ಪ್ರಜಾಪ್ರಭುತ್ವದ ಬುನಾದಿಯನ್ನೇ ಭ್ರಷ್ಟಾಚಾರ ಅಲ್ಲಾಡಿಸುತ್ತಿದೆ
ಸ್ವಚ್ಛ ಚುನಾವಣೆಗಾಗಿ ನೈತಿಕ ಮಾದರಿಯೊಂದನ್ನು ಪರಿಚಯಿಸಿರುವ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಪ್ರಯತ್ನ ಎಲ್ಲರಲ್ಲಿ ಆಸಕ್ತಿ ಹುಟ್ಟಿಸಿದೆ. ಈ ಬಗ್ಗೆ ಶ್ರೀಗಳು ವಿವರವಾಗಿ ಮಾತನಾಡಿದ್ದಾರೆ...
ವೀರಶೈವ ಸಂಪ್ರದಾಯದ ಪ್ರಭಾವಿ ಮಠಗಳಲ್ಲಿ ಒಂದಾದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವ ಭಕ್ತಸಮುದಾಯದ ಮೇಲೆ ವಿಶೇಷ ಹಿಡಿತ ಸಾಧಿಸಿದೆ. ಪೀಠದ ಹಿಂದಿನ ಗುರುಗಳಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಇಂತಹ ಅಭ್ಯರ್ಥಿಗಳಿಗೇ ಮತ ಹಾಕಬೇಕು ಎಂದು ಆದೇಶಿಸಿದರೆ ಸಾಕು- ಆ ಅಭ್ಯರ್ಥಿ ಗೆದ್ದಂತೆಯೇ! ರಾಜಕೀಯ ಪ್ರಭಾವ ಹೇಗಿತ್ತೆಂದರೆ ಮುಖ್ಯಮಂತ್ರಿಯಾಗಿ ಹೊಸದುರ್ಗ ಮತಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸಿದ್ದವನಹಳ್ಳಿ ನಿಜಲಿಂಗಪ್ಪ ಅವರ ವಿರುದ್ಧ ಅನಾಮಧೇಯ ಜಿ.ಟಿ. ರಂಗಪ್ಪ ಅವರನ್ನು ನಿಲ್ಲಿಸಿ ಗೆಲ್ಲಿಸುವಷ್ಟು ಪ್ರಖರ. 1977ರ ತುರ್ತು ಪರಿಸ್ಥಿತಿಯನ್ನು ಅವರಷ್ಟು ಉಗ್ರವಾಗಿ ಖಂಡಿಸಿದ ಮಠಾಧಿಪತಿಗಳು ಮತ್ತೊಬ್ಬರಿಲ್ಲ. ತಮ್ಮ ನಡೆನುಡಿಗಳಲ್ಲಿ ಅಷ್ಟೊಂದು ಬದ್ಧತೆಯನ್ನು ಅವರು ತೋರ್ಪಡಿಸಿದ್ದರು. ಈಗಿನ ಪೀಠಾಧಿಪತಿಗಳಾದ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ರಾಜಕೀಯದಿಂದ ದೂರವೇ ಉಳಿಯುವ ಪ್ರಯತ್ನ ಮಾಡಿದ್ದರೂ, ನೀತಿ, ತತ್ವ, ಪಾರದರ್ಶಕತೆ ಹಾಗೂ ಸಾಮಾಜಿಕ ಆರೋಗ್ಯವನ್ನು ಕಾಪಾಡುವ ರಾಜಕೀಯ ನಿಲುವುಗಳಿಗೆ ಬದ್ಧರಾದವರು. ನೈತಿಕ ನಿಲುವಿನ ರಾಜಕೀಯವನ್ನು ಪ್ರಾಯೋಗಿಕವಾಗಿ ಆರಂಭಿಸಿ ಅದರಲ್ಲಿ ಯಶಸ್ಸು ಸಾಧಿಸಿದವರು. ರಾಜಕೀಯವಾಗಿ ದೂರ ಉಳಿಯುವ ಅಪೇಕ್ಷೆ ಇದ್ದರೂ ಕುಲಗೆಡುತ್ತಿರುವ ರಾಜಕೀಯ, ಅದು ತಂದೊಡ್ಡುತ್ತಿರುವ ಸಾಮಾಜಿಕ ವಿನಾಶಗಳನ್ನು ಕಣ್ಣಾರೆ ಕಂಡು ಮರುಗುತ್ತಿರುವ ಸ್ವಾಮೀಜಿಗಳು ಭ್ರಷ್ಟಾಚಾರ ಮುಕ್ತ, ಆಮಿಷ ರಹಿತ ಚುನಾವಣೆಗೆ ನಾಂದಿ ಹಾಡುವ ವಿಶೇಷ ಪ್ರಯತ್ನ ನಡೆಸಿದ್ದಾರೆ.
