ಮನೋವೃತ್ತಿ ತುಂಬಿಕೊಂಡಿದೆ. ಈ ರೀತಿಯ ಪಾಲಕ ಸಮೂಹದ ಮನಃಸ್ಥಿತಿಯಿಂದಲೇ ಇಂದಿನ ಶಿಕ್ಷಣಮಟ್ಟ ಹಾಗೂ ಮೌಲ್ಯ ಕುಸಿಯುತ್ತಿದೆ ಅಂತಲ್ಲ ಅನಿಸದೆ ಇರದು. ಇಂದು ಶಿಕ್ಷಣ ಕೇವಲ ಒಂದು ಮಾರಾಟದ ಸರಕಾಗಿ ಪರಿವರ್ತನೆಗೊಳ್ಳುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿಯ ಪಾವಿತ್ರ್ಯ ಅಳಿಸುತ್ತಿದೆ. ಶಿಕ್ಷಣ, ಶಿಕ್ಷಕ, ಶಿಕ್ಷಾಕೇಂದ್ರ ಇವೆಲ್ಲವನ್ನೂ ಹಣದಿಂದ ತೂಗಲಾಗುತ್ತಿದೆ.
ಎಲ್ಲಿಯವರೆಗೆ ಪೊಲೀಸ್ ಠಾಣೆ ಸಂಸ್ಕೃತಿ ಶಿಕ್ಷಣ ಕ್ಷೇತ್ರವನ್ನೂ ಆವರಿಸುತ್ತದೋ, ಅಲ್ಲಿಯವರೆಗೆ ಇನ್ನೇನೂ ಒಳಿತನ್ನು ಊಹಿಸುವುದೂ ಕಷ್ಟಸಾಧ್ಯವಲ್ಲವೇ?
- ಶಂಕರನಾರಾಯಣ ಭಟ್
(ಅನಿವಾರ್ಯ ಕಾರಣಗಳಿಂದ ಪ್ರಣತಿ ಅಂಕಣ
ಪ್ರಕಟವಾಗಿಲ್ಲ. ಮುಂದಿನ ವಾರದಿಂದ ಎಂದಿನಂತೆ)