ಚುನಾವಣಾ ಅಕ್ರಮಗಳು ಮತ್ತು ಭ್ರಷ್ಟಾಚಾರ ತಡೆಗಟ್ಟುವುದು ಸಾಧ್ಯವೆ?
ಚುನಾವಣಾ ಅಕ್ರಮಗಳು ಮತ್ತು ಭ್ರಷ್ಟಾಚಾರಗಳು ದೇಶದ ಉದ್ದಗಲಕ್ಕೂ ಎಷ್ಟು ವ್ಯಾಪಕವಾಗಿ ಹರಡಿವೆಯೆಂದರೆ ಇವುಗಳ ಸುಧಾರಣೆ ಸಾಧ್ಯವೇ ಇಲ್ಲವೆಂಬ ದುಃಸ್ಥಿತಿ ಒದಗಿದೆ. ನಮ್ಮ ದೇಶದ ಸಂವಿಧಾನ ರಚಿಸಿದ ನೇತಾರರು ದೇಶ ಪ್ರೇಮಿಗಳಾಗಿದ್ದರು. ಪ್ರಜೆಗಳ ಹಿತವನ್ನೇ ಗುರಿಯಾಗಿಟ್ಟುಕೊಂಡಿದ್ದರು. ಅವರಿಗೆ ದೇಶದ ಜನರು ಸ್ವತಂತ್ರ ಭಾರತದಲ್ಲಿ ಇಷ್ಟು ಕೆಳಮಟ್ಟಕ್ಕೆ ಪತನಗೊಳ್ಳುತ್ತಾರೆಂಬ ಪರಿಕಲ್ಪನೆಯೇ ಇರಲಿಲ್ಲ. ಆದ ಕಾರಣ ಅವರು ರಚಿಸಿದ ಕಾನೂನುಗಳಿಂದ ಭ್ರಷ್ಟಾಚಾರದ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಇಂದಿನ ಭ್ರಷ್ಟ ರಾಜಕಾರಣಿಗಳನ್ನು, ಅಧಿಕಾರಿಗಳನ್ನು, ಜನರನ್ನು ಹದ್ದುಬಸ್ತಿನಲ್ಲಿಡಲು ಕಠಿಣಾತಿ ಕಠಿಣವಾದ ಹೊಸ ಕಾನೂನುಗಳನ್ನು ರೂಪಿಸಿ ಜಾರಿಗೆ ತರುವ ಅಗತ್ಯವಿದೆ. ಬರೀ ರಾಜಕಾರಣಿಗಳು ಭ್ರಷ್ಟರಾಗಿದ್ದಾರೆಂದು ಟೀಕಿಸಿದರೆ ಸಾಲದು. ಅಧಿಕಾರಿಗಳು ಮತ್ತು ಜನರು ಭ್ರಷ್ಟರಾಗಿದ್ದಾರೆ. ಈ ಮೂವರೂ ಭ್ರಷ್ಟರಿರುವುದರ ಜೊತೆಗೆ ಅವರನ್ನು ನಿಯಂತ್ರಣದಲ್ಲಿಡಬೇಕಾದ ನ್ಯಾಯಾಂಗವೂ ಈ ಭ್ರಷ್ಟಾಚಾರದಿಂದ ಸಂಪೂರ್ಣ ಹೊರತಾಗಿಲ್ಲವೆಂಬುದು ಅತ್ಯಂತ ವಿಷಾದದ ಸಂಗತಿ. ಹೀಗಾಗಿ ಈ ವ್ಯವಸ್ಥೆಯನ್ನು ಬದಲಾಯಿಸುವುದು ಸಾಧ್ಯವೇ ಎಂಬ ಹತಾಶ ಪರಿಸ್ಥಿತಿ ಉಂಟಾಗಿದೆ. ಜನರು ಒಳ್ಳೆಯವರಾದರೆ, ನೀತಿವಂತರಾದರೆ, ಪ್ರಾಮಾಣಿಕರಾದರೆ ಈಗಿರುವ ಕಾನೂನುಗಳ ಅಡಿಯಲ್ಲಿಯೇ ನಿಯಂತ್ರಿಸಲು ಖಂಡಿತಾ ಸಾಧ್ಯವಿದೆ.
- ಚುನಾವಣಾ ಪದ್ಧತಿ ಬದಲಾದರೆ ಸಮಾಜ ಬದಲಾಗುವುದೆ?
ಚುನಾವಣೆ ಪದ್ಧತಿ ಮಾತ್ರ ಬದಲಾದರೆ ಸಮಾಜ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಪ್ರಕ್ರಿಯೆ ಒಂದು ಪ್ರಮುಖ ಘಟ್ಟ. ಚುನಾವಣೆಗಳಿಲ್ಲದೆ ಪ್ರತಿನಿಧಿಗಳಿಲ್ಲ, ಪ್ರತಿನಿಧಿಗಳಿಲ್ಲದೆ ಸರ್ಕಾರವಿಲ್ಲ. ಚುನಾವಣೆಗಳೇ ಪ್ರಜಾಪ್ರಭುತ್ವದ ತಳಹದಿ. ತಳಹದಿ ಸರಿಯಿಲ್ಲದೆ ನಗರಗಳಲ್ಲಿ ಅನೇಕ ಬಹುಮಹಡಿ ಕಟ್ಟಡಗಳು ಇತ್ತೀಚೆಗೆ ಕುಸಿದು ಬೀಳುತ್ತಿರುವುದನ್ನು ಕಾಣುತ್ತೇವೆ. ಚುನಾವಣೆಗಳು ಅಕ್ರಮ ಮತ್ತು ಭ್ರಷ್ಟತೆಗಳಿಂದ ಕೂಡಿದ್ದರೆ ಆಯ್ಕೆ ಆದವನೂ ಆಯ್ಕೆ ಮಾಡಿದವರೂ ಇಬ್ಬರೂ ಭ್ರಷ್ಟರೇ ಆಗಿರುತ್ತಾರೆ. ಆಗ ಪ್ರಜಾಪ್ರಭುತ್ವವೇ ಭದ್ರ ಬುನಾದಿಯಿಲ್ಲದೆ ಮರಳಿನ ಮೇಲೆ ಕಟ್ಟಿದ ಸೌಧದಂತಾಗುತ್ತದೆ. ಚುನಾವಣೆಯಲ್ಲಿನ ಭ್ರಷ್ಟತೆಯನ್ನು ನಿರ್ಮೂಲನೆ ಮಾಡಿದರೆ ಅಷ್ಟರ ಮಟ್ಟಿಗೆ ಸಮಾಜದಲ್ಲಿ ಸುಧಾರಣೆಯನ್ನು ಕಾಣಬಹುದು. ಆದರೆ, ಸಮಾಜವು ಸಂಪೂರ್ಣವಾಗಿ ಬದಲಾವಣೆಯಾಗುವುದು ಪ್ರಜೆಗಳಲ್ಲಿ ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳು ನೆಲೆಗೊಂಡಾಗ ಮಾತ್ರ ಸಾಧ್ಯ.
ಚುನಾವಣಾ ಪದ್ಧತಿ ಸುಧಾರಣೆ ಯಾವ ರೀತಿಯಲ್ಲಿ ಸಾಧ್ಯವಾಗುವುದು?
ಚುನಾವಣಾ ಪದ್ಧತಿಯನ್ನು ಸುಧಾರಣೆ ಮಾಡಲು ಈ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ನಮ್ಮ ಅನಿಸಿಕೆ. ರಾಜಕೀಯ ಪಕ್ಷಗಳಲ್ಲಿ ಶಿಸ್ತು ಮೂಡಬೇಕು. ಅಭ್ಯರ್ಥಿಗಳು ಆಯ್ಕೆಯಾದ ನಂತರ ಅವರು ಪಕ್ಷಾಂತರ ಮಾಡದಂತೆ ನಿಷೇಧವಿರುವ ರೀತಿಯಲ್ಲಿಯೇ ಚುನಾವಣೆಗೂ ಮೊದಲು ಪಕ್ಷದ ಸದಸ್ಯರು ಪಕ್ಷಾಂತರ ಮಾಡದಂತೆ ನಿಷೇಧವಿರಬೇಕು. ಚುನಾವಣೆಗೆ ನಿಲ್ಲಲು ಪಕ್ಷದಲ್ಲಿ ಕನಿಷ್ಠ 5 ವರ್ಷವಾದರೂ ಕಾರ್ಯಕರ್ತನಾಗಿ ಕೆಲಸ ಮಾಡಿರಬೇಕು. ಈ ಪಕ್ಷ ಟಿಕೆಟ್ ಕೊಡಲಿಲ್ಲವೆಂದು ಆ ಪಕ್ಷಕ್ಕೆ, ಆ ಪಕ್ಷ ಟಿಕೆಟ್ ಕೊಡಲಿಲ್ಲವೆಂದು ಇನ್ನೊಂದು ಪಕ್ಷಕ್ಕೆ - ಹೀಗೆ ಕೊಂಬೆಯಿಂದ ಕೊಂಬೆಗೆ ಹಾರುವ ಮಂಗಾಟಗಳಿಗೆ ಕಾನೂನಿನಲ್ಲಿ ಕಡಿವಾಣ ಹಾಕಬೇಕು. ಚುನಾವಣೆಗೂ ಮೂರು ತಿಂಗಳು ಮುನ್ನ ಎಲ್ಲ ಪಕ್ಷಗಳು ತಮ್ಮ ಪಕ್ಷದ ಸದಸ್ಯರ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತಾಗಬೇಕು. ಪಕ್ಷದ ಸದಸ್ಯನಾಗಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರೆ ಅಂತಹವರ ಉಮೇದುವಾರಿಕೆಯನ್ನು ಚುನಾವಣಾ ಆಯೋಗ ಅನರ್ಹಗೊಳಿಸುವಂತಾಗಬೇಕು. ರಾಜಕೀಯ ಪಕ್ಷಗಳ ವರಿಷ್ಠರು ಜನರ ಹಿತವನ್ನು ಸಾಧಿಸದೆ ತಮ್ಮ ಹಿತಾಸಕ್ತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಟಿಕೆಟ್ ಹಂಚಿಕೆ ಮಾಡುವುದು ನಿಲ್ಲಬೇಕು. ರಾಜಕೀಯ ಪಕ್ಷಗಳು ತಮಗೆ ತಿಳಿದಂತೆ ಮನಸೋ ಇಚ್ಫೆ ಸದಸ್ಯತ್ವವನ್ನು ಕೊಡುತ್ತವೆ. ಅದರ ಮೇಲೆ ಚುನಾವಣಾ ಆಯೋಗದ ನಿಯಂತ್ರಣವಿರಬೇಕು. ಮತದಾನವನ್ನು ಕಡ್ಡಾಯಗೊಳಿಸಬೇಕು. ಮತದಾನ ಮಾಡದ ಸರ್ಕಾರಿ, ಖಾಸಗಿ ನೌಕರರ ಚುನಾವಣಾ ದಿನದ ವೇತನವನ್ನು ಕಡಿತಗೊಳಿಸಬೇಕು. ಜೊತೆಗೆ ಅವರಿಗೆ ಬಡ್ತಿ ನೀಡಬಾರದು. ಸರ್ಕಾರವು ನೀಡುವ ಬಿ.ಪಿ.ಎಲ್ ಪಡಿತರ, ಅಂಗವಿಕಲ ವೇತನ, ವಿಧವಾ ವೇತನ, ವೃದ್ಧಾಪ್ಯ ವೇತನ, ನಾನಾ ರೀತಿಯ ಸಬ್ಸಿಡಿಗಳು - ಇವೆಲ್ಲವೂ ಮತದಾನ ಮಾಡದವರಿಗೆ ನಿಲ್ಲಬೇಕು. ಚುನಾವಣಾ ಅಕ್ರಮವನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿ ಅದರಲ್ಲಿ ತೊಡಗಿದವರಿಗೆ ಕಠಿಣವಾದ ಶಿಕ್ಷೆಯನ್ನು ನೀಡಬೇಕು. ಯಾವ ಕಾರಣಕ್ಕೂ ಒಂದು ಬಾರಿ ಚುನಾವಣೆ ಆದ ಮೇಲೆ ಐದು ವರ್ಷದ ಸರ್ಕಾರದ ಅವಧಿ ಮುಗಿಯುವವರೆಗೆ ಮತ್ತೆ ಚುನಾವಣೆ ನಡೆಯಬಾರದು. ಯಾರಾದರೂ ರಾಜಿನಾಮೆ ನೀಡಿದರೆ ಮರು ಚುನಾವಣೆ ಆಗಬಾರದು. ಯಾರಾದರೂ ಮರಣ ಹೊಂದಿದರೆ ವಿಜೇತ ಅಭ್ಯರ್ಥಿಗಿಂತ ಕಡಿಮೆ ಮತ ಪಡೆದ ಅಭ್ಯರ್ಥಿ ಶಾಸಕನಾಗಿ ಅಧಿಕಾರಕ್ಕೆ ಬರಬೇಕು. ಹೊರ ದೇಶಗಳಲ್ಲಿ ಚುನಾವಣೆಯನ್ನು ನಿಗದಿತ ತಿಂಗಳಲ್ಲಿ ನಡೆಸಲಾಗುತ್ತದೆ. ಅದರಂತೆಯೇ ಭಾರತೀಯ ಸಂಪ್ರದಾಯದ ಹಬ್ಬ ಹರಿದಿನಗಳು ನಿಗದಿತ ದಿನದಲ್ಲಿ ನಡೆಯುವಂತೆ ಚುನಾವಣೆಗೂ ದಿನ ನಿಗದಿಪಡಿಸಿ ಏಕಕಾಲಕ್ಕೆ ವಿಧಾನಸಭೆ, ಲೋಕಸಭೆಗೆ ಚುನಾವಣೆ ನಡೆಯಬೇಕು. ಅಲ್ಪಮತದ ಸರ್ಕಾರ (ಮೈನಾರಿಟಿ ಸರ್ಕಾರ) ಇರಬಹುದು. ಆದರೆ, ಬೆಂಬಲ ನೀಡಿದ ಪಕ್ಷಗಳು, ಪಕ್ಷೇತರರಿಗೆ ಸಚಿವ ಸ್ಥಾನ ಅಥವಾ ಯಾವುದೇ ಅಧಿಕಾರ ನೀಡಬಾರದು. ಅವರು ಹೊರಗಿನಿಂದ ಬೆಂಬಲ ನೀಡಬೇಕು. ಸರ್ಕಾರದೊಳಗೆ ಅವರು ಇರಬಾರದು.
ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳಷ್ಟೇ ನಿಮ್ಮ ಬಳಿ ಬಂದದ್ದು ಹೇಗೆ? ಬೇರೆ ಕ್ಷೇತ್ರದವರು ಬರುವರೆ?
ಬೇರೆ ಕ್ಷೇತ್ರದ ಅಭ್ಯರ್ಥಿಗಳು ನಮ್ಮ ಬಳಿಗೆ ಬಂದಿರುವುದು ನಿಜ. ಆದರೆ, ಚಿಕ್ಕಮಗಳೂರು ಕ್ಷೇತ್ರದ ಎಲ್ಲ ಅಭ್ಯರ್ಥಿಗಳು ನಮ್ಮ ನಿಲುವಿಗೆ ಹೆಚ್ಚು ಸಕಾರಾತ್ಮಕವಾಗಿ ಸ್ಪಂದಿಸಿದ ಕಾರಣ ಅಲ್ಲಿ ನಮ್ಮ ಪ್ರಯೋಗವನ್ನು ಮಾಡಲು ಮುಂದಾಗಿದ್ದೇವೆ. ಮಠಗಳು ಸಾರ್ವಜನಿಕ ಸಂಸ್ಥೆಗಳಾದ್ದರಿಂದ ಚುನಾವಣಾ ಅಭ್ಯರ್ಥಿಗಳು ನಮ್ಮ ಬಳಿಗೆ ಆಶೀರ್ವಾದ ಪಡೆಯಲು ಬರುತ್ತಾರೆ. ಬರುವವರೆಲ್ಲರೂ ಭಕ್ತಿಯಿಂದ ಮಾತ್ರವೇ ಬರುತ್ತಾರೆಂದು ಹೇಳಲಾಗದು. ಮಠದ ಶಿಷ್ಯರು ಮತ್ತು ಅಭಿಮಾನಿಗಳು ಎಲ್ಲ ಕಡೆಯೂ ಇದ್ದಾರೆ. ನಮ್ಮ ಹತ್ತಿರ ಬಂದರೆ ನಮ್ಮ ಶಿಷ್ಯರು ಮತ್ತು ಅಭಿಮಾನಿಗಳ ಓಟುಗಳು ತಮಗೆ ದೊರೆಯುತ್ತವೆ ಎಂಬ ಆಸೆಯಿಂದ ಬರುವವರೇ ಹೆಚ್ಚು.
ಚುನಾವಣಾ ಪದ್ಧತಿ ಸುಧಾರಣೆ ಕುರಿತು ಚುನಾವಣಾ ಆಯೋಗಕ್ಕೆ ಸಲಹೆ ನೀಡಿದ್ದೀರಾ? ಆಯೋಗದ ಪ್ರತಿಕ್ರಿಯೆ ಏನು?
ಈ ಕುರಿತು ಸಾಕಷ್ಟು ಲೇಖನಗಳನ್ನು ಬರೆದಿದ್ದೇವೆ. ನೇರವಾಗಿ ಚುನಾವಣಾ ಆಯೋಗಕ್ಕೆ ಬರೆಯುವ ಅಪೇಕ್ಷೆ ಇತ್ತು. ಆದರೆ, ಆಯೋಗವು ಅನುಸರಿಸಬೇಕಾದ ಕಾನೂನುಗಳ ಅಡಿಯಲ್ಲಿ ನಾವು ಬಯಸುವ ಸುಧಾರಣೆಗಳನ್ನು ತರಲು ಅದಕ್ಕೆ ಅಧಿಕಾರವಿಲ್ಲವೆಂದು ಕಾನೂನು ತಜ್ಞರಿಂದ ತಿಳಿದು ಬಂದ ಕಾರಣ ಬರೆಯುವುದನ್ನು ಕೈಬಿಟ್ಟೆವು. ಚುನಾವಣಾ ಸುಧಾರಣೆಯು ಪಾರ್ಲಿಮೆಂಟಿನಲ್ಲಿ ಬಿಲ್ ಪಾಸಾಗುವುದರ ಮೂಲಕ ಆಗಬೇಕಾಗುತ್ತದೆ. ಅದಕ್ಕೆ ಗಟ್ಟಿಯಾದ ಸಾರ್ವಜನಿಕ ಅಭಿಪ್ರಾಯ ಹರಳುಗಟ್ಟಬೇಕು. ಅದನ್ನೇ ನಾವು ಮಾಡ ಹೊರಟಿರುವುದು.
ಸರ್ಕಾರಗಳ ಆಡಳಿತ ವ್ಯವಸ್ಥೆ ಕೂಡ ಚುನಾವಣೆಯನ್ನು ಆಧರಿಸಿದೆ. ಆಡಳಿತ ವ್ಯವಸ್ಥೆಯೂ ಸುಧಾರಣೆ ಆಗಬೇಕಲ್ಲವೆ?
ಚುನಾವಣೆ ಮುಗಿದ ನಂತರ ಸರ್ಕಾರದ ರಚನೆಯಲ್ಲಿ ನಾನಾ ರೀತಿಯ ಅಕ್ರಮ ಕಸರತ್ತುಗಳು ತಲೆದೋರುತ್ತವೆ. ಇದಕ್ಕೆ ಕಾರಣ ಸರ್ಕಾರ ರಚನೆ ಮಾಡಲು ಬೇಕಾದ ಬಹುಮತ. ಅದನ್ನು ಗಳಿಸಲು ಕುದುರೆ ವ್ಯಾಪಾರ ಮತ್ತು ನಾನಾ ರೀತಿಯ ಆಪರೇಷನ್ಗಳು ಆರಂಭವಾಗುತ್ತವೆ. ಇದು ತಪ್ಪಬೇಕು, ಹೆಚ್ಚು ಸಂಖ್ಯೆಯ ಸದಸ್ಯರು ಆಯ್ಕೆ ಆದ ಪಕ್ಷಕ್ಕೆ ಸಂಖ್ಯಾ ದೃಷ್ಟಿಯಿಂದ ಬಹುಮತವಿಲ್ಲದಿದ್ದರೂ ಸರ್ಕಾರ ರಚಿಸಲು ಅವಕಾಶವಿರಬೇಕು. ಒಂದು ವಿಧಾನ ಸಭಾ ಕ್ಷೇತ್ರದಲ್ಲಿ 2 ಲಕ್ಷ ಮತದಾರರಿದ್ದು, ನೂರಕ್ಕೆ ನೂರು ಮತದಾನವಾಗಿದೆ ಎಂದು ಇಟ್ಟುಕೊಳ್ಳೋಣ. 1.50 ಲಕ್ಷ ಮತಗಳು ಇತರೆ ಅಭ್ಯರ್ಥಿಗಳಲ್ಲಿ ಹಂಚಿಹೋಗಿ 50 ಸಾವಿರ ಮತ ಪಡೆದವನು ಚುನಾಯಿತನಾಗುತ್ತಾನೆ. ವಾಸ್ತವವಾಗಿ ಆತ 1.50 ಲಕ್ಷ ಮತದಾರರಿಂದ ತಿರಸ್ಕೃತನಾಗಿರುತ್ತಾನೆ. ಬಹುಮತ ಪಡೆಯದಿದ್ದರೂ ಹೆಚ್ಚು ಮತ ಪಡೆದವನು ಗೆದ್ದಿದ್ದಾನೆಂದು ಹೇಳುವುದು ಹೇಗೆ ಸಮಂಜಸವೋ ಹಾಗೆಯೇ ಬಹುಮತವಿಲ್ಲದಿದ್ದರೂ ಹೆಚ್ಚು ಸದಸ್ಯರನ್ನು ಪಡೆದ ಅಲ್ಪಮತದ ಪಕ್ಷ ಸರಕಾರ ರಚಿಸುವುದು ಸೂಕ್ತವೇ ಆಗಿದೆ. ಆದರೆ ಬಿಲ್ಗಳು ಪಾಸಾಗುವುದು ಹೇಗೆ ಎಂಬ ಪ್ರಶ್ನೆಗೆ ಅಮೆರಿಕದ ಸಂವಿಧಾನ ನಮಗೆ ಮಾರ್ಗದರ್ಶಕವಾಗಬಲ್ಲುದು. ಅಲ್ಲಿ ಅಧಿಕಾರ ನಡೆಸುವ ಅಧ್ಯಕ್ಷನ ಪಕ್ಷಕ್ಕೆ ಸೆನೆಟ್ನಲ್ಲಿ ಬಹುಮತ ಇದ್ದೇ ಇರುತ್ತದೆಂದು ಹೇಳಲು ಸಾಧ್ಯವಿಲ್ಲ. ಆದರೂ ಸರಕಾರ ಅಲ್ಲಿ ತೃಪ್ತಿಕರವಾಗಿ ಕೆಲಸ ಮಾಡುತ್ತಿಲ್ಲವೆ?
- ಕ.ಮ. ರವಿಶಂಕರ, ಕನ್ನಡಪ್ರಭ
(ಸಹಕಾರ - ರಾಜ ಸಿರಿಗೆರೆ )